ಪ್ರಧಾನಿ ಕುಟುಂಬದವರಿಗೆಲ್ಲ ಒಟ್ಟೊಟ್ಟಿಗೆ ಸಮಸ್ಯೆ ಯಾಕೆ ~ ಮೋದಿ ಜಾತಕದಲ್ಲೇನಿದೆ? 

ಮೋದಿ ಅವರ ರಾಜಕೀಯ ಭವಿಷ್ಯ ಹಾಗೂ ಕುಟುಂಬದ ಭವಿಷ್ಯ ಹೇಗಿದೆ ಎಂಬುದನ್ನು ಉಡುಪಿಯ ಕಾಪು ಮೂಲದ ಪ್ರಸಿದ್ಧ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಅವರು ‘ಟಿವಿ9ಕನ್ನಡ ಡಿಜಿಟಲ್’ ಜತೆ ವಿಶ್ಲೇಷಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ಮೋದಿ ಮತ್ತು ಅವರ ಕುಟುಂಬದವರು ಪ್ರಯಾಣಿಸುತ್ತಿದ್ದ ಕಾರು ಮೈಸೂರಿನ ಕಡಕೊಳ ಬಳಿ ಎರಡು ದಿನಗಳ ಹಿಂದೆ ಅಪಘಾತಕ್ಕೀಡಾಯಿತು. ಸಣ್ಣ ಮಗು ಸೇರಿದಂತೆ ಕಾರಿನಲ್ಲಿದ್ದವರು ಗಾಯಗೊಂಡರು. ಅದೃಷ್ಟವಶಾತ್ ಪ್ರಾಣಾಪಾಯ ದಿಂದಎಲ್ಲರೂ ಪಾರಾದರು. 

ಇದರ ಬೆನ್ನಲ್ಲೇ ಮೋದಿ ಅವರ ಶತಾಯುಷಿ ತಾಯಿ ಹೀರಾಬೆನ್ ಮೋದಿ ಅನಾರೋಗ್ಯಕ್ಕೀಡಾಗಿ ಗುಜರಾತ್​​ನ ಅಹಮದಾಬಾದ್​ನ ಯುಎನ್ ಮೆಹ್ತಾ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದರು. ಪ್ರಧಾನಿ ಕುಟುಂಬದವರೆಲ್ಲ ಒಟ್ಟೊಟ್ಟಿಗೆ ಸಮಸ್ಯೆಗೆ ಸಿಲುಕಿರೋದೇಕೆ ಮೋದಿ ಅವರ ಜಾತಕದಲ್ಲೇನಿದೆ

ಮೋದಿ ಅವರದ್ದು ವೃಶ್ಚಿಕ ಲಗ್ನ ಮತ್ತು ರಾಶಿ. ಲಗ್ನಾಧಿಪ ಮತ್ತು ರಾಶಿಯ ಅಧಿಪತಿ ಒಂದೇ ಕಡೆ ಇದ್ದಾರೆ. ಲಗ್ನದ ಸಪ್ತಮ ಕುಂಭ ಆಗಿದೆ. ಇದರ ಅಷ್ಟಮ ಸ್ಥಾನ ಕನ್ಯಾ. ಇದನ್ನು ವೀಕ್ಷಸಿದರೆ ಮೋದಿ ಅವರು ಮಾತೃ ಸಮಾನರಾದವರ ತೊಂದರೆಗಳನ್ನು ನೋಡಬೇಕಾಗಿ ಬರಬಹುದು. ಇದಕ್ಕೆ ಪರಿಹಾರ ಮಾಡ ಬೇಕಾಗುತ್ತದೆ ಎಂದು ಪ್ರಕಾಶ್ ಅಮ್ಮಣ್ಣಾಯ ವಿಶ್ಲೇಷಿಸಿದ್ದಾರೆ. ದಶ ದೋಷಗಳಾಗಲೀ ಇತರ ಯಾವುದೇ ದೋಷಗಳಾಗಲೀ ಇಲ್ಲ. ಬೇರೆ ಯಾವ ತೊಂದರೆಗಳೂ ಪ್ರಧಾನಿಯವರಿಗಿಲ್ಲ ಎಂದು ಅವರು ಹೇಳಿದ್ದಾರೆ.

ಏಪ್ರಿಲ್ ವೇಳೆಗೆ ಗುರು ಮೇಷ ರಾಶಿ ಪ್ರವೇಶಿಸಿದಾಗ ತೃತೀಯದ ಅಷ್ಟಮ ಸ್ಥಾನವನ್ನು ವೀಕ್ಷಣೆ ಮಾಡುತ್ತಾನೆ. ತೃತೀಯ ಎಂಬುದು ಸಹೋದರರಿಗೆ ಸಂಬಂಧಿಸಿದ್ದಾಗಿದೆ. ಹೀಗಾಗಿ ಸಹೋದರನ ಸಮಸ್ಯೆಗಳು ಎದುರಿಸುವ ಸಾಧ್ಯತೆ ಇದೆ. ಅಂದರೆ ಸಹೋದರರಿಗೆ ತೊಂದರೆಗಳಾಗುವ ಭೀತಿ ಇದೆ. ಮಿತ್ರರಿಗೂ ಸಮಸ್ಯೆಗಳಾಗಬಹುದು. ಆಪ್ತ ಮಿತ್ರರರನ್ನು ಕಳೆದುಕೊಳ್ಳುವಂಥ ಅಥವಾ ಅದಕ್ಕೆ ಸಮನಾದ ಕಠಿಣ ಸನ್ನಿವೇಶ ಎದುರಾದರೂ ಆಗುವ ಸಾಧ್ಯತೆ ಇದೆ. ಇದಕ್ಕೆ ಪರಿಹಾರ ಮಾಡಿಕೊಳ್ಳಬೇಕಾಗಬಹುದು. ಇಷ್ಟು ಬಿಟ್ಟರೆ ಮೋದಿ ಅವರಿಗೆ ವೈಯಕ್ತಿಕವಾಗಿ ಯಾವುದೇ ಸಮಸ್ಯೆ ಎದುರಾಗದು.  

ಲೋಕಸಭೆ ಚುನಾವಣೆಯಲ್ಲಿ ಜಯಭೇರಿ: 2024ರ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ವೃಷಭ ರಾಶಿಗೆ ಗುರುವಿನ ಪ್ರವೇಶವಾಗುತ್ತದೆ. ಏಕಾದಶ ಸ್ಥಾನವನ್ನು ಗುರು ವೀಕ್ಷಿಸಲಿದ್ದಾನೆ. ಹೀಗಾಗಿ ಮೋದಿ ಅವರು ಈ ಹಿಂದಿಗಿಂತಲೂ ಎರಡುಪಟ್ಟು ಅಂತರದ ಜಯಭೇರಿ ಬಾರಿಸಲಿದ್ದಾರೆ. ಅಖಂಡ ಸಾಮ್ರಾಜ್ಯ ಯೋಗದ ಫಲ ಅವರಿಗಿದೆ. 

ಅಂದರೆ ಒಂದಿನಿತೂ ಬಿಡದೆ ಎಲ್ಲೆಡೆ ಅವರು ಜಯಗಳಿಸಲಿದ್ದಾರೆ. ಶುಕ್ರ ಮತ್ತು ಶನಿ ತೃತೀಯ, ಚತುರ್ಥ ಸ್ಥಾನದಲ್ಲಿರುವುದರಿಂದ ಎಲ್ಲರನ್ನೂ ಆಕರ್ಷಿಸುವ ಸ್ವಭಾವ ಮೋದಿ ಅವರದ್ದಾಗಿರಲಿದೆ. ಇವೆಲ್ಲ ಅವರಿಗೆ ಪ್ರಯೋಜನಕ್ಕೆ ಬರಲಿದೆ ಎಂದು ಪ್ರಕಾಶ್ ಅಮ್ಮಣ್ಣಾಯ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply