ಸಂತೋಷ್‌ ಪಾಟೀಲ್‌ ಕುಟುಂಬಿಕರು ಬಂದ ಬಳಿಕ ಮರಣೋತ್ತರ ಪರೀಕ್ಷೆ – ಎಸ್ಪಿ ವಿಷ್ಣುವರ್ಧನ್


ಉಡುಪಿ: ಸಂತೋಷ್‌ ಪಾಟೀಲ್‌ ಸಂಬಂಧಿಕರು ಬಂದ ಬಳಿಕ ಉಡುಪಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಿದ್ದೇವೆ ಎಂದು ಉಡುಪಿ ಎಸ್ಪಿ ವಿಷ್ಣುವರ್ಧನ್‌ ಹೇಳಿದರು.  

ಉಡುಪಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಎಸ್ಪಿಯವರು  ಸಂತೋಷ ಪಾಟೀಲ್ ಹಾಗೂ ಜೊತೆಗೆ ಇಬ್ಬರು ಇದ್ದರು, ಅವರುಗಳ ವಿಚಾರಣೆ ನಡೆಸುತ್ತಿದ್ದೇವೆ. ಮಂಗಳೂರಿನಿಂದ ಎಫ್‌ ಎಸ್‌ ಎಲ್‌ ತಂಡ ಬರುತ್ತಿದ್ದು ಸಂತೋಷ್‌ ಪಾಟೀಲ್‌ ಸಂಬಂಧಿಕರು ಕೂಡ ಬರುತ್ತಿದ್ದಾರೆ.  ಅವರು ಬಂದ ಬಳಿಕ ಉಡುಪಿಯಲ್ಲೇ ಮರಣೋತ್ತರ ಪರೀಕ್ಷೆ ನಡೆಯಲಿದೆ ಎಂದು ಅವರು ಹೇಳಿದರು.

 ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರ ವಿರುದ್ಧ ಈಚೆಗೆ ಶೇ 40ರಷ್ಟು ಪರ್ಸೆಂಟೇಜ್ ಆರೋಪ ಮಾಡಿ ಸುದ್ದಿಯಾಗಿದ್ದ ಬೆಳಗಾವಿ ಜಿಲ್ಲೆ ಹಿಂಡಲಗಾ ಗ್ರಾಮದ ಗುತ್ತಿಗೆದಾರ ಮತ್ತು ಬಿಜೆಪಿ ಕಾರ್ಯಕರ್ತರೂ ಆಗಿರುವ ಸಂತೋಷ್ ಪಾಟೀಲ ಉಡುಪಿಯ ಶಾಂಭವಿ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಾಟ್ಸ್ ಆ್ಯಪ್ ಸಂದೇಶ ಕಳುಹಿಸಿ ನಾಪತ್ತೆಯಾಗಿದ್ದ ಸಂತೋಷ್ ಪಾಟೀಲ ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪದ ಶಾಂಭವಿ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದರು.

 ಅವರ ಮೊಬೈಲ್ ಲೊಕೇಷನ್ ಆಧಾರದ ಮೇಲೆ ಲಾಡ್‌ಗಳಲ್ಲಿ ತಪಾಸಣೆ ನಡೆಸಿದಾಗ ಶಾಂಭವಿ ಲಾಡ್ಜ್‌ನಲ್ಲಿ ಸಂತೋಷ್ ಪಾಟೀಲ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಸ್ಪಿ ವಿಷ್ಣುವರ್ಧನ್, ಎಎಸ್ಪಿ ಸಿದ್ದಲಿಂಗಪ್ಪ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

 
 
 
 
 
 
 
 
 
 
 

Leave a Reply