ಎಸ್.ಡಿ.ಎಂ. ಆಯುರ್ವೇದ ಆಸ್ಪತ್ರೆ ಆವರಣದಲ್ಲಿ ಸುಸಜ್ಜಿತ ರತ್ನಶ್ರೀ ಆರೋಗ್ಯಧಾಮ ಉದ್ಘಾಟನೆಗೆ ಕ್ಷಣಗಣನೆ

ಉಡುಪಿ: ಇಲ್ಲಿನ ಕುತ್ಪಾಡಿ ಎಸ್.ಡಿ.ಎಂ. ಆಯುರ್ವೇದ ಆಸ್ಪತ್ರೆ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ರತ್ನಶ್ರೀ ಆರೋಗ್ಯ ಧಾಮ ಉದ್ಘಾಟನೆಗೆ ಸಜ್ಜುಗೊಂಡಿದ್ದು, ಸೆ. 25ರಂದು ಉದ್ಘಾಟನೆಗೊಳ್ಳಲಿದೆ.ಉಜಿರೆ ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿ ಅಧ್ಯಕ್ಷ, ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಕೇಂದ್ರ ಕೇಂದ್ರ ಬಂದರು, ಶಿಪ್ಪಿಂಗ್, ಜಲ ಸಾರಿಗೆ ಮತ್ತು ಆಯುಷ್ ಖಾತೆ ಸಚಿವ ಸರ್ಬಾನಂದ ಸೋನೋವಾಲ್ ಉದ್ಘಾಟಿಸುವರು ಎಂದು ಎಸ್.ಡಿ.ಎಂ. ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ನಾಗರಾಜ್ ಎಸ್. ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸರಸ್ವತಿ ವಿಗ್ರಹವನ್ನು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಹಾಯಕ ಸಚಿವೆ ಶೋಭಾ ಕರಂದ್ಲಾಜೆ ಅನಾವರಣ ಮಾಡುವರು. ಡಿಲಕ್ಸ್ ವಾರ್ಡ್ (ಹೆಲ್ತ್ ಕಾಟೇಜ್)ನ್ನು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ. ಸುಧಾಕರ್, ಧ್ಯಾನ ಮಂದಿರವನ್ನು ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ವಿ. ಸುನಿಲ್ ಕುಮಾರ್, ಶೃಂಗಾರ (ಆಸ್ತೆಟಿಕ್ ಮೆಡಿಸಿನ್) ವಿಭಾಗವನ್ನು ರಾಜ್ಯ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಪಂಚಕರ್ಮ ಕೇಂದ್ರವನ್ನು ಉಡುಪಿ ಶಾಸಕ ಕೆ. ರಘುಪತಿ ಭಟ್, ಸ್ಪೆಷಲ್ ವಾರ್ಡನ್ನು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸುವರು ಎಂದು ವಿವರಿಸಿದರು.ಕಾರ್ಯಕ್ರಮ ಆಯುರ್ವೇದ ಆಸ್ಪತ್ರೆಯ ಭಾವಪ್ರಕಾಶ ಆಡಿಟೋರಿಯಮ್ ನಲ್ಲಿ ಬೆಳಿಗ್ಗೆ 10ರಿಂದ ನಡೆಯಲಿದೆ. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಡಿ. ಹರ್ಷೇಂದ್ರಕುಮಾರ್ ಮತ್ತು ಡಾ| ಬಿ. ಯಶೋವರ್ಮ. ಉಪಾಧ್ಯಕ್ಷರಾದ ಡಿ. ಸುರೇಂದ್ರಕುಮಾರ್ ಮತ್ತು ಪ್ರೊ. ಎಸ್. ಪ್ರಭಾಕರ್, ನಿರ್ದೇಶಕ ಡಿ. ಶ್ರೇಯಸ್ ಕುಮಾರ್, ಆಯುರ್ವೇದ ಕಾಲೇಜು ಪ್ರಾಂಶುಪಾಲೆ ಡಾ. ಮಮತಾ ಕೆ. ವಿ. ಮೊದಲಾದವರು ಭಾಗವಹಿಸುವರು.ಹವಾನಿಯಂತ್ರಿತ ಆಸ್ಪತ್ರೆಯಲ್ಲಿ 122 ಹಾಸಿಗೆಗಳಿದ್ದು, 35 ಹೆಲ್ತ್ ಕಾಟೇಜ್, ಸ್ಪೆಷಲ್ ವಾರ್ಡ್, 4 ಸೂಟ್ ರೂಮ್ ಹೊಂದಿದೆ. ಆಸ್ಪತ್ರೆಯಲ್ಲಿ ಪಂಚಕರ್ಮ, ಧ್ಯಾನ ಮಂದಿರ, ಶೃಂಗಾರ ಚಿಕಿತ್ಸೆ, ಕಣ್ಣು ಕಿವಿ ಮೂಗು ಚಿಕಿತ್ಸೆ, ಗರ್ಭಸಂಸ್ಕಾರ ಚಿಕಿತ್ಸೆ, ಪಕ್ಷವಾತ ಚಿಕಿತ್ಸೆ, ಫಿಸಿಯೊಥೆರಪಿ, ಪಥ್ಯಾಹಾರ ಹಾಗೂ ಸ್ವಸ್ಥ ಪಂಚಕರ್ಮ ಚಿಕಿತ್ಸೆ ಸೌಲಭ್ಯ ಹೊಂದಿದೆ. ಆಧುನಿಕ ಸೌಲಭ್ಯ ಹೊಂದಿರುವ ಹೈಟೆಕ್ ಆಸ್ಪತ್ರೆ ಇದಾಗಲಿದೆ ಎಂದರು.1958ರಲ್ಲಿ ಕರ್ನಾಟಕ ಆಯುರ್ವೇದ ಸಂಸ್ಥೆ ಹೆಸರಿನಲ್ಲಿ ಸ್ಥಾಪನೆಗೊಂಡ ಸಂಸ್ಥೆ, ಧರ್ಮಸ್ಥಳ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ 1977ರಿಂದ ಬಿಎಎಂಎಸ್ ಶಿಕ್ಷಣ ಆರಂಭಿಸಲಾಯಿತು. ಬಳಿಕ ಸ್ನಾತಕೋತ್ತರ ವಿಭಾಗ, ಕಳೆದ 14 ವರ್ಷದಿಂದ 6 ಪಿಎಚ್.ಡಿ. ವಿಭಾಗಗಳು, ಸಂಶೋಧನೆ ವಿಭಾಗ ಕಾರ್ಯಾರಂಭಗೊಂಡವು. ನುರಿತ ವೈದ್ಯರು ಮತ್ತು ಸಿಬಂದಿಗಳಿದ್ದು, ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ.

50 ಹಾಸಿಗೆಗಳಿಂದ ಆರಂಭಗೊಂಡ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ 1996ರಲ್ಲಿ 221 ಮತ್ತು 2003ರಲ್ಲಿ 310ಕ್ಕೆ ಮೇಲ್ದರ್ಜೆಗೇರಿತು. ಪ್ರಸ್ತುತ ಎಸ್.ಡಿ.ಎಂ. ಆಯುರ್ವೇದ ಆಸ್ಪತ್ರೆಯಲ್ಲಿ 310 ಹಾಸಿಗೆಗಳಿವೆ. ಆ ಪೈಕಿ 125 ಹಾಸಿಗೆಗಳನ್ನು ಬಡವರಿಗಾಗಿ ಅತ್ಯಂತ ಕನಿಷ್ಟ ದರದ ಚಿಕಿತ್ಸೆಗಾಗಿ ಮೀಸಲಿಡಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳು ಮಾತ್ರ ವಲ್ಲದೇ ದೇಶ ವಿದೇಶಗಳಿಂದಲೂ ಚಿಕಿತ್ಸೆಗಾಗಿ ರೋಗಿಗಳು ಆಗಮಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಡಾ| ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಆಸ್ಪತ್ರೆಯ ಸುಸಜ್ಜಿತ ವಿಸ್ತೃತ ಕಟ್ಟಡ ರತ್ನಶ್ರೀ ಆರೋಗ್ಯಧಾಮ ನಿರ್ಮಿಸಲಾಗಿದ್ದು, 122 ಹಾಸಿಗೆಗಳುಳ್ಳ ಆಸ್ಪತ್ರೆ ಇದಾಗಿದೆ. ಆ ಮೂಲಕ ಈಗಾಗಲೇ ಹೊಂದಿರುವ 310 ಹಾಗೂ 122 ಹಾಸಿಗೆಗಳುಳ್ಳ ಆಸ್ಪತ್ರೆಯಾಗಿ ಹೊರ ಹೊಮ್ಮಿದೆ ಎಂದು ಡಾ. ನಾಗರಾಜ್ ವಿವರಿಸಿದರು.

ಆಸ್ಪತ್ರೆಯ ವೈದ್ಯೆ ಡಾ. ಚೈತ್ರ ಹೆಬ್ಬಾರ್, ಪಿ.ಆರ್.ಓ. ಡಾ. ಶ್ರೀನಿಧಿ ಬಳ್ಳಾಲ್ ಉಪಸ್ಥಿತರಿದ್ದರು. 

 
 
 
 
 
 
 
 
 
 
 

Leave a Reply