ರಾಜ್ಯ ಸರಕಾರದ ಮತಾಂತರ ನಿಷೇಧ ಮಸೂದೆ ವಿರೋಧಿಸಿ ಮನವಿ ಸಲ್ಲಿಕೆ

ಉಡುಪಿ: ರಾಜ್ಯ ಸರಕಾರ ಸಂವಿಧಾನ ಬಾಹಿರವಾದ ಮತಾಂತರ ನಿಷೇಧ ಮಸೂದೆಯನ್ನು ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ಮುಂದಾಗಿದ್ದು ಇದನ್ನು ವಿರೋಧಿಸಿ ಉಡುಪಿ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಸಾಲಿಡಾರಿಟಿ ಉಡುಪಿ ಜಿಲ್ಲಾ ಘಟಕದ ವತಿಯಿಂದ ಮನವಿ ಸಲ್ಲಿಸಲಾಯಿತು.

ಪ್ರತಿಯೊಬ್ಬ ವ್ಯಕ್ತಿಗೆ ತಾನು ನಂಬಿರುವ ಧರ್ಮವನ್ನು ಪ್ರಚಾರ, ಪ್ರಸಾರ, ಬೋಧನೆ ಮಾಡುವುದರ ಜತೆಗೆ ಅವುಗಳನ್ನು ಅನುಸರಿಸುವ ಧಾರ್ಮಿಕ ಸ್ವಾತಂತ್ರ‍್ಯದ ಹಕ್ಕನ್ನು ನಮ್ಮ ದೇಶದ ಸಂವಿಧಾನವೇ ನೀಡಿದೆ. ರಾಜ್ಯ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಿರುವ ಧಾರ್ಮಿಕ ಮತಾಂತರ ವಿರೋಧಿ ಮಸೂದೆಯ ಅಗತ್ಯವು ಈ ರಾಜ್ಯಕ್ಕೆ ಖಂಡಿತವಾಗಿಯೂ ಇಲ್ಲ. ಬಲವಂತದ ಧಾರ್ಮಿಕ ಮತಾಂತರವಾಗಿದೆ ಎಂಬುವುದಕ್ಕೆ ಸರಕಾರದ ಬಳಿ ಯಾವ ಅಧಿಕೃತ ದಾಖಲೆಗಳಿವೆ ಎಂದು ರಾಜ್ಯದ ಜನತೆಗೆ ಸ್ಪಷ್ಟ ಪಡಿಸಬೇಕು. 

ಪ್ರಸ್ತುತ ಮಸೂದೆಯು ರಾಜ್ಯದ ವಿವಿಧ ಧಾರ್ಮಿಕ ಮತ್ತು ಸಂಸ್ಕೃತಿಗಳ ಮಧ್ಯೆ ಇರುವ ಸಾಮರಸ್ಯವನ್ನು ಬುಡಮೇಲುಗೊಳಿಸುವುದಲ್ಲದೆ ಈ ರಾಜ್ಯದ ಸೌಹಾರ್ದ ಪರಂಪರೆಗೂ ಅಪಾಯಕಾರಿ. ಈ ಮಸೂದೆಯು ಕೋಮುವಾದಿ ಗೂಂಡಾಗಳಿಗೆ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಎಸಗಲು ಸರಕಾರವೇ ಮುಕ್ತ ಪರವಾನಗಿ ನೀಡಿದಂತಾಗುತ್ತದೆ.

ಅಭಿವೃಧಿಯನ್ನು ಬಿಟ್ಟು ಕೇವಲ ದ್ವೇಷದ ರಾಜಕಾರಣ ಮಾಡುತ್ತಿರುವ ಯು.ಪಿ ಮಾಡೆಲ್ ನಮಗೆ ಬೇಡ. ಆದ್ದರಿಂದ ಸಂವಿಧಾನ ವಿರೋಧಿಯಾದ ಈ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸುವುದನ್ನು ಸರಕಾರವು ಕೈಬಿಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಬೇಡಿಕೆಗಳು:

  • ಸರ್ಕಾರವು ಸಂವಿಧಾನ ವಿರೋಧಿಯಾದ ಮತಾಂತರ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸುವುದನ್ನು ಕೈಬಿಡಬೇಕು.
  • ರಾಜ್ಯದಲ್ಲಿ ಕೋಮು ಸೌಹಾರ್ದತೆಯನ್ನು ಕಾಪಾಡುವ ಸಲುವಾಗಿ ಎಲ್ಲಾ ಧಾರ್ಮಿಕ ಸ್ಥಳಗಳಿಗೆ ಸೂಕ್ತ ಭದ್ರತೆಯನ್ನು ಒದಗಿಸಬೇಕು
  • ಪ್ರಾರ್ಥನಾ ಮಂದಿರಗಳಿಗೆ ಹಾನಿಯಾಗಿದ್ದು ಸರಕಾರವು ಸೂಕ್ತ ಪರಿಹಾರವನ್ನು ಬಿಡುಗಡೆಗೊಳಿಸಬೇಕು.
  • ದಾಳಿಗೊಳಗಾದ ಪ್ರದೇಶಗಳಿಗೆ ಅಧಿಕಾರಿಗಳು ಭೇಟಿ ಕೊಟ್ಟು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಭರವಸೆಯನ್ನು ಕೊಡಬೇಕು.
  • ರಾಜ್ಯದಲ್ಲಿ ಅಲ್ಪಸಂಖ್ಯಾತರ ಮೇಲೆ ವ್ಯವಸ್ಥಿತ ದಾಳಿ ನಡೆಸುವ ಗೂಂಡಾಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸಾಲಿಡಾರಿಟಿ ಈ ಮೂಲಕ ಒತ್ತಾಯಿಸುತ್ತದೆ.

ಸಾಲಿಡಾರಿಟಿ ಜಿಲ್ಲಾ ಸಂಚಾಲಕ ಯಾಸೀನ್ ಕೋಡಿಬೆಂಗ್ರೆ, ಕಾರ್ಯದರ್ಶಿ ಝಕ್ರಿಯಾ ನೇಜಾರ್, ಪರ್ವೆಝ್ ಉಡುಪಿ, ಇಬ್ರಾಹಿಮ್ ಸಯೀದ್, ಝುಬೇರ್ ಮಲ್ಪೆ ಮತ್ತು ಎಪಿ.ಸಿ.ಆರ್’ನ ಜಿಲ್ಲಾ ಸಂಚಾಲಕ ಹುಸೇನ್ ಕೋಡಿಬೆಂಗ್ರೆ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply