ಉಡುಪಿ ಜಿಲ್ಲಾ ರಂಗಮಂದಿರದ ಕನಸಿನ ಸುತ್ತಾ….

ರಂಗಭೂಮಿ ಸಂಸ್ಥೆಯ ನಾಟಕ ತಂಡದೊಂದಿಗೆ ಹಲವಾರು ಕಡೆಗಳಲ್ಲಿ ನಾಟಕ ಪ್ರದರ್ಶನಕ್ಕೆ ಹೋದಾಗ, ಅಲ್ಲಿಯ ರಂಗಮಂದಿರಗಳನ್ನು ನೋಡಿದಾಗ , ಛೇ ನಮಗೆ ಈ ಭಾಗ್ಯವಿಲ್ಲ ಎಂದು ಅದೆಷ್ಟೋ ಬಾರಿ ಹೇಳಿಕೊಂಡದ್ದು ಇದೆ. ಕೆಲವು ಕಡೆಗಳ ರಂಗಮಂದಿರದ ತೀರಾ ಕಳಪೆ ಮಟ್ಟದ ನಿರ್ವಹಣೆ ನೋಡಿದಾಗ, ಅಲ್ಲಿಯ ಅಧಿಕಾರಿಗಳೊಂದಿಗೆ ಜಗಳವಾಡಿದ್ದೂ ಇದೆ.

ಸಾಂಸ್ಕೃತಿಕ ರಾಜಧಾನಿ ಎಂಬಂತೆ, ಜಿಲ್ಲೆಯ ಉದ್ದಗಲಕ್ಕೂ ಇರುವ ಹಲವಾರು ರಂಗತಂಡಗಳ ಹಾಗೂ ಯಕ್ಷಗಾನ, ಭರತನಾಟ್ಯ, ಜಾನಪದ, ಸಂಗೀತ, ಚಿತ್ರಕಲೆ ಮುಂತಾದ ಹಲವಾರು ಕಲಾಪ್ರಕಾರಗಳ ಪ್ರದರ್ಶನಕ್ಕೆ, ಅದರಲ್ಲೂ ನಾಟಕ ಪ್ರದರ್ಶನಕ್ಕಾಗಿ ಮುಖ್ಯವಾಗಿ ಅತ್ಯಾಧುನಿಕ ವ್ಯವಸ್ಥೆಯನ್ನು ಒಳಗೊಂಡ ಒಂದು ಸುಸಜ್ಜಿತ ರಂಗಮಂದಿರದ ಬೇಡಿಕೆ ಪ್ರಾಯಶಃ ಕಳೆದ ಒಂದುವರೆ ದಶಕಕ್ಕೂ ಅಧಿಕ ವರ್ಷಗಳದ್ದು.

ಅಂದು ರಂಗಭೂಮಿ (ರಿ.) ಉಡುಪಿ ಸಂಸ್ಥೆಯ ದಿ| ಕುತ್ಪಾಡಿ ಆನಂದ ಗಾಣಿಗ, ದಿ| ಉಪೇಂದ್ರ ಯು.,ದಿ|ಪಿ.ವಾಸುದೇವ ರಾವ್,ದಿ| ನಂದಕುಮಾರ್ ಎಂ., ದಿ| ಮೇಟಿ ಮುದಿಯಪ್ಪ ಹಾಗೂ ಡಾ| ತಲ್ಲೂರು ಶಿವರಾಮ ಶೆಟ್ಟಿ, ಪ್ರದೀಪ್ ಚಂದ್ರ ಕುತ್ಪಾಡಿ, ಭಾಸ್ಕರ್ ರಾವ್ ಕಿದಿಯೂರು, ಶ್ರೀಪಾದ್ ಹೆಗಡೆ, ಪೂರ್ಣಿಮಾ ಸುರೇಶ್, ರವಿರಾಜ್ ಹೆಚ್.ಪಿ ಇನ್ನೂ ಹಲವರನ್ನು ಒಳಗೊಂಡ ತಂಡವು ಅಂದಿನ ಸಚಿವರಾಗಿದ್ದ ದಿ| ಡಾ. ವಿ. ಎಸ್. ಆಚಾರ್ಯರಿಗೆ, ಹಾಗೂ ಶಾಸಕ ಶ್ರೀ ಕೆ.‌ರಘಪತಿ ಭಟ್ ಇವರುಗಳಿಗೆ ಜಿಲ್ಲಾ ರಂಗಮಂದಿರದ ನಿರ್ಮಾಣಕ್ಕಾಗಿ ಮನವಿ ಸಲ್ಲಿಸಲಾಯಿತು. ರಂಗಭೂಮಿಯ ಸಭೆ – ಸಮಾರಂಭಗಳಲ್ಲಿ ಈ ಕುರಿತು ನಿರಂತರವಾಗಿ ಜನಪ್ರತಿನಿಧಿಗಳಿಗೆ ಒತ್ತಾಯ ಮಾಡಲಾರಂಭಿಸಿದೆವು. ಮಳೆಗಾಲವೂ ಸೇರಿದಂತೆ ವರ್ಷದಲ್ಲಿ 6 ತಿಂಗಳು ಆಗಾಗ ಮಳೆ ಸುರಿಯುವ ನಮ್ಮ ಉಡುಪಿ ಜಿಲ್ಲೆಯ ಸಾಂಸ್ಕೃತಿಕ ರಂಗಕ್ಕೆ, ಜಿಲ್ಲಾ ರಂಗಮಂದಿರ ಅತ್ಯಗತ್ಯ ಎಂಬ ಸತ್ಯದ ಅರಿವು ಎಲ್ಲರಿಗೂ ಇತ್ತು.

ಆನಂದ ಗಾಣಿಗರು ನಿಧನರಾದಾಗ, ಅವರ ಅಂತಿಮ ದರ್ಶನಕ್ಕೆ ಬಂದ ಮಾನ್ಯ ಸಚಿವರಾದ ಡಾ| ಆಚಾರ್ಯರು ಹಾಗೂ ಶಾಸಕರಾದ ಶ್ರೀ ಕೆ. ರಘುಪತಿ ಭಟ್ ರವರು ಉಡುಪಿ ಜಿಲ್ಲಾ ರಂಗಮಂದಿರದ ನಿರ್ಮಾಣ ಖಂಡಿತ ಎಂದರು. ಅದರೊಂದಿಗೆ ಸರಕಾರವು ಆರಂಭಿಕ ಹಂತವಾಗಿ ರೂ. 50 ಲಕ್ಷದ ಬಿಡುಗಡೆಯನ್ನೂ ಮಾಡಿತು.

ಆನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾನ್ಯ ಸಚಿವರಾಗಿದ್ದ ಶ್ರೀ ಸಿ.ಟಿ. ರವಿಯವರು ಉಡುಪಿಗೆ ಭೇಟಿ ನೀಡಿದಾಗ ಉಡುಪಿ ಜಿಲ್ಲಾ ರಂಗಮಂದಿರದ ಬಗ್ಗೆ ಶಾಸಕರಾದ ಶ್ರೀ ರಘುಪತಿ ಭಟ್ ನೇತೃತ್ವದಲ್ಲಿ ಚರ್ಚಿಸಲಾಯಿತು. ನಮ್ಮೆಲ್ಲರ ಬೇಡಿಕೆಯಂತೆ, ಉಡುಪಿ ಜಿಲ್ಲೆಯ ರಂಗಮಂದಿರದ ನೀಲಿನಕ್ಷೆಯನ್ನು ರಂಗಕರ್ಮಿಗಳ ಅಭಿಪ್ರಾಯ ಪಡೆದು ತಯಾರಿಸುವ ಜವಾಬ್ದಾರಿಯನ್ನು ಉಡುಪಿ ನಿರ್ಮಿತಿ ಕೇಂದ್ರಕ್ಕೆ ಮಾನ್ಯ ಸಚಿವರು ವಹಿಸಿದರು.

ನಿರ್ಮಿತಿ ಕೇಂದ್ರದವರು ಈ ಜವಾಬ್ದಾರಿಯನ್ನು, ಪಾರಂಪರಿಕ ಸೊಗಡನ್ನು ಬಿಡದೆ ಹೊಸತನಗಳಿಂದ ಕೂಡಿದ ನವ್ಯ ನಕ್ಷೆಗಳಿಗೆ ಹೆಸರಾದ “ಆಕಾರ್ ಆರ್ಕಿಟೆಕ್ಟ್” ನ ಶ್ರೀ ಪ್ರಮಲ್ ಕುಮಾರ್ ಇವರಿಗೆ ನೀಡಿದರು. ಮುಂದೆ ರಾಜ್ಯದ ಹಾಗೂ ಹೊರರಾಜ್ಯದ ಹಲವಾರು ರಂಗಮಂದಿರಗಳ ವೀಕ್ಷಣೆ ಹಾಗೂ ಅಧ್ಯಯನ.

ನಿರ್ಮಿತಿ ಕೇಂದ್ರದ ಶ್ರೀ ಅರುಣ್ ಕುಮಾರ್ ಇವರ ಸಲಹೆಯೊಂದಿಗೆ ಒಂದು ಅತ್ಯುತ್ತಮ ಸುಸಜ್ಜಿತ ರಂಗಮಂದಿರದ ನೀಲಿನಕ್ಷೆಯನ್ನು ಶ್ರೀ ಪ್ರಮಲ್ ಕುಮಾರ್ ನೀಡಿದರು.

ಈ ನಕ್ಷೆಯ‌ ಕುರಿತು ಉಡುಪಿಯ ರಂಗಕರ್ಮಿಗಳ, ಕಲಾ ಪ್ರೇಮಿಗಳ ಅಭಿಪ್ರಾಯ, ಸಲಹೆ ಪಡೆಯಲು ಉಡುಪಿ ಜಿಲ್ಲೆಯ ರಂಗತಂಡಗಳು ಹಾಗೂ ತಜ್ಞರ ಸಭೆಯನ್ನು ಉಡುಪಿ ಶಾಸಕ ಶ್ರೀ ಕೆ. ರಘುಪತಿ ಭಟ್ ಇವರ ನೇತೃತ್ವದಲ್ಲಿ ಹೋಟೆಲ್ ಕಿದಿಯೂರಿನ ಸಭಾಂಗಣದಲ್ಲಿ ಕರೆದು, ಎಲ್ಲರ ಅಭಿಪ್ರಾಯ ಪಡೆಯಲಾಯಿತು. ಬೀಡಿನ ಗುಡ್ಡೆಯಲ್ಲಿರುವ ನಗರಸಭೆಯದ್ದೇ ಆದ ಜಾಗದಲ್ಲಿ ರಂಗಮಂದಿರ ನಿರ್ಮಾಣ ಮಾಡುವುದು ಸೂಕ್ತ ಎಂಬ ಅಭಿಪ್ರಾಯ ಕೆಲವರಿಂದ, ಹಾಗೆಯೇ ಆ ಸ್ಥಳದ ವಿಸ್ತೀರ್ಣ ಸಾಲದು ಎಂಬ ಅಭಿಪ್ರಾಯವೂ ಹಲವರಿಂದ ಬಂತು.

ಮುಂದೆ ಸರಕಾರ ಬದಲಾಯಿತು. ‌ಆದಿಉಡುಪಿಯಲ್ಲಿ ಹೊಸ ಸೂಕ್ತ ಜಾಗದ ಗುರುತಿಸುವಿಕೆ ಆಯಿತು. ಈ ಸೂಕ್ತ ಸ್ಥಳದ ಆಯ್ಕೆಯಾಗುವಲ್ಲಿ ಬಹಳ ಮುತುವರ್ಜಿ ವಹಿಸಿದ ಅಂದಿನ ಜಿಲ್ಲಾಧಿಕಾರಿ ಶ್ರೀಮತಿ ಹೇಮಲತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಈವಾಗ ಸಹಾಯಕ ನಿರ್ದೇಶಕರಾಗಿರುವ ಶ್ರೀಮತಿ ಪೂರ್ಣಿಮಾರವರ ಕೆಲಸ ಮಹತ್ತರವಾದದ್ದು.

ಆದಿಉಡುಪಿಯ ಸ್ಥಳದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಉಡುಪಿ ಜಿಲ್ಲೆಗೆ ರಂಗಾಯಣ ಹಾಗೂ ರಂಗಮಂದಿರಕ್ಕೆ ಅಂದಿನ ಶಾಸಕರಾಗಿದ್ದ ಶ್ರೀ ಪ್ರಮೋದ್ ಮಧ್ವರಾಜ್ ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದ ಶ್ರೀಮತಿ ಜಯಮಾಲಾ ಅವರು ಶಂಕುಸ್ಥಾಪನೆ ನೆರವೇರಿಸಿದರು. ಇಲಾಖೆಯ ಮಾನ್ಯ ಸಚಿವೆಯವರು ಸರಕಾರ ಕೂಡಲೇ ಹಣ ಬಿಡುಗಡೆ ಮಾಡುವುದು ಎಂದರು. ಲೋಕೋಪಯೋಗಿ ಇಲಾಖೆಯ ರಂಗಮಂದಿರಗಳ ಖಾಯಂ ನೀಲಿನಕ್ಷೆ ಮುಂಚೂಣಿಗೆ ಬಂತು. ಶಿಲಾನ್ಯಾಸದ ನಂತರ ರಂಗಾಯಣ ಹಾಗೂ ಜಿಲ್ಲಾ ರಂಗಮಂದಿರ ಎರಡರ ಕಾರ್ಯ ಚಟುವಟಿಕೆಗೆ ಈ ಸ್ಥಳ ಸಾಲುವುದಿಲ್ಲ ಎಂಬ ಅಭಿಪ್ರಾಯ ಹಲವರಲ್ಲಿ ಬಂದಾಗ. ರಂಗಾಯಣ ಬೇರೆ ಸ್ಥಳದಲ್ಲಿ ಮಾಡಲಾಗುವುದು ಎಂದು ಸಚಿವರು ಹೇಳಿದರು. ಆದರೆ ಮುಂದೆ, ಪ್ರಾಯಶಃ ಬೇರೆ ಹಲವು ಕಾರಣ – ಒತ್ತಡದಿಂದ ರಂಗಾಯಣ ಪುತ್ತೂರಿಗೆ ಎಂಬ ಮಾತೂ ಹರಿದಾಡಿತು. ಆದರೆ ರಂಗಾಯಣ ಹಾಗೂ ಜಿಲ್ಲಾ ರಂಗಮಂದಿರಕ್ಕೆ ಹಣ ಬಿಡುಗಡೆ ಮರೀಚಿಕೆಯೇ ಆಯಿತು. ಒಟ್ಟಾರೆ ಕನಸು ಶಿಲಾನ್ಯಾಸದಲ್ಲೇ ಮುರುಟಿತು.

ಮುಂದೆ ಸರಕಾರ ಬದಲಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿ ಜಿಲ್ಲೆಯವರೇ ಆದ ಮಾನ್ಯ ಶ್ರೀ ಸುನಿಲ್ ಕುಮಾರ್ ಇವರು ನೇಮಕರಾದಾಗ, ನಮ್ಮೆಲ್ಲರ ಜಿಲ್ಲಾ ರಂಗಮಂದಿರದ ಕನಸು ಮತ್ತೊಮ್ಮೆ ಗರಿಕೆದರಿತು. ಬಿ.ವಿ ಕಾರಂತರ ರಂಗಾಯಣವು, ಜಿಲ್ಲೆಯ ಮತ್ತೊಂದು ಮೇರು ವ್ಯಕ್ತಿತ್ವದ ಶಿವರಾಮ ಕಾರಂತರ ಕನಸನ್ನು ಒಡಗೂಡಿಕೊಂಡು “ಯಕ್ಷ ರಂಗಾಯಣ” ವಾಗಿ ಉಡುಪಿ ಜಿಲ್ಲೆಗೆ ಬಂತು. ಹಲವು ಎಕ್ರೆಗಳ‌ ಕೋಟಿ ಚೆನ್ನಯ ಥೀಂ ಪಾರ್ಕ್ ನಲ್ಲಿ “ಯಕ್ಷ ರಂಗಾಯಣ” ಉದ್ಘಾಟನೆಗೊಂಡು ಸೂಕ್ತ ನಿರ್ದೇಶಕರೊಂದಿಗೆ ಕ್ರೀಯಾಶೀಲವಾಯಿತು.

ಈಗಾಗಲೇ ಶಂಕುಸ್ಥಾಪನೆ ಆದ ಜಾಗದಲ್ಲೇ, ಈ ಹಿಂದೆ ರಂಗಕರ್ಮಿಗಳ ಸಲಹೆಯೊಂದಿಗೆ ಮಾಡಲಾದ ನೀಲಿನಕ್ಷೆಯಂತೆಯೇ “ಉಡುಪಿ ಜಿಲ್ಲಾ ರಂಗಮಂದಿರ” ನಿರ್ಮಿಸಲಾಗುವುದು ಎಂದು ಸಚಿವರಾದ ಶ್ರೀ ವಿ. ಸುನಿಲ್ ಕುಮಾರ್ ಹಾಗೂ ಶಾಸಕರಾದ ಶ್ರೀ ಕೆ.ರಘುಪತಿ ಭಟ್ ದೃಢವಾಗಿ ಹೇಳಿದರು. ಸಚಿವರ ಆದೇಶದಂತೆ, ನಿರ್ಮಿತಿ ಕೇಂದ್ರದವರು ಮಾಡಿರುವ ನೀಲಿನಕ್ಷೆಯನ್ನು ಲೋಕೋಪಯೋಗಿ ಇಲಾಖೆಯವರು ಪಡೆದು, ಸದ್ರಿ ಆದಿಉಡುಪಿಯ ಸ್ಥಳದಲ್ಲಿ ನಿರ್ಮಿಸುವರೇ ಅಂದಾಜು ಪಟ್ಟಿ ಮಾಡಿ ಸರ್ಕಾರಕ್ಕೆ ನೀಡಿದರು. ಮುಖ್ಯವಾಗಿ ಲೋಕೋಪಯೋಗಿ ಇಲಾಖೆಯ ಇಂಜಿನಿಯರುಗಳು ಶ್ರೀ ಪ್ರಮಲ್ ಕುಮಾರ್ ಮೂಲಕ ನಿರ್ಮಿತಿ ಕೇಂದ್ರವು ರಚಿಸಿದ ನೀಲಿನಕ್ಷೆಯನ್ನು ಪ್ರಶಂಸಿದ್ದು, ಅಂದು ಎಲ್ಲರಿಗೂ ಸಮಾಧಾನ ತರಿಸಿತ್ತು.

ಮೂಲ ನಕ್ಷೆಗೆ ಅನುಗುಣವಾಗಿ ಲೋಕೋಪಯೋಗಿ ಇಲಾಖೆಯು ನೀಡಿರುವ ಅಂದಾಜು ವೆಚ್ಚದ ಪಟ್ಟಿ ದೊಡ್ಡ ಮೊತ್ತದಾಗಿತ್ತು. ಇವಾಗಷ್ಟೇ ಕೋವಿಡ್ 19ರ ಆರ್ಥಿಕ ಹಿನ್ನಡೆಯಲ್ಲಿ ಇದ್ದ ಸಂಸ್ಕೃತಿ ಇಲಾಖೆಗೆ ಇದು ತಕ್ಷಣಕ್ಕೆ ಕಷ್ಟವಾಗಿತ್ತು.

ಆದರೂ ಜಿಲ್ಲಾ ರಂಗಮಂದಿರದ ನಿರ್ಮಾಣಕ್ಕೆ ಕಟಿಬದ್ದರಾಗಿದ್ದ ಸಚಿವರು ಹಾಗೂ ಶಾಸಕರು ನೀಲಿನಕ್ಷೆಯನ್ನು ರೂ. 5ಕೋಟಿಗೆ ಸರಿಯಾಗುವಂತೆ ಪುನರ್ ನಿರ್ಮಿಸಿ ಕೊಡುವಂತೆ ಸೂಚಿಸಿದರು.

ಮೂಲ ನೀಲಿನಕ್ಷೆಯಲ್ಲಿ ಇದ್ದ ರಂಗಮಂದಿರದ ವೇದಿಕೆಯ ಅಳತೆಯಲ್ಲಿ ಬದಲಾವಣೆ ಮಾಡದೇ, ಪರಿಷ್ಕೃತ ನೀಲಿನಕ್ಷೆಯನ್ನು ಇಲಾಖೆಗೆ ನಿರ್ಮಿತಿ ಕೇಂದ್ರ ಸಲ್ಲಿಸಿತು.

ಲೋಕೋಪಯೋಗಿ ಇಲಾಖೆಯ ಪರಿಷ್ಕೃತ ಅಂದಾಜು ವೆಚ್ಚದ ಪಟ್ಟಿ ಸರಕಾರದ ಅನುಮೋದನೆಗೆ ಪುನಃ ‌ಹೋಯಿತು.

2022ರ ಮಾರ್ಚ್ 30ರಂದು ಉಡುಪಿ ಶಾಸಕರಾದ ಶ್ರೀ ಕೆ. ರಘುಪತಿ ಭಟ್ ನೇತೃತ್ವದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಮಟ್ಟಾರು ರತ್ನಾಕರ ಶೆಟ್ಟಿ, ರಂಗ ಸಂಘಟಕ ಹಾಗೂ ರಾಜಕೀಯ ಧುರೀಣ ಶ್ರೀ ಕುಯಿಲಾಡಿ ಸುರೇಶ್ ನಾಯಕ್, ಶ್ರೀ ಉದಯ ಕುಮಾರ್ ಶೆಟ್ಟಿ ಕಿದಿಯೂರು ‌ಹಾಗೂ ರಂಗಭೂಮಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾದ ನಾನು… ಹೀಗೆ ಒಂದು ತಂಡವಾಗಿ ಮಾನ್ಯ ಸಚಿವರಾದ ಶ್ರೀ ವಿ ಸುನಿಲ್ ಕುಮಾರ್ ಇವರನ್ನು ವಿಧಾನಸೌಧದಲ್ಲಿ ಭೇಟಿಯಾಗಿ ಉಡುಪಿ ಜಿಲ್ಲಾ ರಂಗಮಂದಿರದ ನಿರ್ಮಾಣಕ್ಕೆ ಬೇಡಿಕೆ ಸಲ್ಲಿಸಲಾಯಿತು.

ತಕ್ಷಣ ಸ್ಪಂದಿಸಿದ ಮಾನ್ಯ ಸಚಿವರಾದ ಶ್ರೀ ವಿ. ಸುನಿಲ್ ಕುಮಾರ್ ಇವರು ಉಡುಪಿ ಜಿಲ್ಲಾ ರಂಗಮಂದಿರದ ನಿರ್ಮಾಣ ಕ್ಕಾಗಿ ಪ್ರಥಮ ಕಂತಾಗಿ ರೂ. 2.5 ಕೋಟಿ
ಹಣದ ಬಿಡುಗಡೆಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ತಮ್ಮ ಅಧಿಕಾರಿಗಳಿಗೆ ಆದೇಶ ನೀಡಿದರು. ಅಲ್ಲದೆ ಆದಷ್ಟು ವೇಗದಲ್ಲಿ ” ಉಡುಪಿ ಜಿಲ್ಲಾ ರಂಗಮಂದಿರ” ವನ್ನು ಸಂಪೂರ್ಣ ಮಾಡುವುದು ಎಂದರು.

ಇಂದು ಅಕ್ಟೋಬರ್ 2 ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನ, ನವರಾತ್ರಿಯ ಶುಭದಿನ ನಮ್ಮೆಲ್ಲರ ಕನಸಿನ ” ಉಡುಪಿ ಜಿಲ್ಲಾ ರಂಗಮಂದಿರ” ದ ನಿರ್ಮಾಣ ಕಾಮಗಾರಿಯ ಆರಂಭಕ್ಕಾಗಿ ” ಶಂಕುಸ್ಥಾಪನಾ ಸಮಾರಂಭ” ಬೆಳಿಗ್ಗೆ 10 ಕ್ಕೆ ನಡೆಯುತ್ತಿದೆ. ಬನ್ನಿ… ಸಂಭ್ರಮದಿಂದ ಪಾಲ್ಗೊಳ್ಳೋಣ.

ಜಿಲ್ಲೆಯ ಸಮಸ್ತ ರಂಗಕಲಾವಿದರ, ಕಲಾಭಿಮಾನಿಗಳ ಈ ಕನಸಿನ ಕುರಿತು ನಿರಂತರವಾಗಿ ಹೋರಾಟ ಮಾಡಿದ ಉಡುಪಿಯ ಮಾಧ್ಯಮ ದ ಮಿತ್ರರಿಗೆ, ಕಲಾವಿದರಿಗೆ, ಕಲಾಪ್ರೇಮಿಗಳಿಗೆ, ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ, ಜಿಲ್ಲಾಡಳಿತಕ್ಕೆ, ಜನಪ್ರತಿನಿಧಿಗಳಿಗೆ ಅನಂತಾನಂತ ಧನ್ಯವಾದಗಳು. ಕಾಮಗಾರಿ ಆರಂಭ ಅಷ್ಟೇ ಆಗುತ್ತಿದೆ, ಆದಷ್ಟು ಬೇಗ ಉದ್ಘಾಟನೆಗೆ ಸಜ್ಜಾಗುವಂತೆ ನಮ್ಮೆಲ್ಲರ ಪ್ರಯತ್ನ ಮುಂದುವರಿಸೋಣ.

– ಪ್ರದೀಪ್ ಚಂದ್ರ ಕುತ್ಪಾಡಿ

 
 
 
 
 
 
 

Leave a Reply