ಹಕ್ಕುಗಳನ್ನು ಪಡೆಯಲು ಹೋರಾಟ ಮಾತ್ರವಲ್ಲ ಕರ್ತವ್ಯಗಳನ್ನೂ ಪಾಲಿಸಬೇಕು- ಲಕ್ಷ್ಮೀನಾರಾಯಣ ಮುಚ್ಚಿಂತಾಯ

 ಉಡುಪಿ: ನಮ್ಮ ಹಿರಿಯರ ಪರಿಶ್ರಮದ ಫಲವಾದ ಸಂವಿಧಾನದ ರಕ್ಷಣೆ ನಮ್ಮ ಹೊಣೆಯಾಗಿದೆ. ಆದರೆ ಸಂವಿಧಾನದಲ್ಲಿ ಎರಡು ಭಾಗಗಳಿವೆ. ಒಂದು ಭಾಗ ದೇಶದ ಜನತೆಗೆ ನೀಡಿದ ಹಕ್ಕುಗಳ ಬಗ್ಗೆ ಹೇಳುತ್ತದೆ. ಮತ್ತೊಂದು ಭಾಗ ಕರ್ತವ್ಯಗಳ ಬಗ್ಗೆ ಹೇಳಿದೆ. ಪ್ರಜೆಯಾದವನು ಕೇವಲ ಹಕ್ಕುಗಳ ಬಗ್ಗೆ ಮಾತ್ರವೇ ತಿಳಿಯುವುದಲ್ಲದೇ ಕರ್ತವ್ಯಗಳ ಕುರಿತು ತಿಳಿಯಬೇಕು.ಹಕ್ಕುಗಳನ್ನು ಪಡೆಯಲು ಹೋರಾಟ ಮಾತ್ರವಲ್ಲ ಕರ್ತವ್ಯಗಳನ್ನೂ ಪಾಲಿಸಬೇಕು. ಏಕೋ ದೇಶಃ. ಭಾರತದೇಶಃ. ಸರ್ವಶ್ರೇಷ್ಠಃ ಎಂಬ ನಮ್ಮ ನೆಚ್ಚಿನ ಪ್ರಧಾನಿಗಳ ಆಶಯವನ್ನು ಕಾರ್ಯ ಗತಗೊಳಿಸಲು ಎಲ್ಲರೂ ಶ್ರಮಿಸಬೇಕು ಎಂದು ಪರ್ಯಾಯ ಶ್ರೀ ಅದಮಾರು ಮಠ, ಶ್ರೀಕೃಷ್ಣಮಠದ ದಿವಾನ ಲಕ್ಷ್ಮೀನಾರಾಯಣ ಮುಚ್ಚಿಂತಾಯ ವಿದ್ಯಾರ್ಥಿಗಳನ್ನುದ್ದೇಶಿಸಿ ಕರೆ ನೀಡಿದರು.

ಅವರು ಈ ದಿನ ಉಡುಪಿಯ ಶ್ರೀಮನ್ಮಧ್ವಸಿದ್ಧಾಂತ ಪ್ರಬೋಧಕ ಸಂಸ್ಕೃತ ಕಾಲೇಜಿನಲ್ಲಿ ಗಣಾರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ಶ್ರೀಮನ್ಮಧ್ವಸಿದ್ಧಾಂತ ಪ್ರಬೋಧಿನೀ ಸಭಾದ ಕಾರ್ಯದರ್ಶಿ ದೇವ್‌ನಂದವ್ ಉಪಾಧ್ಯಾಯ ಸಂವಿಧಾನದ ಕರಡುಪ್ರತಿ ರಚಿಸುವಲ್ಲಿ ಮುಖ್ಯಪಾತ್ರ ವಹಿಸಿದ್ದ ಉಡುಪಿಯ ಕೊರ್ಕ್ಕಣೆ ಸಮೀಪದ ಬೆನಗಲ್ ನರಸೀಂಗ ರಾವ್ ಅವರು ಎಂಬುದು ನಮಗೆಲ್ಲರೂ ಹೆಮ್ಮೆಯ ಸಂಗತಿ. ನಮ್ಮ ವಿದ್ಯಾರ್ಥಿಗಳೂ ಮುಂದಿನ ದಿನಗಳಲ್ಲಿ ಇಂತಹಾ ಮಹಾನುಭಾವರಾಗಿ ಬೆಳೆಯಲಿ ಎಂದು ಆಶಿಷಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ. ಎನ್. ಲಕ್ಷ್ಮೀನಾರಾಯಣ ಭಟ್ ಇವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಂವಿಧಾನದ ಪರಿಚಯ ನೀಡಿ ಅತಿಥಿಗಳನ್ನು ಸ್ವಾಗತಿಸಿದರು. 

ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತೀ ಪುಷ್ಪಲತಾ ಇವರು ಧನ್ಯವಾದವಿತ್ತರು. ಕಳೆದ ಬಾರಿಯ ಹತ್ತನೇ ತರಗತಿಯಲ್ಲಿ ಅತ್ಯಧಿಕ ಅಂಕಗಳೊಂದಿಗೆ ಉತ್ತೀರ್ಣರಾದ ನಾಗೇಶಕೃಷ್ಣ ಎಂಬ ವಿದ್ಯಾರ್ಥಿಯನ್ನು ಸಮ್ಮಾನಿಸಲಾಯಿತು. ಕಾಲೇಜು ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಾಧ್ಯಾಪಕರು, ಅಧ್ಯಾಪಕರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply