ಕಾಂಗ್ರೆಸ್-ಬಿಜೆಪಿಗೆ ಪ್ರತ್ಯೇಕ ಕೋವಿಡ್ ರೂಲ್ಸ್ ಏಕೆ?~ ರಮೇಶ್ ಕಾಂಚನ್

ಉಡುಪಿ: ಕೊರಗ ಸಮುದಾಯದವರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿ, ದೌರ್ಜನ್ಯಕ್ಕೊಳಗಾದವರ ವಿರುದ್ಧವೇ ಸುಳ್ಳು ಎಫ್‌ಐಆರ್ ದಾಖಲಿಸಿರುವುದನ್ನು ಖಂಡಿಸಿ ನಡೆದ ಕಾಂಗ್ರೆಸ್ ಪಕ್ಷದ ಪ್ರತಿಭಟನೆಯಲ್ಲಿ ಪಾಲ್ಗೊಂಡವರ ವಿರುದ್ದ ಕೇಸು ದಾಖಲಿಸಿರುವುದನ್ನು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಖಂಡಿಸಿದ್ದಾರೆ.
ದೇಶದ ಮೂಲ ನಿವಾಸಿಗಳಾದ ಕೊರಗರಿಗೆ ನ್ಯಾಯ ಒದಗಿಸುವಂತೆ, ಜಿಲ್ಲಾ ಕಾಂಗ್ರೆಸ್ ವತಿಯಿಂದ ಸರಕಾರದ  ಕೋವಿಡ್ ನಿಯಮಾವಳಿಗಳನ್ನು  ಪಾಲಿಸಿ ನಡೆಸಿದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ ಕಾಂಗ್ರೆಸ್ ನಾಯಕರ ಸಹಿತ 22 ಜನರ ವಿರುದ್ಧ ಜಿಲ್ಲಾಡಳಿತ ಸುಳ್ಳು ಪ್ರಕರಣ ದಾಖಲಿಸಿದೆ. 
ಆದರೆ ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದಿಂದ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಅನೇಕ ಕಾರ್ಯಕ್ರಮಗಳು ನಡೆಯುತ್ತಿದ್ದರೂ, ಅವರ ಮೇಲೆ ಯಾವುದೇ ಕೇಸನ್ನು ದಾಖಲಿಸಿಲ್ಲ. ಸಮಾಜದಲ್ಲಿ ತುಳಿತಕ್ಕೆ ಒಳಗಾದ ಜನಾಂಗದ ಪರವಾಗಿ ಮಾಡಿದ  ಪ್ರತಿಭಟನೆಗೆ ಮಾತ್ರ ಕೇಸನ್ನು ದಾಖಲಿಸಿದ್ದಾರೆ. ಆಡಳಿತ ನಡೆಸುವ  ಬಿಜೆಪಿ ಪಕ್ಷ ನಡೆಸುವ ಕಾರ್ಯಕ್ರಮಕ್ಕೆ ಯಾವುದೇ ರೀತಿಯಲ್ಲಿ ಕೇಸು ದಾಖಲಿಸದೆ ಕಣ್ಣು ಮುಚ್ಚಿ ಕುಳಿತ ಜಿಲ್ಲಾಡಳಿತದ ದ್ವಂದ್ವ ನಿಲುವನ್ನು ಖಂಡಿಸುವುದಾಗಿ ರಮೇಶ್ ಕಾಂಚನ್ ಹೇಳಿದ್ದಾರೆ.
 
ಹಾಗಾದರೆ ನೊಂದ ಶೋಷಿತ ಸಮುದಾಯದ ಪರವಾಗಿ ಧ್ವನಿ ಎತ್ತುವುದು ತಪ್ಪೇ? ಇದಕ್ಕೆ ಸಂಬಂಧಪಟ್ಟ  ಅಧಿಕಾರಿಗಳು ಸರಕಾರ ಉತ್ತರಿಸಲಿ ಎಂದು ಕಾಂಚನ್ ಒತ್ತಾಯಿಸಿದ್ದಾರೆ. ಇಂತಹ ಬೆದರಿಸುವ ತಂತ್ರಗಳಿಗೆ ಕಾಂಗ್ರೆಸ್ ಎಂದೂ ಮಣಿಯದೆ, ಬಡವರು, ದಲಿತರ ಪರ ತನ್ನ ಹೋರಾಟವನ್ನು ಇನ್ನಷ್ಟು ಬಲಪಡಿಸಲಿದೆ ಎಂದವರು ಸ್ಪಷ್ಟಪಡಿಸಿದ್ದಾರೆ.
 
 
 
 
 
 
 
 
 
 
 

Leave a Reply