ಪ್ರೀ ವೆಡ್ಡಿಂಗ್/ಪೋಸ್ಟ್ ವೆಡ್ಡಿಂಗ್ ಫೋಟೋಗ್ರಫಿ ನಮ್ಮ ವೃತ್ತಿಗೆ ಮಾರಕವಾಗದಿರಲಿ~ಶ್ರೀಧರ ಶೆಟ್ಟಿಗಾರ್  

ನಾಡಿನ ಸಮಸ್ತ ಛಾಯಾಗ್ರಾಹಕರಿಗೆ S.K.P.A. ಜಿಲ್ಲಾಧ್ಯಕ್ಷರ ಪ್ರಣಾಮಗಳು.

ಹಿಂದೆ ಒಂದು ಕಾಲವಿತ್ತು. ಮದುವೆ ಅಥವಾ ಇನ್ನಿತರ ಹೆಚ್ಚಿನ ಕಾರ್ಯಕ್ರಮಗಳಿಗೆ ಛಾಯಾಗ್ರಹಣವೇ ಇರುತ್ತಿರಲಿಲ್ಲ. ಕೆಲವೊಂದು ಬೆರಳೆಣಿಕೆಯ ಕಾರ್ಯಕ್ರಮಗಳಲ್ಲಿ ಮಾತ್ರವೇ ಛಾಯಾಗ್ರಹಣ ಇರುತ್ತಿತ್ತು. ಉಳಿದ ಎಲ್ಲರೂ ತಾವು ಕಂಡ ಸಮಾರಂಭದ ದೃಶ್ಯ ವನ್ನು  ಮನದಲ್ಲೇ ನೆನಪಿಟ್ಟು​ ​ಕೊಳ್ಳಬೇಕಾದ ಕಾಲವಿತ್ತು. ಆಗ ಛಾಯಾಗ್ರಾಹಕರೂ ಬೆರಳೆಣಿಕೆಯಷ್ಟಿದ್ದರು. ಆದರೆ ಈಗ ಕಾಲ ಬದಲಾಗಿದೆ. ಛಾಯಾಗ್ರಾಹಕರು ಬೇಕಾದಷ್ಟಿದ್ದಾರೆ. 
 
ಹುಟ್ಟಿನಿಂದ ಸಾಯುವವರೆಗೂ ಛಾಯಾಗ್ರಹಣ ಇಲ್ಲದ ಸಮಾರಂಭವಿಲ್ಲ. ಇಂದು ಛಾಯಾಗ್ರಹಣ ನಮ್ಮ ಬದುಕಿನಲ್ಲಿ ಅಷ್ಟೊಂದು ಹಾಸುಹೊಕ್ಕಾಗಿ ಬೆಳೆದು ಬಂದಿದೆ. ಆದರೆ ಅಂದು ಛಾಯಾಗ್ರಾಹಕನಿಗೆ ಸಮಾಜ ಕೊಡುತ್ತಿದ್ದ ಗೌರವ ಇಂದು ಹೇಳ​ ​ಹೆಸರಿಲ್ಲದಂತೆ ಮಾಯವಾಗಿದೆ. ಇದಕ್ಕೆ ಕಾರಣ ಕೆಲವು ಛಾಯಾಗ್ರಾಹಕರು ನಡೆದುಕೊಳ್ಳುವ ರೀತಿ ಎಂದರೆ ತಪ್ಪಾಗಲಾರದು. ದರದ ಪೈಪೋಟಿ, ಸಮಾರಂಭದಲ್ಲಿ ಛಾಯಾಗ್ರಾಹಕರು ನಡೆದುಕೊಳ್ಳುವ ರೀತಿ, ಅಥವಾ ಆಧುನಿಕ ಪರಿಕರಗಳು ಇನ್ನೇನೋ ಕಾರಣಗಳಿರ​ ​ಬಹುದು. ದಿನ ಕಳೆದಂತೆ ಆಧುನಿಕತೆ ನಮ್ಮನ್ನು ಆವರಿಸಿಕೊಳ್ಳುತ್ತಿದೆ. ಆಧುನಿಕತೆಗೆ ನಾವು ಹೊಂದಿಕೊಳ್ಳಲೇಬೇಕು. ಇದರಲ್ಲಿ ಎರಡು ಮಾತಿಲ್ಲ. 
 
ಆದರೆ ಆಧುನಿಕತೆಯ ಸೋಗಿನಲ್ಲಿ ನಾವು ಮಾಡಬಾರದ್ದನ್ನು ಮಾಡಿದರೆ ನಮ್ಮ ವೃತ್ತಿಗೆ ನಾವೇ ಕೊಡಲಿಯೇಟು ಹಾಕಿಕೊಳ್ಳುವ ಕಾಲ ದೂರವಿಲ್ಲ. ಪ್ರೀ ವೆಡ್ಡಿಂಗ್ ಹಾಗೂ ಪೋಸ್ಟ್ ವೆಡ್ಡಿಂಗ್ ಫೋಟೋಗ್ರಫಿ ನಮ್ಮ ವೃತ್ತಿಗೆ ಹೊಸ ತಿರುವು ತಂದುಕೊಟ್ಟಿದೆ.  ಆದರೆ ಇದರಲ್ಲಿ ವಿಭಿನ್ನ ಶೈಲಿಯ ಛಾಯಾಚಿತ್ರಗಳನ್ನು ಗ್ರಾಹಕರಿಗೆ ನೀಡಬೇಕು ಎಂಬ ಧಾವಂತದಲ್ಲಿಯೋ ಅಥವಾ ಇನ್ನೊಬ್ಬ ಛಾಯಾಗ್ರಾಹಕನಿಗಿಂತ ತಾನು ಒಳ್ಳೆಯ ಛಾಯಾಚಿತ್ರಗಳನ್ನು ತೆಗೆಯಬೇಕು ಎಂಬ ಓಟದಲ್ಲಿ ವಧುವರರ ಅಥವಾ ಭಾವೀ ವಧುವರರ ಜೀವದ ಬೆಲೆಯನ್ನು ಮರೆತು ಫೋಟೋಗ್ರಫಿ ಮಾಡುವುದು ಎಷ್ಟು ಮಾತ್ರಕ್ಕೂ ಸಲ್ಲದು. 
 
ನಮಗೆ ಒಳ್ಳೆಯ ಪ್ರಕೃತಿ ತಾಣಗಳು ಬೇಕೆಂದಾದರೆ ನದಿ ಸಮುದ್ರವೇ ಬೇಕೆಂದಿಲ್ಲ. ಭೂಮಿಯ ಮೇಲೆ ಅದೆಷ್ಟೋ ಸುಂದರ ಮನೋಹರ ದೃಷ್ಯಗಳಿರುವ ಸ್ಥಳಗಳಿವೆ. ಇದೆಲ್ಲವನ್ನು ಬಿಟ್ಟು ಸಾಹಸ ಕ್ರೀಡಾಳುಗಳ ತರಹ ವಧುವರರನ್ನು ಬಳಸಿಕೊಂಡು ಛಾಯಾಚಿತ್ರಗಳನ್ನು ತೆಗೆಯುವುದು ನಮ್ಮ ವೃತ್ತಿಗೆ ನಾವೇ ಚಪ್ಪಡಿ ಕಲ್ಲು ಎಳೆದು​ ​ಕೊಂಡಂತೆ. ಛಾಯಾಗ್ರಹಣ ಎಂದರೆ ಇನ್ನೊಬ್ಬರ ಜೀವದ ಜೊತೆಗೆ ಚೆಲ್ಲಾಟವಾಡುವ ವೃತ್ತಿಯಲ್ಲ ​.
ಇದು ಬದುಕಿನ ನೈಜ ಚಿತ್ರಣವನ್ನು ಚಿತ್ರೀಕರಿಸುವ ವೃತ್ತಿ ಎಂಬುದನ್ನು ನಾವು ಮೊದಲು ಮನಗಾಣಬೇಕು. ಇದರ ಜೊತೆಗೆ ತುಂಬು ಗರ್ಬಿಣಿಯರ Maternity Photography ಮಾಡುವಾಗಲೂ ನಾವು ಯೋಚಿಸಬೇಕಾದ ವಿಚಾರಗಳು ಬಹಳಷ್ಟಿದೆ. ಗರ್ಬಿಣಿ ಯರೆಂದರೆ ಅದು ಅವರ ಕ್ಲಿಷ್ಟಕರ ಸಮಯ. ಜೀವನದ ಬಹು ದೊಡ್ಡ ಕನಸನ್ನು ನನಸು ಮಾಡಿಕೊಳ್ಳುವ ಸಮಯ. ಇಂತಹ ಸಮಯ ದಲ್ಲಿ ಕೂಡ ಬಹಳಷ್ಟು ಜಾಗ್ರತೆ ವಹಿಸಿಕೊಂಡು ಛಾಯಾಗ್ರಹಣ ಮಾಡುವುದು ನಮ್ಮೆಲ್ಲರ ಕರ್ತವ್ಯ. 
 
 ಹಲವಾರು ಕಷ್ಟಕರ ಭಂಗಿಗಳಲ್ಲಿ ಅವರಿಗೆ ಹಿಂಸೆಯಾಗುವಂತೆ ಛಾಯಾಗ್ರಹಣ ಮಾಡುವುದು  ಒಬ್ಬ ವೃತ್ತಿಪರ ಛಾಯಾಗ್ರಾಹಕ ನಿಗೆ ಶೋಭೆ ತರುವಂತಹದ್ದಲ್ಲ. ನಮ್ಮ ವೃತ್ತಿ ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಸಮಾಜ ಛಾಯಾಗ್ರಾಹಕರನ್ನು ಅಪರಾಧಿ ದೃಷ್ಟಿಯಲ್ಲಿ ನೋಡುವಂತಾದರೆ ಆಶ್ಚರ್ಯವಿಲ್ಲ. ಆದ್ದರಿಂದ ಮುಂದೆ ಛಾಯಾಗ್ರಹಣ ಮಾಡುವಾಗ ಅಪಾಯವನ್ನು ದೂರ ವಿಟ್ಟು ನಮ್ಮ ಮತ್ತು ಗ್ರಾಹಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮೊಗದ ನಗು ಶಾಶ್ವತವಾಗಿ ಇರುವಂತೆ ಛಾಯಾಗ್ರಹಣ ಮಾಡಿದರೆ ಒಳಿತು. 
 
ಇಲ್ಲವೆಂದಾದರೆ ಛಾಯಾಗ್ರಾಹಕ ವೃತ್ತಿಗೆ ಕಳಂಕ ತಂದು ಕೊಳ್ಳುವುದರಲ್ಲಿ ಸಂಶಯವಿಲ್ಲ. ವ್ಯಕ್ತಿಯೊಬ್ಬನಿಗೆ ಸಮಯ ಬಂದಾಗ ಸಾವು ಬರುವುದು ನಿಶ್ಚಿತ ಆದರೆ ಆ ಸಾವಿಗೆ ನಮ್ಮ ಛಾಯಾಗ್ರಹಣ ವೃತ್ತಿ ಕಾರಣವಾಗಿ ಕಾಣುವುದು ಬೇಡ. ವೃತ್ತಿಪರ ಸಂಘಟನೆಗಳು ಇದರ ಬಗ್ಗೆ ಎಚ್ಚೆತ್ತು ತಮ್ಮ ಸದಸ್ಯರಿಗೆ ಸಕಾಲದಲ್ಲಿ ಸೂಕ್ತ ಸಲಹೆ ನೀಡಿದರೆ ಉತ್ತಮ. ವೃತ್ತಿಪರರಲ್ಲದೆ, ಇಂತಹ ವಿಷಯದಲ್ಲಿ ಕೆಲವು ಹವ್ಯಾಸಿ ಛಾಯಾಗ್ರಾಹಕರು ಮಾಡುವ ತಪ್ಪನ್ನು ನಾವು ಖಂಡಿಸಲೇಬೇಕು.
ಯಾರೋ ಒಬ್ಬಿಬ್ಬರು ಮಾಡುವ ತಪ್ಪಿಗೆ ಇಡೀ ಛಾಯಾಗ್ರಾಹಕ ಸಮೂಹವನ್ನು ದೂರುವುದು ಕೂಡ ತಪ್ಪು… ಮುಂದೆ ಯಾವತ್ತೂ ಹೀಗಾಗದಿರಲಿ. ​~ಶ್ರೀಧರ್ ಶೆಟ್ಟಿಗಾರ್ (ಅಧ್ಯಕ್ಷರು, ಸೌತ್ ಕೆನರಾ ಫೋಟೋಗ್ರಾಪರ್ಸ್ ಅಸೋಷಿಯೇಷನ್  ಜಿಲ್ಲಾ ಸಮಿತಿ, ದ.ಕ, ಉಡುಪಿ)​​
 
 
 
 
 
 
 
 
 

Leave a Reply