ಪ.ಬಂಗಾಲದಲ್ಲಿ ನಡೆಯುತ್ತಿರುವ ಗೂಂಡಾಗಿರಿ ಮಮತಾ ಬ್ಯಾನರ್ಜಿಯ ತ್ರಣಮೂಲ ಕಾಂಗ್ರೆಸ್ ಅಧಪತನಕ್ಕೆ ಮುನ್ನುಡಿ: ಸಂಸದೆ ಶೋಭಾ ಕರಂದ್ಲಾಜೆ

ಪಶ್ಚಿಮ ಬಂಗಾಲದಲ್ಲಿ ಚುನಾವಣಾ ಫಲಿತಾಂಶದ ಬಳಿಕ ಸಂಭವಿಸಿರುವ ಮಮತಾ ಬ್ಯಾನರ್ಜಿ ನೇತೃತ್ವದ ತ್ರಣಮೂಲ ಕಾಂಗ್ರೆಸ್ ಗೂಂಡಾಗಿರಿ, ದಾಂಧಲೆ ತ್ರಣಮೂಲ ಕಾಂಗ್ರೆಸ್ ಅಧಪತನಕ್ಕೆ ಮುನ್ನುಡಿ ಬರೆದಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.ಅವರು ಪ.ಬಂಗಾಲದಲ್ಲಿ ಮಮತಾ ಬ್ಯಾನರ್ಜಿಯ ಟಿ.ಎಂ.ಸಿ. ಕಾರ್ಯಕರ್ತರಿಂದ ಬಿಜೆಪಿ ಕಾರ್ಯ ಕರ್ತರ ಮೇಲೆ ನಡೆದ ಹಿಂಸಾಚಾರ, ಗೂಂಡಾಗಿರಿ ಪ್ರತಿಭಟಿಸಿ, ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಇಪ್ಪತೈದು ವರ್ಷಗಳ ಪರ್ಯಂತ ಒಂದೇ ಮುಖ್ಯಮಂತ್ರಿಯನ್ನು ಮುಂದುವರಿಸಿಕೊಂಡು ಬಂದು ಕಮ್ಯುನಿಷ್ಟ್ ರಾಜ್ಯವೆನಿಸಿಕೊಂಡಿದ್ದರೂ ಪ್ರಸಕ್ತ ಬೆರಳೆಣಿಕೆಯ ಶಾಸಕರ ಗೆಲುವಿಗೆ ಪರದಾಡುವ ದುಸ್ಥಿತಿ ಕಮ್ಯುನಿಷ್ಟ್ ಪಕ್ಷಕ್ಕೆ ಬಂದೊದಗಿದೆ. ಅದೇ ರೀತಿಯ ದುರ್ಗತಿ ಪ.ಬಂಗಾಲದ ಮಮತಾ ಬ್ಯಾನರ್ಜಿ ನೇತೃತ್ವದ ತ್ರಣಮೂಲ ಕಾಂಗ್ರೆಸ್ ಗೆ ಮುಂದಿನ ದಿನಗಳಲ್ಲಿ ಬಂದೊದಗಲಿದೆ.

ಆದುದರಿಂದ ಹಿಂಸೆ, ಗೂಂಡಾಗಿರಿಯನ್ನು ತ್ಯಜಿಸಿ ಎಂದು ಆಗ್ರಹಿಸಿದ ಅವರು ದೇಶದಾದ್ಯಂತ ನಡೆಯುತ್ತಿರುವ ಈ ಪ್ರತಿಭಟನೆಯ ಮೂಲಕ ಪ. ಬಂಗಾಲದ ಬಿಜೆಪಿ ಕಾರ್ಯಕರ್ತರ ಜೊತೆ ನಾವೆಲ್ಲರೂ ಇದ್ದೇವೆ, ತ್ರಣ ಮೂಲ ಕಾಂಗ್ರೆಸ್ ನ ಗೂಂಡಾಗಿರಿಯನ್ನು ಮೆಟ್ಟಿ ನಿಲ್ಲುವ ಕಾಲ ಸನ್ನಿಹಿತವಾಗಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮಾತನಾಡಿ,  ಪ.ಬಂಗಾಲದ ಮಮತಾ ಬ್ಯಾನರ್ಜಿ ಸಂವಿಧಾನ ವಿರೋಧಿ ನಡೆ ಖಂಡನೀಯ. ಅವರ ನೇತೃತ್ವದ ತ್ರಣಮೂಲ ಕಾಂಗ್ರೆಸ್ ಕಾರ್ಯಕರ್ತರ ಹಿಂಸಾಚಾರ, ಗೂಂಡಾಗಿರಿಗೆ ತಕ್ಕ ಉತ್ತರವನ್ನು ನೀಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಶಕ್ತವಾಗಿದೆ. ಇಡೀ ದೇಶ ಇಂತಹ  ವಿಧ್ವಂಸಕ ದುಷ್ಟ ಶಕ್ತಿಗಳ ವಿರುದ್ಧ ಹೋರಾಡಬೇಕಿದೆ ಎಂದರು.

ಈ ಸಂದರ್ಭದಲ್ಲಿ ಬಿಜಿಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ರಾಜ್ಯ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ಉಡುಪಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್, ಬಿಜೆಪಿ ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್,

ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಶ್ಮಿತಾ ಬಿ. ಶೆಟ್ಟಿ, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಆಲ್ವಿನ್ ಡಿಸೋಜಾ, ಜಿಲ್ಲಾ ಸಾಮಾಜಿಕ ಜಾಲತಾಣ ಸಂಚಾಲಕ ಚಂದ್ರಶೇಖರ ಪ್ರಭು, ಪ್ರಮುಖರಾದ ಜಿಲ್ಲೇಶ್ ಶೆಟ್ಟಿ, ಬಿಜೆಪಿ ಉಡುಪಿ ನಗರ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಣಿಪಾಲ್ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply