“ರಂಗಭೂಮಿ” ನನ್ನ ಮಾತಿನ ಮನೆಯಿಂದ …~ಶಿಲ್ಪಾ ಜೋಶಿ.

ಜರ್ನಿ ಥಿಯೇಟರ್ ಗ್ರೂಪ್ಸ್ (ರಿ) ಮಂಗಳೂರು”  ಅವರು ಪ್ರಸ್ತುತ ಪಡಿಸಿದ ಮಲಯಾಳಂ ನಾಟಕಕಾರ  ಜಿ ಶಂಕರನ್ ಪಿಳ್ಳೈ ಅವರ “ಕರುತ್ತೆ ದೈವತೆ ತೇಡಿ” ನಾಟಕದಿಂದ ಪ್ರೇರಿತ ವಿದ್ದು ಉಚ್ಚಿಲ್ ಅವರು ರಚಿಸಿ ನಿರ್ದೇಶಿಸಿದ ತುಳು ನಾಟಕ  “ಆದಿ ಅಳವುದ ಸಾದಿ “

ಶಂಕರನ್ ಪಿಳ್ಳೈ ಅವರ ರಚನೆಯ ಪ್ರಭಾವ  ಇರುವುದರಿಂದ  ಒಂದು ಕಾಲದಲ್ಲಿ ಕೇರಳ ಅಥವಾ ಬೇರೆ ಕಡೆಗಳಿಗೂ ಅನ್ವಯಿಸುವ ಸಾಮಾಜಿಕ ಮನೋಭಾವನೆಯನ್ನು ಪ್ರತಿಬಿಂಬಿಸುವ ಕೃತಿ. ವರ್ಣ ಭೇಧವನ್ನು ಸಾಂಕೇತಿಕವಾಗಿ ತೋರಿಸುವ… ತಮ್ಮ ಪ್ರತಿಷ್ಠೆ, ಹಾಗು ಸಾಮಾಜಿಕ ಸ್ಥರದಲ್ಲಿ ಮನ್ನಣೆ ಗಳಿಸಲು ಮನುಷ್ಯ ಯಾವ ಮಟ್ಟಿಗೂ ಹೋಗ ಬಲ್ಲ. ಭಯ ಹಾಗು ಆಸೆ ಇವೆರಡನ್ನೂ ಆಧಾರವಾಗಿಟ್ಟು ತಮ್ಮ ಬೇಳೆ ಬೇಯಿಸಿಕೊಳ್ಳುವ ವರ್ಗ ಒಂದಾದರೆ.

ಪ್ರತಿಷ್ಠೆ, ಅಧಿಕಾರ ಕಾಗಿ ತಮ್ಮ ಜುಟ್ಟನ್ನೇ ಇನ್ನೊಬ್ಬರಿಗೆ ಕೊಟ್ಟು ಸೂತ್ರದ ಗೊಂಬೆಗಳಾದ ವರ್ಗ ಒಂದು. ಇದೆಲ್ಲದರ ನಡುವೆ ತಲೆಯೆತ್ತದೆ ಮಾತಿಲ್ಲದ ಶೋಷಿತ ವರ್ಗ ಇನ್ನೊಂದು. 60-70 ರ ಶತಮಾನದಲ್ಲಿ ದಟ್ಟವಾಗಿದ್ದ ವರ್ಣಭೇದವನ್ನು ಇಲ್ಲಿ ತೋರಿಸುತ್ತದೆ.


ಕಥೆಯ ವಿವರ :ನಾಟಕ ಪ್ರಾರಂಭವಾಗುವಾಗ ಜೀವಮಾನದ ಸಂದ್ಯೆಯಲ್ಲಿರುವ ವೃದ್ದೆ ಕಂದೀಲು ಹಿಡಿದು ತನ್ನ ಮಗನನ್ನು ಕರೆಯುತ್ತ ಎಲ್ಲಿಗೆ ಹೋದ, ಇನ್ನು ಬರಲಿಲ್ಲ ಎಂದು ಕಳವಳ ಪಡುವ ಸನ್ನಿವೇಶ. ಜೀತದ ವೃದ್ಧೆಯಾಗಿ ಸುನೀತಾ ಎಕ್ಕೂರು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಗತ ಕಾಲದ ತನ್ನ ಜೀವನ ತಾನು ಹೆತ್ತ ಅಮ್ಮ ಅಲ್ಲದೆ ಹೇಗೆ ಅಮ್ಮನಾದೆ, ತನಗೆ ಮಗು ಹೇಗೆ ಸಿಕ್ಕಿತು, ತಾನು ಹೇಗೆ “ಸಾಕಿದ ಮಗನಿಗೆ ಸಾಕುವ ಅಮ್ಮ” ಆದೆ. ಬೆಳೆಯುತ್ತಿರುವ ಆ ಮಗುವಿನ ಬಾಲ ಲೀಲೆಗಳೊಂದಿಗೆ ಹೇಗೆ ಅಪ್ರತಿಮ ಬಲಶಾಲಿಯಾದ.

ಹೇಗೋ ಜೀವನ ದೂಡುತ್ತಿದ್ದ ಅವಳ ಬದುಕು ಒಂದು ಚೌಕಟ್ಟಲ್ಲಿ ತಂದು ಒಂದು ದನ ಚೂರು ಗದ್ದೆ ಯಿಂದ ಸಾಕುಮಗನ ಒಂದು ಗಳಿಗೆಯೂ ಕೂರದ ಪ್ರವೃತ್ತಿಯಿಂದ ಯಾವ ರೀತಿ ಅಭಿವೃದ್ಧಿ ಹೊಂದಿತು. ಹತ್ತು ಜನ ಮಾಡುವ ಕೆಲಸವನ್ನು ಸಲೀಸಾಗಿ ಒಬ್ಬನೇ ಮಾಡುವ ರೀತಿಯಿಂದ. ಊರ ಪರವೂರಿನವರಲ್ಲಿ ಮನೆ ಮಾತಾಗುತ್ತಾನೆ. ಇದೆಲ್ಲವನ್ನು ತನ್ನ ಪ್ರತಿ ಪ್ರವೇಶದಲ್ಲೂ ಸ್ವಲ್ಪ ಸ್ವಲ್ಪ ವಾಗಿಯೇ ಪ್ರೇಕ್ಷರ ಎದುರು ಬಿಚ್ಚಿಟ್ಟ ರೀತಿ.. ಎಲ್ಲಕ್ಕಿಂತಲೂ ಹೆಚ್ಚಾಗಿ ಅವಳ ಹುಡುಕಾಟದ ಸ್ವರ ಇನ್ನು ಕಾಡುವಂತಿದೆ “ಬಾಲೆ ಓ ಬಾಲೆ.. ಒಲ್ಲುಲ್ಲ ಬಾಲೆ”

ಮಾಧ್ಯಮ ವರ್ಗದ ಒಂದು ಪಂಗಡಕ್ಕೆ ತಾವು ನಾಯಕರರಾಗ ಬೇಕು ಅದಕ್ಕೆ  ದಾರಿ ಜನರ ಭಾವನೆಗಳನ್ನು ವಶ ಮಾಡಿಕೊಳ್ಳುವುದು, ಸುಲಭದ ದಾರಿ ದೇವರು ಎಂಬ ವಿಷಯವನ್ನು ತಂದು ಅವರನ್ನು ತಮ್ಮ ಅಧೀನರನ್ನಾಗಿ ಮಾಡಬಹುದು ಎಂಬ ಆಸೆಗೆ ತಾಯಿಯ ಮಾತಿಗೂ ಮನ್ನಣೆ ನೀಡದೆ ಅಣ್ಣ ತಮ್ಮಂದಿರು ಮೂರು ಜನ “ತಿಳಿದವರು” ಅನ್ನುವ ಮೇಲ್ವರ್ಗದ ಜನರ ಮಾರ್ಗ ದರ್ಶನದಲ್ಲಿ ದೇವರ ಹುಡುಕಾಟಕ್ಕೆ ತೆರಳುತ್ತಾರೆ.

ಇಲ್ಲಿ ತಾಯಿಯಾಗಿ ಸತ್ಯ ಜೀವನ್ ಸೋಮೇಶ್ವರ್.. ಬದುಕಿನ ನ್ಯಾಯ ಅನ್ಯಾಯದ ಪರಿ ಭಾಷೆಯನ್ನು ತಪ್ಪು ಒಳಿತಿನ ವಿವೇಚನೆ ನೀಡುವಲ್ಲಿ ತಮ್ಮ ಪಾತ್ರವನ್ನು ಚೊಕ್ಕವಾಗಿಯೇ ನಿರ್ವಹಿಸಿದ್ದಾರೆ. ಸ್ವಲ್ಪ ಮಟ್ಟಿನ ಜವಾಬ್ದಾರಿ ಇರುವ ದೊಡ್ಡ ಅಣ್ಣ, ಮುಖಂಡನಾಗಿ ಗುರುತಿಸಿಕೊಳ್ಳಬೇಕೆಂಬ ಆಸೆ ಇರುವ ಎರಡನೆಯವ ಸ್ವಲ್ಪ ಆತುರ ಬುದ್ದಿಯ ಕೊನೆಯವ ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ಕೊಟ್ಟಿದ್ದಾರೆ. ಇವರೆಲ್ಲ ದೇವರನ್ನು ಹುಡುಕುತ್ತಾ ಹೋಗುವುದು ತಿಳಿದವರ ಅಥವಾ ತೆರಿದಿನಾಯೆ ಅವರ ಮುಂದಾಳತ್ವದಲ್ಲಿ. ಇಲ್ಲಿ ವೇಷ ಭೂಷಣದಿಂದ ಅವರನ್ನು ಇನ್ನು ಮೇಲ್ವರ್ಗದ ಜನ ಅಂತ ಬಿಂಬಿಸಿದ್ದಾರೆ. 

ತೆರಿದಿನಾಯೆ  ಮಾಧ್ಯಮ ವರ್ಗದ ಜನರ ಅಸೆ ಹಾಗು ಭಯವನ್ನೇ ಅಸ್ತ್ರವಾಗಿಸಿ ಅವರನ್ನು ತಮ್ಮ ಮುಷ್ಠಿ ಯಲ್ಲಿ ಹಿಡಿದುಕೊಂಡು ತಮ್ಮ ಪ್ರಭಾವ ಉಳಿಸಿಕೊಳ್ಳುವಲ್ಲಿ ಉಳಿದವರನ್ನು ಶೋಷಣೆ ಮಾಡುವುದು ಬಿಂಬಿತ ವಾಗಿದೆ. ಇಲ್ಲಿ ಇವರ ಗಂಟು ಮೂಟೆ ಹೊರಲಿಕ್ಕೆ ಬಲಶಾಲಿಯಾದ ಸಾಕುಮಗ-ನನ್ನು ಯಾವ ಸ್ವಷ್ಟೀಕರಣ ನೀಡದೆ ನಿಯೋಜಿಸುತ್ತಾರೆ ,  ಬಾಯಿ ಇದ್ದರು ತಮ್ಮ ದಬ್ಬಾಳಿಕೆಯಿಂದ ಮೂಕ ಅಥವಾ ಪೊಟ್ಟ ನಾಗಿರುವಂತೆ ಮಾಡುತ್ತಾರೆ. 


ತೆರಿದಿನಾಯೆ ಪಾತ್ರ ನಿರ್ವಹಿಸಿದ ಸುರೇಶ ಬಾಳಿಲ ಹಾಗು ಸುನಿಲ್ ಪಲ್ಲ ಮಜಲು. ತಮ್ಮ ಅಭಿನಯದಿಂದ ಆ ಕಾಲದ ಶೋಷಣೆ, ಅಥವಾ ಕೆಳವರ್ಗದವರ ಮನೋಸ್ಥಿತಿಯನ್ನು ಬಳಸಿ ಅವರಲ್ಲಿ ಕೈಗೊಂಬೆ ಹಾಗೆ ಮಾಡುವಂತಹ ಸನ್ನಿವೇಶವನ್ನು ಕಣ್ಣೆದುರು ತಂದಿಟ್ಟರು.

ಸಾಕಿದ ಅಮ್ಮನ ಫ್ಲಾಶ್ ಬ್ಯಾಕ್ ಮಾತಿನೊಂದಿಗೆ ಹುಟ್ಟಿ ರಂಗದ ತುಂಬೆಲ್ಲ ಪರಾಕ್ರಮದಿಂದ ಓಡಾಡಿ ಕೊನೆಗೆ ಹೋಗುವಾಗ ಹಿಂದಿರುಗಿ ಬರುವೆನೋ ಎಂಬ ಸಂದೇಹವನ್ನು ಹೇಳಿ.. ತಿಳಿದವರ ಆಟದ ಬಲಿಪಶುವಾಗಿ ಯಾವುದೇ ಮಾತಿಲ್ಲದೆ ದೂರದ ಹಾದಿಯಲ್ಲಿ ಗಂಟು ಮೂಟೆ ಹೊತ್ತು ವಿಶ್ರಮವು ಎಲ್ಲಡೆ ಒಂದು ಮೂಲೆಯಲ್ಲಿ ಕಣ್ಣು ಮಿಟುಕಿಸದೆ ಗೊಂಬೆಯಂತೆ ತಟಸ್ಥವಾಗಿ ನಿಲ್ಲುವ  ಪೊಟ್ಟ ಪಾತ್ರದಾರಿ ಮನೋಜ್ ವಾಮಂಜೂರು ಅವರ ಅಭಿನಯ ಮನಮುಟ್ಟುತ್ತದೆ. 

ದೇವರನ್ನು ಹುಡುಕಿ ಹೋಗುವ ಮುಗೀಯದ ದಾರಿ ಮದ್ಯದಲ್ಲಿ ಪ್ರವೇಶವಾಗುವ  ಸಾಕಿದ ಅಮ್ಮ, ಅವಳ ಹುಡುಕಾಟ… ಪಾರ್ದನದ ಹಾಡು ಬೇರೆಯೇ ಲೋಕಕ್ಕೆ ಕರೆದೊಯ್ಯ್ಯುತ್ತದೆ. ತಿಳಿದವರು ಆಡುವ ಆಟ. ತೋರಿಸಿದ ದೇವರು. ಅಲ್ಲಿ ವರ್ಣ ಭೇಧ, ಹತಾಶೆ ಭಯ ಎಲ್ಲವನ್ನು ಬಳಸಿ ದಲಿತ ಪೊಟ್ಟ ದೇವರನ್ನು ತಾನು ನೋಡಬೇಕೆಂದು ಮಾಡಿದ ಅಚಾತುರ್ಯ. ಅವನಿಗೆ ತಕ್ಕ ಶಿಕ್ಷೆ ಕೊಡಬೇಕು ಎಂದು ಈ ತಿಳಿದವರು, ಮಾದ್ಯಮವರ್ಗದವರನ್ನು ಬಳಸಿ ಅವರಿಗೆ ಆಮಿಷ ತೋರಿಸಿ ದಲಿತನ ಕೊಲೆ ಮಾಡಿಸುತ್ತಾರೆ. 

ಕೊನೆಗೆ ಪೊಟ್ಟನ ಟೊಪ್ಪಿಯನ್ನು ಕೊಟ್ಟು ಇದು ನಿಮ್ಮ ದೇವರು ಅಂತ ಹೇಳುವಲ್ಲಿ ಕಥೆ ಮುಗೀತದೆ,  ಹಿನ್ನೆಲೆ ಗಾಯನ- ಮೇಘನಾ ಕುಂದಾಪುರ ಚಿನ್ಮಯಿ ಭರವಸೆ ಹುಟ್ಟಿಸುವ ಹಾಡುಗಾರರು,  ಬೆಳಕು, ರಂಗ ವಿನ್ಯಾಸ ಎಲ್ಲವೂ ಕಥೆಗೆ ಪೂರಕವಾಗಿದೆ. ಸ್ವಲ್ಪ ನಾಟಕ ವಿಷಯವನ್ನು ಎಳೆದ ಹಾಗೆ… ಮುಗಿದಷ್ಟು ನಡೆಯದ ಹಾದಿಯನ್ನು ಪ್ರೇಕ್ಷಕರು ಅನುಭವಿಸಿದರು  

ಈ ಒಂದು ಅಂಶ ಬಿಟ್ಟರೆ ನಟರು, ಕಥೆಯ ವಿಷಯ ಎಲ್ಲವನ್ನು ತುಂಬಾ ಪರಿಣಾಮಕಾರವಾಗಿ ಬಳಸಿ ಉತ್ತಮ ನಾಟಕವನ್ನು ಕಟ್ಟಿ ಕೊಡುವಲ್ಲಿ  ವಿದು ಉಚ್ಚಿಲ ಅವರು ಯಶಸ್ವಿಯಾಗಿದ್ದಾರೆ.

 
 
 
 
 
 
 
 
 

Leave a Reply