ಭಕ್ತಗಣಕ್ಕೆ ತಿಮ್ಮಪ್ಪನ ದರುಶನ ಭಾಗ್ಯ ತೋರಿದ ಪುತ್ತಿಗೆ ಶ್ರೀಪಾದರು

ತಿರುಪತಿ: ಮಹಾಮಹಿಮನಾದ, ಸರ್ವ ಶಕ್ತನಾದ ದೇವರಲ್ಲಿ ನಾವು ಬೇಡುವುದಾದರೆ ದೊಡ್ಡ ದೊಡ್ಡ ಸಂಗತಿಗಳನ್ನು ಮಾತ್ರ ಬೇಡಬೇಕು. ಸಣ್ಣ ಪುಟ್ಟ ಲೌಕಿಕ ಸುಖದ ಬೇಡಿಕೆ ಇಡಬಾರದು ಎಂದು ಶ್ರೀಮನ್ ಮಧ್ವಾಚಾರ್ಯ ಮಹಾ ಪರಂಪರೆಯ ಶ್ರೀ ಉಪೇಂದ್ರ ತೀರ್ಥ ಸಂಸ್ಥಾನ, ಭಾವಿ ಪರ್ಯಾಯ 1008 ಶ್ರೀ ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.
ತಿರುಮಲ ತಿರುಪತಿ ದೇವಸ್ಥಾನಗಳ ವತಿಯಿಂದ ಶನಿವಾರ ಆಯೋಜಿಸಿದ್ದ ವಾರ್ಷಿಕ ಗೌರವ ಸನ್ಮಾನ ಸ್ವೀಕರಿಸಿದ ನಂತರ ಅವರು ದಿವ್ಯ ಸಂದೇಶ ನೀಡಿದರು.
ವ್ಯಾಸರಾಜರ ಆದರ್ಶ: ಆಚಾರ್ಯ ಮಧ್ವರ ಪರಂಪರೆಯ ಮೇರು ಪಂಕ್ತಿಯ ಯತಿಗಳಾದ ಶ್ರೀ ವ್ಯಾಸರಾಜರು ತಿರುಪತಿ ತಿಮ್ಮಪ್ಪನನ್ನು ಅನನ್ಯವಾಗಿ ಆರಾಧಿಸಿದರು. ಇಲ್ಲಿಯೇ ನೆಲೆ ನಿಂತು ಪೂಜಾ ಕೈಂಕರ್ಯ ಸಮರ್ಪಿಸಿದರು. ಮತ್ತೆ ಪೂಜಾ ಹಕ್ಕುಗಳನ್ನು ಇಲ್ಲಿನ ಅರ್ಚಕ ವೃಂದಕ್ಕೆ ಬಿಟ್ಟುಕೊಟ್ಟು ಆದರ್ಶ ಮೆರೆದರು. ಹಾಗಾಗಿ ಮಾಧ್ವ ಪೀಠಾಧಿಪತಿಗಳಿಗೆ ತಿಮ್ಮಪ್ಪನ ಸನ್ನಿಧಾನದಲ್ಲಿ ವಿಶೇಷ ಗೌರವಾದರ ಇಂದಿಗೂ ಲಭ್ಯವಿದೆ ಎಂದರು.
ಬೇಡುವುದು ನಮ್ಮ ಹಕ್ಕು. ಹಾಗಾಗಿ ಲೋಕದ ಪಾಲಕನಾದ ತಿರುಪತಿ ತಿಮ್ಮಪ್ಪನಲ್ಲಿ ಜ್ಞಾನ ಮತ್ತು ಮೋಕ್ಷವನ್ನು ಕೇಳೋಣ. ಮಾನವ ಜನ್ಮ ದೊರಕಿರುವಾಗ ಇದಕ್ಕಿಂತ ದೊಡ್ಡ ಬೇಡಿಕೆ ಇನ್ನಾವುದೂ ಇಲ್ಲ ಎಂಬುದನ್ನು ಅರಿಯೋಣ ಎಂದರು. ನಾವಾಗಿಯೇ ವ್ಯವಸ್ಥೆ ಮಾಡಿಕೊಂಡು ತಿಮ್ಮಪ್ಪನ ದರ್ಶನಕ್ಕೆ ಬರುವುದು ಒಂದು ಭಾಗ. ಆದರೆ ಮಾಧ್ವ ಪೀಠಾಧಿಪತಿಗಳನ್ನು ತಿಮ್ಮಪ್ಪನೇ ಕರೆಸಿಕೊಳ್ಳುತ್ತಾನೆ. ಇದಕ್ಕಿಂತ ಬೇರೆ ಭಾಗ್ಯ ಇನ್ನೇನಿದೆ ಎಂದರು. ಮಹಾಭಾಗ್ಯ ನಮ್ಮ ಬಳಿಗೇ ಬಂದಾಗ ನಾವು ಮಹೋನ್ನತ ವಾದದ್ದನ್ನೇ ದೇವರಲ್ಲಿ ಪಡೆದುಕೊಂಡು ಮರಳಬೇಕು ಎಂದವರು ಆಶಿಸಿದರು.
ತಿಮ್ಮಪ್ಪ ಕಾಂಚನಬ್ರಹ್ಮ. ನಮ್ಮ ಉಡುಪಿ ಕೃಷ್ಣ ಅನ್ನಬ್ರಹ್ಮ.  ತಿರುಪತಿಯ ಒಂದು ಅಂಶವೇ ನಮ್ಮ ಆರಾಧ್ಯದೈವ ಉಡುಪಿ ಕೃಷ್ಣನಲ್ಲೂ ಇದೆ. ಆತನ ಸನ್ನಿಧಿಯವರಾದ ನಮಗೆ ತಿಮ್ಮಪ್ಪನೇ ಕರೆಸಿಕೊಂಡಿರುವುದು ಮಾಧ್ವ ಪೀಠಗಳಿಗೆ ಹೆಮ್ಮೆ ಮತ್ತು ಮಹಾನುಗ್ರಹ ಎಂದು ಭಾವಿಸಿದ್ದೇವೆ ಎಂದರು.

ವೆ೦ಕಟೇಶ್ವರನಲ್ಲಿ ಏನು ಬೇಡಬೇಕು ಎಂಬುದಕ್ಕೆ ಸೋಂದಾ ಶ್ರೀ ವಾದಿರಾಜರು ಎಲ್ಲರಿಗೂ ಮೇಲ್ಪಂಕ್ತಿ ಹಾಕಿ ಕೊಟ್ಟಿದ್ದಾರೆ. ಸಿರಿ ನಿವಾಸನಲ್ಲಿ ಜ್ಞಾನವನ್ನು ಬೇಡಿದರೆ ಅದರ ಹಿಂದೆ ಎಲ್ಲ (ಪಾರಮಾರ್ಥಿಕ ಮತ್ತು ಲೌಕಿಕ) ಸುಖ ಭೋಗಗಳೂ ಹಿಂಬಾಲಿಸಿ ಬರುತ್ತವೆ. ಇದನ್ನು ಅರ್ಥ ಮಾಡಿಕೊಂಡರೆ ಮಾತ್ರ ತಿರುಪತಿ, ತಿರುಮಲದ ಯಾತ್ರೆ ಸಾರ್ಥಕ್ಯ ಪಡೆಯುತ್ತದೆ ಎಂದು ಶ್ರೀಗಳು ಭಕ್ತಗಣಕ್ಕೆ ಸಲಹೆ ನೀಡಿದರು.

ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರಿಗೆ ಟಿಟಿಡಿ ವತಿಯಿಂದ ಛತ್ರ, ಚಾಮರ ಮತ್ತು ಮಂಗಳವಾದ್ಯ ಸಮೇತ ಸ್ವಾಗತ ನೀಡಿ, ತಿಮ್ಮಪ್ಪನ ದರುಶನ ಮಾಡಿಸಿ, ಶೇಷ ವಸ್ತ ಸಮರ್ಪಿಸಿ ಗೌರವಿಸಲಾಯಿತು. ಈ ಸಂದರ್ಭ ಉದ್ಯಮಿಗಳಾದ ಸುನೀಲ್ ಕುಮಾರ್, ಬಿ. ರಾಘವೇಂದ್ರ ಶೆಟ್ಟಿ, ವಿಜಯ್, ಶ್ರೀಮಠದ ದಿವಾನರಾದ ಮುರಳೀಧರಾಚಾರ್, ನಾಗರಾಜಾಚಾರ್, ಗುರುಗಳ ಆಪ್ತ ಕಾರ್ಯದರ್ಶಿ  ರತೀಶ ತಂತ್ರಿ, ಶ್ರೀಮಠದ ಸುಗುಣಮಲಾ ಸಂಪಾದಕ ಮಹಿತೋಷ ಆಚಾರ್ಯ ಸೇರಿದಂತೆ ೩೦೦ಕ್ಕೂ ಅಧಿಕ ಭಕ್ತರು ಹಾಜರಿದ್ದರು.

ಸಂಸ್ಥಾನ ಪೂಜೆ: ಪರಮ ಪವಿತ್ರವಾದ ಭೂ ವೈಕುಂಠ ಕ್ಷೇತ್ರ ತಿರುಮಲದಲ್ಲಿರುವ ಉಡುಪಿ ಮಠದ ಸಭಾಂಗಣದಲ್ಲಿ  ಶ್ರೀ ಸುಗುಣೇಂದ್ರ ತೀರ್ಥರು 800 ವರುಷಗಳಷ್ಟು ಪುರಾತನವಾದ ದಿಗ್ವಿಜಯ ರುಕ್ಮಿಣಿ ಸತ್ಯಭಾಮಾ ಸಮೇತ ವೀರ ವಿಠಲ ದೇವರ ಸಂಸ್ಥಾನ ಪೂಜೆ ನೆರವೇರಿಸಿದರು. ನೆರೆದಿದ್ದ ಭಕ್ತ ಸಮೂಹಕ್ಕೆ ತೀರ್ಥ, ಮಂತ್ರಾಕ್ಷತೆ ಮತ್ತು ಶ್ರೀನಿವಾಸನ ಲಡ್ಡು ಪ್ರಸಾದ ವಿತರಿಸಿದರು. ಭಕ್ತಗಣ ಈ ವೈಭವವನ್ನು ಕಣ್ತುಂಬಿಕೊ೦ಡು ಭಕ್ತಿ ಭಾವ ಮರೆಯಿತು.

 
 
 
 
 
 
 
 
 
 
 

Leave a Reply