ಜಿಲ್ಲೆಯ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಾಹಿತ್ಯದ ಸಹಕಾರ~ ಡಾ.ಶ್ರೀಕಾ೦ತ್ ಸಿದ್ದಾಪುರ

​ಉಡುಪಿ ಜಿಲ್ಲೆಯ   ಸ್ವಾತಂತ್ರ್ಯ ಹೋರಾಟಗಾರರು   ಸ್ವಾತಂತ್ರ್ಯ ಹೋರಾಟದ ವಿವಿಧ ಚಳವಳಿಗಳಲ್ಲಿ ಭಾಗವಹಿಸುವುದರೊಂದಿಗೆ ಇದಕ್ಕೆ ಪೂರಕವಾಗಿ ಬರವಣಿಗೆ ಹಾಗೂ ಕಲಾ ಮಾಧ್ಯಮಗಳನ್ನು ಸಮರ್ಥವಾಗಿ ಬಳಸಿಕೊಂಡರು.  ಇದಕ್ಕೆ ಮುಖ್ಯ ಕಾರಣ ಈ ಹೋರಾಟದಲ್ಲಿ ಭಾಗವಹಿಸಿದ್ದ ಹಲವರು ಲೇಖಕರು.  ನಾಟಕ, ಯಕ್ಷಗಾನ ಮೊದಲಾದ ಕಲಾ ಪ್ರಕಾರಗಳಲ್ಲಿ ಆಸಕ್ತರು.
ಬ್ರಿಟಿಷರ ವಿರುದ್ಧ ಹರಿತವಾದ ಲೇಖನಗಳ ತಯಾರಿ, ಪತ್ರಿಕೆಗಳಲ್ಲಿ ಪ್ರಕಟಣೆ, ಈ ಮೂಲಕ ಜನರನ್ನು ತಲುಪುವ ಪ್ರಯತ್ನ ಮಾಡಿದರು. ನಾಟಕಗಳನ್ನು ರಚಿಸಿ ಪ್ರದರ್ಶಿಸುವ ಮೂಲಕ ಜನರಲ್ಲಿ ದೇಶಭಕ್ತಿಯ ಬೀಜವನ್ನು ಬಿತ್ತಿದರು. ಬ್ರಿಟಿಷರ ಪ್ರತಿರೋಧಗಳ ನಡುವೆಯೂ ಉಡುಪಿ ಜಿಲ್ಲೆಯಲ್ಲಿ ಸಾಗಿದ ಕಲೆ ಹಾಗೂ ಸಾಹಿತ್ಯದ ಸಹಕಾರ ಈ ಸಂದರ್ಭದಲ್ಲ್ಲಿ ಸ್ಮರಣೀಯ.

ಪತ್ರಿಕೆಗಳು:   ಸ್ವಾತಂತ್ರ್ಯ  ಹೋರಾಟಗಾರ ಎಂ. ವಿ. ಹೆಗ್ಡೆಯವರು ರಾಜ್ಯ ಪತ್ರಕರ್ತರ ಸಂಘದಿ೦ದ ಪುರಸ್ಕೃತರಾದ ಮೊದಲ ಪತ್ರಕರ್ತ.   ಸ್ವಾತಂತ್ರ್ಯ  ಹೋರಾಟದ ದಿನಗಳಲ್ಲಿ ರಾಮಬಾಣ ಎಂಬ ಕಲ್ಲಚ್ಚಿನ ಪತ್ರಿಕೆಯನ್ನು ಹೊರತಂದು ಬ್ರಿಟಿಷರ ಕೆಂಗಣ್ಣಿಗೆ ಗುರಿಯಾದರು. ಹಿರಿಯಡ್ಕ ರಾಮರಾಯ ಮಲ್ಯರು ಆ ಕಾಲದಲ್ಲಿ ಮೂರು ಪತ್ರಿಕೆಗಳನ್ನು ನಡೆಸಿದರು. ಅವುಗಳಲ್ಲಿ ಸತ್ಯಾಗ್ರಹಿ ಒಂದು ಪ್ರಮುಖ ವಾರಪತ್ರಿಕೆ. ಆ ಕಾಲದಲ್ಲಿ ಜಿಲ್ಲೆಯ ಪ್ರಥಮ ವಾರ ಪತ್ರಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಸ್ವದೇಶಾಭಿಮಾನಿ ಪತ್ರಿಕೆಯಲ್ಲೂ ಸೇವೆ ಸಲ್ಲಿಸಿದರು. 
 
ಸ್ವತಂತ್ರ ಭಾರತ, ಚರಕಸಂದೇಶ ಅವರು ನಡೆಸಿದ ಇತರ ಪತ್ರಿಕೆಗಳು. ರಾಮರಾಯರ ಬರವಣಿಗೆ ಹರಿತವಾದ ಶೈಲಿಯಿಂದ ಕೂಡಿತ್ತು. ಇದು ಬ್ರಿಟಿಷರ ನಿದ್ರೆ ಕೆಡಿಸುತ್ತಿತ್ತು.  ಇದೇ ಸಂದರ್ಭದಲ್ಲಿ ಸತ್ಯಾಗ್ರಹಿ ವಾರಪತ್ರಿಕೆಯಲ್ಲಿ ಲೇಖನ ವೊಂದನ್ನು ಮಲ್ಯರು ಪ್ರಕಟಿಸಿದರು. ಬ್ರಿಟಿಷರ ವಿರುದ್ಧ ಪ್ರಕಟವಾದ ಈ ಲೇಖನದ ಹಿನ್ನೆಲೆಯಲ್ಲಿ ರಾಮರಾಯರ ಮೇಲೆ ಗುರುತರವಾದ ಅಪಾದನೆಯನ್ನು ಬ್ರಿಟಿಷ್ ಸರಕಾರವು ಹೊರಿಸಿತು. ಒಂದು ವರ್ಷ ಜೈಲು ಶಿಕ್ಷೆಗೂ ಅವರು ಗುರಿಯಾಗಬೇಕಾಯಿತು.  
 
ಆದರೂ ಪತ್ರಿಕಾ ಚಟುವಟಿಕೆ ನಿಲ್ಲಲ್ಲಿಲ್ಲ. ಈ ಅವಧಿಯಲ್ಲಿ ಎಸ್. ವಿ.ಕುಡ್ವರು ಈ ಪತ್ರಿಕೆಯ ಜವಾವ್ದಾರಿಯನ್ನು ಹೊತ್ತರು. ಸೀತಾರಾಮ ಎಂಬ ಗುಪ್ತನಾಮದಿಂದ ಮಲ್ಯರು ಅನೇಕ ಕಥೆಗಳನ್ನೂ ಬರೆದರು. ಕಾದಂಬರಿ ಶೈಲಿಯಲ್ಲಿ ವಾಲಂಟಿಯರ್ ಶ್ಯಾಮು ಎಂಬ ಹೆಸರಿನಲ್ಲಿ ಆತ್ಮಕಥೆಯನ್ನೂ ಬರೆದರು. ಸಂಸ್ಕೃತ ಶಿರೋಮಣಿ ಗಳಾಗಿದ್ದ ಎಸ್.ಯು. ಪಣಿಯಾಡಿಯವರೂ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಪತ್ರಿಕಾ ಸಂಪಾದಕರು. ಸತಿ ಕಮಲೆ ಇವರ ತುಳುಕಾದಂಬರಿ. ಅಂತರ೦ಗ ಪತ್ರಿಕೆ ಅವರ ಸಂಪಾದಕೀಯದಲ್ಲಿ ಹೊರಬರುತ್ತಿತ್ತು. ಪಾ.ವೆಂ. ಆಚಾರ್ಯ, ಎಂ. ವಿ. ಹೆಗ್ಡೆಯವರು ಈ ಪತ್ರಿಕೆಗೆ ಲೇಖನಗಳನ್ನು ಬರೆಯುತ್ತಿದ್ದರು. 
 
ಆಧುನಿಕ ಭಾರತ ಎಂಬ ಪತ್ರಿಕೆಯನ್ನು ಎಂ. ಶೇಷಪ್ಪ ಶೆಟ್ಟಿಯವರು ಹೊರತಂದರು. ಆರ್.ಎಸ್.ಶೆಣೈಯವರು ಧುರೀಣ ಎಂಬ ಮಾಸಪತ್ರಿಕೆಯನ್ನು ಹೊರತಂದರು.  ಕೆಮ್ತೂರಿನ ಕಾಂತಪ್ಪ ಶೆಟ್ಟರು ಗಾಂಧೀಜಿಯವರ ಕುರಿತು ಕೃತಿಯೊಂದನ್ನು ಬರೆದರು. ಗಾಂಧಿ ಜೀವನದ ಕಿಡಿ ಈ ಕೃತಿಯ ಹೆಸರು.
ಹೊನ್ನಯ್ಯ ಶೆಟ್ಟಿಯವರೊಂದಿಗೆ ನವಯುಗ ಪತ್ರಿಕೆಯಲ್ಲಿ ಕೆಲ ಕಾಲ ಕೆಲಸ ಮಾಡಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ. ರವೀಂದ್ರನಾಥ ಠಾಗೋರರ ಶಾಂತಿನಿಕೇತನದಲ್ಲಿ ಕೆಲವು ಕಾಲ ಶಿಕ್ಷಣ ಪಡೆದ ಕೆ.ಕೆ.ಶೆಟ್ಟಿಯವರು ಅವರ ಎರಡು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದರು. ಚಿತ್ರಾ ಹಾಗೂ ಪೋಸ್ಟ್ ಆಫೀಸ್. ಹಳಗನ್ನಡ ಹಾಗೂ ನಡುಗನ್ನಡ ಕಾವ್ಯಗಳತ್ತ ವಿಶೇಷ ಆಸಕ್ತರಾಗಿದ್ದ ಶೆಟ್ಟರು ವಾಚನ ಹಾಗೂ ವ್ಯಾಖ್ಯಾನಗಳಲ್ಲಿ ನಿಷ್ಣಾತರು.

ನಾಟಕ:   ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ನಾಟಕಗಳೂ ಪ್ರಭಾವ ಬೀರಿದವು.  ಹೋರಾಟಗಾರರಲ್ಲಿ ಹಲವರು ನಟರು ಹಾಗೂ ನಾಟಕಗಾರರು. ಬೈಂದೂರು ಶ್ರೀನಿವಾಸ ಹೊಳ್ಳರು ಆ ಕಾಲದ ಕೆಲವು ಖ್ಯಾತ ನಟರಲ್ಲಿ ಒಬ್ಬರು. ಈ ಸಂದರ್ಭದಲ್ಲಿ ಹಲವಾರು ನಾಟಕಗಳು ರಚಿಸಲ್ಪಟ್ಟವು.  
ಕೆಲವು ನಾಟಕಗಳ ಪ್ರದರ್ಶನವೂ ನಡೆಯಿತು. ಈ ಮೂಲಕ ಬ್ರಿಟಿಷರ ವಿರುದ್ಧ ಜನರನ್ನು ಸಂಘಟಿಸಲು ನಾಟಕ ಕಾರರು ಪ್ರಯತ್ನಿಸಿದರು. ಡಾ. ಶಿವರಾಮ ಕಾರಂತರು ಎರಡು ನಾಟಕಗಳನ್ನು ಬರೆದರು. ದುರ್ಗಾದಾಸ ಮತ್ತು ನಿಶಾಮಹಿಮೆ. ಕುಂದಾಪುರ ತಾಲೂಕಿನ ಹಲ್ಸನಾಡು ಸೂರಪ್ಪಯ್ಯನವರು ಕಾರಂತರ ದುರ್ಗಾದಾಸ ನಾಟಕದಲ್ಲಿ ಅಭಿನಯಿಸಿದ್ದರು. 
 
ಕುಂದಾಪುರದಲ್ಲಿ ನಡೆದ ರಾಜಕೀಯ ಪರಿಷತ್ತಿನ ಸಭೆಯಲ್ಲಿ ಕಾರಂತರ ನಿಶಾಮಹಿಮೆ ಎಂಬ ನಾಟಕ ಪ್ರದರ್ಶಿತ ವಾಗಿತು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಗಮನಾರ್ಹವಾದ ಇನ್ನೊಂದು ನಾಟಕ ಆರ್.ಎಸ್.ಶೆಣೈ ಯವರ ಭಾರತೋದಯ. ಈ ನಾಟಕವನ್ನು ಉಡುಪಿಯಲ್ಲಿ ನಡೆದ ರಾಜಕೀಯ ಪರಿಷತ್ತಿನ ಸಭೆಯಲ್ಲಿ ಪ್ರದರ್ಶಿಸುವ ಎಲ್ಲಾ ಸಿದ್ಧತೆಗಳೂ ನಡೆದಿದ್ದವು. ಬಾಲಗಂಗಾಧರ ತಿಲಕರ ನಿಧನದಿಂದ ಗಾಂಧೀಜಿಯವರ ಬಂಧನದ ನಡುವಿನ ಸಮಗ್ರ ಘಟನೆಗಳ ವಿವರವೇ ನಾಟಕದ ಪ್ರಮುಖ ವಸ್ತು.  ಪ್ರದರ್ಶನದ ಹಿಂದಿನ ದಿನ ಮಾದರಿಗಾಗಿ ಪ್ರಯೋಗ ನಡೆಯಿತು.  
 
ಬ್ರಿಟಿಷ್ ಅಧಿಕಾರಿಗಳು ಇದನ್ನು ವೀಕ್ಷಿಸಿ ಆಕ್ಷೇಪಿಸಿದರು. ನಾಟಕ ಪ್ರದರ್ಶಿಸದಂತೆ ಎಚ್ಚರಿಕೆ ನೀಡಿದರು. ಈ ನಾಟಕ ಪ್ರದರ್ಶನಕ್ಕಾಗಿ ಗುಬ್ಬಿ ನಾಟಕ ಕಂಪನಿಯವರು ಉಡುಪಿಗೆ ಬಂದಿದ್ದರು ಎಂದು ದಕ್ಷಿಣ ಕನ್ನಡದಲ್ಲಿ  ಸ್ವಾತಂತ್ರ್ಯ ಹೋರಾಟ ಎಂಬ ಕೃತಿಯಲ್ಲಿ ಪಿ.ಕೆ. ನಾರಾಯಣರು ತಿಳಿಸುತ್ತಾರೆ.  ಉಡುಪಿಯಲ್ಲಿದ್ದ ಗುಬ್ಬಿ ಕಂಪನಿಯವರ ಸುತ್ತ ಪೊಲೀಸರ ಸರ್ಪಗಾವಲನ್ನೂ ಹಾಕಲಾಯಿತು. ಕೊನೆಗೂ ನಾಟಕ ಪ್ರದರ್ಶನ ನಡೆಯಲಿಲ್ಲ. ಹೋರಾಟದ ಕಾಲದಲ್ಲಿನ ಇನ್ನೋರ್ವರು ಕೆ.ಕೆ.ಶೆಟ್ಟರು.
ಇವರು ಏಕಾಂಕ ನಾಟಕಗಳನ್ನೂ ಒಳಗೊಂಡ೦ತೆ ಹಲವು ನಾಟಕಗಳನ್ನು ರಚಿಸಿದರು. ಅವುಗಳಲ್ಲಿ ಪ್ರಮುಖ ವಾದವುಗಳು ವ್ಯಭಿಚಾರಿಣಿ ಯಾರು? ಸಂಶಯ ಪಿಶಾಚಿ ಮತ್ತು ದೇಶಭಕ್ತ. ಬಂಟಕಲ್ಲು ಲಕ್ಷ್ಮೀ ನಾರಾಯಣ ಶರ್ಮರು ಗಳಗನಾಥರ ಕಾದಂಬರಿಯ ಓದುಗರು. ಬೇರೆ ಬೇರೆ ಕಾದಂಬರಿಕಾರರ ಕಾದಂಬರಿಗಳನ್ನು ಓದುತ್ತಿದ್ದರು. ಅವರ ಮೇಲೆ ಪ್ರಭಾವ ಬೀರಿದ ಕಾದಂಬರಿ ಬಂಕಿ೦ಚಂದ್ರರ ಆನಂದಮಠ. ಇದರಲ್ಲಿನ ವಂದೇ ಮಾತರಂ ಅವರನ್ನು ವಿಶೇಷವಾಗಿ ಪ್ರಭಾವಿಸಿತ್ತು.

ಯಕ್ಷಗಾನ:   ಸ್ವಾತಂತ್ರ್ಯ ಹೋರಾಟಗಾರರಲ್ಲಿ ಯಕ್ಷಗಾನ ಕಲಾವಿದರ ಸಂಖ್ಯೆಯೂ ಕಡಿಮೆ ಇಲ್ಲ. ಮಲ್ಪೆ ಶಂಕರ ನಾರಾಯಣ ಸಾಮಗರು ಹೋರಾಟಗಾರರಷ್ಟೇ ಅಲ್ಲ. ಆ ಕಾಲದ ಪ್ರಸಿದ್ಧ ಅರ್ಥಧಾರಿಗಳು. ಸ್ವಾತಂತ್ರೊತ್ತರದಲ್ಲೂ ಅರ್ಥಗಾರಿಕೆಯನ್ನು ಮುಂದುವರಿಸಿದರು.  ಉಪ್ಪುಂದ ಲಕ್ಷ್ಮಣ ಹೊಳ್ಳರು ಇನ್ನೋರ್ವ ಅರ್ಥಧಾರಿ. ಕುಂದಾಪುರದ ಕೋಣಿ ಅಣ್ಣಪ್ಪ ಕಾರಂತರ ಅರ್ಥವೈಭವವನ್ನು ಇಂದಿಗೂ ನೆನಪಿಸಿ ಕೊಳ್ಳುವವರಿದ್ದಾರೆ.
ಉಪ್ಪಿನ ಕಾಯಿದೆ ವಿರುದ್ಧ ಹೋರಾಟ ನಡೆಸಿ ಬಂಧಿತರಾದ ಅಣ್ಣಪ್ಪ ಕಾರಂತರು ಅಮಾಸೆಬೈಲು ಕೃಷ್ಣರಾಯ ಕೊಡ್ಗಿಯವರ ಆತ್ಮೀಯರು. ಕಾರ್ಕಳ ತಾಲೂಕಿನ ಮುದ್ರಾಡಿ ನಾರಾಯಣ ಶೆಟ್ಟರು ಪ್ರಸಿದ್ಧ ಭಾಗವತರು. ಮುದ್ರಾಡಿಯ ಇನ್ನೋರ್ವ ಹೋರಾಟ ಗಾರ ಕೃಷ್ಣಯ್ಯ ಶೆಟ್ಟರು ಅರ್ಥಧಾರಿಗಳು.  ಸ್ವಾತಂತ್ರ್ಯ ನಂತರ  ನಡೆದ ಸ್ವರಾಜ್ ವಿಜಯದಲ್ಲಿ ಗಾಂಧಿ ಪಾತ್ರದಲ್ಲಿ ಅರ್ಥ ಹೇಳಿದವರು.

ಸ್ವಾತಂತ್ರ್ಯ  ಹೋರಾಟಕ್ಕೆ ಪೂರಕವಾಗಿ ತಮ್ಮ ಈ ಕಲಾಪ್ರತಿಭೆಗಳನ್ನು ಬಳಸಿಕೊಂಡ ಉಡುಪಿ ಜಿಲ್ಲೆಯ ಹೋರಾಟಗಾರರನ್ನು ನೆನಪಿಸಿಕೊಳ್ಳಲು ಇದು ಸೂಕ್ತ ಸಮಯ.
(ವಿವಿಧ ಮೂಲಗಳಿಂದ)
• ಡಾ.ಶ್ರೀಕಾ೦ತ್ ಸಿದ್ದಾಪುರ
 
 
 
 
 
 
 
 
 
 
 

Leave a Reply