ಮುಂಬೈನಿಂದ ಬೆಂಗಳೂರಿಗೆ ಆಗಮಿಸಿದ್ದ ರೈಲಿನಲ್ಲಿ ಬೆಂಕಿ; 2 ಬೋಗಿಗಳು ಸಂಪೂರ್ಣ ಭಸ್ಮ

ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ ರೈಲಿನಲ್ಲಿ ಬೆಂಕಿ (Fire) ಕಾಣಿಸಿಕೊಂಡ ಘಟನೆ ನಡೆದಿದೆ. ರೈಲಿನ ಬಿ1 ಬಿ2 ಕೋಚ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳಕ್ಕೆ ಎರಡು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.

ಉದ್ಯಾನ್ ಎಕ್ಸ್‌ಪ್ರೆಸ್ ರೈಲು ಮುಂಜಾನೆ 6:30ಕ್ಕೆ ಮುಂಬೈನಿಂದ ಮೆಜೆಸ್ಟಿಕ್‍ನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಬಂದು ನಿಂತಿತ್ತು. ಈ ವೇಳೆ ಇಂಜಿನ್‍ನಿಂದ ಐದು ಬೋಗಿಗಳ ದೂರದಲ್ಲಿದ್ದ ಎರಡು ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಸ್ಥಳೀಯ ಪೊಲೀಸರು ಬೆಂಕಿ ನಂದಿಸಲಿಕ್ಕೆ ಪ್ರಯತ್ನ ಪಟ್ಟಿದ್ದಾರೆ. ಆದರೆ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ. 

ಕೂಡಲೇ ಎರಡು ಅಗ್ನಿಶಾಮಕ ವಾಹನ ಕರೆಸಿಕೊಳ್ಳಲಾಯಿತು. ನಂತರ ಅಗ್ನಿಶಾಮಕ ಸಿಬ್ಬಂದಿ ಸತತ ಅರ್ಧ ಗಂಟೆ ಬೆಂಕಿ ನಂದಿಸಲು ಪ್ರಯತ್ನ ಪಟ್ಟರೂ 2 ಎಸಿ ಕೋಚ್‍ಗಳು ಸಂಪೂರ್ಣ ಸುಟ್ಟು ಹೋಗಿವೆ. ಬಳಿಕ ಸತತ ಪ್ರಯತ್ನದ ನಂತರ ಬೆಂಕಿಯನ್ನು ನಂದಿಸಲಾಗಿದೆ. ಬೆಂಕಿ ಸಂಪೂರ್ಣ ಹತೋಟಿಗೆ ಬಂದ ನಂತರ ಹಾನಿಗೊಳಗಾದ ಬೋಗಿಗಳನ್ನು ಬೇರೆಡೆ ಸ್ಥಳಾಂತರಿಸಲಾಗುತ್ತಿದೆ.

ಘಟನೆ ವೇಳೆ ಯಾರು ಪ್ರಯಾಣಿಕರು ಇರಲಿಲ್ಲ. ಇದರಿಂದಾಗಿ ಯಾವುದೇ ಪ್ರಯಾಣಿಕರಿಗೆ ಹಾನಿಯಾಗಿಲ್ಲ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ನೈರುತ್ಯ ರೈಲ್ವೇ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.‌

 
 
 
 
 
 
 
 
 
 
 

Leave a Reply