ಬೆಂಗಳೂರು: ನಾಳೆ ನಡೆಯಬೇಕಿದ್ದ ಎಫ್ಡಿಎ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ರಾಚಪ್ಪ ಹಾಗೂ ಚಂದ್ರು ಎಂಬುವರು ಸೇರಿ ನಾಲ್ವರನ್ನು ಬಂಧಿಸಿರುವ ಪೊಲೀಸರು, ಅವರ ಬಳಿ ಇದ್ದ ಪ್ರಶ್ನೆಪತ್ರಿಕೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜತೆಗೆ ಆರೋಪಿಗಳ ಬಳಿ ಇದ್ದ 24 ಲಕ್ಷ ರೂಪಾಯಿ ಮತ್ತು 3 ವಾಹನಗಳನ್ನೂ ವಶ ಪಡಿಸಿಕೊಳ್ಳಲಾಗಿದೆ.
ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಉಲ್ಲಾಳದಲ್ಲಿ ಆರೋಪಿಗಳ ಬಂಧನವಾಗಿದ್ದು, ಪ್ರಶ್ನೆಪತ್ರಿಕೆ ಸೋರಿಕೆ ಕುರಿತ ಮಾಹಿತಿಯನ್ನು ಪೊಲೀಸರು ಕೆಪಿಎಸ್ಸಿಗೆ ಸೂಕ್ತ ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳು ಹಾಗೂ ಬಂಧಿತರೊಂದಿಗೆ ವ್ಯವಹರಿಸಿದ್ದ ಅಭ್ಯರ್ಥಿಗಳ ಪತ್ತೆಗೂ ಮುಂದಾಗಿರುವ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.