ಸರ್ಕಾರದ ಖರ್ಚಿನಲ್ಲಿ ಬಿಜೆಪಿ ಪ್ರಚಾರದ ಸಭೆ ಖಂಡನೀಯ– ವೆರೋನಿಕಾ ಕರ್ನೆಲಿಯೊ

ಕಟಪಾಡಿಯಲ್ಲಿ ಶುಕ್ರವಾರ ನಡೆದ ಸವಲತ್ತು ವಿತರಣೆ ಕಾರ್ಯಕ್ರಮ ಸರಕಾರಿ ಖರ್ಚಿನಲ್ಲಿ ಬಿಜೆಪಿ ಪ್ರಚಾರದ ಸಭೆಯಾಗಿತ್ತು ಎಂಬ ಕೂಗು ಎಲ್ಲಾ ಕಡೆಗಳಿಂದ ಕೇಳಿಬರುತ್ತಿದೆ ಎಂದು ಕೆಪಿಸಿಸಿ ವಕ್ತಾರೆ ವೆರೋನಿಕಾ ಕರ್ನೆಲಿಯೋ ತಿಳಿಸಿದ್ದಾರೆ.

ಜನರ ತೆರಿಗೆಯ ಹಣದಲ್ಲಿ ಒಂದು ಕೋಟಿ ವೆಚ್ಚದಲ್ಲಿ ಎಲ್ಲಾ ಸರಕಾರಿ ಅಧಿಕಾರಿಗಳನ್ನು ಬಳಸಿ ಟಾರ್ಗೆಟ್ ಕೊಟ್ಟು ಜನ ಸೇರಿಸಿರುವುದು ಬಿಜೆಪಿಯ ದಿವಾಳಿತನ ತೋರಿಸುತ್ತದೆ. ಪ್ರತಿ ಪಂಚಾಯತಿಗೆ 2 ಬಸ್ಸು ಕಳುಹಿಸಿ 200 ಜನ ತರಬೇಕು ಎನ್ನುವ ಮೇಲಾಧಿಕಾರಿಗಳ ಮೌಖಿಕ ಆದೇಶ ಜನರಿಗೆ ತಪ್ಪು ಮಾಹಿತಿ ನೀಡಿ, ನಿಮ್ಮ ಪೆನ್ಶನ್ ಬರುವುದು ನಿಂತು ಹೋಗುತ್ತೆ, ನಿಮಗೆ ಹಣ ಸಿಗುವುದಿಲ್ಲ ಇಂತಹ ಒತ್ತಡ ಹಾಕಿ ಜನರನ್ನು ಸೇರಿಸಿದ ಬಗ್ಗೆ ಸಭೆಗೆ ಹಾಜರಾದವರು ಆಡಿಕೊಳ್ಳುತ್ತಿದ್ದಾರೆ. ಉದ್ಯಾವರದಿಂದ ಕಟಪಾಡಿವರೆಗೆ ಎಲ್ಲಾ ಬಿಜೆಪಿ ಪಕ್ಷದ ಫ್ಲ್ಯಾಗ್ ಗಳು ಹಾಗೂ ಕಟೌಟ್ ಗಳು ರಾರಾಜಿಸುತ್ತಿದ್ದು ಇದು ಸರಕಾರಿ ಕಾರ್ಯಕ್ರಮ ಎಂದು ಹೇಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಎಲ್ಲರ ಭಾಷಣಗಳು ಬರೀ ಮುಂದಿನ ಚುನಾವಣೆಗೆ ತಯಾರಿಯಾಗಿ ಮಾಡಿದ ಭಾಷಣಗಳು ಆಗಿತ್ತು ಎಂದು ಸಭೆಯಲ್ಲಿ ಭಾಗವಹಿಸಿದವರು ನುಡಿಯುತ್ತಿದ್ದಾರೆ. ಸಭೆಯಲ್ಲಿ ಕೇವಲ ಕೆಲವರಿಗಷ್ಟೇ ಸವಲತ್ತುಗಳನ್ನು ವಿತರಿಸುವುದರ ಮೂಲಕ ಈ ಸಭೆಗೆ ಜಿಲ್ಲೆಯ ಎಲ್ಲರನ್ನೂ ಒಂದು ಕಡೆ ಸೇರಿಸಿ ಈ ರೀತಿ ಜನರ ತೆರಿಗೆ ಹಣ ಖರ್ಚು ಮಾಡುವುದು ಎಷ್ಟು ಸರಿ ಎಂದು ವೆರೋನಿಕಾ ಕರ್ನೆಲಿಯೊ ಪ್ರಶ್ನಿಸಿದ್ದಾರೆ. ಈ ಎಲ್ಲಾ ವಿಚಾರಗಳನ್ನು ನಮ್ಮ ಜಿಲ್ಲೆಯ ಜನರು ಅರ್ಥಮಾಡಿಕೊಳ್ಳಬೇಕು. ಇದಕ್ಕೆ ಅಧಿಕಾರಿಗಳು ಯಾಕೆ ಮಣೆ ಹಾಕಿದರು ಎಂದು ಪ್ರಶ್ನಿಸಿದ್ದಾರೆ.

 
 
 
 
 
 
 
 
 
 
 

Leave a Reply