ಸಮಾಜವನ್ನು ತಿದ್ದುವ ಜವಾಬ್ದಾರಿ ಮಾಧ್ಯಮಗಳದ್ದು: ಅನುಪಮ ವಿಶೇಷಾಂಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಾಹಿತಿ ವಾಸಂತಿ ಅಂಬಲಪಾಡಿ

ಉಡುಪಿ: ಮಾಧ್ಯಮಗಳು ಸಮಾಜದ. ಬೇರೆ ಬೇರೆ ವಿಷಯಗಳನ್ನು ತುಲನಾತ್ಮಕವಾಗಿ ಅಧ್ಯಯನ ನಡೆಸಿ, ಸಮಾಜದಲ್ಲಿರುವ ಕೆಡುಕುಗಳನ್ನು ನಿರ್ಮೂಲನೆ ಮಾಡುವಲ್ಲಿ ಬಹಳಷ್ಟು ಪಾತ್ರವಹಿಸುತ್ತವೆ.ಈ ಹಿನ್ನೆಲೆಯಲ್ಲಿ ಮಾಧ್ಯಮಗಳು ಹೆಚ್ಚು ಜವಾಬ್ದಾರಿ ಹೊಂದಿವೆ. ಆದ್ದರಿಂದ ಮಾಧ್ಯಮಗಳು ಸಮಾಜದಲ್ಲಿನ ಹುಳುಕುಗಳನ್ನು ಹುಡುಕಿ ಅದರ ಬದಲಾವಣೆಗೆ ಪ್ರಯತ್ನಪಡಬೇಕು ಎಂದು ಖ್ಯಾತ ಕತೆಗಾರ್ತಿ, ಕವಯಿತ್ರಿ ವಾಸಂತಿ ಅಂಬಲ ಪಾಡಿ ಅಭಿಪ್ರಾಯಿಸಿದ್ದಾರೆ.

ಉಡುಪಿಯ ದುರ್ಗಾ ಇಂಟರ್ನ್ಯಾಷನಲ್ ಹೋಟೆಲ್ ಸಭಾಂಗಣದಲ್ಲಿ ಅನುಪಮ ಮಹಿಳಾ ಮಾಸಿಕದ 20 ನೇ ವಾರ್ಷಿಕ ವಿಶೇಷಾಂಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರೇ ನಡೆಸಿಕೊಂಡು ಬರುತ್ತಿರುವಂತಹ ಅನುಪಮ ಮಾಸಿಕದ ಸೇವೆ ನಿಜಕ್ಕೂ ಶ್ಲಾಘನೀಯ.

ಅಭಿವ್ಯಕ್ತಿ ಸ್ವತಂತ್ರ ಇಲ್ಲದಿದ್ದ ಸಂದರ್ಭದಲ್ಲಿ ಎಲ್ಲಾ ಮಹಿಳೆಯರ ಧ್ವನಿಯಾಗಿ ಕೆಲಸ ನಿರ್ವಹಿಸುತ್ತಿರುವ ನಿಮ್ಮ ಸೇವೆಯು ನಿಜಕ್ಕೂ ಶ್ಲಾಘನೀಯವಾದುದು. ಪುರುಷರ ಸಹಕಾರದೊಂದಿಗೆ ಮುನ್ನಡೆಯುತ್ತಿರುವ ಅನುಪಮವೂ ಇನ್ನಷ್ಟು ಜನರ ಮನೆಮಾತಾಗಲಿ ಎಂದು ವಾಸಂತಿ ಹೇಳಿದರು.

ಅತಿಥಿಯಾಗಿ ಭಾಗವಹಿಸಿ ಮಾತನಾಡಿದ, ಕಾತ್ಯಾಯಿನಿ ಕುಂಜಿಬೆಟ್ಟು, ಅನುಪಮವು ಹೆಸರಿಗೆ ತಕ್ಕಂತೆ ಅದು ಅನುಪಮವಾಗಿದೆ. ಉಪಮೆಗೆ ನೀಲುಕದ್ದು ಅನುಪಮ. ಅನುಪಮದ ಓದುಗಳಾಗಿ ನಾನು ತುಂಬಾ ಹೆಮ್ಮೆಯಿಂದ ಹೇಳಬಲ್ಲೆ ಅನುಪಮಾ ಸಮಾಜವನ್ನು ಬದಲಾಯಿಸುವಲ್ಲಿ ತನ್ನದೇ ಆದ ಪಾತ್ರವಹಿಸಿದೆ.‌ ಅನುಪಮ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.

ಬಳಿಕ ಮಾತನಾಡಿದ ಸಾಹಿತಿ ಸೌಮ್ಯ ಪುತ್ರನ್, ಸಮಾಜದಲ್ಲಿ ಗುಣ ಸ್ವಭಾವದ ಬದಲು ಹಣದಾಸೆಗೆ ಎಲ್ಲ ವನ್ನೂ ಮಾರುವಂತಹ ಕಾಲ. ಆದರೆ ಅನುಪಮವು ಕಳೆದ 20 ವರ್ಷಗಳಿಂದ ತನ್ನ ಮೌಲ್ಯದೊಂದಿಗೆ ರಾಜಿ ಮಾಡಿಕೊಳ್ಳದೆ ಮುಂದುವರೆಯುತ್ತಿದೆ. ಸಮಾಜದಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡಿದೆ ಎಂದರೆ ಅತಿ ಶಯೋಕ್ತಿಯಾಗಲಾರದು ಎಂದು ಅಭಿಪ್ರಾಯಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಅನುಪಮ ಮಹಿಳಾ ಮಾಸಿಕದ ಪ್ರಧಾನ ಸಂಪಾದಕಿ ಶಹನಾಝ್ ಎಂ. ಮಾತನಾಡಿದರು. ಮಾಜಿದಾ ಮಲ್ಪೆ ಕಿರಾಅತ್ ಪಠಿಸಿದರೆ, ನೂರ್ ಜಹಾನ್ ಮಲ್ಪೆ ಅನುವಾದ ಓದಿದರು‌.ಓದುಗರ ಪರವಾಗಿ ಸುವರ್ಷಾ ವಾಲ್ಟರ್ ಅನಿಸಿಕೆ ವ್ಯಕ್ತಪಡಿಸಿದರು. ಈ ವೇಳೆ ಸಮಾಜ ಸೇವಕಿ ಜಯಶ್ರೀ ಇವರನ್ನು ಅನುಪಮ ಬಳಗದ ಪರವಾಗಿ ಸನ್ಮಾನಿಸಲಾಯಿತು.

ಅನುಪಮದ ಸಹ ಸಂಪಾದಕಿ ಕುಲ್ಸುಂ ಅಬೂಬಕ್ಕರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ತನಾಡಿದರು. ಶಾಹಿದಾ ರಿಯಾಝ್ ನಿರೂಪಿಸಿದರು. ವೇದಿಕೆಯಲ್ಲಿ ಅನುಪಮ ಬಳಗದ ಶಾಹಿದಾ ಉಮರ್, ಸಬೀಹಾ ಫಾತಿಮಾ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply