ಬಿಜೆಪಿ ಜಿಲ್ಲಾ ಕಾರ್ಯ ತಂಡದ ಸಭೆ

ರಾಜ್ಯದ 58,000 ಬೂತ್ ಗಳಲ್ಲಿ ನಡೆಯುತ್ತಿರುವ ಬಿಜೆಪಿ ವಿಸ್ತಾರಕ ಅಭಿಯಾನವು ಪಕ್ಷದ ಸಂಘಟನಾತ್ಮಕ ವಿಚಾರದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಪಡೆದಿದೆ. ವಿಸ್ತಾರಕ ಅಭಿಯಾನವು ಸದೃಢ ಪಕ್ಷ ಸಂಘಟನೆಯ ಜೊತೆಗೆ ಸಶಕ್ತ ಬೂತ್ ನಿರ್ಮಾಣಕ್ಕೆ ಪೂರಕವಾಗಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ ಹೇಳಿದರು.

ಅವರು ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅಧ್ಯಕ್ಷತೆಯಲ್ಲಿ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಜಿಲ್ಲಾ ಕಾರ್ಯ ತಂಡದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಉಡುಪಿ ಜಿಲ್ಲೆ ಸಂಘಟನಾತ್ಮಕವಾಗಿ ಮುಂಚೂಣಿಯಲ್ಲಿರುವ ಜಿಲ್ಲೆ. ವಿಸ್ತಾರಕ ಅಭಿಯಾನದಡಿ ಬೂತ್ ಸಮಿತಿ, ಪಂಚ ರತ್ನ, ಪೇಜ್ ಪ್ರಮುಖ್, ಪೇಜ್ ಸಮಿತಿ, ಫಲಾನುಭವಿಗಳ ವಿವರ ಹಾಗೂ ಇನ್ನಿತರ ನಿಗದಿತ ಮಾಹಿತಿ ಸಂಗ್ರಹದ ಜೊತೆಗೆ ಬೂತ್ ಮಟ್ಟದ ಸಮಸ್ಯೆಗಳನ್ನು ಅರಿಯುವ ಪ್ರಯತ್ನವನ್ನು ಮಾಡಬೇಕಿದೆ. ಸಮನ್ವಯತೆ ಮತ್ತು ಸಂಘಟಿತ ಪ್ರಯತ್ನದ ಮೂಲಕ ವಿಸ್ತಾರಕ ಅಭಿಯಾನವನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಜಿಲ್ಲೆಯು ಮುಂಚೂಣಿ ಸ್ಥಾನವನ್ನು ಕಾಯ್ದುಕೊಳ್ಳುವಂತಾಗಬೇಕು ಎಂದರು.

ಬಿಜೆಪಿ ವಿಶಿಷ್ಟ ಕಾರ್ಯ ಪದ್ಧತಿಯನ್ನು ಹೊಂದಿರುವ ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷ. ಇತ್ತೀಚೆಗೆ ನಡೆದ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿಯ ಶೇಕಡಾವಾರು ಮತ ಗಳಿಕೆಯ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿದೆ. ಸರಕಾರದ ಜನಪರ ಆಡಳಿತ, ಅಭಿವೃದ್ಧಿ ಯೋಜನೆಗಳು, ಉತ್ತಮ ವಾತಾವರಣ ಮತ್ತು ವಿರೋಧ ಪಕ್ಷದ ನಾಯಕರ ಹಿಂದೂ ವಿರೋಧಿ ಮನಸ್ಥಿತಿ ಬಿಜೆಪಿ ಗೆಲುವಿಗೆ ಪೂರಕವೆನಿಸಲಿದೆ ಎಂದು ಸುರಾನ ಹೇಳಿದರು.

ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ ರಾಜ್ಯದಲ್ಲಿ ಉಡುಪಿ ಜಿಲ್ಲೆಗೆ ವಿಶೇಷ ಸ್ಥಾನಮಾನವಿದೆ. ಜಿಲ್ಲೆಯಾದ್ಯಂತ ಅನುಭವಿ ಕಾರ್ಯಕರ್ತರ ತಂಡವಿದೆ. ಈ ನಿಟ್ಟಿನಲ್ಲಿ ಪಕ್ಷದ ವಿಸ್ತಾರಕ ಯೋಜನೆಯನ್ನು ಸವಾಲಾಗಿ ಸ್ವೀಕರಿಸಬೇಕಾಗಿದೆ. ಪಕ್ಷದ ಹಿರಿಯರು ಮತ್ತು ಎಲ್ಲಾ ಕಾರ್ಯಕರ್ತರ ಸಂಪೂರ್ಣ ಸಹಕಾರದೊಂದಿಗೆ ಪ್ರತೀ ಬೂತ್ ಗಳಿಂದ ನಿಗದಿತ ಮಾಹಿತಿಗಳನ್ನು ಕ್ರೋಢೀಕರಿಸಿ ಪಕ್ಷ ಸಂಘಟನೆಯಲ್ಲಿ ಜಿಲ್ಲೆಯ ಸ್ಥಾನವನ್ನು ಉಳಿಸಿ ಬೆಳೆಸುವಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್, ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಎ. ಸುವರ್ಣ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ, ಮನೋಹರ್ ಎಸ್. ಕಲ್ಮಾಡಿ, ಸದಾನಂದ ಉಪ್ಪಿನಕುದ್ರು, ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ ಮತ್ತು ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply