ಶ್ರೀರಾಮನೂರು ಅಯೋಧ್ಯೆಗೆ ಶ್ರೀಕೃಷ್ಣನೂರು ಉಡುಪಿಯ ನಂಟು..

ಶ್ರೀರಾಮನೂರು ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರಕ್ಕೆ ಶಿಲಾನ್ಯಾಸ ಎಂಬ ಶುಭ ಸುದ್ಧಿ ಕೇಳುತ್ತಿದ್ದಂತೆ ಇಲ್ಲಿ ಶ್ರೀಕೃಷ್ಣನೂರು ಉಡುಪಿಯಲ್ಲಿ ಸಂಭ್ರಮ. ಇಲ್ಲಿಗೆ ಸಮೀಪದ ಕಡಿಯಾಳಿಯ ಓಂ ನಿವಾಸದಲ್ಲಿ ವಾಸವಾಗಿರುವ 90 ರ ಇಳಿ ವಯಸ್ಸಿನ ಮಂಜುನಾಥ ಕಲ್ಕೂರ ಹಾಗು ಅವರ ಧರ್ಮಪತ್ನಿ ಲಲಿತಾ ಎಮ್ ಕಲ್ಕೂರ , ಇಬ್ಬರ ಮನದಲ್ಲೂ ತಾವು ಅಯೋಧ್ಯೆಯಲ್ಲಿ ಕರಸೇವಕರಾಗಿ ಭಾಗವಹಿಸಿದ ನೆನಪಿನ‌ ಮೆರವಣಿಗೆ .

1992 ರ ಡಿಸೆಂಬರ್ 6, ರಂದು ನಡೆದ ವಿದ್ಯಮಾನಗಳನ್ನು ಎಳೆ ಎಳೆಯಾಗಿ ಬಿಚ್ಚಿ ತೆರೆದಿಡುವ ಸಡಗರ. ಅಂದು ದಕ್ಷಿಣ ಭಾರತ ದಿಂದ ಸುಮಾರು 2000 ಕ್ಕೂ ಅಧಿಕ ರಾಮ ಭಕ್ತರ ಪಯಣ ಅಯೋಧ್ಯೆಯತ್ತ. ಉಡುಪಿಯಿಂದ ಕಲ್ಕೂರರ ಪತ್ನಿ‌ ಹಾಗು ಇತರ ಮೂವರು ಮಹಿಳೆಯರು ಹಾಗು ಇಪ್ಪತ್ತು ಪುರುಷರನ್ನು ಒಳಗೊಂಡ ತಂಡದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಸುಮಾರು ಇಪ್ಪತ್ತು ಮಹಿಳೆಯರು‌ ಹಾಗು ಇನ್ನೂರು ಪುರುಷರನ್ನೊಳ ಗೊಂಡ ತಂಡದ ಮೇಲುಸ್ತುವಾರಿ ಕಲ್ಕೂರರದ್ದು. ಜಾತಿ ಮತ, ಪಕ್ಷ, ಬಡವ ಧನಿಕನೆಂಬ ಭೇದವಿಲ್ಲದೆ ಕೇವಲ ರಾಮ‌ ಮಂದಿರದ ಕನಸು ಹೊತ್ತ ರಾಮಭಕ್ತರ ತಂಡವದು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಲ್ಲಡ್ಕ ಪ್ರಭಾಕರ ಭಟ್ ರವರ ನೇತ್ರತ್ವದಲ್ಲಿ ಮಂಗಳೂರಿನಿಂದ ಹೊರಟ ತಂಡ ಅಯೋಧ್ಯೆ ತಲುಪಿ ಸರಯೂ ನದಿಯ ಮೃತ್ತಿಕೆಯನ್ನು ರಾಮ ಮಂದಿರ ಕಟ್ಟುವ ಸ್ಥಳಕ್ಕೆ ತಂದು ಹಾಕುವ ಹುಮ್ಮಸ್ಸು‌. ಪೂಜ್ಯ ಪೇಜಾವರ ಶ್ರೀ ಗಳಿಂದ ಶ್ರೀರಾಮ ವಿಗ್ರಹದ ಪ್ರತಿಷ್ಟಾಪನೆಯಿಂದ ಮನದಲ್ಲಿ ವರ್ಣಿಸಲಾರದ ಸಂಭ್ರಮ. ಆದರೆ ಕೆಲವರು ಮಸೀದಿಯ ರಚನೆ ಗಳನ್ನು ಧ್ವಂಸ‌ಮಾಡಿ ಗಲಾಟೆ ನಡೆದು ಮತ್ತೆ ಎಲ್ಲರೂ ಸುರಕ್ಷಿತವಾಗಿ ಮರಳಿ ಮನೆಗೆ ಬಂದದ್ದೇ ರೋಚಕ ಅನುಭವ.

ಕರಸೇವಕರಿಗೆ ಊಟಕ್ಕೆ ಪತ್ರಾವಳಿ‌ ಕಡಿಮೆ ಆದಾಗ ಒಬ್ಬರು ಉಪಯೋಗಿಸಿದ ಎಲೆಯನ್ನು ತೊಳೆದು ಇನ್ನೊಬ್ಬರು ಉಪಯೋಗಿಸಿ ಊಟ ಮುಗಿಸಿದ, ಡಿಸೆಂಬರ್ ತಿಂಗಳ ಕೊರೆಯುವ ಚಳಿಯಲ್ಲಿ ಸಿಕ್ಕಿದ ಗೋಣಿ ಚೀಲಕ್ಕೆ ಹುಲ್ಲು ಹಾಸಿ ಮಲಗಿದ ನೆನಪು, ಮಹಿಳೆ ಯರಿದ್ದ ತಂಡವನ್ನು ಅಯೋಧ್ಯೆಯ ರೈಲ್ವೇ ಸ್ಟೇಷನ್ ತನಕ ಸುರಕ್ಷಿತವಾಗಿ ಬೀಳ್ಕೊಟ್ಟ ಸಹ ಕರಸೇವಕರು, ಮಿಲಿಟರಿ ಮಂದಿ.

ರೈಲ್ ನಲ್ಲೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಸವಿ ನೆನಪು. ಬೆಂಗಳೂರು ತಲುಪುತ್ತಿದ್ದಂತೆ ಹೋಟೆಲ್ ಪವನ್ ನಲ್ಲಿ ಉಚಿತ ಆಹಾರ ವ್ಯವಸ್ಥೆ, ಲಾಲಕೃಷ್ಣ ಆಡ್ವಾಣಿ, ಡಾ.ವಿ ಎಸ್ ಆಚಾರ್ಯ, ಓ ವಿ .ಶೇಷಾದ್ರಿ ಮುಂತಾದ ಪ್ರಖ್ಯಾತ ವ್ಯಕ್ತಿಗಳ ಒಡ ನಾಟ ಎಲ್ಲವೂ ಇವರ ಮನದಲ್ಲಿ ಮಾಸದ ಚಿತ್ರಣಗಳು. ಇದೀಗ ತಮ್ಮ ಬಹುದಿನಗಳ ಕನಸು ನನಸಾಗುವುದಕ್ಕೆ ಎಣೆಯಿಲ್ಲದ ಸಂತಸ ಈ ದಂಪತಿಗಳದ್ದು. ಆದರೆ‌ ಪೂಜ್ಯ ಪೇಜಾವರ ಶ್ರೀಗಳ ಅಗಲುವಿಕೆ ನೆನೆದು‌ ಮನ ಭಾರ.

ಇಳಿ ವಯಸ್ಸಿನ ಕಾರಣದಿಂದ ದೃಷ್ಟಿ ಇಲ್ಲದಿದ್ದರೂ ನಡೆವ ವಿದ್ಯಮಾನ ಗಳನ್ನು ಕೇಳಿ ತಿಳಿದುಕೊಳ್ಳುವ ಹಂಬಲ. ಜೊತೆಗೆ ರಾಮಲಲ್ಲಾನಿಗೆ ಕಟ್ಟುತ್ತಿರುವ ಮಂದಿರದ ಬಗ್ಗೆ ತಿಳಿದು ಜನ್ಮ ಸಾರ್ಥಕ ಎಂದು ಸಂಭ್ರಮಿಸುವ ಈ ದಂಪತಿಗಳು ಉಡುಪಿಯ ಹೆಮ್ಮೆ.

 
 
 
 
 
 
 

Leave a Reply