ಅಂಡಮಾನ್ ಜೈಲಿನಲ್ಲಿ ಸಾವರ್ಕರ್ ಅವರ ಮನೋಬಲ ಕುಗ್ಗಿಸಲು ಅವರ ಎದುರಿಗೇ ಕೈದಿಗಳನ್ನು ನೇಣು ಹಾಕಲಾಗುತ್ತಿತ್ತು~ ಸಾತ್ಯಕಿ ಸಾವರ್ಕರ್

ಉಡುಪಿ:  ನಗರದ ಪುರಭವನದಲ್ಲಿ ಬುಧವಾರ ಕೂರ್ಮ ಬಳಗ ಹಮ್ಮಿಕೊಂಡಿದ್ದ ಜಯೋಸ್ತುತೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಂಡಮಾನ್ ಜೈಲಿನಲ್ಲಿ ಸಾವರ್ಕರ್ ಅವರಿಗೆ ಮಾನಸಿಕ ಚಿತ್ರಹಿಂಸೆ ನೀಡಲು, ಮನೋಬಲ ಕುಗ್ಗಿಸಲು ಅವರ ಎದುರಿಗೇ ಕೈದಿಗಳನ್ನು ನೇಣು ಹಾಕಲಾಗುತ್ತಿತ್ತು. ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿತ್ತು. ಜೊತೆಗೆ ಹೊರಗೆ ಬ್ರಿಟಿಷರ ಅಟ್ಟಹಾಸ ಹೆಚ್ಚುತ್ತಿತ್ತು. ಸಮಾಜದಲ್ಲಿ ಜಾತಿ ದ್ವೇಷ, ಬೇಧ ಮಿತಿ ಮೀರುತ್ತಿತ್ತು. ಅಂಥ ಪರಿಸ್ಥಿತಿಯಲ್ಲಿ ಬಂಧಿಯಾಗಿ ಏನನ್ನೂ ಸಾಧಿಸಲಾಗದು ಎಂಬುದನ್ನು ಅರಿತ ಸಾವರ್ಕರ್ ಅನ್ಯಮಾರ್ಗ ಕಾಣದೇ ಜೈಲಿನಿಂದ ಹೊರಬರಲು ತೀರ್ಮಾನಿಸಿದರು ಎಂದು ಸಾತ್ಯಕಿ ಹೇಳಿದರು

 ಸಾವರ್ಕರ್ ಬ್ರಿಟಿಷರ ಬಳಿ ಕ್ಷಮೆ ಕೋರಿದರು, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಲಿಲ್ಲ. ಗಾಂಧೀಜಿ ಹತ್ಯೆ ಹಿಂದೆಯೂ ಅವರ ಕೈವಾಡವಿತ್ತು ಮುಂತಾದ ಸುಳ್ಳು ಆರೋಪಗಳನ್ನು ರಾಜಕೀಯ ಪಕ್ಷವೊಂದರ ನಾಯಕರು ಹಿಂದಿನಿಂದಲೂ ಮಾತ್ರವಲ್ಲ, ಇಂದಿಗೂ ಮಾಡುತ್ತಿದ್ದಾರೆ. ಆದರೆ, ಸತ್ಯ ಅರಿಯಬೇಕಾದರೆ ಸಾವರ್ಕಕರ್ ಇತಿಹಾಸ ತಿಳಿಯಬೇಕು ಎಂದರು.

ಜೈಲಿನಿಂದ ಹೊರಬಂದ ಬಳಿಕ ಮಹಾರಾಷ್ಟ್ರದ ನಾಸಿಕ್ನಲ್ಲಿ `ಮಿತ್ರಮೇಳ’ ಎಂಬ ಸಂಘಟನೆ ಆರಂಭಿಸಿದ ಸಾವರ್ಕರ್, ಛತ್ರಪತಿ ಶಿವಾಜಿ ಪರಾಕ್ರಮಗಳನ್ನು ಯುವ ಮನಸ್ಸುಗಳಲ್ಲಿ ತುಂಬುವ ಕೆಲಸ ಮಾಡಿದರು. ಬ್ರಿಟಿಷರ ವಿರುದ್ಧ ಹೋರಾಡಲು ಕ್ರಾಂತಿಕಾರಿಗಳನ್ನು ಹುಟ್ಟುಹಾಕಿದರು. ಎರೆಡೆರಡು ಬಾರಿ ಜೀವಾವಧಿ ಶಿಕ್ಷೆಗೊಳಗಾಗಿದ್ದ ಅವರು ಅಂಡಮಾನ್ ಜೈಲಿನಲ್ಲಿ ಕ್ರೂರಾತಿಕ್ರೂರ ಶಿಕ್ಷೆ ಅನುಭವಿಸಿದರು.

ಅವರೊಬ್ಬ ನಿಜವಾದ ಸ್ವಾತಂತ್ರ್ಯ ಹೋರಾಟಗಾರ ಎಂದರು. ಜೈಲಿನಿಂದ ಹೊರಬಂದ ಬಳಿಕವೂ ಕೈಕಟ್ಟಿ ಕುಳಿತುಕೊಳ್ಳಲಿಲ್ಲ. ಧರ್ಮಗ್ರಂಥಗಳ ಬಗ್ಗೆ, ಹಿಂದುತ್ವದ ಬಗ್ಗೆ ಪ್ರತಿಪಾದಿಸಿದರು. ಸಾಮಾಜಿಕ ಬದಲಾವಣೆಗೆ ಶ್ರಮಿಸಿದರು ಎಂದರು. 
 ಸಾವರ್ಕರ್ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಲೇಖಕ ಸಂದೀಪ್ ಬಾಲಕೃಷ್ಣನ್, ಯಾವುದೇ ವಿಷಯದಲ್ಲೂ ಸಾವರ್ಕರ್ ಅವರಿಗೆ ಗಾಂಧೀಜಿ ಸಮನಾಗಿ ನಿಲ್ಲುವುದಿಲ್ಲ. ಸಾವರ್ಕರ್ ಹಿಮಾಲಯ ಶಿಖರವಾದರೆ, ಗಾಂಧೀಜಿ ನಂದಿಬೆಟ್ಟದಂತೆ ಎಂದು ಪ್ರತಿ ಪಾದಿಸಿದರು.
 ದೇಶಸೇವೆ, ಸ್ವಾತಂತ್ರ್ಯ ಸಂಗ್ರಾಮಕ್ಕೆ ನೀಡಿದ ಕೊಡುಗೆಗಳನ್ನು ಗಮನಿಸಿದಾಗ ಸಾವರ್ಕರ್, ಗಾಂಧೀಜಿಗಿಂತ ಸಾಕಷ್ಟು ಎತ್ತರದಲ್ಲಿ ನಿಲ್ಲುತ್ತಾರೆ. ಗಾಂಧೀಜಿಯವರ ಎಲ್ಲ ಕಾರ್ಯಗಳ ಹಿಂದೆ ವ್ಯವಸ್ಥಿತ ಸಿಂಡಿಕೇಟ್ ಕಾರ್ಯನಿರ್ವಹಿಸಿದರೆ, ಸಾವರ್ಕರ್ ಏಕಾಂಗಿಯಾಗಿ ಹೋರಾಟ ನಡೆಸಿದರು.

ಅಂಡಮಾನ್ ಸೆಲ್ಯುಲರ್ ಜೈಲಿನಲ್ಲಿ ಸಾವರ್ಕರ್ ಅವರಿಗೆ ಓದಲು, ಬರೆಯಲು ಕನಿಷ್ಟ ಪೆನ್ನು ಪುಸ್ತಕಗಳನ್ನೂ ಕೊಟ್ಟಿರಲಿಲ್ಲ. ಆದರೆ, ಗಾಂಧೀಜಿ ಅವರಿಗೆ ಜೈಲಿನಲ್ಲಿಯೂ ಸ್ಟಾರ್ ಹೋಟೆಲ್ ಗಳಲ್ಲಿ ಸಿಗುವ ಸೌಲಭ್ಯಗಳಿದ್ದವು ಎಂದು ವ್ಯಂಗ್ಯವಾಡಿದರು. ಸಾವರ್ಕರ್ ಜೈಲಿನಲ್ಲಿ ಅನುಭವಿಸಿದ ಯಾತನೆಯನ್ನು ಊಹಿಸುವುದೂ ಅಸಾಧ್ಯ. ಹೀಗಿರುವಾಗ, ಕೇವಲ ತುಂಡು ಬಟ್ಟೆ ಹಾಗೂ ಕೋಲಿನಿಂದ ದೇಶಕ್ಕೆ ಸ್ವಾತಂತ್ರ್ಯ ಬಂತು ಎಂದರೆ ಯಾರೂ ನಂಬುವ ಮಾತಲ್ಲ ಎಂದರು.

ಸಾವರ್ಕರ್ ಜೈಲಿನಿಂದ ಹೊರಬಂದ ಬಳಿಕವೂ ಸ್ವಂತ ಬಲದಿಂದ ಬೆಳೆದು ಬಂದವರಾಗಿದ್ದರು. ಸಾವರ್ಕರ್ ಅವರಿಗೆ ಭಾರತ ರತ್ನ ಸಿಗದಿರುವುದು ದೊಡ್ಡ ವಿಷಯವಲ್ಲ. ಅವರಿಗೆ ಭಾರತ ರತ್ನ ಸಿಕ್ಕಿದ್ದಲ್ಲಿ ಅಮಾರ್ಥ್ಯಸೇನ್, ಮದರ್ ಥೆರೆಸಾ ಸಾಲಿನಲ್ಲಿ ಅವರೂ ನಿಲ್ಲುತ್ತಾರೆ.

ಅದರ ಅಗತ್ಯವಿಲ್ಲ ಎಂದರು ಸಂದೀಪ್ ಬಾಲಕೃಷ್ಣನ್. ಕಾರ್ಯಕ್ರಮದಲ್ಲಿ ಬಿಜೆಪಿ ಮುಂದಾಳು ಕೆ. ಉದಯ ಕುಮಾರ್ ಶೆಟ್ಟಿ, ಪತ್ರಕರ್ತ ಶ್ರೀಕಾಂತ ಶೆಟ್ಟಿ, ಪ್ರಕಾಶ್ ಮಲ್ಪೆ ಉಪಸ್ಥಿತರಿದ್ದರು.  
 
 
 
 
 
 
 
 
 

Leave a Reply