ಲಾರಿ-ಟಿಟಿ ನಡುವೆ ಭೀಕರ ಅಪಘಾತ; 13 ಮಂದಿ ಸಾವು!

ಹೆದ್ದಾರಿ ಬದಿಲ್ಲಿ ನಿಂತಿದ್ದ ಕಂಟೇನರ್ ಲಾರಿಗೆ ಪ್ರವಾಸಿಗರಿದ್ದ ಟಿಟಿ ವಾಹನ ಡಿಕ್ಕಿಯಾಗಿದ್ದು, ದೇವಸ್ಥಾನಕ್ಕೆ ಹೊರಟಿದ್ದ 13 ಮಂದಿ ಕುಟುಂಬ ಸದಸ್ಯರು ಮೃತಪಟ್ಟ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್‌ ಬಳಿ ನಡೆದಿದೆ.

ಗುಂಡೇನಹಳ್ಳಿ ಬಳಿ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಬದಿ ಸರಕು ಸಾಗಿಸುವ ಲಾರಿ ನಿಂತಿತ್ತು. ಲಾರಿಗೆ ಹಿಂದಿನಿಂದ ವೇಗವಾಗಿ ಬಂದ ಟಿಟಿ ವಾಹನ ಡಿಕ್ಕಿಯಾಗಿದೆ. ಘಟನೆಯಲ್ಲಿ ಟಿಟಿಯಲ್ಲಿದ್ದ 7 ಮಂದಿ ಮಹಿಳೆಯರು ಸೇರಿದಂತೆ 13 ಮಂದಿ ಮೃತಪಟ್ಟಿದ್ದಾರೆ. ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿ ಗ್ರಾಮದ ಒಂದೇ ಕುಟುಂಬದ ಸದಸ್ಯರು. ಪರಶುರಾಮ್ (45), ನಾಗೇಶ (50), ಚಾಲಕ ಆದರ್ಶ್ (23), ಭಾಗ್ಯ (40), ವಿಶಾಲಾಕ್ಷಿ (40), ಅರ್ಪಿತಾ (18), ಸುಭದ್ರಾ ಬಾಯಿ (65), ಪುಣ್ಯ(50), ಮಂಜುಳಾ ಬಾಯಿ (45), ಮಾನಸ (24), ರೂಪಾ (40) ಹಾಗೂ ಮಂಜುಳಾ (50) ಹಾಗೂ ಆರು ಮತ್ತು ನಾಲ್ಕು ಮಗು ಮೃತಪಟ್ಟಿದ್ದಾರೆ. ಅಪಘಾತದ ತೀವ್ರತೆಗೆ ಸ್ಥಳದಲ್ಲೇ 11 ಜನರು ಸಾವನ್ನಪ್ಪಿದರೆ, ಆಸ್ಪತ್ರೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಟಿಟಿ ವಾಹನದಲ್ಲಿ 17 ಜನರಿದ್ದು ನಾಲ್ವರು ಗಂಭೀರ ಸ್ಥಿತಿಯಲ್ಲಿದ್ದಾರೆ. 

ಚಾಲಕ ಆದರ್ಶ್ ಹೊಸ ಟಿಟಿ ವಾಹನ ಖರೀದಿಸಿದ್ದು ಪೂಜೆ ಮಾಡಿಸಲು ಮಹಾರಾಷ್ಟ್ರದ ತಿವಾರಿ ಲಕ್ಷ್ಮೀ ದೇವಸ್ಥಾನಕ್ಕೆ ತೆರಳಿದ್ದರು. ಕುಟುಂಬ ಸದಸ್ಯರ ಜೊತೆಗೆ ಸೋಮವಾರ ದೇವರ ದರ್ಶನಕ್ಕೆ ಹೋಗಿದ್ದು ನಿನ್ನೆ ಮಹಾರಾಷ್ಟ್ರ ತಿವಾರಿ ಲಕ್ಷ್ಮೀ ಟೆಂಪಲ್ ನಲ್ಲಿ ವಾಹನ ಪೂಜೆ ಮಾಡಿಸಿದ್ದರು. ಬಳಿಕ ಬೆಳಗಾವಿಯ ಸವದತ್ತಿಗೆ ತೆರಳಿ ತಮ್ಮೂರಿಗೆ ಹಿಂತಿರುಗುತ್ತಿದ್ದರು. ನಸುಕಿನಲ್ಲಿ ಬರುತ್ತಿದ್ದಾಗ ರಸ್ತೆ ಬದಿ ನಿಂತಿದ್ದ ಲಾರಿಗೆ ಗುದ್ದಿದ್ದು ಟಿಟಿ ವಾಹನ ನುಜ್ಜು ಗುಜ್ಜಾಗಿತ್ತು.‌ 

ಡಿಕ್ಕಿಯಿಂದಾಗಿ ಟಿಟಿ ವಾಹನ ಅಪ್ಪಚ್ಚಿಯಾಗಿದ್ದು ಮೃತದೇಹಗಳು ಒಂದಕ್ಕೊಂದು ಸೀಟುಗಳೆಡೆಯಲ್ಲಿ ಸಿಲುಕಿಕೊಂಡಿದ್ದವು. ಅಗ್ನಿಶಾಮಕ ಇಲಾಖೆ ಸಿಬ್ಬಂದಿ 1 ಗಂಟೆ 15 ನಿಮಿಷಗಳ ಕಾಲ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರ ತೆಗೆದಿದ್ದಾರೆ. ಕಟರ್ ಮಶೀನ್ ಬಳಸಿ ಮೃತದೇಹಗಳನ್ನು ಹೊರ ತೆಗೆಯಲಾಗಿದ್ದು ಟಿಟಿ ವಾಹನ ಸಂಪೂರ್ಣ ಛಿದ್ರವಾಗಿದೆ.

 
 
 
 
 
 
 
 

Leave a Reply