226ನೇ ರಾಯಣ್ಣ ಜಯಂತೋತ್ಸವ

ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ವತಿಯಿಂದ ಇಂದು ಕಚೇರಿಯ ಕಟ್ಟಡ ರೀಗಲ್ ನೆಕ್ಸ್ಟ್ ನಲ್ಲಿ 75 ನೇ ಸ್ವಾತಂತ್ರ್ಯೋತ್ಸವ ಮತ್ತು 226ನೇ ರಾಯಣ್ಣ ಜಯಂತೋತ್ಸವವನ್ನು ಆಚರಿಸಲಾಯಿತು. ಶ್ರೀರಾಮ ಸೇನೆ ಉಡುಪಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಜಯರಾಮ್ ಅಂಬೆಕಲ್ಲು ಮತ್ತು ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸುಜಯ ಪೂಜಾರಿ ಅವರು ಧ್ವಜಾರೋಹಣದಲ್ಲಿ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಅವರಿಗೆ ಜೊತೆಯಾದರು.
ಈ ಸಂದರ್ಭದಲ್ಲಿ ಮಾತನಾಡಿದ ಜಯರಾಮ್ ಅಂಬೆಕಲ್ಲು ಅವರು ದೇಶಕ್ಕಾಗಿ ವೀರಮರಣವನ್ನಪ್ಪಿದ ರಾಯಣ್ಣನಂತಹ ಮಹಾನ್ ವ್ಯಕ್ತಿಗಳ ಜಯಂತಿ ಆಚರಣೆಯನ್ನು ರಾಜ್ಯ ಸರಕಾರ ಕಡೆಗಣಿಸುತ್ತಿದೆ. ಮುಂದಿನ ದಿನಗಳಲ್ಲಿ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದಿಂದ ನಡೆಯುವ ಎಲ್ಲಾ ಹೋರಾಟಗಳಿಗೂ ಶ್ರೀರಾಮ ಸೇನೆ ಉಡುಪಿ ಜಿಲ್ಲೆ ಹಾಗೂ ಕರ್ನಾಟಕದಾದ್ಯಂತ ಬೆಂಬಲವಾಗಿರುತ್ತೇವೆ ಎಂದರು.
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಹಾಗೂ ಜಿಲ್ಲಾ ವತಿಯಿಂದ 75 ನೆ ಸ್ವಾತಂತ್ರ್ಯೋತ್ಸವದ ಶುಭಾಶಯ ಮತ್ತು ಸಂಗೊಳ್ಳಿ ರಾಯಣ್ಣನ 226ನೇ ಜಯಂತೋತ್ಸವದ ಶುಭಾಶಯಗಳನ್ನು ತಿಳಿಸಿ, ಇಂದು ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ವತಿಯಿಂದ ನಡೆದ ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಸಂತಸ ತಂದಿದೆ ಎಂದು ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ ತಮ್ಮ ಮಾತಿನಲ್ಲಿ ತಿಳಿಸಿದರು.
ಬಜರಂಗದಳ ಉಡುಪಿ ಜಿಲ್ಲಾ ಸಕ್ರಿಯ ಕಾರ್ಯಕರ್ತರಾದ ಶ್ರೀಯುತ ವಿಶ್ವನಾಥ್ ರೆಡ್ಡಿ ಮಾತನಾಡಿ ನಮ್ಮ ದೇಶಕ್ಕಾಗಿ, ಸ್ವಾತಂತ್ರ್ಯಕ್ಕಾಗಿ ವೀರಮರಣವನ್ನಪ್ಪಿದ ಹಲವಾರು ಗಣ್ಯ ವ್ಯಕ್ತಿಗಳಲ್ಲಿ ಸಂಗೊಳ್ಳಿ ರಾಯಣ್ಣನವರು ಒಬ್ಬರು ಇಂತಹ ಮಹಾನ್ ವ್ಯಕ್ತಿಯ ಜಯಂತಿ ಉತ್ಸವವನ್ನು ಜಿಲ್ಲಾಡಳಿತ ಕಡೆಗಣಿಸಬಾರದು ಮುಂದಿನ ದಿನಗಳಲ್ಲಿ ಜಿಲ್ಲಾಡಳಿತದ ಪರವಾಗಿ ನಡೆಸುವಂತಾಗಬೇಕು,ರಾಯಣ್ಣ ಅಭಿಮಾನಿ ಬಳಗದಿಂದ ಯುವಕರಲ್ಲಿ ದೇಶಪ್ರೇಮವನ್ನು ಹೆಚ್ಚಿಸುವಂತಹ ಕಾರ್ಯ ನಡೆಯಬೇಕು ಎಂದರು.
ಅಧ್ಯಕ್ಷತೆಯ ಮಾತುಗಳನ್ನಾಡಿದ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಅವರು ಸಂಗೊಳ್ಳಿ ರಾಯಣ್ಣನವರ ಜಯಂತೋತ್ಸವ ಮತ್ತು ಬಲಿದಾನ ದಿನದ ಅಂಗವಾಗಿ ರಾಜ್ಯ ಸರಕಾರ ಗೌರವ ಸಲ್ಲಿಸಬೇಕು ಎಂದು ಕಳೆದ ವರ್ಷ ಅಭಿಮಾನಿ ಬಳಗದ ವತಿಯಿಂದ ನಡೆದ ಸಂಗೊಳ್ಳಿ ರಾಯಣ್ಣನವರ ಭಾವಚಿತ್ರ ಅಭಿಯಾನದ ಭಾಗವಾಗಿ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿಯನ್ನು ನೀಡಿದ್ದರು, ಮತ್ತು ರಾಜ್ಯಾದ್ಯಂತ ಜಿಲ್ಲಾಡಳಿತಕ್ಕೆ ಸುರೇಶ್ ಗೋಕಾಕ್ ನೇತ್ರತ್ವದಲ್ಲಿ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿದ ಅವರು ಕಳೆದ ವರ್ಷ ಸಂಗೊಳ್ಳಿ ರಾಯಣ್ಣನವರ ಜಯಂತಿ (ಆಗಸ್ಟ್ 15) ಹಾಗೂ ಬಲಿದಾನದ ದಿನ (ಜನವರಿ 26)ವನ್ನು ಜಿಲ್ಲಾಡಳಿತದ ಮಟ್ಟದಲ್ಲಿ ಆಚರಿಸಬೇಕು ಎಂದು ಆದೇಶ ಹೊರಡಿಸಿದ್ದರು ಅಂತೆಯೇ ಎಲ್ಲಾ ಜಿಲ್ಲಾಡಳಿತ ಗೌರವ ಸಲ್ಲಿಸಿದ್ದರು, ಆದರೆ ಈ ವರ್ಷ ಅದನ್ನು ಮರೆತಿದ್ದಾರೆ. ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ವತಿಯಿಂದ ರಾಜ್ಯದ್ಯಂತ ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮತ್ತೊಮ್ಮೆ ಮನವಿಯನ್ನು ಸಲ್ಲಿಸುತ್ತೇವೆ. ಮುಂಬರುವ ಜನವರಿ 26 ನೇ ತಾರೀಖಿನಂದು ರಾಯಣ್ಣನವರ ಬಲಿದಾನದ ದಿನ, ರಾಜ್ಯದ ಎಲ್ಲಾ ಜಿಲ್ಲಾಡಳಿತ ಗೌರವ ಸೂಚಿಸಬೇಕು, ಇಲ್ಲವಾದಲ್ಲಿ ಅಭಿಮಾನಿ ಬಳಗದಿಂದ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುತ್ತೇವೆ ಎಂದು ಸರಕಾರಕ್ಕೆ ಎಚ್ಚರಿಸಿದರು.

ಉಡುಪಿ ಜಿಲ್ಲೆಯಲ್ಲಿ ಸಂಗೊಳ್ಳಿ ರಾಯಣ್ಣನವರ ಹೆಸರಿನಲ್ಲಿ ಅಭಿಮಾನಿ ಬಳಗ ಹುಟ್ಟಿಕೊಂಡು ಹಲವಾರು ಸಮಾಜ ಸೇವೆಗಳ ಮುಖಾಂತರ ಉಡುಪಿ ಜಿಲ್ಲೆಯ ಮನೆಮಾತಾಗಿದೆ. ಸಂಗೊಳ್ಳಿ ರಾಯಣ್ಣನವರ ಹೆಸರಿನಲ್ಲಿ ಯಾವುದಾದರೂ ಒಂದು ವೃತ್ತಕ್ಕೆ ನಾಮಕರಣ ಮಾಡುವ ಕುರಿತು ಹಲವಾರು ಬಾರಿ ಮನವಿ ಸಲ್ಲಿಸಿದ್ದು, ಇದಕ್ಕೆ ಸ್ಪಂದಿಸಿದ ನಗರ ಸಭೆಯು ಒಂದು ತಿಂಗಳ ಹಿಂದೆ ಪತ್ರಿಕಾ ಪ್ರಕಟಣೆಯ ಪ್ರಕಾರ ಪುಷ್ಪ ಬೇಕರಿಯ ಎದುರುಗಡೆ ಇರುವ ಸಿಟಿ ಬಸ್ ಸ್ಟಾಂಡ್ ಹತ್ತಿರದ ವೃತ್ತಕ್ಕೆ ನಾಮಕರಣ ಮಾಡುವ ಕುರಿತು ವರದಿಯಾಗಿತ್ತು. ಇದಕ್ಕೆ ಹಲವಾರು ಜನ ಜೊತೆಗಿದ್ದರೂ ಕೆಲವರು ವಿರೋಧಿಸುತ್ತಿದ್ದಾರೆ, ನೇರವಾಗಿ ರಾಯಣ್ಣನವರಿಗೆ ವೃತ್ತ ನೀಡದಿರುವ ಕುರಿತು ಮನವಿಯನ್ನು ಸಲ್ಲಿಸಿದ್ದಾರೆ.
ರಾಯಣ್ಣ ಅಭಿಮಾನಿ ಬಳಗವು ಇಲ್ಲಿಯವರೆಗೆ ಯಾವುದೇ ಹೋರಾಟಕ್ಕೆ ಇಳಿದಿಲ್ಲ ಒಂದು ವೇಳೆ ರಾಯಣ್ಣನ ಹೆಸರಿನಲ್ಲಿ ಈ ಬಾರಿಯೂ ನಮ್ಮ ಮನವಿ ತಿರಸ್ಕರಿಸಿ ವೃತ್ತಕ್ಕೆ ನಾಮಕರಣ ಮಾಡದೇ ಇದ್ದರೆ ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಅಭಿಮಾನಿ ಬಳಗದ ಪದಾಧಿಕಾರಿಗಳು ಹೋರಾಟಕ್ಕಿಳಿಯಲಿದ್ದಾರೆ ಎಂದು ಸಂಸ್ಥಾಪಕ ಅಧ್ಯಕ್ಷ ಸುರೇಶ್ ಗೋಕಾಕ್ ಅವರು ಹುಬ್ಬಳ್ಳಿಯಲ್ಲಿ ತಿಳಿಸಿದ ವಿಷಯವನ್ನು ಜಿಲ್ಲಾಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಅವರು ನೆರೆದ ಸರ್ವರಲ್ಲಿ ವಿಜ್ಞಾಪಿಸಿದರು.

ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಸುರೇಶ್ ಮತ್ತು ಅಭಿಮಾನಿ ಬಳಗದ ಉಪಾಧ್ಯಕ್ಷರಾದ ಲಕ್ಷ್ಮಣ್ ಕೋಲ್ಕಾರ್ ಮತ್ತು ಈರಪ್ಪ ಗೌಂಡಿ, ಬಸವರಾಜ್ ಐಹೊಳೆ, ಮಹೇಶ್ ಗುಂಡಿಬೈಲ್, ರಾಕೇಶ್ ಶೆಟ್ಟಿ, ಕುಮಾರ್ ಪ್ರಸಾದ್, ಪಂಪೇಶ್, ಗೋಪಾಲ್, ಸಿದ್ದಣ್ಣ ಪೂಜಾರಿ, ಗೋಪಾಲ್ ದೇವದುರ್ಗ, ಗಂಗಾಧರ ಹೂವಿನಹಳ್ಳಿ ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply