ಅಪ್ಪನ ಕಾಯಿಲೆ ಮಗನ ಬದುಕಿನ ದಾರಿ ಬದಲಿಸಿತು.ಸಾವಯವ ಕೃಷಿಕ ರಾಮಚಂದ್ರ ಪಟೇಲ್.

ಗುಜರಾತಿನ ಸೂರತ್ ನಗರದ ಸಮೀಪದ ಒಂದು ಹಳ್ಳಿಯ ಕೃಷಿಕ ಕುಟುಂಬದ  ಕಣ್ಣು ತೆರೆಸಿದ ಕಥೆ ಇದು. ನಮ್ಮ ಬದುಕಿಗೂ ಒಂದಿಷ್ಟು ಪ್ರೇರಣೆ ನೀಡಬಹುದು. ರಾಮಚಂದ್ರ ಪಟೇಲ್ ಅವರದ್ದು ಕೃಷಿಕ ಕುಟುಂಬ. ಅವರು B.Com ಪದವಿ ಪಡೆದವರು.ಅವರ ಅಪ್ಪ ಕೃಷಿಯ ಸಮಗ್ರ ಹೊಣೆ ಹೊತ್ತು  ಕುಟುಂಬದ ಪೋಷಣೆ  ಮಾಡುತ್ತಿದ್ದರು. ಒಂದು ದಿನ ಅಪ್ಪನಿಗೆ ತೀವ್ರ ಅನಾರೋಗ್ಯ ಕಾಡಿದಾಗ ಅವರನ್ನು ದೊಡ್ಡ ಆಸ್ಪತ್ರೆಗೆ ಸೇರಿಸಬೇಕು ಅಂತ ಡಾಕ್ಟರ್ ಹೇಳಿದರು. ಅಪ್ಪನನ್ನು ಎರಡು ವರ್ಷಗಳ ಅವಧಿಯಲ್ಲಿ ಹನ್ನೊಂದು ಬಾರಿ  ಮುಂಬಾಯಿಯ ಆಸ್ಪತ್ರೆಗೆ ಪರೀಕ್ಷೆ ಮತ್ತು ಚಿಕಿತ್ಸೆಗೆ ರಾಮಚಂದ್ರ ಕರೆದುಕೊಂಡು ಹೋದರು. ಅವರಿಗೆ ಕ್ಯಾನ್ಸರ್ ಅಂತ ವೈದ್ಯರು ಹೇಳಿದಾಗ ಇಡೀ ಕುಟುಂಬ ತಲೆಯ ಮೇಲೆ ಕೈ ಹೊತ್ತು ಕೂತಿತು. ಲಕ್ಷ ಲಕ್ಷ ಹಣ ಸುರಿದರೂ ಅಪ್ಪನನ್ನು ಉಳಿಸಿಕೊಳ್ಳಲು ಆಗಲಿಲ್ಲ. ಅಪ್ಪನ ಅಗಲಿಕೆ ರಾಮ ಚಂದ್ರ ಅವರ ಕುಟುಂಬವನ್ನು ಸಾಲದ ದವಡೆಗೆ ನೂಕಿತು. 

ಈಗ ರಾಮಚಂದ್ರ ಅವರು ವೈದ್ಯರ ಬಳಿ ತನ್ನ ತಂದೆಗೆ ಕ್ಯಾನ್ಸರ್ ಉಂಟಾಗಲು  ಕಾರಣ ಏನು ಎಂದು ಕೇಳಿದರು.  ವೈದ್ಯರು ಕೊಟ್ಟ ಉತ್ತರ ನಿಜವಾಗಿ ಶಾಕಿಂಗ್ ಆಗಿತ್ತು. ಅಪ್ಪ ಕೃಷಿ ಮಾಡುವಾಗ ಬಳಸಿದ ವಿಷಯುಕ್ತವಾದ ರಾಸಾಯನಿಕ ಗೊಬ್ಬರಗಳು ಮತ್ತು ಕ್ರಿಮಿ ನಾಶಕಗಳು ಅವರ ದೇಹದ ಒಳಸೇರಿ ಉಂಟು ಮಾಡಿದ ಜೀವಕೋಶಗಳ ವಿಭಜನೆಯಿಂದ ಕ್ಯಾನ್ಸರ್ ಬಂದಿತ್ತು. ಈಗ ರಾಮಚಂದ್ರ ಅವರಿಗೆ ಪಾಪ ಪ್ರಜ್ಞೆ ಕಾಡಲು ಆರಂಭ ಆಯಿತು. ಕ್ರಿಮಿನಾಶಕಗಳ ಬಳಕೆಯಿಂದ ತನ್ನ ಅಪ್ಪನ ಆರೋಗ್ಯ ಹಾಳಾ ಯಿತು ಮಾತ್ರವಲ್ಲ, ಅಪ್ಪ ಬೆಳೆಸಿದ  ಆಹಾರವನ್ನು ಬಳಸಿದ ಜನರ ಆರೋಗ್ಯವೂ ಹಾಳಾಗಿರಬಹುದು!  ರಾಮಚಂದ್ರ ಅವರ ನಿದ್ರೆ ಹಾರಿ ಹೋಯಿತು. ಅದೇ ದಿನ ಅವರು ಒಂದು ದಿಟ್ಟ ನಿರ್ಧಾರ ತೆಗೆದುಕೊಂಡರು!  

ಅಪ್ಪ ಮಾಡ್ತಾ ಇದ್ದ ಸಾಂಪ್ರದಾಯಿಕ ಕೃಷಿ ಪದ್ಧತಿಗೆ ತಿಲಾಂಜಲಿ ಕೊಟ್ಟು Zero Budget Natural Farming ( ZBNF) ಎಂಬ ಹೊಸ ಪದ್ದತಿ  ಅಳವಡಿಸಿಕೊಂಡರು. ಅಪ್ಪ ಅದುವರೆಗೆ ಕೃಷಿ ಮಾಡುತಿದ್ದ ಭೂಮಿಯನ್ನು ಬಂಜರು ಬಿಟ್ಟು ಅಪ್ಪ ಖಾಲಿ ಬಿಟ್ಟಿದ್ದ 18 ಎಕರೆ ಭೂಮಿಯನ್ನು ಕೃಷಿಗಾಗಿ ಆರಿಸಿಕೊಂಡರು. ಯಾಕೆಂದರೆ ಆ ಖಾಲಿ ಭೂಮಿ ಅದುವರೆಗೂ ರಸಗೊಬ್ಬರ ಉಂಡಿರಲಿಲ್ಲ. ಅದನ್ನು ಹಸಿರು ಗೊಳಿಸುವ ಸಂಕಲ್ಪ ತೊಟ್ಟರು. ಅಲ್ಲಿಂದ ಅವರು ಸಾವಯವ ಕೃಷಿ ಮತ್ತು ಎರೆಗೊಬ್ಬರ ಆಧಾರಿತ ಕೃಷಿ ಮಾಡಲು ಸಂಕಲ್ಪ ತೊಟ್ಟರು. ಎರೆ ಹುಳುಗಳು ಮಣ್ಣಿನಲ್ಲಿ ರಂಧ್ರವನ್ನು ಕೊರೆದು ಮಳೆ ನೀರನ್ನು ಇಂಗಿಸಿ ಅಂತರ್ಜಲ ಮಟ್ಟವನ್ನು ಏರಿಸಿದವು. ಅದರ ಜೊತೆಗೆ ಎರೆಹುಳುಗಳು ಮಣ್ಣಿನಲ್ಲಿ ಎರೆಗೊಬ್ಬರವನ್ನು ಕೂಡ ಉತ್ಪತ್ತಿ ಮಾಡಿದವು.

ಬೇವಿನ ಎಣ್ಣೆ ಮತ್ತು ಗೋಮೂತ್ರದ ಬಳಕೆಯಿಂದ  ಕೀಟಗಳ ಹಾವಳಿ ತಪ್ಪಿತು. ಜೀವಾಮೃತ ಎಂಬ ದ್ರಾವಣ (ದನದ ಸೆಗಣಿ, ಗೋ ಮೂತ್ರ, ಬೆಲ್ಲ ಮತ್ತು ನೀರು ಇವುಗಳ ಮಿಶ್ರಣ) ಬಳಕೆಯಿಂದ ಭೂಮಿಯ ಸಾರ ಅದರಷ್ಟಕ್ಕೆ ಹೆಚ್ಚಿತು.  ಅವರು ಮಾಡಿದ ಇನ್ನೊಂದು ಪ್ರಯೋಗ ಎಂದರೆ ಪೂರಕ ಬೆಳೆಗಳನ್ನು ಜೊತೆಯಾಗಿ ಬೆಳೆದದ್ದು. ಉದಾಹರಣೆಗೆ ಬಾಳೆಯ ಗಿಡ ಮತ್ತು ಅರಶಿನ ಜೊತೆಯಾಗಿ ನೆಟ್ಟದ್ದು. ಏಕೆಂದರೆ ಬಾಳೆಯ ದೊಡ್ಡ ಎಲೆ ಅರಶಿನದ ಬೆಳೆಗೆ ನೆರಳು ಕೊಟ್ಟರೆ, ಅರಶಿನ ಬಾಳೆಯ ಸುತ್ತ ಸೋಂಕು ಮತ್ತು ಕ್ರಿಮಿಗಳು ಬಾರದ ಹಾಗೆ ತಡೆಯುತ್ತದೆ. ಇದು ಅವರಿಗೆ ಬಂಪರ್ ಫಲಿತಾಂಶ ನೀಡಿತು. ನೂರಕ್ಕೆ ನೂರು ಸಾವಯವ ಗೊಬ್ಬರ ಬಳಕೆಯಿಂದ ನೆಲದ ಆರೋಗ್ಯ ವೃದ್ಧಿ ಆದದ್ದು ಮಾತ್ರವಲ್ಲ ರಾಮಚಂದ್ರ ಅವರ ಕುಟುಂಬದ ಆರೋಗ್ಯವೂ ಉತ್ತಮವಾಯಿತು.  ರಾಮಚಂದ್ರ ಅವರ ಕೈಯ್ಯಲ್ಲಿ ಯಾವಾಗಲೂ ಉಂಟಾಗುತ್ತಿದ್ದ ಅಲರ್ಜಿ ಈ ಬಾರಿ ಕಾಣಿಸಲೇ ಇಲ್ಲ!

ವಿವಿಧ ಬೆಳೆಗಳಾದ ಬಾಳೆ, ಅರಶಿನ, ಕಬ್ಬು, ಪೇರಳೆ, ಲಿಚಿ, ನೇರಳೆ, ಅಕ್ಕಿ, ರಾಗಿ, ಗೋಧಿ ಇವುಗಳನ್ನು ಜೊತೆಯಾಗಿ ಬೆಳೆಸಿದ್ದು ಕೂಡ ಉತ್ತಮ ನಿರ್ಧಾರವೇ ಆಯಿತು. ಹನಿ ನೀರಾವರಿ ಅಳವಡಿಕೆ ಮಾಡಿದ್ದರಿಂದ ನೀರಿನ ಉಳಿತಾಯ ಆಯಿತು. ಅದರೊಂದಿಗೆ ರಾಮ ಚಂದ್ರ ಅವರು ತಮ್ಮ ಉತ್ಪನ್ನಗಳ ಮಾರ್ಕೆಟಿಂಗ್ ದೃಷ್ಠಿಯಿಂದ ತಮ್ಮ ಕೃಷಿ ಭೂಮಿಯ ಪಕ್ಕದಲ್ಲಿ ಬನಾನಾ ಚಿಪ್ಸ್, ಅರಶಿನ ಹುಡಿ, ಟೊಮೆಟೊ ಸಾಸ್ ತಯಾರಿಸುವ ಸಣ್ಣ ಸಣ್ಣ ಉದ್ಯಮಗಳನ್ನು ಹುಟ್ಟು ಹಾಕಿದರು. ಒಂದಷ್ಟು ಮಂದಿಗೆ ಉದ್ಯೋಗ ನೀಡಿದರು. ಸೂರತ್ ನಗರದ ಜನ ಸ್ವತಃ ಅವರ ಫಾರ್ಮಿಗೆ ಬಂದು ಉತ್ಪನ್ನಗಳನ್ನು ಖರೀದಿಸುವ  ಹಾಗೆ ವ್ಯವಸ್ಥೆ  ಮಾಡಿದರು. ಇದರಿಂದ ಅವರ Zero Budget Natural Farming ಕಾನ್ಸೆಪ್ಟ್ ಪೂರ್ತಿ ಆಗಿತ್ತು.

ಈಗ ರಾಮಚಂದ್ರ ಅವರು  ಅದೇ ಕೃಷಿ ಭೂಮಿಯಿಂದ ವರ್ಷಕ್ಕೆ ಕನಿಷ್ಠ ಎಂದರೂ 27 ಲಕ್ಷ  ರೂಪಾಯಿಗಳಷ್ಟು  ಆದಾಯ ಪಡೆಯುತ್ತಿದ್ದಾರೆ. ಅವರಿಗೆ ‘ಅತ್ಯುತ್ತಮ ಕೃಷಿಕ’  ಪ್ರಶಸ್ತಿ ಬಂದಿದೆ. ಹಚ್ಚ ಹಸಿರಿಂದ ಕಂಗೊಳಿಸುವ ಅವರ ಕೃಷಿ ತೋಟವನ್ನು ನೋಡುವುದೇ ಕಣ್ಣಿಗೆ ಹಬ್ಬ! ಅಪ್ಪನ ಕ್ಯಾನ್ಸರ್ ಅವರ ಬದುಕಿನ ದಾರಿಯನ್ನು ಬದಲಾಯಿಸಿದ್ದು ಮಾತ್ರ ಸತ್ಯ!

 
 
 
 
 
 
 
 
 
 
 

Leave a Reply