ಸಂಘಸoಸ್ಥೆಗಳ ಅಸ್ತಿತ್ವ ಉಳಿಸಿ ಬೆಳೆಸುವುದು ಸುಲಭ ಸಾಧ್ಯವಲ್ಲ -ಆ್ಯಂಟನಿ ಡೇಸಾ

ಶಿರ್ವ:-ಯಾವುದೇ ಸಂಘಟನೆಗಳನ್ನು ದೀರ್ಘಕಾಲದವರೆಗೆ ಶಿಸ್ತುಬದ್ಧ ರೀತಿಯಲ್ಲಿ ತನ್ನ ಅಸ್ತಿತ್ವವನ್ನು ಯಥಾವತ್ತಾಗಿ ಉಳಿಸಿ ಬೆಳೆಸುವುದು ಸುಲಭ ಕಾರ್ಯವಲ್ಲ. ಅದರ ಹಿಂದೆ ಹಲವಾರು ಮಹಾನ್ ವ್ಯಕ್ತಿಗಳ ಅರ್ಪಣಾ ಮನೋಭಾವದ ತ್ಯಾಗಪೂರ್ಣ ಶ್ರಮ,ಸೇವೆಯ ಕೊಡುಗೆ ಇದೆ. ಅದು ಹೆಮ್ಮೆಯ ಸಂಗತಿಯಾಗಿದ್ದು, ಸಂಸ್ಥೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮ ಕರ್ತವ್ಯ ಎಂದು ಶಂಕರಪುರ ರೋಟರಿಯ ಹಿರಿಯ ಸದಸ್ಯ,ಉದ್ಯಮಿ ಆ್ಯಂಟನಿ ಡೇಸಾ ನುಡಿದರು.

ಅವರು ಬುಧವಾರ ಬಂಟಕಲ್ಲು ರೋಟರಿ ಭವನದಲ್ಲಿ ಜರುಗಿದ ಪ್ರತಿಷ್ಠಿತ ಶಿರ್ವ ರೋಟರಿಯ 52ನೇ ಮಾನ್ಯತಾ(ಚಾರ್ಟರ್) ದಿನಾಚರಣಾ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ, ಶಿರ್ವ ರೋಟರಿಯಲ್ಲಿ ತಮ್ಮ ಅನುಭವನ್ನು ವಿವರಿಸುತ್ತಾ, 1970-71ರಲ್ಲಿ ಹಿರಿಯರಾದ ಪಾಂಗಾಳ ವಿಠಲ ಶೆಣೈ, ಡಾ.ಕೆ.ಆರ್.ವೆಂಕಟಕೃಷ್ಣ ಸಹಿತ ಹಲವಾರು ವ್ಯಕ್ತಿಗಳ ಸೇವಾ ಸ್ಪೂರ್ತಿಯಿಂದ ಪ್ರಾರಂಭಗೊoಡ ಸಂಸ್ಥೆ, ಹಲವು ಏರಿಳಿತಗಳನ್ನು ಕಂಡು ಇಂದು ಅರ್ಥಪೂರ್ಣವಾಗಿ ಕಾರ್ಯಕ್ರಮ ನೆರವೇರಿಸುತ್ತಿರುವುದು ಶ್ಲಾಘನೀಯ ಎಂದರು.

ವಲಯ ಸಹಾಯಕ ಗವರ್ನರ್ ಡಾ.ಅರುಣ್ ಹೆಗ್ಡೆ ಕೇಕ್ ಕತ್ತರಿಸುವ ಮೂಲಕ ಚಾಲನೆ ನೀಡಿ ಶುಭ ಹಾರೈಸಿದರು. ವಲಯ ಸೇನಾನಿ ಅನಿಲ್ ಡೇಸಾ ಶುಭಾಶಂಸನೆಗೈದರು. ಸಮಾರಂಭದ ಅಧ್ಯಕ್ಷತೆಯನ್ನು ಶಿರ್ವ ರೋಟರಿ ಅಧ್ಯಕ್ಷ ನ್ಯಾಯವಾದಿ ಜಯಕೃಷ್ಣ ಆಳ್ವ ವಹಿಸಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಕೊಡುಗೈದಾನಿ ರಫಾಯಲ್ ಮತಾಯಸ್ ದಂಪತಿಗಳನ್ನು ಗೌರವಿಸಲಾಯಿತು. ಉಪಸ್ಥಿತ ಎಲ್ಲ ಪೂರ್ವಾಧ್ಯಕ್ಷರುಗಳನ್ನು ಅಭಿನಂದಿಸಲಾಯಿತು.
ಹಿರಿಯ ರೊಟೇರಿಯನ್ ಬಿ.ಪುಂಡಲೀಕ ಮರಾಠೆ ಪ್ರಾಸ್ತಾವಿಕ ಮಾತುಗಳಲ್ಲಿ ಶಿರ್ವ ರೋಟರಿಯ 51 ವರ್ಷಗಳ ಸೇವಾ ಸಾಧನೆಗಳು, ಏರಿಳಿತಗಳ ಬಗ್ಗೆ ಮಾಹಿತಿ ನೀಡಿದರು. ನಿಯೋಜಿತ ಅಧ್ಯಕ್ಷ ಪ್ರೊ.ವಿಠಲ್ ನಾಯಕ್ ಸಹಕರಿಸಿದರು. ಸಮಾರಂಭದಲ್ಲಿ ಮಾಜಿ ಸಹಾಯಕ ಗವರ್ನರ್ ಕೆ.ಸೂರ್ಯಕಾಂತ್ ಶೆಟ್ಟಿ, ಶಿರ್ವ ಗ್ರಾ.ಪಂ. ಅಧ್ಯಕ್ಷ ಹಾಗೂ ಮಾಜಿ ಸಹಾಯಕ ಗವರ್ನರ್ ಕೆ.ಆರ್.ಪಾಟ್ಕರ್, ವಲಯ ಕಾರ್ಯದರ್ಶಿ ಚಂದ್ರ ಪೂಜಾರಿ, ಕಾಪು ರೋಟರಿ ಅಧ್ಯಕ್ಷ ಸದಾಶಿವ ಭಟ್ ಕೆ, ಕಾರ್ಕಳ ರೋಟರಿ ಅಧ್ಯಕ್ಷ ಸುರೇಶ್ ನಾಯಕ್, ಶಂಕರಪುರ ರೋಟರಿ ಕಾರ್ಯದರ್ಶಿ ಮಾಲಿನಿ ಶೆಟ್ಟಿ, ದೇವೇಂದ್ರ ಶೆಟ್ಟಿ ಬೆಳ್ಮಣ್, ಸುದೀಪ್ ಹೆಗ್ಡೆ ನಿಟ್ಟೆ, ರೋಟರಿ ಹಾಗೂ ಪಾದೂರು ರೋಟರಿ ಸಮುದಾಯದಳದ ಸದಸ್ಯರು ಉಪಸ್ಥಿತರಿದ್ದರು. ಪೂರ್ವಾಧ್ಯಕ್ಷ ವಿಷ್ಣುಮೂರ್ತಿ ಸರಳಾಯ ನಿರೂಪಿಸಿದರು. ಕಾರ್ಯದರ್ಶಿ ಜಿನೇಶ್ ಬಲ್ಲಾಳ್ ಧನ್ಯವಾದವಿತ್ತರು. ನಂತರ ಜೆಸಿಂತಾ ರೊನಾಲ್ಡ್ ಡಿಸೋಜರಿಂದ ಸೌಹಾರ್ದ ಅಟಗಳು ನಡೆದವು.

 
 
 
 
 
 
 
 
 
 
 

Leave a Reply