ಪುರಂದರದಾಸರ ಕೀರ್ತನೆಗಳಲ್ಲಿ ಶ್ರೀ ರಾಮನಾಮ~ ಡಾ.ಶ್ರೀಕಾಂತ್ ಸಿದ್ದಾಪುರ.

ಪುರಂದರದಾಸರು ತಮ್ಮ ಕೀರ್ತನೆಯೊಂದರಲ್ಲಿ ಭಗವಂತನನ್ನು ಪ್ರಶ್ನಿಸುತ್ತಾರೆ. ನೀನ್ಯಾಕೋ ನಿನ್ನ ಹಂಗ್ಯಾಕೋ? ಹಾಗಾದರೆ ಯಾವುದರ ಬಲ ಬೇಕು? ಎಂಬ ಪ್ರಶ್ನೆಗೆ ದಾಸರು ಉತ್ತರವನ್ನು ಹುಡುಕುತ್ತಾರೆ. ನಿನ್ನ ನಾಮದ ಬಲವೊಂದಿದ್ದರೆ ಸಾಕು. ದಾಸ ಸಾಹಿತ್ಯದಲ್ಲಿ ಬರುವ ಅನೇಕ ಕೀರ್ತನೆಗಳಲ್ಲಿ ಭಗವಂತನ ನಾಮದ ಮಹಿಮೆಯನ್ನು ಬಣ್ಣಿಸಲಾಗಿದೆ. ಶ್ರೀರಾಮನಾಮದ ಬಗ್ಗೆ ತಿಳಿಸುತ್ತಾ ದಾಸರು ಶ್ರೀರಾಮನಾಮ ಭಜಿಸಿದವರಿಗುಂಟೆ ಭವದ ಬಂಧನ ಎನ್ನುತ್ತಾರೆ.

ಹನುಮಂತನು ಶ್ರೀರಾಮನ ಪರಮಭಕ್ತ. ಶ್ರೀರಾಮನಾಮದಲ್ಲಿ ಅಚಲ ನಂಬಿಕೆ. ಹನುಮಂತನ ಶ್ರೀರಾಮನಾಮದ ನಂಬಿಕೆಯ ಸುತ್ತ ಹಲವಾರು ಕಥೆಗಳೂ ಹುಟ್ಟಿಕೊಂಡಿವೆ. ರಾವಣನ ಸಂಹಾರವಾಗಿತ್ತು. ಶ್ರೀರಾಮನಿಗೆ ಅಯೋಧ್ಯೆಯಲ್ಲಿ ಪಟ್ಟಾಭಿಷೇಕವೂ ಆಗಿತ್ತು. ಸೀತಾಮಾತೆಯು ಹನುಮಂತನಿಗೆ ಬಂಗಾರದ ಹಾರವೊಂದನ್ನು ನೀಡುತ್ತಾಳೆ. ಹನುಮಂತನು ಅದರಲ್ಲಿರುವ ಬಂಗಾರದ ಗುಣಮಟ್ಟ ಅಥವಾ ಮೌಲ್ಯಗಳ ಕುರಿತು ಯೋಚಿಸುವುದೇ ಇಲ್ಲ.

ಹನುಮಂತನು ಅದರಲ್ಲಿ ಶ್ರೀರಾಮ ನಾಮವನ್ನು ಹುಡುಕುತ್ತಾನೆ. ಕೊನೆಗೆ ಶ್ರೀರಾಮನಲ್ಲಿ ಹೇಳುತ್ತಾನೆ. ಪ್ರಭು ನಿಮ್ಮ ನಾಮವೇ ನನಗೆ ಶ್ರೇಷ್ಠ. ನೀವು ಅಯೋಧ್ಯೆಗೆ ತಾರೆಯಾದರೆ ನಿಮ್ಮ ನಾಮವು ಮೂರು ಲೋಕಕ್ಕೂ ತಾರೆ.

ದಾಸ ಸಾಹಿತ್ಯದಲ್ಲಿ ರಾಮನಾಮದ ಮಹಿಮೆಯನ್ನು ಕೊಂಡಾಡಲಾಗಿದೆ. ರಾಮನಾಮವು ನಮ್ಮ ಅಂತರ0ಗವನ್ನು ಶುಧ್ಧ ಮಾಡುವ ಶಕ್ತಿ ಪಡೆದಿದೆ. ನಮ್ಮೊಳಗೆ ಅಡಗಿರುವ ಆರು ವೈರಿಗಳನ್ನು ಹತೋಟಿಗೆ ತಂದಾಗಲೇ ಅಂತರoಗದ ಶುದ್ಧಿ. ಶ್ರೀರಾಮನಾಮವನ್ನು ಈ ಕ್ರಿಯೆಯಲ್ಲಿ ಬಳಸಿದಲ್ಲಿ ಬದುಕು ಸಾರ್ಥಕ. ಹಾಗಾಗಿ ದಾಸರು ಹೇಳುತ್ತಾರೆ. ರಾಮನಾಮವ ನುಡಿ ನುಡಿ ಕಾಮಕ್ರೋಧಗಳ ಬಿಡಿ ಬಿಡಿ. ದಾಸರು ಹೇಳುವಂತೆ ರಾಮ ಎಂಬ ಎರಡು ಅಕ್ಷರದಲ್ಲಿಯೇ ಅದ್ಭುತ ಶಕ್ತಿ ಅಡಗಿದೆ.

ರಾಮ ಎಂಬೆರಡು ಅಕ್ಷರದ ಮಹಿಮೆಯನು ಪಾಮರರು ತಾವೇನು ಬಲ್ಲಿರಯ್ಯಾ ಎಂಬ ಕೀರ್ತನೆಯೊಂದರಲ್ಲಿ ವಿವರಿಸುತ್ತಾರೆ. ರಾ ಎಂದ ಮಾತ್ರಕ್ಕೆ ರಕ್ತಮಾಂಸದೊಳಿದ್ದ ಪಾಪರಾಶಿಗಳು ಹೊರ ಹೋಗುತ್ತವೆ. ಮ ಎಂದಾಕ್ಷಣ ಹೊರಗೆ ಹೋದ ಪಾಪರಾಶಿಗಳು ಒಳಗೆ ಬಾರದಂತೆ ನಮ್ಮ ತುಟಿಗಳು ಮುಚ್ಚಿ ಸಹಕರಿಸುತ್ತವೆ.

ಹಾಗಾಗಿ ರಾಮನಾಮವು ಚಿತ್ತ ಹಾಗೂ ಕಾಯಗಳ ಪವಿತ್ರ ಮಾಡುವ ನಾಮ. ಶ್ರೀರಾಮನಾಮವು ನಮ್ಮ ಅಂತರoಗದ ಪರಿವರ್ತನೆಯಲ್ಲಿ ಇಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲು ಯಾವ ಹಂತದ ಶ್ರದ್ಧೆ ಬೇಕು? ಎಂಬುದು ಮುಂದಿನ ಪ್ರಶ್ನೆ. ಕೇವಲ ಯಾಂತ್ರಿಕವಾದ ಉಚ್ಚಾರದಿಂದ ಈ ಫಲ ನಿರೀಕ್ಷಿಸ ಬಹುದೇ? ದಾಸರು ಇದಕ್ಕೂ ಒಂದು ಕೀರ್ತನೆಯ ಮೂಲಕ ಮಾರ್ಗದರ್ಶನ ಮಾಡುತ್ತಾರೆ.

ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ ವಿಠಲ ನಾಮ ತುಪ್ಪ ಬೆರಸಿ ಬಾಯ ಚಪ್ಪರಿಸಿರೋ. ಹೀಗೆ ಚಪ್ಪರಿಸಿದಾಗ ಎರಡು ತೇಗು ಬರಬೇಕು. ಅದು ಯಾವ ತೇಗು? ಆನಂದ ಎಂಬ ಸಂತೃಪ್ತಿಯ ತೇಗು. ದಾಸರು ಹೇಳಿದ ಈ ಸವಿ ಯಾವುದು? ಎಲ್ಲಿಂದ ಲಭಿಸುವುದು? ಹೊರಗಿನ ವಸ್ತುವಿನ ಸವಿಯೇ? ಅಥವಾ ಅಂತರoಗದ ಪಾಕದ ಸಿಹಿಯೇ?. ದಾಸರ ಪ್ರಕಾರ ಇದು ನಾಲಗೆಯ ಸವಿಯಲ್ಲ. ಇದು ಅಂತರoಗಕ್ಕೆ ವೇದ್ಯವಾಗುವ ಸವಿ.

ಅದು ವರ್ಣನಾತೀತ ಹಾಗೂ ಅನುಭವಕ್ಕೆ ಸೀಮಿತವಾದ ಸಿಹಿ. ದಾಸರು ಅಂತರoಗದಲ್ಲಿ ನಡೆಸಬೇಕಾದ ಪಾಕದ ಚಿತ್ರಣವನ್ನು ನೀಡುತ್ತಾರೆ. ಈ ಪಾಕಕ್ಕೆ ಅಗತ್ಯವಾಗಿ ಬೇಕಾದುದು ಒಮ್ಮನ ಎಂಬ ಗೋಧಿ. ಈ ಗೋಧಿಯನ್ನು ಬೀಸಲು ವೈರಾಗ್ಯ ಎಂಬ ಬೀಸುವ ಕಲ್ಲು. ಹೃದಯ ಎಂಬ ಮಡಿಕೆ. ಭಾವ ಎಂಬ ಎಸರು.

ಬುದ್ಧಿಯಿಂದ ಪಾಕ. ಹೀಗೆ ಸಿದ್ಧವಾದ ಪಾಯಸವನ್ನು ಹರಿ ವಾಣಕ್ಕೆ ಬಡಿಸಿಕೊಂಡು ಸವಿಯಬೇಕಂತೆ. ಈ ಸವಿಯ ತಯಾರಿಗೆ ಬೇಕಾದುದು ಮನಸ್ಸಿನ ಏಕಾಗ್ರತೆ, ವೈರಾಗ್ಯ. ಇದ ರೊಂದಿಗೆ ಪರಿಶುದ್ಧ ಹೃದಯ, ಬುದ್ಧಿ ಹಾಗೂ ಭಾವ. ಮನಸ್ಸು ಹಾಗೂ ಹೃದಯವನ್ನು ಆರೋಗ್ಯಯುತವನ್ನಾಗಿರಿಸುವ ಪಾಕ. ಶ್ರೀರಾಮಾಯಣದ ಕವಿ ವಾಲ್ಮೀಕಿ. ವಾಲ್ಮೀಕಿಯ ಕುರಿತಂತೆ ಸಾಕಷ್ಟು ಕಥೆಗಳು ನಮ್ಮ ನಡುವೆ ಇವೆ.

ಅವುಗಳಲ್ಲಿ ಒಂದು ಕಥೆ ಶ್ರೀ ರಾಮನಾಮಕ್ಕೆ ಸಂಬoಧಿಸಿದೆ. ದಾಸರು ಆ ಮರಾ ಈ ಮರಾ ಎಂದು ಧ್ಯಾನಿಸುತಿರುವಾಗ ರಾಮ ರಾಮ ಎಂಬ ನಾಮವೇ ಕಾಯ್ತೋ ಎನ್ನುತ್ತಾರೆ. ಮರಾ ಮರಾ ಎಂದು ಉಚ್ಚರಿಸುತ್ತಾ ವಾಲ್ಮೀಕಿಯು ರಾಮನಾಮದಲ್ಲಿ ತಲ್ಲೀನ ರಾದರಂತೆ. ಈ ಮಂತ್ರದ ಮಹತ್ತನ್ನರಿತ ದಾಸರು ರಾಮಮಂತ್ರವ ಜಪಿಸೋ ಹೇ ಮನುಜಾ ಎಂದು ಕರೆ ನೀಡಿದರು. ಈ ಮಂತ್ರದ ಮಹಿಮೆಯನ್ನು ತಮ್ಮ ಕೀರ್ತನೆಯ ಉದ್ದಕ್ಕೂ ಹಾಡಿ ಹೊಗಳಿದ್ದಾರೆ. ಸೋಮಶೇಖರನು ತನ್ನ ಮಡದಿಗೆ ಇದೇ ಮಂತ್ರವನ್ನು ಉಪದೇಶಿಸಿದನಂತೆ.

ಈ ಮಂತ್ರವು ದುರಿತ ಕಾನನಕೆ ದಾವಾನಲನಂತೆ. ಪಾಪ ಎಂಬ ದಟ್ಟವಾದ ಅರಣ್ಯಕ್ಕೆ ಕಾಡ್ಕಿಚ್ಚು. ಸರ್ವ ಋಷಿಗಳೂ ಶ್ರೀರಾಮ ಮಂತ್ರವನ್ನು ಇಷ್ಟಪಡುತ್ತಾರೆ. ಹನುಮಂತನoತೂ ಇದನ್ನು ನಿತ್ಯ ಸ್ಮರಣೆ ಮಾಡುತ್ತಾ ಅದರಲ್ಲಿಯೇ ಖುಷಿಯನ್ನು ಅನುಭವಿ ಸುತ್ತಾನೆ.

ಇಂದು ದಾಸರ ಕೀರ್ತನೆಗಳು ಹಳ್ಳಿ ಹಳ್ಳಿಗಳಲ್ಲೂ ಜನಪ್ರಿಯವಾಗುತ್ತಿವೆ. ಗ್ರಾಮೀಣ ಭಾಗದಲ್ಲಿ ಭಜನಾ ತಂಡಗಳು ಸಕ್ರಿಯ ವಾಗಿದ್ದು ಭಜನೆಗೆ ಪ್ರಾಶಸ್ತö್ಯ ಬರುತ್ತಿದೆ. ಕುಳಿತು ಭಜನೆ, ಕುಣಿದು ಭಜನೆ ಗ್ರಾಮೀಣ ಭಾಗದ ಸೊಗಸು. ಹಾಗಾಗಿ ಕೀರ್ತನೆ ಗಳು ಇದೀಗ ಮತ್ತೊಮ್ಮೆ ಜನರ ನಾಲಿಗೆಯಲ್ಲಿ ನಲಿಯುತ್ತಿವೆ. ಶ್ರೀ ರಾಮನ ಮಹಿಮೆಯನ್ನು ಸಾರುವ ಇಂಥ ಕೀರ್ತನೆಗಳ ಮೂಲಕ ಬದುಕನ್ನು ಹಸನಾಗಿರಿಸೋಣ. • ಡಾ.ಶ್ರೀಕಾಂತ್ ಸಿದ್ದಾಪುರ.

 
 
 
 
 
 
 
 
 
 
 

Leave a Reply