ಮಾತು ನಿಲ್ಲಿಸಿದ ಮಾತಿನ ಮೋಡಿಗಾರ ವಾಸುದೇವ ಸಾಮಗ

ಉಡುಪಿ: ಯಕ್ಷಗಾನ ರಂಗದ ಹಿರಿಯ ಕಲಾವಿದ, ಸಂಘಟಕ ಮಲ್ಪೆ ವಾಸುದೇವ ಸಾಮಗ ಶನಿವಾರ ಬೆಳಿಗ್ಗೆ ನಿಧನ ಹೊಂದಿದ್ದಾರೆ. ಯಕ್ಷಗಾನ ಕ್ಷೇತ್ರದಲ್ಲಿ ತನ್ನದೇ ಶೈಲಿಯಿಂದ ಹೆಸರು ಗಳಿಸಿದ್ದ ವಾಸುದೇವ ಸಾಮಗ (71) ಅವರು ಕುಂದಾಪುರದ ಕೋಟೇಶ್ವರ ದಲ್ಲಿ ನೆಲೆಸಿದ್ದರು.

ಅಲ್ಪ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ತೆಂಕು-ಬಡಗು ತಿಟ್ಟಿನ ಸವ್ಯಸಾಚಿ ಕಲಾವಿದರೆಂದು ಗುರುತಿಸಲ್ಪಟ್ಟ ವಾಸುದೇವ ಸಾಮಗರ ತಂದೆ ರಾಮದಾಸ ಸಾಮಗ ​ಮತ್ತು ದೊಡ್ಡಪ್ಪ ಆಗಿನ ಮಹಾನ್‌ ಕಲಾವಿದರು ಮತ್ತು ಹರಿದಾಸ ರಾದ ಕಾರಣ ಇವರು ಸಹಜವಾಗಿಯೇ ಯಕ್ಷಗಾನದ ಒಲವು ಹೊಂದಿದ್ದರು.

ನಾರಣಪ್ಪ ಉಪ್ಪೂರರ ಒಡನಾಟದದಲ್ಲಿ ಪರಿಪೂರ್ಣ ಕಲಾವಿದರಾಗಿ ಆ ಮೇಳದಲ್ಲಿ ಗುರುತಿಸಿಕೊಂಡರು. ಅಲ್ಲಿ ದೊಡ್ಡ ಸಾಮಗರು, ಚಿಟ್ಟಾಣಿಯವರು, ಕೋಟ ವೈಕುಂಠ, ಎಂ.ಎ.ನಾಯಕ್‌, ನಗರ ಜಗನ್ನಾಥ ಶೆಟ್ಟಿ, ಗೋಡೆ ನಾರಾಯಣ ಹೆಗಡೆಯವರಂತ ಘಟಾನುಘಟಿಗಳ ಸಾಂಗತ್ಯ ದೊರೆಯಿತು.

ಆಗ ಪ್ರದರ್ಶನಗೊಳ್ಳುತ್ತಿದ್ದ ಯಕ್ಷಲೋಕ ವಿಜಯ ಪ್ರಸಂಗದ ಪ್ರದೀಪನ ಪಾತ್ರ ಅವರಿಗೆ ಅಪಾರ ಜನಮನ್ನಣೆ ಗಳಿಸಿಕೊಟ್ಟಿತು.

ಮಲ್ಪೆ ವಾಸುದೇವ ಸಾಮಗ ಧರ್ಮಸ್ಥಳ, ಕದ್ರಿ, ಕರ್ನಾಟಕ ಸುರತ್ಕಲ್‌ ಮೇಳ ಬಳಿಕ ಕಾಳಿಂಗ ನಾವಡರ ಪ್ರಸಿದ್ಧಿಯ ಕಾಲದಲ್ಲಿ ಸಾಲಿಗ್ರಾಮ ಮೇಳ ಸೇರಿದ ಅವರ ಭಾನುತೇಜಸ್ವಿ ಪ್ರಸಂಗದ ಭಾನುತೇಜಸ್ವಿ, ಚೈತ್ರಪಲ್ಲವಿಯ ಪಾತ್ರಗಳು ಪ್ರಸಿದ್ಧಿ ಪಡೆದವು.

ನಾಗಶ್ರೀ ಪ್ರಸಂಗ ಶುಬ್ರಾಂಗನ ಪಾತ್ರಕ್ಕೆ ಶಿರಿಯಾರ ಮಂಜು ನಾಯ್ಕರ ನಂತರ ಹೊಸ ರೂಪವನ್ನು ನೀಡಿದ ಇವರು, ಯಕ್ಷಗಾನ ದಲ್ಲಿ ಪ್ರಥಮ ಬಾರಿಗೆ ಕೋರ್ಟು ಸನ್ನಿವೇಷವನ್ನು ಸೃಷ್ಟಿಸಿ ಹೊಸ ದಾಖಲೆ ಮೂಡಿಸಿದರು. ಪೆರ್ಡೂರು ಮೇಳದಲ್ಲು ಹೊಸ ಪ್ರಸಂಗ ಗಳಲ್ಲಿ ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ ಮತ್ತು ಇವರ ಜೋಡಿ ವೇಷಗಳು ಮಾತಿನ ಚಕಮಕಿಯಿಂದ ಹೊಸ ಹೊಸ ಪ್ರೇಕ್ಷಕರನ್ನು ಯಕ್ಷಗಾನ ದತ್ತ ಸೆಳೆದಿತ್ತು. ಬಳಿಕ ಬಗ್ವಾಡಿ, ಸೌಕೂರು ಮುಂತಾದ ಬಯಲಾಟ ಮೇಳದಲ್ಲಿ ಭಾಗವಹಿಸಿ ಮೇಳದ ಯಜಮಾನಿಕೆಯನ್ನೂ ಮಾಡಿ ಸಿಹಿ ಕಹಿ ಉಂಡವರು ಮಲ್ಪೆ ವಾಸುದೇವ ಸಾಮಗ.

ಅನೇಕ ಪ್ರಸಂಗಗಳಲ್ಲಿ ನಾಯಕ, ಪ್ರತಿನಾಯಕ, ಹಾಸ್ಯ ಸ್ತ್ರೀವೇಷವನ್ನೂ ನಿರ್ವಹಿಸಿದ್ದಾರೆ. ವಿಭಿನ್ನ ನಿಲುವಿನ ಕೈಕೆ, ದಶರಥ, ದೇವವ್ರತ-ಭೀಷ್ಮ,ಕಂಸ ಕೃಷ್ಣ, ರುಕ್ಮಾಂಗದ- ಮೋಹಿನಿ, ಅಂಬೆ-ಪರಶುರಾಮ, ಮಂಥರೆ ಮುಂತಾದ ಪಾತ್ರಗಳನ್ನು ತನ್ನ ವೈಚಾರಿಕ ನಿಲುವಿನಿಂದ ಸಮರ್ಥಿಸಿಕೊಳ್ಳುವುದರಲ್ಲಿ ನಿಸ್ಸೀಮರು.

ಉತ್ತರ ಕುಮಾರ ಅವರಿಗೆ ಆಟ ಕೂಟದಲ್ಲಿ ಅಪಾರ ಮನ್ನಣೆ ತಂದುಕೊಟ್ಟ ಪಾತ್ರ. ಮಲ್ಪೆ ವಾಸುದೇವ ಸಾಮಗ ಸಂಯಮಂ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ತನ್ನ ಧ್ಯೇಯ ಧೋರಣೆಯಂತೆ ಸಮಯ ಮಿತಿಯ ತಾಳಮದ್ದಳೆ ಕಾರ್ಯಕ್ರಮಗಳನ್ನು ನಡೆಸಿಕೊಳ್ಳುತ್ತಾ ತಾಳಮದ್ದಳೆಗೆ ಹೊಸ ರೂಪ, ಹೊಸ ಶಿಸ್ತನ್ನು ತಂದಿತ್ತ ಸಾಹಸಿ ವಾಸುದೇವ ಸಾಮಗರು. ​ಮಗ ಡಾ. ಪ್ರದೀಪ್ ವಿ ಸಾಮಗ ಕೂಡಾ ​ಒಳ್ಳೆ ​ಯಕ್ಷಗಾನ ಕಲಾವಿದ.  

 
 
 
 
 
 
 
 
 
 
 

Leave a Reply