ಅಧಿಕಾರಶಾಹಿ ಚಲ್ತಾ ಹೈ ವರ್ತನೆ ಬಿಡಬೇಕು~ ಬಸವರಾಜ ಬೊಮ್ಮಾಯಿ

 ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಬಸವರಾಜ ಬೊಮ್ಮಾಯಿ ಇಂದು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ರವರಿಂದ ಪ್ರಮಾಣ ವಚನ ಸ್ವೀಕರಿಸಿದರು. ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನಂತರ ವಿಧಾನಸೌಧಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನಸೌಧದ ಬಾಗಿಲಿಗೆ ನಮಸ್ಕರಿಸಿ ಒಳಗೆ ಪ್ರವೇಶಿಸಿದರು.


ತಮ್ಮ ಪ್ರಥಮ ಸಚಿವ ಸಂಪುಟ ಸಭೆ ನಂತರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ವಿಶ್ವಾಸಾರ್ಹ, ಜವಾಬ್ದಾರಿಯುತ, ಪಾರದರ್ಶಕ ಹಾಗೂ ದಕ್ಷ ಆಡಳಿತ ನೀಡಲು ತಂಡಸ್ಪೂರ್ತಿಯಿಂದ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಇಲಾಖೆಗಳ ಕಾರ್ಯನಿರ್ವಹಣೆಗೆ ಶ್ರೇಯಾಂಕ ನೀಡುವ ಮೂಲಕ ದಕ್ಷತೆಯಿಂದ ಕಾರ್ಯನಿರ್ವಹಿಸುವ ಇಲಾಖೆಗಳಿಗೆ ಉತ್ತೇಜನ ನೀಡಲಾಗುವುದು.

ಪ್ರಸ್ತುತ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸುವುದು ಹಾಗೂ ಕೋವಿಡ್ ನಿಯಂತ್ರಣ ಹಾಗೂ ನಿರ್ವಹಣೆ ನಮ್ಮ ಆದ್ಯತೆಯಾಗಿದೆ. ಸರಕಾರದ ಎಲ್ಲಾ ಇಲಾಖೆಗಳ ನಡುವೆ ಸಮನ್ವಯ, ಸಹಕಾರವಿರಬೇಕು. ನಾವೆಲ್ಲರೂ ಒಂದು ತಂಡದಂತೆ ಕೆಲಸ ಮಾಡಬೇಕು. ನಿಗದಿತ ಸಮಯದೊಳಗೆ ಕೆಲಸ ಮಾಡುವ ಜವಾಬ್ದಾರಿ ಅಧಿಕಾರಿಗಳದ್ದು. ಅಧಿಕಾರಶಾಹಿ ಚಲ್ತಾ ಹೈ ವರ್ತನೆ ಬಿಡಬೇಕು. ಎಲ್ಲಾ ಅಧಿಕಾರಿಗಳಿಗೆ ನನ್ನ ಕಚೇರಿ ಸದಾ ತೆರೆದಿರುತ್ತದೆ. ಯಾವುದೇ ಸಮಯದಲ್ಲಿ ನನ್ನೊಂದಿಗೆ ಚರ್ಚಿಸಬಹುದು.

ಎಲ್ಲ ವರ್ಗದವರ ಪರವಾಗಿ ನನ್ನ ಸರಕಾರ ಕೆಲಸ ಮಾಡಲಿದೆ. ಅವರೆಲ್ಲರಿಗೂ ನಮಗಾಗಿ ಸರಕಾರವಿದೆ ಎನ್ನುವ ಭಾವನೆ ಬರುವಂತೆ ನಾವು ಕೆಲಸ ಮಾಡಬೇಕು ಎಂದು ಸುದ್ದಿಗೋಷ್ಟಿಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ ಸಚಿವ ಸಂಪುಟದ ಪ್ರಮುಖ ನಿರ್ಣಯಗಳು:
* ರೈತರ ಮಕ್ಕಳಿಗಾಗಿ ನೂತನ ವಿದ್ಯಾರ್ಥಿವೇತನ ಯೋಜನೆ ಜಾರಿ. ಈ ಯೋಜನೆಗೆ 1000 ಕೋಟಿ ರೂ. ಮೀಸಲು. * ಸಂಧ್ಯಾ ಸುರಕ್ಷಾ ಯೋಜನೆಯಡಿ ವೃದ್ಧಾಪ್ಯ ವೇತನವನ್ನು ರೂ .1,000 ದಿಂದ ರೂ. 1,200 ಕ್ಕೆ ಹೆಚ್ಚಿಸಲಾಗಿದೆ. ಇದರಿಂದ 35.98 ಲಕ್ಷ ಫಲಾನುಭವಿಗಳಿಗೆ ಪ್ರಯೋಜನ. * ವಿಧವಾ ವೇತನವನ್ನು ರೂ .600 ರಿಂದ ರೂ. 800 ಕ್ಕೆ ಏರಿಸಲಾಗಿದೆ. 17.25 ಲಕ್ಷ ಫಲಾನುಭವಿಗಳಿಗೆ ಅನುಕೂಲ. * ದಿವ್ಯಾಂಗರ ಮಾಸಿಕ ವೇತನ ರೂ. 600 ರಿಂದ ರೂ. 800 ಕ್ಕೆ ಹೆಚ್ಚಿಸಲಾಗಿದೆ. ಇದರಿಂದ 3.66 ಲಕ್ಷ ಫಲಾನುಭವಿ ಗಳಿಗೆ ಅನುಕೂಲವಾಗಲಿದೆ.

 
 
 
 
 
 
 
 
 
 
 

Leave a Reply