ಮಲ್ಪೆಯಲ್ಲಿ ಒಂದು ವಿಲಕ್ಷಣ ಘಟನೆ ~  ಗುರುರಾಜ್ ಸನಿಲ್ 

ಮನುಷ್ಯರ ನಿಷ್ಕರುಣೆ ಮತ್ತು ಭದ್ರತೆಯ ವ್ಯರ್ಥ ಪ್ರಯತ್ನಕ್ಕೆ ನಿಸರ್ಗದ ಮೂಕ ಜೀವರಾಶಿಗಳ ಬದುಕು ಹೇಗೆ ಹೇಗೆಲ್ಲ ನಲುಗುತ್ತದೆ ಮತ್ತು ನಮ್ಮ ಅಂಥ ಕೃತ್ಯಗಳಿಂದ ಆ ಜೀವಿಗಳನ್ನು ಕಾಪಾಡಲು ಪ್ರಕೃತಿಯು  ನಮ್ಮನ್ನೇ ಯಾವ ರೀತಿಯಲ್ಲಿ ಬಳಸಿಕೊಳ್ಳುತ್ತದೆ- ಎಂಬುದಕ್ಕೆ ಇದೊಂದು ಸಣ್ಣ ಉದಾಹರಣೆಯಾಗಬಹುದು.

ಆದಿ ಉಡುಪಿಯ ಪ್ರಾಥಮಿಕ, ಕನ್ನಡ ಮಾಧ್ಯಮ ಶಾಲೆಯಲ್ಲಿ ಕಾತ್ಯಾಯಿನಿ ಎಂಬ ಶಿಕ್ಷಕಿಯೊಬ್ಬರು ಮಕ್ಕಳಿಗೆ ಪರಿಸರ ಮತ್ತು ಜೀವಜಾಲಗಳ ಬಗ್ಗೆ ಪಾಠ ಮಾಡುತ್ತಿದ್ದರಂತೆ. ಆಗ ವಿದ್ಯಾರ್ಥಿನಿಯೊಬ್ಬಳು ಎದ್ದು ನಿಂತು,”ಟೀಚರ್ ನಮ್ಮ ವಠಾರದ ಬೇಲಿಯ ಬಲೆಗೆ ಎರಡು ಹಾವುಗಳು ಸಿಕ್ಕಿಬಿದ್ದು ಐದು ದಿನಗಳಾದುವು. ದಯವಿಟ್ಟು ಅವುಗಳನ್ನು ರಕ್ಷಿಸಿ…!” ಎಂದಳಂತೆ. ಅಷ್ಟು ಕೇಳಿದ ಅವರು ಕೂಡಲೇ ನನಗೆ ಕರೆ ಮಾಡಿದರು.


ಕಾತ್ಯಾಯಿನಿಯವರಿಗೆ ಜೀವರಾಶಿಗಳ ಮೇಲಿರುವ ಪ್ರೀತಿಯನ್ನು ನಾನು ಸುಮಾರು ಹದಿನೈದು ವರ್ಷಗಳ ಹಿಂದೆ ಇದೇ ಶಾಲೆಯ ಮಾಡಿಗೆ ಬಂದಿದ್ದ ನಾಗರ ಹಾವೊಂದನ್ನು ಹಿಡಿಯುವ ಸಮಯದಲ್ಲಿ ಕಂಡಿದ್ದೆನಾದ್ದರಿಂದ ಕೂಡಲೇ ಹೊರಟೆ. 
ಅಷ್ಟರಲ್ಲಿ ಅವರು ಸಮೀಪದ ಅರಣ್ಯ ಇಲಾಖೆಗೂ ವಿಷಯ ತಿಳಿಸಿದ್ದರಿಂದ, ವಲಯ ಅರಣ್ಯಾಧಿಕಾರಿ ಶ್ರೀ, ಸುಬ್ರಹ್ಮಣ್ಯ ಆಚಾರ್ ಅವರ ಸೂಚನೆಯ ಮೇರೆಗೆ ಉಪ ವಲಯ ಅರಣ್ಯಾಧಿಕಾರಿ ಶ್ರೀ ಗುರುರಾಜ್ ಕಾವ್ರಾಡಿ ಹಾಗು ಅರಣ್ಯ ರಕ್ಷಕ ಶ್ರೀ ಕೇಶವ ಪೂಜಾರಿಯವರು ತಕ್ಷಣ ನಮ್ಮೊಂದಿಗೆ ಹೊರಟರು.

ಆ ಮನೆಯ ವಠಾರದ ಒಂದು ಮೂಲೆಯ ಆವರಣಕ್ಕೆ ಹಾಕಿದ್ದ ಬಲೆಗೆ ಒಂದು ಗಂಡು, ಒಂದು ಹೆಣ್ಣು ಕೇರೆ ಹಾವುಗಳು ತಮ್ಮ ಕೊರಳನ್ನು ಸಿಲುಕಿಸಿಕೊಂಡು ತೀವ್ರ ಹೋರಾಟ ನಡೆಸುತ್ತ ಸರಾಸರಿ ಐದು ದಿನಗಳ ನರಕ ಯಾತನೆ ಅನುಭವಿಸಿ ಸೋತು ತಟಸ್ಥವಾಗಿದ್ದವು. 

ನಾವು ಹಾವುಗಳನ್ನು ಬಿಡಿಸತೊಡಗಿದಾಗ ಬಾಡಿಗೆ ಮನೆಯ ಮಹಿಳೆಯೊಬ್ಬರು ತಪ್ಪಿತಸ್ಥಭಾವದಿಂದ ಅಂಜುತ್ತ ಬಂದು ಸಮೀಪ ನಿಂತರು. ಅವರನ್ನು ಕಂಡ ನಾನು,”ಏನಮ್ಮಾ, ಐದು ದಿನಗಳಿಂದ ಇವುಗಳನ್ನು ಕಣ್ಣೆದುರೇ ನೋಡಿಕೊಂಡು ಹೇಗೆ ಸುಮ್ಮನಿದ್ದಿರಿ?” ಎಂದು ಆಕ್ಷೇಪಿಸಿದೆ.

“ಅಯ್ಯೋ , ನಾವು ಬಿಡಿಸಲು ಪ್ರಯತ್ನ ಪಟ್ಟೆವು ಸರ್. ಆದರೆ ನಮ್ಮ ಮನೆಯ ಓನರ್, ಅವುಗಳನ್ನು ಮುಟ್ಟಬಾರದು. ಅಲ್ಲೇ ಸಾಯಲಿ ಅವು! ಎಂದು ಬೈದು ಬಿಟ್ಟರು. ಹಾಗಾಗಿ ಅಸಹಾಯಕರಾದೆವು” ಎಂದರು ಬೇಸರದಿಂದ. ನನಗೆ ವಿಚಿತ್ರವೆನಿಸಿತು.

ಹಾಗಾಗಿ ಹಾವುಗಳನ್ನು ಬಂಧಮುಕ್ತಗೊಳಿಸಿದ ನಂತರ, ವಠಾರದ ಮಾಲಕರ ಮನೆಗೆ ಹೋಗಿ ವಿಷಯ ತಿಳಿಸಿ ತುಸು ತಿಳುವಳಿಕೆ ನೀಡೋಣವೆಂದುಕೊಂಡು,  ಕಾಲಿಂಗ್ ಬೆಲ್ ಒತ್ತಿದೆ.

ದಢೂತಿ ಮಹಿಳೆಯೊಬ್ಬರು ಹೊರಗೆ ಬಂದವರು, “ಏನು…?” ಎನ್ನುತ್ತ ಗುರಾಯಿಸಿದರು. ಅವರ ಕಣ್ಣುಗಳನ್ನು ಕಂಡು ಒಂದು ಕ್ಷಣ ಒಳಗೊಳಗೇ ಬೆಚ್ಚಿದೆನಾದರೂ ತೋರಿಸಿಕೊಳ್ಳದೆ, “ನಿಮ್ಮ ಆವರಣದ ಬಲೆಗೆ ಹಾವುಗಳು ಸಿಲುಕಿ 5ದಿನಗಳಾದುವಂತೆ. ಅವುಗಳ ರಕ್ಷಣೆಗೆ ಯಾಕೆ ಪ್ರಯತ್ನಿಸಿಲಿಲ್ಲ ಮೇಡಮ್ ನೀವು?” ಎಂದೆ ಮೃದುವಾಗಿ.

ಅಷ್ಟು ಕೇಳಿದ ಅವರು ನನ್ನನ್ನು ನೋಡಿ ವ್ಯಂಗ್ಯವಾಗಿ ನಗುತ್ತ, ” ಏನು, ರಕ್ಷಣೆ ಮಾಡುವುದಾ…! ಆ ದರಿದ್ರದ ಹಾವುಗಳನ್ನಾ..!? ಅವುಗಳು ವಠಾರದೊಳಗೆಲ್ಲ ಓಡಾಡುತ್ತ ಮಕ್ಕಳು ಮರಿಗಳನ್ನು ಹೆದರಿಸುತ್ತ ಇರುತ್ತವೆ. ಅಂಥ ಜೀವಿಗಳನ್ನು ಎಂಥದು ರಕ್ಷಣೆ ಮಾಡುವುದು? ನಾವು ಸುತ್ತಮುತ್ತ ಕಣ್ಣಿಗೆ ಬೀಳುವ ಬಹಳಷ್ಟು ಹಾವುಗಳನ್ನು ಈಗಾಗಲೇ ಚಚ್ಚಿ ಸಾಯಿಸಿ ಬಿಸಾಡಿದ್ದೇವೆ. 
 
ಆ ಕೆಟ್ಟ ಜೀವಿಗಳೆಲ್ಲ ಯಾಕೆ ಬೇಕು ನಮಗೆ? ಅಪಾಯ ಅಲ್ವಾ! ನೀವು‌ ಅವುಗಳನ್ನು ಬಿಡಿಸಿರುವುದಕ್ಕೆ ಅಡ್ಡಿಯಿಲ್ಲ. ಆದರೆ ಇಲ್ಲೆಲ್ಲೂ ಬಿಡಬಾರದು ಜಾಗ್ರತೆ!” ಎಂದಾಗ  ನನಗೆ ಆಘಾತವಾಗಿತು. ಆದ್ದರಿಂದ ಅವರಿಗೆ ತಿಳುವಳಿಕೆ ಹೇಳುವುದು ನನ್ನ ತಿಳುವಳಿಕೆಗೆ ಮೀರಿದ್ದು ಎಂದು ಯೋಚಿಸಿ, “ಆಯ್ತು ಮೇಡಮ್.
ಆದರೆ ಇನ್ನು ಮುಂದೆ ಹಾವು ಕಂಡರೆ ದಯವಿಟ್ಟು ಸಾಯಿಸಬೇಡಿ ನನಗೊಂದು ಕರೆ ಮಾಡಿ” ಎಂದು ಹೇಳಿ(ಅದು ವ್ಯರ್ಥ!) ಹಾವುಗಳನ್ನು ಹಿಡಿದುಕೊಂಡು ನಮ್ಮ ತಂಡದೊಂದಿಗೆ ಹಿಂದಿರುಗಿದೆ.

ಆದರೂ ಇತ್ತ, ಆ ಹಾವುಗಳ ಸ್ಥಿತಿಗೆ ಮರುಗಿ ಶಿಕ್ಷಕರಲ್ಲಿ‌ ಬೇಡಿಕೊಂಡ ಆ ಪುಟ್ಟ ಬಾಲಕಿಯ ಮಾನವೀಯತೆಗೂ, ತಕ್ಷಣವೇ ಸ್ಪಂದಿಸಿದ ಶಿಕ್ಷಕಿ ಹಾಗು ಅರಣ್ಯಾಧಿಕಾರಿಗಳ ಜೀವಪ್ರೇಮಕ್ಕೂ ಮನಃಪೂರ್ವಕ ಹಾರೈಕೆಗಳು ಸಲ್ಲಬೇಕು!- ವಿಡೀಯೋ ಕೃಪೆ: ಕಾತ್ಯಾಯಿನಿ ಟೀಚರ್.

 
 
 
 
 
 
 
 
 
 
 

Leave a Reply