ಕೊರೋನಾ ಜೊತೆ, ಆಕಾಶ ವೀಕ್ಷಣೆಗೆ ದುರದೃಷ್ಟವಾಗಿರುವ 2020, ಕಡೇಪಕ್ಷ ತನ್ನ ಕೊನೆಯ ದಿನಗಳನ್ನಾದರೂ ಆನಂದಿಸುವ ಅವಕಾಶವನ್ನು ಆಕಾಶ ವೀಕ್ಷಕರಿಗೆ ನೀಡಿದೆ . ಈಗಾಗಲೇ ಈ ತಿಂಗಳಿನ 13 ಹಾಗು 14 ರಂದು ಜೆಮಿನಿಡ್ ಉಲ್ಕಾವೃಷ್ಟಿಯನ್ನು ನೋಡಿ ಸಂಭ್ರಮಿಸಿದ್ದೇವೆ. ಈಗ ಮತ್ತೊಂದು ಸುಂದರ ಹಾಗೂ ಅಪರೂಪದ ವಿದ್ಯಮಾನವೊಂದು ಗೋಚರಿಸುತ್ತಿದೆ.
ಸಂಜೆ ಆಕಾಶದಲ್ಲಿ ಹೊಳೆಯುತ್ತಿರುವ ಗುರು ಮತ್ತು ಶನಿ ಗ್ರಹಗಳ ಯುತಿ, 20 ವರ್ಷಕ್ಕೊಮ್ಮೆ ಹಾಗು 800 ವರ್ಷ ಗಳ ನಂತರ ಕಂಡುಬರುವ ದೃಶ್ಯ. ಭೂಮಿಯನ್ನು ಸುತ್ತುವಾಗ ಚಂದ್ರನು ಪ್ರತಿ ತಿಂಗಳು ಪ್ರತಿ ಗ್ರಹದ ಸಮೀಪ ದಲ್ಲಿ ಹಾದು ಹೋಗುತ್ತಾನೆ. ಈ ಸಮಯದಲ್ಲಿ ಆ ಗ್ರಹ ಹಾಗು ಚಂದ್ರ ಅತೀ ಸನಿಹವಿದ್ದಂತೆ ಕಾಣುತ್ತಾರೆ. ಇದನ್ನೇ ನಾವು “ಜೋಡಿ” ಅಥವಾ “ಯುತಿ” ಎಂದು ಕರೆಯುತ್ತೇವೆ. 
ಅದೇ ರೀತಿಯಲ್ಲಿ ಗುರು ಹಾಗು ಶನಿಯ ಸಾಮೀಪ್ಯವನ್ನು ಒಂದು ವಿಶೇಷವಾದ ವಿದ್ಯಮಾನ ಎನ್ನಬಹುದು. ಇದನ್ನು ಗ್ರೇಟ್ ಕಂಜಂಕ್ಷನ್ ಎನ್ನುತ್ತಾರೆ. ಭೂಮಿಯಿಂದ ಸೂರ್ಯನಿಗಿರುವ ದೂರದ (ಖಗೋಳಮಾನ), 5 ರಷ್ಟು ದೂರದಲ್ಲಿ ಗುರುಗ್ರಹವಿದ್ದು ಇದು ಸೂರ್ಯನ ಸುತ್ತ ಪರಿಭ್ರಮಿಸಲು 11.86 ವರ್ಷಗಳು ಬೇಕು, ಹಾಗೆಯೇ ಶನಿಯು, ಭೂಮಿ ಹಾಗು ಸೂರ್ಯನ ಅಂತರದ 2 ರಷ್ಟು ಅಂತರವಿದ್ದು, ಪರಿಭ್ರಮಿಸಲು 29.46 ವರ್ಷಗಳನ್ನು ತೆಗುದುಕೊಳ್ಳುತ್ತದೆ. ಇದರಿಂದ ಈ ಗ್ರಹಗಳು ಎಷ್ಟು ಮಂದಗತಿಯಲ್ಲಿ ಸಾಗುತ್ತಿವೆ ಎಂದು ಊಹಿಸಿಕೊಳ್ಳಬಹುದು.
ಈ ಎರಡು ಗ್ರಹಗಳು ಸಮೀಪಿಸಲು ಕನಿಷ್ಠ 20 ವರ್ಷಗಳು ಬೇಕು ಆದ್ದರಿಂದ ಈ ಗ್ರಹಗಳ ಯುತಿಯನ್ನು ಸಮಾ ಗಮ (great conjunction) ಎಂದು ಕರೆಯುತ್ತೇವೆ. ಈ ಗ್ರಹಗಳು ಒಂದೇ ಸಮತಲದಲ್ಲಿ ಪರಿಭ್ರಮಿಸು ವುದಿಲ್ಲ. ಹಾಗು ಪ್ರತಿ ಸಮಾಗಮದಲ್ಲಿ ಅವುಗಳ ನಡುವಿನ ಅಂತರ ಬದಲಾಗುತ್ತಿರುತ್ತದೆ. ಖಗೋಳಶಾಸ್ತ್ರದಲ್ಲಿ ಈ ಅಂತರಗಳನ್ನು ಕೋನಾಂತರದಲ್ಲಿ ಅಳೆಯುತ್ತಾರೆ.
ಉದಾಹರಣೆಗೆ ಚಂದ್ರನ ಗಾತ್ರ 0.5 ಡಿಗ್ರಿ ಆಗಿರುತ್ತದೆ. 2000ದಲ್ಲಿ ನಡೆದ ಸಮಾಗಮದಲ್ಲಿ ಅವರಿಬ್ಬರ ನಡುವೆ 1.18 ಡಿಗ್ರಿ ಅಂತರವಿತ್ತು. ಆದರೆ ಈ ಸಲದ ಯುತಿ ಬಲು ಅಪರೂಪ ವಾಗಿರಲು ಕಾರಣ ಇವರಿಬ್ಬರ ನಡುವೆ ಕೇವಲ 0.1 ಡಿಗ್ರಿ ಅಂತರವಿರುತ್ತದೆ.
ಮದುವೆ ಸಮಾರಂಭಗಳಲ್ಲಿ ವರ ವಧುವಿಗೆ ಅರುಂಧತಿ ಹಾಗು ವಸಿಷ್ಠ ನಕ್ಷತ್ರಗಳನ್ನು ತೋರಿಸುವ ಶಾಸ್ತ್ರವನ್ನು ನೋಡಿದ್ದೇವೆ. ಅಲ್ಲಿಆ ಎರಡು ನಕ್ಷತ್ರಗಳು ತುಂಬ ಹತ್ತಿರದಲ್ಲಿ ಜೋಡಿ ನಕ್ಷತ್ರಗಳಂತೆ ಕಾಣುತ್ತದೆ. ರಾತ್ರಿ ಆಕಾಶದಲ್ಲಿ ನಮಗೆ ಇಬ್ಬರು ಒಂದೇ ನಕ್ಷತ್ರದಂತೆ ಕಾಣುತ್ತಾರೆ. ಅವರಿಬ್ಬರ ನಡುವಿನ ಅಂತರ 0.2 ಡಿಗ್ರಿ ಗಳಿರುತ್ತದೆ ಆದರೆ ಈಗ ಕಾಣುವ ಗುರು ಶನಿಯ ಸಮಾಗಮದಲ್ಲಿ ಇವರಿಬ್ಬರ ನಡುವಿನ ಅಂತರ ಅರುಂಧತಿ ವಸಿಷ್ಠ ನಕ್ಷತ್ರಗಳ ಅಂತರದ ಅರ್ಧದಷ್ಟಿರುತ್ತದೆ.
2040 ರಲ್ಲಿ ಈ ಸಮಾಗಮವು ಮತ್ತೊಮ್ಮೆ ಗೋಚರಿಸಿದರೂ ಅವೆರೆಡರ ನಡುವಿನ ಅಂತರ ಈ ಸಮಾಗಮದ ಅಂತರಕ್ಕಿಂತ ಎರಡರಷ್ಟಿರುತ್ತದೆ. ಆದ್ದರಿಂದ ಈ ಸಮಾಗಮವನ್ನು ನೋಡದಿದ್ದರೆ ಇನ್ನು ಮತ್ತೊಮ್ಮೆ, 0.1 ಡಿಗ್ರಿ ಅಂತರವಿರುವ ಸಮಾಗಮವನ್ನು ವೀಕ್ಷಿಸಲು ಮಾರ್ಚ್ 2080 ರ ವರೆಗೆ (60 ವರ್ಷ) ಕಾಯಬೇಕಾಗುತ್ತದೆ. ಈ ಹಿಂದೆ, 1623 ರಲ್ಲಿ ಇದೇ ವಿದ್ಯಮಾನ ನಡೆದಿತ್ತು.
ಆದರೆ ಈ ಜೋಡಿ ಸೂರ್ಯನ ಹತ್ತಿರದಲ್ಲೇ ಇದ್ದು, ಕಾಣಲು ಸಿಕ್ಕಿರಲಿಲ್ಲ. ಅದಕ್ಕಿಂತ ಹಿಂದೆ ಒಮ್ಮೆ ಇದೇ ಅಂತರದಲ್ಲಿ 1226 ರಲ್ಲಿ ಸಂಜೆ ಆಕಾಶದಲ್ಲಿ ಕಂಡಿತ್ತು. ಈ ಜೋಡಿ ಕೇವಲ 1 ಗಂಟೆ 45 ನಿಮಿಷಗಳಷ್ಟು ಮಾತ್ರ ಕಾಣ ಸಿಗುತ್ತದೆ. ಎರಡು ಗ್ರಹಗಳು ಸೂರ್ಯಾಸ್ತದ ನಂತರ 6.15 ರಿಂದ ರಾತ್ರಿ 8 ಗಂಟೆಯ ವರೆಗೆ ಕಂಡು, ನಂತರ ನೈರುತ್ಯದಲ್ಲಿ 8 ಗಂಟೆಗೆ ಅಸ್ತವಾಗುತ್ತದೆ.
ಇದೇ 21 ರಂದು ಉತ್ತರಾಯಣ ಪ್ರಾರಂಭವಾಗುತ್ತದೆ. ಈ ದಿನ ಸೂರ್ಯ ಮಧ್ಯಾಹ್ನದ ಹೊತ್ತಿಗೆ ಹೆಚ್ಚು ದಕ್ಷಿಣ ದಿಕ್ಕಿನಲ್ಲಿರುತ್ತಾನೆ. ಇಂದಿನಿಂದ, ದಿನ ಕಳೆದಂತೆ ಸೂರ್ಯ ಉತ್ತರ ದಿಕ್ಕಿಗೆ ಸಾಗುವಂತೆ ಕಾಣುತ್ತಾನೆ. ಮೂರು ವಿಶೇಷ ವಿದ್ಯಮಾನಗಳಿಂದ 2020 ಕೊನೆಯಾಗುತ್ತಾ 2021 ಆರಂಭವಾಗುತ್ತಿದೆ.
ಪೂರ್ಣಪ್ರಜ್ಞ ಕಾಲೇಜಿನಲ್ಲಿ 21ರಂದು ಸಂಜೆ 6ಗಂಟೆಗೆ ಈ ಗ್ರಹಗಳ ವೀಕ್ಷಣೆಯನ್ನು ಆಯೋಜಿಸಲಾಗಿದೆ. ಹಾಗೂ ತನ್ನ ಯುಟ್ಯೂಬ್ ಚಾನ್ನೆಲ್ನಲ್ಲಿ ದೂರದರ್ಶಕ ನೋಟದ ನೇರಪ್ರಸಾರವನ್ನು ಆಯೋಜಿಸಿರುತ್ತದೆ. ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘವು, ಪ್ರತಿಯೊಬ್ಬರು ಇವೆಲ್ಲವನ್ನು ವೀಕ್ಷಿಸಿ ಆನಂದಿಸಬೇಕೆಂದು ಆಶಿಸುತ್ತದೆ.