ಕಾಂಗ್ರೆಸ್ಸಿನ ಸಂವಿಧಾನ ವಿರೋಧಿ ನಡೆಗೆ ಉಡುಪಿ ಜಿಲ್ಲಾ ಬಿಜೆಪಿ ತೀವ್ರ ಖಂಡನೆ; ಜಿಹಾದಿಗಳಿಗೆ ನೈತಿಕ ಬೆಂಬಲ ನೀಡುತ್ತಿರುವ ಕಾಂಗ್ರೆಸ್ಸಿಗೆ ಹಿಂದೂಗಳ ಬಗ್ಗೆ ಕಾಳಜಿ ಯಾಕಿಲ್ಲ?: ಕುಯಿಲಾಡಿ ಸುರೇಶ್ ನಾಯಕ್

ಕೇವಲ ವೋಟ್ ಬ್ಯಾಂಕಿಗಾಗಿ ಒಂದೇ ವರ್ಗವನ್ನು ಓಲೈಸುತ್ತಾ ಸಂವಿಧಾನ ವಿರೋಧಿ, ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಾ ಜಿಹಾದಿಗಳಿಗೆ ನೈತಿಕ ಬೆಂಬಲ ನೀಡುತ್ತಾ ಬಂದಿರುವ ಕಾಂಗ್ರೆಸ್ಸಿಗೆ ಹಿಂದೂಗಳ ಬಗ್ಗೆ ಕಾಳಜಿ ಯಾಕಿಲ್ಲ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪ್ರಶ್ನಿಸಿದ್ದಾರೆ.

ಅವರು ಕಾಂಗ್ರೆಸ್ಸಿನ ಪ್ರಜಾಪ್ರಭುತ್ವ ವಿರೋಧಿ ನೀತಿ ಮತ್ತು ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷ ಹತ್ಯೆಯನ್ನು ಖಂಡಿಸಿ ಫೆ.26ರಂದು ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಪತ್ರಿಕಾ ಹೇಳಿಕೆಯನ್ನು ಬಿಡುಗಡೆಗೊಳಿಸಿ ಈ ಬಗ್ಗೆ ವಿಸ್ತೃತ ವಿವರಣೆ ನೀಡಿದರು.

ನಿರ್ಧಿಷ್ಟ ಕೋಮಿನ ಜನತೆ ನನ್ನ ಸಹೋದರರು ಎಂದು ರಾಜಾರೋಷವಾಗಿ ಬಡಾಯಿ ಕೊಚ್ಚಿಕೊಳ್ಳುತ್ತಿರುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಶಿವಮೊಗ್ಗದಲ್ಲಿ ನಡೆದ ಹಿಂದೂ ಕಾರ್ಯಕರ್ತ ಹರ್ಷ ಅವರ ಅಮಾನುಷ ಹತ್ಯೆಯ ಬಗ್ಗೆ ಗಾಢ ಮೌನ ವಹಿಸಿರುವ ಹಿಂದಿನ ಮರ್ಮವೇನು? ಮತಾಂಧರಿಂದ ಬರ್ಬರ ಹತ್ಯೆಗೀಡಾಗಿರುವ ಹರ್ಷರವರ ಮನೆಗೆ ಕನಿಷ್ಠ ಬೇಟಿ ನೀಡುವ ಸೌಜನ್ಯವಿಲ್ಲದ ಡಿಕೆಶಿ, ಸಿದ್ದರಾಮಯ್ಯ ಮುಂತಾದ ಕಾಂಗ್ರೆಸ್ ನಾಯಕರು ಬರೇ ಸುಳ್ಳು ಹೇಳಿಕೆಗಳನ್ನು ನೀಡುತ್ತಾ ಸಾಮಾಜದ ಸ್ವಾಸ್ಥ್ಯ ಕೆಡಿಸಲು ಹೆಣಗಾಡುತ್ತಿರುವುದು ಶೋಚನೀಯವಾಗಿದೆ.

ಉಭಯ ಸದನಗಳ ಕಲಾಪವನ್ನು ವಿನಾಕಾರಣ ವ್ಯರ್ಥಗೊಳಿಸಿರುವ ಕಾಂಗ್ರೆಸ್ಸಿನ ಸಂವಿಧಾನ ವಿರೋಧಿ ನಡೆಯನ್ನು ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ.

ಶಿವಮೊಗ್ಗದಲ್ಲಿ ಜಿಹಾದಿಗಳಿಗೆ ನಡೆದ ಹಿಂದೂ ಸಂಘಟನೆಯ ಕಾರ್ಯಕರ್ತ ಹರ್ಷ ಅವರ ಹತ್ಯೆಯನ್ನು ಉಡುಪಿ ಜಿಲ್ಲಾ ಬಿಜೆಪಿ ಉಗ್ರವಾಗಿ ಖಂಡಿಸುತ್ತದೆ. ಆರೋಪಿಗಳನ್ನು ಕೂಡಲೇ ಬಂಧಿಸುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರವು ಜನರಲ್ಲಿ ವಿಶ್ವಾಸ ಮೂಡಿಸಿದೆ.

ರಾಜ್ಯ ಸರಕಾರ ಪೊಲೀಸ್ ಇಲಾಖೆಗೆ ಪೂರ್ಣ ಸ್ವಾತಂತ್ರ್ಯ ನೀಡಿದ್ದಲ್ಲದೆ ಇಬ್ಬರು ಉನ್ನತ ಪೊಲೀಸ್ ಅಧಿಕಾರಿಗಳನ್ನು (ಎಡಿಜಿಪಿ) ತಕ್ಷಣವೇ ಸ್ಥಳದಲ್ಲಿ ನಿಯೋಜಿಸಿ ಅಪರಾಧಿಗಳ ಬಂಧನ ಸಾಧ್ಯವಾಗುವಂತೆ ಮಾಡಿದೆ. ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಗಲಭೆಗೆ ಆಸ್ಪದವಾಗದಂತೆ, ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮವನ್ನು ಕೈಗೊಂಡಿದ್ದಾರೆ.

ಜನವಿರೋಧಿ, ಸದನ ವಿರೋಧಿ, ಭಯೋತ್ಪಾದಕರ ಪರ ಇರುವ ಕಾಂಗ್ರೆಸ್ ವಿರುದ್ಧ ಫೆ.27 ಮತ್ತು 28ರಂದು ರಾಜ್ಯಾದ್ಯಂತ ದೊಡ್ಡ ಮಟ್ಟದ ಹೋರಾಟವನ್ನು ಬಿಜೆಪಿ ಹಮ್ಮಿಕೊಂಡಿದೆ.

ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳು ಕಾಂಗ್ರೆಸ್ ಕೂಸು. ಕಾಂಗ್ರೆಸ್‌ನ ಆಡಳಿತಾವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಎಂ ಸಿದ್ದರಾಮಯ್ಯ ಈ ಸಂಘಟನೆಗಳ ವಿರುದ್ಧ ಇದ್ದ ಪ್ರಕರಣಗಳನ್ನು ಹಿಂದಕ್ಕೆ ಪಡೆದಿದ್ದಾರೆ. ಇದರಿಂದ ಈ ಸಂಘಟನೆಗಳು ಹೆಚ್ಚು ಸಕ್ರಿಯವಾಗಿವೆ.

ಕಾಂಗ್ರೆಸ್ ಪಕ್ಷವು ಎಸ್‌ಡಿಪಿಐ, ಪಿಎಫ್ಐ ಜೊತೆಗೂಡಿ ಶೈಕ್ಷಣಿಕ ವಾತಾವರಣವನ್ನು ಹಾಳು ಮಾಡಿದೆ. ಇದನ್ನು ಖಂಡಿಸಿ ಪ್ರತಿಭಟನೆ ನಡೆಯಲಿದೆ. ಕಾಂಗ್ರೆಸ್ ಪಕ್ಷ ಮತ್ತು ಅದರ ಮುಖಂಡರು ಸದನದ ಕಲಾಪ ವ್ಯರ್ಥವಾಗುವಂತೆ ಮಾಡಿದ್ದಾರೆ. ಅವರು ಡಾ! ಅಂಬೇಡ್ಕರ್‌ ವಿರೋಧಿ, ಸಾವರ್ಕರ್ ವಿರೋಧಿ, ಜನವಿರೋಧಿ, ಹಿಂದೂ ವಿರೋಧಿ, ಶಿಕ್ಷಣ ದ್ರೋಹಿ, ಮಹಿಳಾ ವಿರೋಧಿ ಅಲ್ಲದೇ ಮತಾಂತರದ ಪರವಾಗಿದ್ದಾರೆ.

ಶಿವಮೊಗ್ಗದಲ್ಲಿ ಹತ್ಯೆಗೀಡಾದ ಹರ್ಷ ಅವರ ಮನೆಗೆ ಹೋಗಲು ಕಾಂಗ್ರೆಸ್‌ನವರಿಗೆ ಸಮಯ ಇಲ್ಲ. ದೆಹಲಿಗೆ ಹೋಗಲು ಸಮಯ ಇದೆ. ಇದು ಅವರ ಹಿಂದೂ ವಿರೋಧಿ ಮತ್ತು ಭಯೋತ್ಪಾದನಾ ಪರ ಮಾನಸಿಕತೆಗೆ ಸಾಕ್ಷಿಯಾಗಿದೆ.

ಹಿಜಾಬ್ ಪರವಾಗಿ ನಿಂತ ಮತಾಂಧರ ಕೃತ್ಯದಿಂದ ಶಿವಮೊಗ್ಗದ ಹಿಂದೂ ಸಂಘಟನೆ ಕಾರ್ಯಕರ್ತ ಹರ್ಷ ಅವರ ಹತ್ಯೆಯಾಗಿದೆ. ಇದೊಂದು ಪೂರ್ವಯೋಜಿತ ದುಷ್ಕೃತ್ಯ; ಗೋಮುಖ ವ್ಯಾಘ್ರರ ಕೃತ್ಯವಾಗಿದೆ.

ಸುಳ್ಳು ಹೇಳಿಕೆ ನೀಡುತ್ತಿರುವ ಡಿ.ಕೆ. ಶಿವಕುಮಾರ್ ಸುಳ್ಳಿನ ಕುಮಾರ್ ಆಗಿದ್ದಾರೆ. ರಾಷ್ಟ್ರ ಧ್ವಜ ಇಳಿಸಿ ಕೇಸರಿ ಧ್ವಜ ಹಾರಿಸಿದ್ದಾಗಿ ಸುಳ್ಳಿನ ಕಂತೆ ಬಿಚ್ಚಿಟ್ಟಿದ್ದಾರೆ. ಡಿ.ಕೆ. ಶಿವಕುಮಾರ್‌ ಅವರು ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಗೂಂಡಾಗಿರಿ ಹೆಚ್ಚಾಗಿದೆ. ಕಾಂಗ್ರೆಸ್ ಪಕ್ಷದ ಯುವ ಘಟಕಕ್ಕೂ ಗೂಂಡಾಗಿರಿ ಹಿನ್ನೆಲೆಯ ವ್ಯಕ್ತಿಯನ್ನೇ ಅಧ್ಯಕ್ಷರನ್ನಾಗಿ ಮಾಡಲಾಗಿದೆ.

ಕಾಂಗ್ರೆಸ್ ನಾಯಕರಾದ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ನಡುವಿನ ಪೈಪೋಟಿ, ವೈಮನಸ್ಸು, ಒಳಜಗಳ ರಾಜ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಅಧಿಕಾರದಲ್ಲಿ ಇಲ್ಲದ ಹತಾಶೆ, ಆಡಳಿತ ಕಳೆದುಕೊಂಡ ನೋವನ್ನು ಅವರು ಕೋಮು ಗಲಭೆಗಳಿಗಾಗಿ ಬಳಸುತ್ತಿದ್ದಾರೆ.

ಸದನದಲ್ಲಿ ಸಚಿವ ಈಶ್ವರಪ್ಪ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ತಮ್ಮ ನೈಜ ಗೂಂಡಾ ಪ್ರವೃತ್ತಿಯನ್ನು ಮೆರೆದಿದ್ದಾರೆ. ಈ ರೀತಿಯ ದುರ್ವರ್ತನೆ ವಿಧಾನಸಭೆಯಲ್ಲಿ ಮೊದಲನೇ ಬಾರಿಗೆ ನಡೆದಿದೆ. ಜೊತೆಗೆ ಕಾಂಗ್ರೆಸ್ಸಿನ ವಿನಾಕಾರಣ ಧರಣಿಯಿಂದ ಕಲಾಪಗಳು ಬಲಿ ಆಗಿವೆ.

ಸದನಕ್ಕೆ ರಾಷ್ಟ್ರ ಧ್ವಜವನ್ನು ತಂದು ಧ್ವಜ ನೀತಿಯನ್ನು ಕಾಂಗ್ರೆಸ್ ಪಕ್ಷ ಉಲ್ಲಂಘಿಸಿದೆ. ಪಕ್ಷದ ನಾಯಕರ ದುರ್ವರ್ತನೆಗೆ ಇದು ಜ್ವಲಂತ ಸಾಕ್ಷಿಯಾಗಿದೆ.

ಬಿಜೆಪಿ ಸ್ಥಾಪನೆಯಾದಂದಿನಿಂದ ಇಂದಿನವರೆಗೂ ದೇಶಭಕ್ತಿ, ರಾಷ್ಟ್ರದ ಸಂಸ್ಕೃತಿ, ಪುನರುತ್ಥಾನಕ್ಕೆ ಮತ್ತು ರಾಷ್ಟ್ರ ಧ್ವಜಕ್ಕೆ ಗೌರವ ನೀಡುವ ನಿಟ್ಟಿನಲ್ಲಿ ಶ್ರಮಿಸಿದ ಪಕ್ಷ. ಕಾಂಗ್ರೆಸ್ ಪಕ್ಷ ಜಮ್ಮು ಮತ್ತು ಕಾಶ್ಮೀರಕ್ಕೆ ಒಂದು ನೀತಿ ಮತ್ತು ಭಾರತದ ಇತರ ಭಾಗಗಳಿಗೆ ಇನ್ನೊಂದು ನೀತಿಯನ್ನು ಜಾರಿಗೊಳಿಸಿದ್ದರೆ ಅದನ್ನು ಜನಸಂಘ ಮತ್ತು ಬಿಜೆಪಿ ಸದಾ ಖಂಡಿಸಿದ್ದವು. ಈ ಹೆಮ್ಮೆ ನಮ್ಮ ಕಾರ್ಯಕರ್ತರು ಮತ್ತು ಮುಖಂಡರಿಗೆ ಸಲ್ಲುತ್ತದೆ. ಈ ಹಿಂದೆ ಹುಬ್ಬಳ್ಳಿಯಲ್ಲಿ ರಾಷ್ಟ್ರಧ್ವಜ ಹಾರಿಸದಂತೆ ಕಾಂಗ್ರೆಸ್ ಗೋಲಿಬಾರ್ ನಡೆಸಿರುವುದು ಇತಿಹಾಸ.

ವಿಧಾನಸಭೆ ಸದನದಲ್ಲಿ ವಿಷಯ ಇಲ್ಲದೇ ಇದ್ದರೂ ಕಾಂಗ್ರೆಸ್ ವೃಥಾ ಗದ್ದಲವೆಬ್ಬಿಸಿ ಕಲಾಪವನ್ನು ವ್ಯರ್ಥಗೊಳಿಸಿದೆ. ಇದರಿಂದ ಬೊಕ್ಕಸಕ್ಕೆ ಅನಗತ್ಯ ಹೊರೆಯಾಗಿದೆ. ರಾಜ್ಯದ ಅಭಿವೃದ್ಧಿ, ಬಜೆಟ್ ಪೂರ್ವಭಾವಿ ಚರ್ಚೆ, ಕೋವಿಡೋತ್ತರ ಬೆಳವಣಿಗೆ ಸೇರಿದಂತೆ ಮಹತ್ವದ ವಿಚಾರಗಳ ಚರ್ಚೆಗೆ ಕಾಂಗ್ರೆಸ್ ಅವಕಾಶವನ್ನೇ ನೀಡಲಿಲ್ಲ.

ಸದನ ನಡೆಯದಂತೆ ಪೂರ್ವನಿಯೋಜಿತವಾಗಿ ಧರಣಿ ನಡೆಸಿರುವ ಕಾಂಗ್ರೆಸ್ ಪಕ್ಷವು ಹಿಜಾಬ್ ಕುರಿತ ಚರ್ಚೆಗೆ ಅವಕಾಶವಾಗದಂತೆ ನೋಡಿಕೊಂಡಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಶಿವಮೊಗ್ಗದಲ್ಲಿ ನಡೆದ ಹತ್ಯೆಯ ಸಂಬಂಧ ಸುಳ್ಳು ಮಾಹಿತಿಯ ಟ್ವೀಟ್‌ಗಳ ಮೂಲಕ ಜನರ ದಾರಿ ತಪ್ಪಿಸಿ ಕೋಮು ದ್ವೇಷಕ್ಕೆ ಕಾರಣರಾಗಿದ್ದಾರೆ. ಮಾತ್ರವಲ್ಲದೆ ಪರಿಸ್ಥಿತಿಯ ಉದ್ವಿಗ್ನತೆಗೆ ಕಾರಣವಾಗುವಂತೆ ವರ್ತಿಸಿದ್ದಾರೆ.

ನಿಗದಿತ ಶಾಲಾ ಕಾಲೇಜಿನಲ್ಲಿ ತ್ರಿವರ್ಣ ಧ್ವಜವನ್ನು ಕೆಳಕ್ಕಿಳಿಸಿ ಕೇಸರಿ ಧ್ವಜವನ್ನು ಹಾರಿಸಲಾಗಿದೆ ಎಂಬ ಅಪ್ಪಟ ಸುಳ್ಳಿನ ಮೂಲಕ ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ವಿಷಬೀಜ ಬಿತ್ತುವ ಕುಕೃತ್ಯ ಮಾಡಿದ್ದಾರೆ ಎಂದು ಕುಯಿಲಾಡಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ರವಿ ಅಮೀನ್, ಶ್ರೀಶ ನಾಯಕ್, ಸುಪ್ರಸಾದ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ, ಮನೋಹರ್ ಎಸ್. ಕಲ್ಮಾಡಿ, ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಜಿಲ್ಲಾ ಸಹ ವಕ್ತಾರರಾದ ಶಿವಕುಮಾರ್ ಅಂಬಲಪಾಡಿ, ಗಿರೀಶ್ ಎಮ್. ಅಂಚನ್, ಪ್ರತಾಪ್ ಶೆಟ್ಟಿ ಚೇರ್ಕಾಡಿ, ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್ ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply