ಅಜೆಕಾರು: ಕನ್ನಡದ ಮಾಧ್ಯಮದಲ್ಲಿ ಕಲಿತದ್ದು ನನ್ನ ಪುಣ್ಯ. ಬದುಕಿನಲ್ಲಿ ಏನಾದರೂ ಸಾಧನೆ ಮಾಡಿದ್ದರೆ ಅದಕ್ಕೆ ಮಾತೃಭಾಷಾ ಶಿಕ್ಷಣವೇ ಕಾರಣ. ಕನ್ನಡ ಮಾಧ್ಯಮದ ಬಗ್ಗೆ ಕೀಳರಿಮೆ ಬೇಡ ಎಂದು ಹೆಗ್ಡೆ ಸೇವಾ ಸಂಘ ಮುಂಬಯಿ ಇದರ ನಿಕಟಪೂರ್ವ ಅಧ್ಯಕ್ಷ ಶಂಕರ ಹೆಗ್ಡೆ ಹೇಳಿದರು.
ಅವರು 114 ವರ್ಷದ ಅಜೆಕಾರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶುಭಾಶಯ ದಿನಾಚರಣೆ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸದಾ ಹೊಸತನವನ್ನು ಹುಡುಕುವ ಡಾ.ಶೇಖರ ಅಜೆಕಾರು ಅವರು ರಜೆಗೆ ತೆರಳುವ ಮಕ್ಕಳಿಗೆ ಮನೋರಂಜನೆ, ಜ್ಷಾನ, ಸಿಹಿ ಊಟ ನೀಡಿ ಸಂತೋಷದಿಂದ ಕಳುಹಿಸುವ ವಿನೂತನ ಕಲ್ಪನೆ ಎಂದು ಅಭಿಪ್ರಾಯಪಟ್ಟರು.
ಮರ್ಣೆ ಗ್ರಾಮ ಪಂಚಾಯತ್ ಅಧ್ಯಕ್ಷ ಜ್ಯೋತಿ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಕಳ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಹರೀಶ ನಾಯಕ್, ಮರ್ಣೆ ಗ್ರಾಮ ಪಂಚಾಯತ್ ಸದಸ್ಯರಾದ ಮಾಜಿ ಅಧ್ಯಕ್ಷೆ ಯಶೋದಾ ಶೆಟ್ಟಿ, ಜಾನ್ ಟೆಲಿಸ್, ಚರಿತ್ರಾ ಎಂ, ರಾಘವೇಂದ್ರ ಆಚಾರ್ಯ, ನಿವೃತ್ತ ಅಂಗನವಾಡಿ ಶಿಕ್ಷಕಿ ವಿಮಲಾ ನಾಯ್ಕ್, ವಿದ್ಯಾರ್ಥಿ ನಾಯಕ ಸ್ಕಂದ ಮೊದಲಾದವರು ಉಪಸ್ಥಿತರಿದ್ದರು.
ದೆಪ್ಪುತ್ತೆ ಅಂಗನವಾಡಿ ಶಿಕ್ಷಕಿ ಅಮ್ಮಣ್ಣಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ನೀಡಿದ ರಾಜ್ಯಮಟ್ಟದಲ್ಲಿ ಮಿಂಚುವ ಬಾಲಪ್ರತಿಭೆಗಳಾದ ನಿರೀಕ್ಷಾ ವಿಟ್ಲ, ಅರ್ಚನಾ ಸಂಪ್ಯಾಡಿ, ಅರ್ಚಿತ್ ಕಶ್ವಪ್ ಮೂಡುಬಿದಿರೆ, ಸುನಿಜ ಅಜೆಕಾರು, ಭರತನಾಟ್ಯ ಜ್ಯೂನಿಯರ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಶಾಲಾ ವಿದ್ಯಾರ್ಥಿನಿ ಪ್ರಾಪ್ತಿ ಡಿ.ಶೆಟ್ಟಿ ಅವರನ್ನು ಚಿನ್ನದ ಪದಕ ನೀಡಿ ಗೌರವಿಸಲಾಯಿತು.
ಶಿಕ್ಷಕಯರಾದ ರವಿಕಲಾ, ಸಂಗೀತ, ಭವಾನಿ, ಶಿಲ್ಪಾ, ಚೈತ್ರ ಮಾರ್ಗದರ್ಶನದಲ್ಲಿ ಶಾಲಾ ಮಕ್ಕಳ ಸಾಂಸ್ಖೃತಿಕ ಕಾರ್ಯಕ್ರಮಗಳು ನಡೆದವು.
ಸಾಧಕ ವಿದ್ಯಾರ್ಥಿಗಳಿಗೆ ದತ್ತಿನಿಧಿ ನಗದು ಬಹುಮಾನಗಳನ್ನು ವಿತರಿಸಲಾಯಿತು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಡಾ.ಶೇಖರ ಅಜೆಕಾರು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಮುಖ್ಯೋಪಾಧ್ಯಾಯ ವಿಶ್ವನಾಥ ಎಸ್.ಆರ್ ಸ್ವಾಗತಿಸಿದರು. ದೈಹಿಕ ಶಿಕ್ಷಕ ಪಾಂಡುರಂಗ ಆಚಾರ್ ಕಾರ್ಯಕ್ರಮ ನಿರೂಪಿಸಿದರು.