ನಡುರಾತ್ರಿಯ ಸುಂಟರಗಾಳಿಯ ತಂಡಿಗೆ ಮಕ್ಕಳು ಮುರುಟಿ ಹೋಗಿದ್ದರು…

ಈ ವರ್ಷದ ಜೂನ್,ಜುಲೈ ತಿಂಗಳಲ್ಲಿ ಸಂಭವಿಸಿದ ಜಲಪ್ರಳಯ ದೇಶದ ಅನೇಕ ರಾಜ್ಯಗಳನ್ನು ಬೆಚ್ಚಿಬೀಳಿಸಿತ್ತು.ಈ ಸಂದರ್ಭದಲ್ಲಿ ಉಡುಪಿಯ ಪಡುಕೆರೆ ಕಡಲಕಿನಾರೆಯ ಬಳಿ ತೆರಳಿದ್ದೆವು.ತೆರೆಗಳ ಅಬ್ಬರವನ್ನು ವೀಕ್ಷಿಸುತ್ತಿದ್ದ ಸಂದರ್ಭದಲ್ಲಿ ನಮ್ಮ ಪಕ್ಕದಲ್ಲೇ ನಿಂತಿದ್ದ ಸ್ಥಳೀಯ(ಪಡುಕೆರೆ)ಹಿರಿಯ ನಿವಾಸಿಯೊಬ್ಬರು ನನ್ನೊಡನೆ ಕಡಲ ಪ್ರಕ್ಷುಬ್ದತೆಯ ಬಗ್ಗೆ ಮಾತನಾಡುತ್ತಿದ್ದರು.28 ವರ್ಷಗಳ ಹಿಂದೆ ಇದೇ ಕಡಲತೀರದಲ್ಲಿ ಚಂಡಮಾರುತ ಅಪ್ಪಳಿಸಿದಾಗ ಎದುರಾದ ಸಂಕಷ್ಟವನ್ನು ನೆನೆಸಿಕೊಂಡರು.ಆ ಸಂದರ್ಭದಲ್ಲಿ ಶಿರೂರು ಮಠದಶ್ರೀಲಕ್ಷ್ಮೀವರತೀರ್ಥ ಶ್ರೀಪಾದರು ಕೃಷ್ಣನ ಸನ್ನಿಧಾನದಲ್ಲಿ ಸಲ್ಲಿಸಿದ ಸಹಾಯವನ್ನು ಇಂಚಿಂಚಾಗಿ ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಿದ್ದರು..

1994 ಅಕ್ಟೋಬರ್ ತಿಂಗಳ ಕೊನೆಯ ವಾರ..
ಗುಡುಗು-ಸಿಡಿಲಿನ ಜಡಿಮಳೆಯ ಜೊತೆಗೆ ಚಂಡಮಾರುತದ ಆರ್ಭಟದಿಂದ ದೇಶದ ಅನೇಕ ರಾಜ್ಯಗಳಲ್ಲಿ ಪ್ರವಾಹ ಉಕ್ಕಿ ಹರಿದು ಜನಜೀವನವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿತ್ತು.ಆರಂಭಿಕ ಹಂತದಲ್ಲೇ 72ಸಾವಿರ ಮನೆಗಳು15ಕ್ಕೂ ಮಿಕ್ಕಿದ ಸೇತುವೆಗಳು ಹತ್ತಾರು ರಸ್ತೆಗಳು ಕುಸಿದು ನದಿ-ಸಮುದ್ರಗಳ ಪಾಲಾಗಿದ್ದವು.ಕರ್ನಾಟಕ ಕರಾವಳಿಯ ಕಡಲು ಕೂಡಾ ಉದ್ವಿಗ್ನವಾಗಿತ್ತು.
ಉಡುಪಿ ಕರಾವಳಿಯ ತಟದಲ್ಲಿದ್ದ ಅನೇಕ ಮನೆಗಳನ್ನು,ಸಾಲುಸಾಲು ಕಲ್ಪವೃಕ್ಷಗಳನ್ನು ಅಬ್ಬರಿಸಿ ಬರುತ್ತಿದ್ದ ದೈತ್ಯತೆರೆಗಳು ಆಪೋಶನಗೈಯುತ್ತಿದ್ದವು.ತೀರದಲ್ಲಿ ನೆಲೆಸಿದ್ದ ನೂರಾರು ನಿವಾಸಿಗಳು ಭಯಭೀತರಾಗಿದ್ದರು.

ಶ್ರೀಶಿರೂರುಮಠದ ಶ್ರೀಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ ದ್ವಿತೀಯ ಪರ್ಯಾಯ ಜರಗುತ್ತಿತ್ತು. ಅಂದು ಶ್ರೀಶಿರೂರು ಶ್ರೀಪಾದರು ಕೃಷ್ಣನಿಗೆ ರಾತ್ರಿಪೂಜೆ ಸಲ್ಲಿಸಿ ಆಡಳಿತ ಕಚೇರಿಯತ್ತ (ಬಡಗುಮಾಳಿಗೆ)ಆಗಮಿಸುತ್ತಿದ್ದರು. ಮುಂಜಾನೆಯಿಂದ ಸುರಿಯುತ್ತಿದ್ದ ಬರಸಿಡಿಲಿನಮಳೆಯು ಉಗ್ರಪ್ರವಾಹದ ರೂಪಪಡೆದು ಎಲ್ಲೆಡೆ ನುಗ್ಗುತ್ತಿತ್ತು.ರಾತ್ರಿಸುಮಾರು ಎಂಟೂವರೆ ಗಂಟೆಯಾಗಿತ್ತು.ಮಠದ ಆಡಳಿತ ಕಚೇರಿಯಲ್ಲಿ ಕುಳಿತಿದ್ದ ಶಿರೂರು ಶ್ರೀಪಾದರ ಬಳಿ ಒಮ್ಮೆಗೆ ಸಾವಿರಾರುಮಂದಿ ದೌಡಾಯಿಸಿದರು.ಆಗಮಿಸಿದ್ದ ಬಹುತೇಕರು ಸುರಿಯುತ್ತಿದ್ದ ಕುಂಭದ್ರೋಣ ಮಳೆಗೆ ಚಿಂದಿಯಾಗಿ ನಡುಗುತ್ತಿದ್ದರು.ಮಕ್ಕಳು ಮುದುಕರು ಮಹಿಳೆಯರೂ ಸೇರಿದಂತೆ ಲೆಕ್ಕವಿಲ್ಲದಷ್ಟು ಕುಟುಂಬಗಳು ಶ್ರೀಪಾದರ ಸಮ್ಮುಖದಲ್ಲಿ ಸೇರಿದ್ದರು.

ಉಡುಪಿ ಕರಾವಳಿಯ ಪ್ರಮುಖ ಕಡಲತೀರಗಳಾದ ಮಲ್ಪೆ,ಪಡುಕೆರೆ,ಮಟ್ಟು ತೀರದಲ್ಲಿ ಅಂದುಸಂಜೆ ಕಣ್ಣರೆಪ್ಪೆ ಮಿಟುಕಿಸುವಷ್ಟರಲ್ಲಿ ಭಯಾನಕ ಚಂಡಮಾರುತ ಎರಗಿತ್ತು.ಇದರ ಹೊಡೆತಕ್ಕೆಅನೇಕ ಮನೆಗಳು ಕಡಲ ಆಳವನ್ನು ಸೇರಿತ್ತು.
ಜಾಗೃತರಾದ ಸ್ಥಳೀಯ ಆಡಳಿತ ಮತ್ತು ಪೊಲೀಸ್ ಇಲಾಖೆಯವರು ತಕ್ಷಣವೇ ಕಡಲತೀರದ ಮನೆಗಳಲ್ಲಿದ್ದ ಸುಮಾರು 8ರಿಂದ 9ಸಾವಿರ ನಿವಾಸಿಗಳನ್ನು ಸ್ಥಳಾಂತರಗೊಳಿಸಿದರು.ಉಡುಪಿ ಮಂಗಳೂರು ಕುಂದಾಪುರ ಕಾರವಾರ ಕರಾವಳಿಯವರೆಗೆ ಆವಾಂತರಗಳ ಸರಣಿಯೇ ಸೃಷ್ಟಿಯಾಗಿತ್ತು.ಊರಿಗೆ ಊರೇ ಮಳೆರಾಯನ ಹೊಡೆತಕ್ಕೆ ಸ್ತಬ್ಧವಾಗಿತ್ತು.ಅಷ್ಟೇಅಲ್ಲ ಮುಂದಿನ 48 ಗಂಟೆಗಳಲ್ಲಿ ಇನ್ನಷ್ಟು ಅಪಾಯಗಳ ಮುನ್ಸೂಚನೆಗಳು ನಿರಂತರವಾಗಿ ರೇಡಿಯೋ ಹಾಗೂ ಟಿವಿಗಳಲ್ಲಿ ಬಿತ್ತರವಾಗುತ್ತಿತ್ತು.ಉಡುಪಿ ಕಡಲತೀರದಿಂದ ಸ್ಥಳಾಂತರಗೊಂಡವರ ಗುಂಪಿನಲ್ಲಿದ್ದ ಸುಮಾರು ಮೂರುಸಾವಿರ ನಿವಾಸಿಗಳು ಎಲ್ಲೂ ಆಶ್ರಯ ದೊರಕದೆ ಕೃಷ್ಣ ಸನ್ನಿಧಾನದಲ್ಲಿರುವ ಕೃಷ್ಣ ಪೂಜಕರ ಬಳಿ ನೆರೆದಿದ್ದರು.

ವಿಷಯ ತಿಳಿದ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರು ಕೆಲಕ್ಷಣ ಭಾವುಕರಾದರು.
ತಡಮಾಡಲಿಲ್ಲ. ನನ್ನನ್ನು ಕರೆದು ಒಂದೈದು ನಿಮಿಷಗಳ ಚರ್ಚೆ ನಡೆಸಿ ಕಾರ್ಯಪ್ರವೃತ್ತರಾದರು. ಮೊತ್ತಮೊದಲಾಗಿ ಆಗಮಿಸಿದ್ದ ಮೂರುಸಾವಿರ ಮಂದಿಗೂ ಬಿಸಿಬಿಸಿ ಊಟನೀಡಲು ಆದೇಶಿಸಿದರು.ಆದರೆ ಅಷ್ಟು ಹೊತ್ತಿಗಾಗಲೇ ಮುಖ್ಯ ಅಡುಗೆಯವರು ಮನೆಗೆ ತೆರಳಿಯಾಗಿತ್ತು. ಶ್ರೀಪಾದರ ಆದೇಶದ ಮೇರೆಗೆ ಮತ್ತೆ ಅವರನ್ನು ಮಠಕ್ಕೆ ಕರೆಸಲಾಯಿತು. ಅಡುಗೆ ಆರಂಭವಾಯಿತು.
ಅಂದು ರಾತ್ರಿ ಕೆಂಪುಚಟ್ನಿ ಬಿಸಿಸಾರು ಹಾಗೂ ಶುಂಠಿ ಒಳ್ಳೆಮೆಣಸು ಬೆರೆಸಿದ ನೀರುಮಜ್ಜಿಗೆಯೊಂದಿಗೆ ಜರಗಿದ ಅನ್ನಸಂತರ್ಪಣೆಯು ಹಸಿವಿನಿಂದ ಕಂಗೆಟ್ಟು ಚಳಿಯಲ್ಲಿ ನಡುಗುತ್ತಿದ್ದ ಸಾವಿರಾರು ಮಂದಿಗೆ ಮೃಷ್ಟಾನ್ನಭೋಜನದ ಸವಿಯನ್ನು ನೀಡಿತ್ತು. ಅಷ್ಟೂಮಂದಿಯ ಊಟ ಮುಗಿಯುವಾಗ ನಡುರಾತ್ರಿ ಹನ್ನೆರಡುಗಂಟೆಯಾಗಿತ್ತು.
ಕೃಷ್ಣಮಠಕ್ಕೆ ಆಗಮಿಸುವಾಗ ಖಿನ್ನರಾಗಿದ್ದ ನಿವಾಸಿಗಳ ಮುಖಗಳಲ್ಲಿ ಬಿಸಿಊಟದ ನಂತರ ಒಂದಿಷ್ಟು ಆತ್ಮವಿಶ್ವಾಸ ಚಿಗುರಿತು.ಶ್ರೀಪಾದರು ನಮ್ಮೊಡನೆಯೇ ಇದ್ದರು.

ನಡುರಾತ್ರಿಯ ನಂತರ ವರುಣನ ಆರ್ಭಟ ತಾರಕಕ್ಕೇರಿತ್ತು. ಕಡಲಮಕ್ಕಳಿಗೆ ರಾತ್ರಿ ಮಲಗಿಕೊಳ್ಳಲು ಸೂಕ್ತ ವ್ಯವಸ್ಥೆಯ ಹುಡುಕಾಟ ಆರಂಭವಾಯಿತು.ಅಂತಿಮವಾಗಿ ಮಠದ ಭೋಜನಶಾಲೆಯ ಕೆಳಅಂತಸ್ತು ಮೇಲ್ಮಹಡಿ,ವಸಂತಮಹಲ್,ರಾಜಾಂಗಣ ಹಾಗೂ ಕೃಷ್ಣಮಠದ ಅಧೀನದಲ್ಲಿದ್ದ ಕೆಲ ವಸತಿಗೃಹಗಳನ್ನು ನೀಡಲಾಯಿತು.ಬರ್ರೆಂದು ಜೋರಾಗಿ ಸುರಿಯುತ್ತಿದ್ದ ಮಳೆಯ ನಡುವೆ ತಣ್ಣಗಿನ ಸುಂಟರಗಾಳಿಗೆ ಪುಟ್ಟಮಕ್ಕಳು ಹೆಂಗಳೆಯರು ಮುರುಟಿಹೋಗಿದ್ದರು. ಬಹುತೇಕರು ಉಟ್ಬಬಟ್ಟೆಯಲ್ಲೇ ಕಡಲತೀರದಿಂದ ಓಡಿಬಂದಿದ್ದರು.ಆದ್ದರಿಂದ ನೆಲಕ್ಕೆ ಹಾಸಲು ಒಂದುತುಂಡು ಬಟ್ಟೆಯೂ ಇರಲಿಲ್ಲ.ಈ ವಿಚಾರ ತಿಳಿಯುತ್ತಿದ್ದಂತೆ ಶ್ರೀಪಾದರು ಮಠದ ಎಲ್ಲಾ ಸಿಬ್ಬಂದಿ ವರ್ಗದವರನ್ನು ಕರೆದು ಪರಿಸ್ಥಿತಿಯನ್ನು ತಿಳಿಸಿ ಪ್ರತಿಯೊಬ್ಬರೂ ಸಹಕರಿಸುವಂತೆ ಕೇಳಿಕೊಂಡರು.ಮಠದಲ್ಲಿದ್ದ ಜಮಖಾನ,ಚಾಪೆ,ಕಂಬಳಿ,ಇನ್ನಿತರ ಬಟ್ಟೆಬರೆಗಳನ್ನು ಹೊಸದು,ಹಳೆಯದು ಎಂಬುದನ್ನು ಲೆಕ್ಕಿಸದೆ ನೆಲಕ್ಕೆ ಹಾಸಲು ನೀಡಲಾಯಿತು.ಮಠದ ಕೆಲಸಿಬ್ಬಂದಿಗಳು ಹಾಗೂ ಅಧ್ಯಯನಕ್ಕೆ ಮಠದಲ್ಲಿ ಉಳಕೊಂಡಿದ್ದ ಊರ-ಪರಊರ ಅನೇಕ ವಿದ್ಯಾರ್ಥಿಗಳು, ಶ್ರೀಪಾದರಪೂರ್ವಾಶ್ರಮದ ಮಾತೃಶ್ರೀಯವರಾದ ಶ್ರೀಮತಿಕುಸುಮಮ್ಮನವರೂ ಸಹಿತ ಬಹುತೇಕರು ಈ ಆಪತ್ಕಾಲದ ಅಭಿಯಾನದಲ್ಲಿ ಶಕ್ತಿಮೀರಿ ಸಹಕರಿಸಿ ತಮ್ಮಿಂದಾದ ಸಹಾಯ ಮಾಡಿದರು.

ಶ್ರೀಪಾದರು ಕಡಲಮಂದಿಯ ಸಂಪೂರ್ಣ ಉಸ್ತುವಾರಿಗೆ ಪ್ರತ್ಯೇಕ ತಂಡ ರಚಿಸಿದ್ದರು. ಮುಂಜಾನೆಯಾದರೂ ಮಳೆಸುರಿಯುತ್ತಲೇ ಇತ್ತು.
ಬೆಳಗ್ಗಿನ ಉಪಹಾರಕ್ಕಾಗಿ ಮೂರುಸಾವಿರ ಮಂದಿಗೂ ಗಂಜಿ ಮತ್ತು ಉಪ್ಪಿನಕಾಯಿ ಸಿದ್ಧವಾಗಿತ್ತು.ಮಧ್ಯಾಹ್ನ ಅಷ್ಟೂಮಂದಿಗೆ ಪ್ರತ್ಯೇಕವಾಗಿ ಪಾಯಸ ಸಹಿತ ಶ್ರೀಕೃಷ್ಣದೇವರ ಅನ್ನಪ್ರಸಾದವು ಹಸಿದ ಉದರವ ಸೇರಿತು.ರಾತ್ರಿಯೂ ಕೂಡಾ ಅನ್ನಪ್ರಸಾದವನ್ನು ಚೊಕ್ಕದಾಗಿ ಆಯೋಜಿಸಲಾಗಿತ್ತು.

ಮಧ್ಯರಾತ್ರಿಯ ನಂತರ ಮಳೆಯ ಅಬ್ಬರ ಕಡಿಮೆಯಾಯಿತು.
ಕರಿಮೋಡಗಳು ಕರಗುತ್ತಿದ್ದವು.ನಕ್ಷತ್ರಗಳು ಮಿನುಗುತ್ತಿದ್ದವು.ಗುಡುಗು ಸಿಡಿಲುಗಳ ಸದ್ದು ಅಡಗಿತ್ತು.ಬೆಳಗಾಗುತಿದ್ದಂತೆ ಗಗನವು ಸೂರ್ಯರಶ್ಮಿಯ ಪ್ರಭೆಯಿಂದ ಮಿಂಚಲಾರಂಭಿಸಿತು. ಕಂದಿಹೋಗಿದ್ದ ಅಷ್ಟೂಮಂದಿಯ ಮೊಗದಲ್ಲಿ ಹೊಸಬೆಳಕು ಮೂಡಿತು.ಆಗಮಿಸಿದ್ದ ಮಂದಿ ಮುಂಜಾನೆ ಮಠದಲ್ಲಿ ನೀಡಿದ್ದ ಫಲಾಹಾರ ಸ್ವೀಕರಿಸಿ ಕೃಷ್ಣದರ್ಶನಗೈದು ಕಡಲಕಿನಾರೆಯತ್ತ ಪಯಣ ಬೆಳೆಸಿದರು.ಗುಂಪಿನ ಪ್ರಮುಖರು ಶ್ರೀಶಿರೂರು ಮಠದ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರನ್ನು ಭೇಟಿಮಾಡಿ ಶ್ರೀಪಾದರ ಸಹಾಯಕ್ಕೆ ಖುಷಿಯಿಂದ ಕಣ್ಣೀರಿಡುತ್ತಾ ಕೃತಜ್ಞತೆಗಳನ್ನು ಸಲ್ಲಿಸಿದರು.ಭಾವುಕರಾಗಿದ್ದ ಶ್ರೀಪಾದರು ಅಂದರು “ನಮ್ಮಕಡೆಗೋಲು ಕೃಷ್ಣ ನಿಮ್ಮ ಕಡಲಕಿನಾರೆಯಿಂದಲೇ ಆಗಮಿಸಿದ್ದು.ನಮಗೆ ಉಡುಪಿಯ ಕಡಲಕಿನಾರೆ ಅತ್ಯಂತ ಪುಣ್ಯಸ್ಥಳ.
ನಿಮ್ಮೆಲ್ಲರ ಒಳಿತಿಗಾಗಿ ನಮ್ಮಮಠದ ಬಾಗಿಲು ಯಾವಾಗಲೂ ತೆರೆದೇ ಇರುತ್ತದೆ.ಏನೇ ಇದ್ದರೂ ನಮ್ಮಲ್ಲಿಗೆ ಬನ್ನಿ ಶುಭವಾಗಲಿ”ಎಂದು ಹಾರೈಸಿದರು. ಕೃಷ್ಣಮಠದಲ್ಲಿ ಶಿರೂರು ಶ್ರೀಪಾದರ ಜೊತೆಗಿದ್ದ ಆ ಎರಡು ದಿನಗಳು ಅವಿಸ್ಮರಣಿಯ.
ಶ್ರೀಶಿರೂರುಮಠದ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ಹೃದಯ ವೈಶಾಲ್ಯತೆ,ಸಕಾಲಿಕ ನೆರವು,ಸ್ಪಂದನ,ನೋವಿಗೆ ತಕ್ಷಣ ಮಿಡಿಯುವ ಮುಗ್ದಹೃದಯ ಮತ್ತೆ ಮತ್ತೆ ನೆನಪಾಗುತ್ತಿದೆ.ಅವರಿಗೆ ಅವರೇ ಸಾಟಿ..
ಘಟನೆಯನ್ನು ಹೇಳಿ ಮುಗಿಸುವಾಗ ಪಡುಕೆರೆ ನಿವಾಸಿಯ ಗಂಟಲು ಕಟ್ಟಿಬಂದಿತ್ತು.ಶ್ರೀಪಾದರನ್ನು ನೆನೆದು ಕಣ್ಣಂಚಿನಲ್ಲಿ ನೀರು ತುಂಬಿಕೊಂಡಿದ್ದ ಆತ ಭಾವುಕನಾಗಿದ್ದ.

ಹೀಗೆ ಅನೇಕಭಾರಿ ನಾಡಿನಲ್ಲಿ ಅತಿವೃಷ್ಟಿ,ಅನಾವೃಷ್ಟಿ, ಕ್ಷೋಭೆಗಳು ಸಂಭವಿಸಿದಾಗ ನಿರೀಕ್ಷೆಗೂ ಮೀರಿ ಸಹಾಯ ಸಲ್ಲಿಸುತ್ತಿದ್ದ ಶ್ರೀಪಾದರ ಅಪರೂಪದ ಕರ್ತೃತ್ವ ಸಮಾಜಕ್ಕೊಂದು ಮಾದರಿ.ಎಷ್ಟೋಭಾರಿ ಮಠದ ಸಂಪೂರ್ಣ ಪ್ರಾಂಗಣವನ್ನೇ
ಸಂತ್ರಸ್ತರಿಗಾಗಿ ತೆರೆದಿಡುತ್ತಿದ್ದರು.
ಶ್ರೀಪಾದರ ಸೇವೆ ಸಂಪೂರ್ಣ ನಿರಪೇಕ್ಷವಾಗಿರುತ್ತಿತ್ತು.

ಆತ್ಮೀಯರೇ ಶ್ರಾವಣ ಶುಕ್ಲಪಕ್ಷ ಸಪ್ತಮಿ ಆಗಸ್ಟ್ 4ರಂದು(ಆಂಗ್ಲ ಕ್ಯಾಲೆಂಡರ್ ದಿನಾಂಕ ಜುಲೈ19-2018) ಶ್ರೀಶಿರೂರು ಮಠದ ಪರಮಪೂಜ್ಯ ಶ್ರೀಶ್ರೀಲಕ್ಷ್ಮೀವರತೀರ್ಥ ಶ್ರೀಪಾದರು ಹರಿಪದೈಕ್ಯರಾದ ದಿನ.
ಈ ಪರ್ವಕಾಲದಲ್ಲಿ ಶ್ರೀಪಾದರು ನಮ್ಮೊಡನೆ ಇಲ್ಲವಾದರೂ ಅವರ ಸಮಾಜಸೇವೆಗಳು,
ಸಾಂಸ್ಕೃತಿಕ ಕೊಡುಗೆಗಳು,ಕೃಷ್ಣನಿಗೆ ಭಕ್ತಿಪೂರ್ವಕವಾಗಿ ಸಲ್ಲಿಸಿದ ಮುನ್ನೂರು ವೈವಿಧ್ಯಮಯ ಅಲಂಕಾರಗಳು,ಕೃಷ್ಣಮಠಕ್ಕೆ ಅರ್ಪಿಸಿದ ಕೋಟ್ಯಾಂತರ ಮೌಲ್ಯದ ಸೇವಾರ್ಪಣೆಗಳು, ಮೂರು ವೈಭವದ ಪರ್ಯಾಯಗಳು,ನಿರಂತರ ಅನ್ನದಾನಗಳು,ಶಿಕ್ಷಣ, ಕ್ರೀಡೆ,ಅನಾರೋಗ್ಯಪೀಡಿತರಿಗೆ ಸಲ್ಲುತ್ತಿದ್ದ ಧನಸಹಾಯಗಳು,ಸಮಾನತೆಯ ಚಿಂತನೆಗಳು ಎಂದಿಗೂ ಜನಮಾನಸದ ಮನದಾಳದಿಂದ ಮರೆಯಾಗಲಾರದು.ಇಂತಹ ಪರಮಪೂಜ್ಯರ ಅನುಗ್ರಹ ಸರ್ವರಿಗೂ ಸದಾ ಕರುಣವಾಗುತ್ತಿರಲಿ ಎಂದು ಪ್ರಾರ್ಥಿಸುತ್ತಾ ಹೃದಯದ ಈ ಬರಹವನ್ನು ಶ್ರೀಶಿರೂರು ಮಠದ ಕೀರ್ತಿಶೇಷ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ಪವಿತ್ರ ಪಾದಕಮಲಗಳಿಗೆ ಅರ್ಪಿಸುತ್ತಿದ್ದೇನೆ.

ಪ್ರೀತೋಸ್ತು ಕೃಷ್ಣ ಪ್ರಭುಃ
II ಕೃಷ್ಣಾಲಂಕಾರಸಂಸಕ್ತಂ ಸರ್ವಸಜ್ಜನಪೋಷಕಮ್
ಲಕ್ಷ್ಮೀವರಗುರುಂ ವಂದೇ ಶ್ರೀವಿಶ್ವೋತ್ತಮತೀರ್ಥ ಕರೋದ್ಭವಮ್ II

ಬರಹ:ಪಿ.ಲಾತವ್ಯ ಆಚಾರ್ಯ ಉಡುಪಿ.

 
 
 
 
 
 
 
 
 
 
 

Leave a Reply