“ಶಿವಳ್ಳಿ ಕುಟುಂಬ ಯುಗಾದಿ ಸಂಭ್ರಮ 2022”  ವರ್ಚುಯಲ್ ಕಾರ್ಯಕ್ರಮ

“ಸಂಘೇ ಶಕ್ತಿಃ ಕಲೌ ಯುಗೇ”  ಕಲಿಯುಗದಲ್ಲಿ ಅಂದರೆ ವರ್ತಮಾನ ಕಾಲದಲ್ಲಿ ಸಂಘಟನೆಯಿಂದಲೇ ಶಕ್ತಿ ಎಂಬ ಮಾತನ್ನು ಈ ಸುಭಾಷಿತವು ನಮಗೆಲ್ಲರಿಗೂ ತಿಳಿಸುತ್ತದೆ. ಚಿಂತೆಯನ್ನು ಮರೆತು ಸಾಮಾಜಿಕ ಸಂಘಟನೆ, ವೈಚಾರಿಕ ಜಾಗೃತಿ,  ವ್ಯಕ್ತಿತ್ವ ಅರಳಿ ಉತ್ಸಾಹ ತುಂಬಲು ಅವಶ್ಯವಾದುದೇ ಪ್ರತಿಯೊಬ್ಬರ ಹೃದಯವನ್ನು ತಟ್ಟಬಲ್ಲ ಸಾಮಾಜಿಕ ಕಾರ್ಯಗಳ ಗುರಿಯನ್ನು ಹೊಂದಿ ಕಾರ್ಯಪ್ರವೃತ್ತವಾಗುವ ಸಂಘ-ಸಂಸ್ಥೆಗಳು. ಭಾರತದ ಅದರಲ್ಲೂ  ಪ್ರಮುಖವಾಗಿ ಉಡುಪಿ/ದಕ್ಷಿಣ ಕನ್ನಡದ ಸಂಸ್ಕೃತಿ, ಧರ್ಮ, ಆಚಾರ ವಿಚಾರ, ಭಾಷೆ ಇತ್ಯಾದಿಗಳನ್ನು ನಮ್ಮ ಮುಂದಿನ ಪೀಳಿಗೆಗೆ ಕಲಿಸಿ ಮನವರಿಕೆ ಮಾಡುವ ಉದ್ದೇಶದಿಂದ ಅಮೇರಿಕಾದಲ್ಲಿ ಹುಟ್ಟಿಕೊಂಡ “ಶಿವಳ್ಳಿ ಕುಟುಂಬ ಆಫ್ ನಾರ್ತ್ ಅಮೇರಿಕ” ಸಂಸ್ಥೆಯು ಶುಭಕೃತ್ ಸಂವತ್ಸರದ ಯುಗಾದಿಯಂದು ತನ್ನ ಅಸ್ತಿತ್ವದ ಮೊದಲನೇ ವರುಷವನ್ನು ಯಶಸ್ವಿಯಾಗಿ ಪೂರೈಸಿ ಎರಡನೇ ವರುಷಕ್ಕೆ  ಕಾಲಿಟ್ಟಿತು. ಕುಟುಂಬವು ತನ್ನ ಸಂಸ್ಥಾಪನಾ ದಿನವನ್ನು ಏಪ್ರಿಲ್ ೧೬ ೨೦೨೨ರಂದು “ಶಿವಳ್ಳಿ ಕುಟುಂಬ ಯುಗಾದಿ ಸಂಭ್ರಮ 2022”  ವರ್ಚುಯಲ್ ಕಾರ್ಯಕ್ರಮದ ಮೂಲಕ ಬಹಳ ಸಂಭ್ರಮದಿಂದ ಆಚರಿಸಿತು. ಹಾಗೆಯೇ ಏಪ್ರಿಲ್ ೨೩, ೨೦೨೨ರಂದು ಶಿವಳ್ಳಿ ಕುಟುಂಬದ ಮೊದಲನೇ ವಾರ್ಷಿಕ ಸಾಮಾನ್ಯ ಸಭೆಯು ಜರಗಿತು.    

ಶ್ರೀಮತಿ ಗೌತಮಿ ರಾವ್ ರವರ ಗಣೇಶನ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಸಭೆಯ ಕಾರ್ಯಕ್ರಮ ನಿರೂಪಣೆಯನ್ನು ಶ್ರೀಮತಿ ಕಾಂತಿ ಚಂದ್ರಶೇಖರ್ ಅವರು ವಹಿಸಿಕೊಂಡು ಅಂದಿನ ದಿನದ ಕಾರ್ಯಸೂಚಿಯ ಪರಿಚಯ ಮಾಡಿಕೊಟ್ಟರು.

ಮೊದಲಿಗೆ, ಕುಟುಂಬದ ಚೊಚ್ಚಲ ನಿರ್ದೇಶಕರ ಮಂಡಳಿಯ ಚುನಾವಣಾ ಪ್ರಕ್ರಿಯೆಯ  ವಿವರವನ್ನು ಚುನಾವಣಾ ಸಮಿತಿಯ ಅಧ್ಯಕ್ಷರಾದ ಶ್ರೀ ಅನಿಲ್ ಭಟ್ ಅವರು ಮಂಡಿಸಿದರು. ತೆರವಾಗಿದ್ದ ನಿರ್ದೇಶಕ ಮಂಡಳಿಯ ಸ್ಥಾನವನ್ನು ಭರ್ತಿ ಮಾಡಲು ನಡೆದ ಚುನಾವಣಾ ಫಲಿತಾಂಶವನ್ನು ಪ್ರಕಟಿಸಿ ಡಾ.ರಾಜೇಂದ್ರ ಕೆದ್ಲಾಯರು ಆ ಸ್ಥಾನಕ್ಕೆ  ಅವಿರೋಧವಾಗಿ  ಆಯ್ಕೆಯಾದುದನ್ನು ಘೋಷಿಸಿದರು. ನಿರ್ದೇಶಕ ಮಂಡಳಿಯಿಂದ ನಿರ್ಗಮಿಸುತ್ತಿರುವ ನಿರ್ದೇಶಕರಾದ ಡಾ. ಚೇತನಾ ರಘುಪತಿಯವರು, ಕುಟುಂಬ ರೂಪುಗೊಂಡ ಬಗೆ ಮತ್ತು ಎಲ್ಲರ ಕಡೆಯಿಂದಲೂ ಹರಿದು ಬಂದ ಸಂಘಟಿತ ಪ್ರಯತ್ನವನ್ನು ನೆನೆಯುತ್ತಾ ಮುಂಬರುವ ವರುಷಗಳು ಕುಟುಂಬಕ್ಕೆ ಸಮೃದ್ದವಾಗಿರಲಿ ಎಂದು ಹಾರೈಸಿದರು. ಆ ಬಳಿಕ, ನಿರ್ದೇಶಕ ಮಂಡಳಿಗೆ ಹೊಸದಾಗಿ ಆಯ್ಕೆಯಾದ  ಡಾ.ರಾಜೇಂದ್ರ ಕೆದ್ಲಾಯರು ಮಾತನಾಡುತ್ತ ಕುಟುಂಬದಲ್ಲಿ ಸಮೃದ್ಧವಾಗಿರುವ ವಿವಿಧ ರಂಗಗಳ ಪ್ರತಿಭಾ ಸಂಚಯನವನ್ನು ವಿಶೇಷವಾಗಿ ಗಮನಿಸಿ, ಕೇವಲ ಒಂದೇ ವರುಷದ ಅಲ್ಪಾವಧಿಯಲ್ಲಿ ಕುಟುಂಬದ ಸದಸ್ಯರು ನಡೆಸಿದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಶಂಸಿಸಿದರು.  

ಕುಟುಂಬದ ಬೆಳವಣಿಗೆ, ಅಗತ್ಯವಾಗಿರುವ ಕೆಲವು ಬದಲಾವಣೆಗಳು ಮತ್ತು ಭವಿಷ್ಯದ ಬಗ್ಗೆ ಮಾತನಾಡುತ್ತಾ ನಿರ್ದೇಶಕ ಮಂಡಳಿಯ ಚೇರ್ಮನ್ ಶ್ರೀ ಶ್ರೀಶ ಜಯಸೀತಾರಾಂ ಅವರು ಅಲ್ಪಾವಧಿ ಮತ್ತು ದೀರ್ಘಾವಧಿ ಯೋಜನೆಗಳ ವಿವರವನ್ನು ಮಂಡಿಸಿದರು. ನಂತರ ಕಾರ್ಯದರ್ಶಿಗಳಾದ ಶ್ರೀ ಪ್ರಕಾಶ್ ಉಡುಪರು ಕುಟುಂಬದ ಕಾರ್ಯದಕ್ಷತೆ, ಕಾರ್ಯನಿರ್ವಹಣೆ ಮತ್ತು ಕುಟುಂಬದ ಸದಸ್ಯರ ನಡುವೆ ನಡೆಯಬೇಕಾದ ಪರಿಣಾಮಕಾರಿ ಸಂವಹನದ ಬಗ್ಗೆ ಸಂಕ್ಷಿಪ್ತ ಮತ್ತು ನಿಖರವಾದ ವಿವರಣೆ ನೀಡಿದರು.  ಶಿವಳ್ಳಿ ಕುಟುಂಬದ ಖಜಾಂಚಿ ಕುಮಾರಿ ರಕ್ಷಿತಾ ರಾವ್ ಅವರು ಕುಟುಂಬದ ಸದಸ್ಯತ್ವದ ವಿವರ ಮತ್ತು ಮೊದಲ ವರ್ಷದ ಆರ್ಥಿಕ ವರದಿಯನ್ನು ಮಂಡಿಸಿದರು.

ಶಿವಳ್ಳಿ ಕುಟುಂಬದ ವಿವಿಧ ಕಾರ್ಯಕಾರಿ ಸಮಿತಿಗಳ ವಿವರಣೆಯ ಸರಣಿಯನ್ನು ಶ್ರೀಮತಿ ಕಾಂತಿ ಚಂದ್ರಶೇಖರ್ ಅವರು ಶ್ರೀ ವೆಂಕಟೇಶ್ ಪೊಳಲಿ ಅವರಿಗೆ ನಿರೂಪಿಸಲು ಕೇಳಿಕೊಂಡರು. ಮೊದಲಿಗೆ ಶೈಕ್ಷಣಿಕ ಸಮಿತಿಯ ಅಧ್ಯಕ್ಷರ ಪರವಾಗಿ  ಶ್ರೀಮತಿ ಆಶಾ ಅಡಿಗ ಕಳೆದ ವರ್ಷ ಶೈಕ್ಷಣಿಕ ಸಮಿತಿಯು ನಡೆಸಿದ ನೂರು ಘಂಟೆಗಳಿಗೂ ಅಧಿಕ ಅವಧಿಯ ಕಾರ್ಯಾಗಾರಗಳು ಮತ್ತು ಅದರಲ್ಲಿ ಭಾಗವಹಿಸಿದ ಇನ್ನೂರ ಮೂವತ್ತಕ್ಕೂ ಅಧಿಕ ಸದಸ್ಯರ ಬಗ್ಗೆ ವಿವರಣೆ ನೀಡಿದರು.

ಧಾರ್ಮಿಕ ಸಮಿತಿಯ ಅಧ್ಯಕ್ಷೆ  ಶ್ರೀಮತಿ ಶುಭಾ ಶೇಷಗಿರಿ ರಾವ್ ಅವರು  ತನ್ನ  ಪ್ರಾರ್ಥನೆಯೊಂದಿಗೆ ಪ್ರಾರಂಭಿಸಿ, ಧಾರ್ಮಿಕ ಸಮಿತಿಯ ಸದಸ್ಯರ ಪರಿಚಯವನ್ನು ಮಾಡಿಸಿದರು. ಕಳೆದ ಯುಗಾದಿಯಂದು ಪಂಚಾಂಗ ಶ್ರವಣದೊಂದಿಗೆ ಪ್ರಾರಂಭಗೊಂಡ ಧಾರ್ಮಿಕ ಕಾರ್ಯಕ್ರಮಗಳು, ತಿಂಗಳಿಗೊಮ್ಮೆ ನಡೆಸುವ ವಿಷ್ಣು ಸಹಸ್ರನಾಮ ಪಾರಾಯಣ, ಜನ್ಮಾಷ್ಟಮಿ, ನವರಾತ್ರಿ, ದೀಪಾವಳಿ ಮತ್ತು  ಶಿವರಾತ್ರಿ ಕಾರ್ಯಕ್ರಮಗಳತ್ತ ಮೆಲುಕುನೋಟ ಹರಿಸಿ ಈ ಎಲ್ಲ ಕಾರ್ಯಕ್ರಮಗಳಿಂದ ಕುಟುಂಬದ ಸದಸ್ಯರಿಗೆ ಮತ್ತು ಅವರ ಮನೆಯವರಿಗೆ ಆಗುವ ಅನುಭವದ ಬಗ್ಗೆ ಎಲ್ಲರ ಗಮನವನ್ನು ಸೆಳೆದರು.

ಆ ನಂತರ  ಹಿರಿಯರ ಚಾವಡಿ  ಮತ್ತು ಯುವ ವೇದಿಕೆಯ ಅಧ್ಯಕ್ಷರಾದ  ಶ್ರೀವತ್ಸ ಬಲ್ಲಾಳರು  ಒಂದು ವರುಷದ ಚಟುವಟಿಕೆ ಹೇಗೆ ಅತ್ಯಂತ ಕ್ಷಿಪ್ರಗತಿಯಲ್ಲಿ ಸಾಗಿತು ಎಂದು ಬೆರಗುಪಡುತ್ತಾ,  ಸಮಿತಿಯು ನಡೆಸಿಕೊಟ್ಟ ಅತ್ಯಂತ ವಿಶಿಷ್ಟ ಕಾರ್ಯಕ್ರಮವಾದ “ಕನ್ನಡ-ತುಳು-ಇಂಗ್ಲಿಷ್” ಭಾಷೆಯ  ಮಂಕುತಿಮ್ಮನ ಕಗ್ಗದ ಪ್ರಸ್ತುತಿ  ಮತ್ತು ಅದರೊಂದಿಗೆ ಕುಟುಂಬದ ಸದಸ್ಯರೂ, ಕವಿ ಹಾಗೂ ಬರಹಗಾರರೂ ಆಗಿರುವ ಡಾ.   ಕೇಶವರಾಜ್ ಅಳಿವೆ ಅವರ ಕಗ್ಗ ಪ್ರೇರಿತ ಕವನ ವಾಚನ, ವಿದ್ಯಾವಾಚಸ್ಪತಿ ಡಾ . ಬನ್ನಂಜೆ ಗೋವಿಂದಾಚಾರ್ಯ ಅವರ ಉದ್ಧವಗೀತೆ ಪ್ರವಚನದ ಶ್ರವಣ ಮತ್ತು ಇನ್ನಿತರ ವೈವಿಧ್ಯಮಯ ಕಾರ್ಯಕ್ರಮಗಳ ಯಶಸ್ಸಿನ ಬಗ್ಗೆ ಹಿರಿಯರ ಚಾವಡಿ ಮತ್ತು ಯುವ ವೇದಿಕೆಯಿಂದ ನಡೆದ ಪ್ರಯತ್ನವನ್ನು ನೆರೆದಿದ್ದ ಸದಸ್ಯರ ಗಮನಕ್ಕೆ ತಂದರು.

ಆ ನಂತರ,  ದತ್ತಿ ಸಮಿತಿಯ ಅಧ್ಯಕ್ಷರಾದ ಶ್ರೀ ಮೋಹನ್ ಹೆಬ್ಬಾರ್ ಅವರು ಜಾಗತಿಕ ಪಿಡುಗಿನ ಸಂಕಷ್ಟದ ಸಮಯದಲ್ಲಿ ಭಾರತದಲ್ಲಿ ಅಗತ್ಯವಾಗಿದ್ದ ತುರ್ತುಸೇವೆಯ ಆಮ್ಲಜನಕದ ಬಳಕೆಗೆ  ಅತ್ಯಂತ ಕ್ಷಿಪ್ರಗತಿಯಲ್ಲಿ ಹತ್ತು ಸಾವಿರ ಡಾಲರಿಗೂ ಅಧಿಕ  ದೇಣಿಗೆಯ ಸಂಗ್ರಹಕ್ಕೆ ನೆರವಾದ ಕುಟುಂಬದ ಸದಸ್ಯರೆಲ್ಲರಿಗೂ  ತಮ್ಮ ಹೃತ್ಪೂರ್ವಕ ಧನ್ಯವಾದವನ್ನು ಸಲ್ಲಿಸಿದರು.

ಮುಂದುವರೆಯುತ್ತಾ , ಮಾಧ್ಯಮ ಮತ್ತು ಐಟಿ ಸಮಿತಿಯ ಅಧ್ಯಕ್ಷರಾದ ರೋಹಿತ್ ವಿಜಯ ಅವರು ತಮ್ಮ ತಂಡದ ಜೊತೆಗೂಡಿ, ಕುಟುಂಬದ ವೆಬ್ಸೈಟ್, ಯಾಂತ್ರೀಕೃತ ಗೊಂಡ ವಿವಿಧ ಸೇವೆಗಳ ಬಗ್ಗೆ ವಿವರಣೆ ನೀಡಿದರು. ಕುಟುಂಬದ ವೆಬ್ಸಿಟಿನ ಮುಂದಿನ ಆವೃತ್ತಿಯ ಬಗ್ಗೆಯೂ ಕೆಲವು ಅಗತ್ಯ ಮಾಹಿತಿಯನ್ನು ನೀಡಿದರು.

ಯುಗಾದಿ, ಅಷ್ಟಮಿ ಮತ್ತು ತುಳಸಿ ಹಬ್ಬದ ಸಮಯದಲ್ಲಿ,  ರಾಷ್ಟ್ರೀಯಮಟ್ಟದಲ್ಲಿ ಕುಟುಂಬದ ಪ್ರತಿಭಾವಂತ  ಕಲಾವಿದರುಗಳಿಂದ ವೈವಿಧ್ಯಮಯ ಕಾರ್ಯಕ್ರಮಗಳ ರೂಪುರೇಷೆ ತಯಾರಿಸಿ, ವಿಡಿಯೋ ಎಡಿಟಿಂಗ್ ಮಾಡಿ, ಅದನ್ನು ಅಂತರ್ಜಾಲದಲ್ಲಿ (ಯು ಟ್ಯೂಬ್ ಲೈವ್ ) ಬಿಡುಗಡೆ ಮಾಡಿಸುವ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತ ಸಾಂಸ್ಕೃತಿಕ ಸಮಿತಿಯ ಸದಸ್ಯರ ಪರಿಚಯ ಮಾಡಿಸುತ್ತಾ, ಸಮಿತಿಯ ಅಧ್ಯಕ್ಷರಾದ ಶ್ರೀ ವೆಂಕಟೇಶ್ ಪೊಳಲಿಯವರು ಸಮಿತಿಯ ಮುಂಬರುವ ವಿವಿಧ ಕಾರ್ಯಕ್ರಮಗಳನ್ನು ಪರಿಚಯಿಸಿದರು. ಇದರೊಂದಿಗೆ ವಿವಿಧ ಸಮಿತಿಯ ಪರಿಚಯದ ನಿರೂಪಣೆ ಕೊನೆಗೊಂಡಿತು.

ಶಿವಳ್ಳಿ ಕುಟುಂಬದ ಅಪ್-ಕಾನೂನಿನಲ್ಲಿ (ಬೈ-ಲಾ) ಮಾಡಿರುವ ಕೆಲವು ಪ್ರಮುಖ ಬದಲಾವಣೆಗಳನ್ನು  ಅಧ್ಯಕ್ಷರಾದ ಶ್ರೀ ಶ್ರೀಶ ಜಯಸೀತಾರಾಂ ಅವರು ವಿವರಿಸಿದರು.  ಕುಟುಂಬದ ಉಪಾಧ್ಯಕ್ಷರಾದ ಶ್ರೀ  ಸಂತೋಷ್ ಗೋಳಿಯವರು ವಿವಿಧ ರಾಜ್ಯಗಳಲ್ಲಿ  ಸ್ಥಳೀಯ ಸಮಿತಿಗಳನ್ನು  ಹೇಗೆ ರಚಿಸಲಾಯಿತು, ಸ್ಥಳೀಯ ಸಮಿತಿಗಳು  ಕುಟುಂಬದ ಅಭಿವೃದ್ಧಿಗೆ ಹೇಗೆ ಸಹಾಯಕವಾಗಿದೆ ಹಾಗೂ ಕುಟುಂಬದ ಸದಸ್ಯರೊಂದಿಂಗೆ ಸಂಪರ್ಕ ಸಾಧಿಸಲು ಸ್ಥಳೀಯವಾಗಿ ಹೇಗೆ ಪರಿಣಾಮಕಾರಿ ಎಂಬುದರ ಬಗ್ಗೆ ವಿವರಿಸಿದರು.

ಶ್ರೀ ಪ್ರಶಾಂತ್ ಮಟ್ಟು, ಅಧ್ಯಕ್ಷರು, ಶಿವಳ್ಳಿ ಕುಟುಂಬ ಒಫ್ ನಾರ್ತ್ ಅಮೆರಿಕ ಅವರ ಸಂದೇಶದಲ್ಲಿ, ಕುಟುಂಬ ಪ್ರಾರಂಭಗೊಂಡ ಸಮಯ ಮತ್ತು ಸಂಧರ್ಭವನ್ನು ನೆನೆಯುತ್ತಾ,  ಸರ್ವ ಸದಸ್ಯರನ್ನು ಒಗ್ಗೂಡಿಸಿಕೊಂಡು ಶಿವಳ್ಳಿ ಸಂಸೃತಿಯನ್ನು ಬೆಳೆಸಿಕೊಂಡು ಮುಂದುವರೆಯುವ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿರುವುದನ್ನು ನೋಡಿ ಸಂತೋಷ ವಾಗುತ್ತಿದೆ ಎಂದು ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸಿದರು. ಮುಂಬರುವ ವರುಷದ ಹಲವಾರು ಹೊಸ ಯೋಜನೆಗಳ ಕಿರು ಪರಿಚಯ ಮಾಡಿಕೊಟ್ಟರು.

ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ಶ್ರೀನಿವಾಸ್ ಮಟ್ಟು ಅವರು, ಸದಸ್ಯರಿಂದ ಹರಿದು ಬಂದಂಥ ಹಲವಾರು ಸಲಹೆ ಮತ್ತು ಪ್ರಶ್ನೆಗಳಿಗೆ  ಕುಟುಂಬದ ಆಡಳಿತ ಮಂಡಳಿ ಮತ್ತು  ಕಾರ್ಯಕಾರೀ ಸಮಿತಿಯ ಸದಸ್ಯರಿಂದ ಉತ್ತರವನ್ನು ನೀಡಿಸಿದರು. ಇದರೊಂದಿಗೆ ಶಿವಳ್ಳಿ ಕುಟುಂಬದ ಚೊಚ್ಚಲ ವಾರ್ಷಿಕ ಸಾಮಾನ್ಯ ಸಭೆಯು ಮುಕ್ತಾಯಗೊಂಡಿತು.

 
 
 
 
 
 
 
 
 
 
 

Leave a Reply