ಬಿಜೆಪಿ ಸರಕಾರ ಜನರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದೆ: ವೆರೋನಿಕಾ ಕರ್ನೇಲಿಯೋ

ದೇಶದ ಜನ ಇಷ್ಟೊಂದು ಕಷ್ಟದಲ್ಲಿ ಇರುವಾಗ ವಿದ್ಯುತ್ ಬೆಲೆ ಏರಿಕೆ ಮಾಡಿರುವುದು ಗಾಯದ ಮೇಲೆ ಬರೆ ಏಳೆದಂತೆ ಆಗಿದೆ.ಲಾಕ್ ಡೌನ್ ನಿಂದ ಬಹಳಷ್ಟು ಜನ ಕೆಲಸವಿಲ್ಲದೆ ಮನೆಯಲ್ಲಿದ್ದಾರೆ.ಪಡಿತರ ಅಕ್ಕಿ ಬಿಟ್ಟರೆ ಬೇರೆ ಯಾವುದೇ ವಸ್ತುಗಳನ್ನು ತರಲು ಹಣವಿಲ್ಲದ ಈ ಸಂಕಷ್ಟ ಕಾಲದಲ್ಲಿ ವಿದ್ಯುತ್ ಬೆಲೆ ಏರಿಕೆ ಜನರನ್ನು ಕಂಗಾಲು ಮಾಡಿದೆ. ಆಡಳಿತ ಮಾಡುತ್ತಿರುವ ಬಿಜೆಪಿ ಸರಕಾರ ಜನರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಕೆಪಿಸಿಸಿ ಪ್ಯಾನಲಿಸ್ಟ್ ವೆರೋನಿಕ ಕರ್ನೇಲಿಯೊ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಒಂದು ವರ್ಷದ ಅವಧಿಯಲ್ಲಿ ಸರಕಾರ ವಿದ್ಯುತ್ ದರವನ್ನು ಮೂರನೇ ಬಾರಿ ಏರಿಕೆ ಮಾಡುತ್ತಿದೆ.ಉದ್ಯೋಗವಿಲ್ಲದೆ ಹಲವಾರು ಜನ ಮನೆಯಲ್ಲಿದ್ದಾರೆ. ನೂರಾರು ಜನ ಉದ್ಯೋಗವನ್ನೇ ಕಳೆದುಕೊಂಡಿದ್ದಾರೆ.ಲಾಕ್ ಡೌನ್ ನಿಂದಾಗಿ ಸಣ್ಣಪುಟ್ಟ ವ್ಯಾಪಾರಿಗಳು ಜೀವನ ನಡೆಸುವುದು ಹೇಗೆಂದು ಕಂಗಾಲಾಗಿದ್ದಾರೆ.ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬಿಜೆಪಿ ನೇತೃತ್ವದ ಸರಕಾರಗಳು ಪದೇ ಪದೇ ದರ ಏರಿಕೆ ಮಾಡುತ್ತಿವೆ.ಅಧಿಕಾರಕ್ಕಾಗಿ ಕೋಟಿ ಕೋಟಿ ಹಣ ನೀಡಿ ಶಾಸಕರನ್ನು ಖರೀದಿಸಿರುವ ಬಿಜೆಪಿ ಸರಕಾರ, ಕೊರೊನಾ ದ್ವಿತೀಯ ಅಲೆಗೆ ಸರಿಯಾಗಿ ಸಜ್ಜಾಗದೆ, ತಮ್ಮ ತಪ್ಪು ನಿರ್ಧಾರಗಳಿಂದ ಜನರನ್ನು ಸಂಕಷ್ಟಕ್ಕೆ ತಳ್ಳಿದೆ. ಗಾಜಿನ ಮನೆಯಲ್ಲಿ ಅಧಿಕಾರ ನಡೆಸುವವರಿಗೆ ಸಾಮಾನ್ಯ ಜನರ ಕಷ್ಟ ತಿಳಿಯುತ್ತಿಲ್ಲ. 

ಪೆಟ್ರೋಲ್,ಡೀಸೆಲ್,ಗ್ಯಾಸ್ ಸಹಿತ ಜನಸಾಮಾನ್ಯರ ದಿನಬಳಕೆಯ ವಸ್ತುಗಳ ಮೇಲೆ ದರ ಏರಿಕೆ ಮಾಡುವ ಸರಕಾರ, ಈ ಸಂಕಷ್ಟದ ಪರಿಸ್ಥಿತಿಯನ್ನು ಒಮ್ಮೆ ಅರ್ಥಮಾಡಿಕೊಳ್ಳಬೇಕು. ಮುಂದೆ ಬದುಕುವುದು ಹೇಗೆ ಎಂಬ ಚಿಂತೆಯಲ್ಲಿರುವ ಜನಸಾಮಾನ್ಯರಿಗೆ ಪದೇಪದೆ ದರ ಏರಿಕೆಯಿಂದ ಸರಕಾರ ಇನ್ನಷ್ಟು ಹೊರೆಯಾಗುತ್ತಿದೆ.ತಾನು ಅಧಿಕಾರಕ್ಕೆ ಬಂದರೆ ದರ ಇಳಿಕೆ ಮಾಡುತ್ತೇವೆ ಎಂದು ಜನರ ವಿಶ್ವಾಸ ಗಳಿಸಿ, ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರಕಾರ ಜನರ ತಾಳ್ಮೆಯನ್ನು ಪದೇಪದೆ ಪರೀಕ್ಷಿಸುತ್ತಿದೆ. ಚುನಾವಣೆಗೆ ಮತ್ತು ಶಾಸಕರ ಖರೀದಿಗೆ ಕೋಟಿ ಕೋಟಿ ಹಣ ಸುರಿಯುವ ಬಿಜೆಪಿಗರು, ಅದೇ ಹಣವನ್ನು ದರ ಏರಿಕೆಯ ಮೂಲಕ ಜನರಿಂದ ಪಡೆದುಕೊಳ್ಳುತ್ತಿದೆ.ಕೋವಿಡ್ ನ ಸಂಕಷ್ಟದ ಸಮಯದಲ್ಲಾದರೂ ಜನರ ಬಗ್ಗೆ ಕಾಳಜಿ ವಹಿಸಿ.ಜನಸಾಮಾನ್ಯರು ಬೀದಿಗೆ ಬರುವ ಮೊದಲೇ ದರ ಇಳಿಕೆ ಮಾಡಿ ಎಂದು ರಾಜ್ಯ ಸರಕಾರಕ್ಕೆ ಕರ್ನೇಲಿಯೋ ಆಗ್ರಹಿಸಿದ್ದಾರೆ.

 
 
 
 
 
 
 
 
 
 
 

Leave a Reply