ವಿಮಾನ ತಯಾರಿಕೆ ಘಟಕಕ್ಕೆ ಶಂಕುಸ್ಥಾಪನೆ

ಭಾರತದ ಟಾಟಾ ಗ್ರೂಪ್‌ ಹಾಗೂ ಯುರೋಪಿನ ಏರ್‌ಬಸ್‌ ಸಂಸ್ಥೆಗಳ ಸಹಭಾಗಿತ್ವದಲ್ಲಿನ ವಿಮಾನ ತಯಾರಿಕೆ ಘಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ವಡೋದರಾದಲ್ಲಿ ಶಂಕುಸ್ಥಾಪನೆ ನೆರವೇರಿಸಿರುವುದು ವಾಯುಯಾನ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವತ್ತ ಭಾರತದ ಬೃಹತ್‌ ನೆಗೆತ ಎಂದೇ ನಿಶ್ಚಿತವಾಗಿಯೂ ಪರಿಗಣಿಸಬಹುದಾಗಿದೆ. ಸಿ-295 ಮಿಲಿಟರಿ ಸಾರಿಗೆ ವಿಮಾನಗಳನ್ನು ತಯಾರಿಸುವ ಈ ಸೌಲಭ್ಯವು ದೇಶದ ರಕ್ಷಣಾ ಕೈಗಾರಿಕಾ ವಲಯದ ಬೆಳವಣಿಗೆಗೆ ಬಲವರ್ಧನೆ ತಂದುಕೊಡಲಿದೆ. ಅಲ್ಲದೆ, ವಿಮಾನವನ್ನು ತಯಾರಿಸಬಲ್ಲ ಕೆಲವೇ ದೇಶಗಳ ಗುಂಪಿಗೆ ಭಾರತಸೇರ್ಪಡೆಗೊಳ್ಳಲಿದೆ.

ಈ ಸರಕು ಸಾಗಣೆ ವಿಮಾನಗಳನ್ನು ಏರ್‌ಬಸ್‌ ಸಂಸ್ಥೆಯು ಸ್ಪೇನ್‌ನಲ್ಲಿ ತಯಾರಿಸುತ್ತದೆ. ಇನ್ನು ಮುಂದೆ ವಡೋದರಾ ಘಟಕದಲ್ಲಿ ವಿಮಾನ ತಯಾರಿಕೆಯ ಶೇ. 96ರಷ್ಟು ಕಾರ್ಯವನ್ನು ಕೈಗೊಳ್ಳಲಾಗುತ್ತದೆ. ವಿಮಾನ ತಯಾರಿಕೆಗೆ ಬೇಕಾದ 13,400
ಬಿಡಿಭಾಗಗಳು, ಮಹತ್ವದ ಘಟಕಗಳ ಜೋಡಣೆಗಳನ್ನು ದೇಶದ 25 ಅತಿಚಿಕ್ಕ, ಚಿಕ್ಕ ಮತ್ತು ಮಧ್ಯಮ ಉದ್ದಿಮೆಗಳೇ ತಯಾರಿಸಿ ಒದಗಿಸುವ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಒಪ್ಪಂದದಡಿಯಲ್ಲಿ ಭಾರತೀಯ ವಾಯುಪಡೆಗೆ ಸರಬರಾಜು ಮಾಡಲಿರುವ 56
ವಿಮಾನಗಳು ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ ಮತ್ತು ಭಾರತ್‌ ಡೈನಾಮಿಕ್ಸ್‌ ಲಿಮಿಟೆಡ್‌ನಿಂದ ತಯಾರಿಸಲ್ಪಡುವ ಸ್ಥಳೀಯ ಎಲೆಕ್ಟ್ರಾನಿಕ್‌ ಯುದ್ಧ ಸಾಮಗ್ರಿಗಳೊಂದಿಗೆ ಅಳವಡಿಸಲ್ಪಡುತ್ತವೆ. ಹೀಗಾಗಿ, ಉನ್ನತ ತಂತ್ರಜ್ಞಾನ ಮತ್ತು ತೀವ್ರ ಸ್ಪರ್ಧೆ ಇರುವ
ವಾಯುಯಾನ ಉದ್ಯಮವನ್ನು ಪ್ರವೇಶಿಸಲು ಭಾರತೀಯ ಖಾಸಗಿ ವಲಯಕ್ಕೆ ಅನನ್ಯ ಅವಕಾಶವನ್ನು ವಡೋದರಾದ ಈ ಘಟಕವು ಒದಗಿಸುತ್ತದೆ ಎಂದೇ ನಿರೀಕ್ಷಿಸಲಾಗಿದೆ.

ಟಾಟಾ ಸಂಸ್ಥೆಯು ಕಾರು, ಲಾರಿ ಮುಂತಾದ ವಾಹನ ತಯಾರಿಕೆಯಲ್ಲಿ ಸಾಕಷ್ಟು ಪರಿಣತಿ ಗಳಿಸಿದ್ದು, ಭಾರತ ಮಾತ್ರವಲ್ಲದೆ ವಿದೇಶಗಳಿಗೂ ತನ್ನ ಉತ್ಪನ್ನಗಳನ್ನು ರವಾನಿಸುವಷ್ಟು ಹೆಸರು ಮತ್ತು ಬೇಡಿಕೆ ಗಳಿಸಿದೆ. ಫೋರ್ಡ್‌ ಮೋಟರ್‌ ಕಂಪನಿಯಿಂದ ಜಾಗ್ವಾರ್‌ ಮತ್ತು ಲ್ಯಾಂಡ್‌ ರೋವರ್‌ ಕಾರು ತಯಾರಿಕೆ ಘಟಕಗಳನ್ನು 2008ನೇ ಇಸ್ವಿಯಲ್ಲಿ ಖರೀದಿಸಿತ್ತು. ಭಾರತೀಯ ರಾಷ್ಟ್ರೀಯ ವಾಹಕ ಎಂದೇ ಪರಿಗಣಿಸಲಾದ ಏರ್‌ ಇಂಡಿಯಾವನ್ನು ಭಾರತ ಸರ್ಕಾರದಿಂದ 18 ಸಾವಿರ ಕೋಟಿ ರೂಪಾಯಿಗೆ ಖರೀದಿಸಿ ವೈಮಾನಿಕ ಕ್ಷೇತ್ರವನ್ನು ಈ ಮೊದಲೇ ಪ್ರವೇಶಿಸಿದ್ದು, ಈಗ ವಿಮಾನ ತಯಾರಿಕೆಗೂ ದಾಪುಗಾಲು ಹಾಕುತ್ತಿದೆ.

ಮಿಲಿಟರಿ ಸಾರಿಗೆ ವಿಮಾನ ಉದ್ಯಮವು 2030ರ ವೇಳೆಗೆ 45 ಶತಕೋಟಿ ಡಾಲರ್‌ (3,70,295 ಕೋಟಿ ರೂಪಾಯಿ) ತಲುಪುವ ನಿರೀಕ್ಷೆ ಇದೆ. ವಡೋದರಾ ಘಟಕವು 2031ರವರೆಗೆ ಭಾರತೀಯ ವಾಯುಪಡೆಗೆ ವಿಮಾನ ತಯಾರಿಸುವ ಬದ್ಧತೆಯನ್ನು
ಹೊಂದಿದ್ದು, ತದನಂತರ ತನ್ನ ಸರಕುಗಳನ್ನು ಇತರ ದೇಶಗಳಿಗೆ ರಫ್ತು ಮಾಡಬಹುದಾಗಿದೆ. ಪ್ರಸ್ತುತ ಭಾರತದಲ್ಲಿ ವಾಯುಯಾನ ಕ್ಷೇತ್ರ ತೀವ್ರಗತಿಯಲ್ಲಿ ಬೆಳೆಯುತ್ತಿದೆ. ದೇಶದ ಮೂಲೆಮೂಲೆಗಳಲ್ಲೂ ವಿಮಾನ ನಿಲ್ದಾಣಗಳು ತಲೆಎತ್ತುತ್ತಿದ್ದು ವಿಮಾನ ಯಾನ ಕೈಗೊಳ್ಳುವವರ ಸಂಖ್ಯೆ ಮಿತಿಯಿಲ್ಲದೆ ಹೆಚ್ಚುತ್ತಿದೆ. ಇದರಿಂದಾಗಿ ವಿಮಾನಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುವುದರಲ್ಲಿಯೂ ಭಾರತ ಮುಂಚೂಣಿಯಲ್ಲಿದೆ. ಭಾರತದಲ್ಲಿ ವಿಮಾನ ತಯಾರಿಕೆಗೆ ಸರ್ಕಾರ ಕೈಗೊಂಡಿರುವ ಈ
ಕ್ರಮವು ಈ ಆಮದು ಅವಲಂಬನೆಯನ್ನು ಮುಂದಿನ ದಿನಗಳಲ್ಲಿ ಕಡಿಮೆ ಮಾಡಲು ಕಾರಣವಾಗಬಹುದಾಗಿದೆ. ವಡೋದರಾ ಘಟಕವು ಭಾರತದ ಜನರಿಗೆ ಉದ್ಯೋಗವನ್ನು ಒದಗಿಸುವುಲ್ಲದೆ, ರಫ್ತಿನ ಮೂಲಕ ವಿದೇಶಿ ವಿನಿಮಯವನ್ನು ತಂದುಕೊಡಲಿದೆ
ಎಂದು ಅಪೇಕ್ಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮೋದಿ ಅವರು ತಮ್ಮ ಭಾಷಣದಲ್ಲಿ ‘ಮೇಕ್‌ ಇನ್‌ ಇಂಡಿಯಾ: ಮೇಕ್‌ ಫಾರ್‌ ಗ್ಲೋಬ್‌’ (ಭಾರತದಲ್ಲಿ ತಯಾರಿಸಿ; ಜಗತ್ತಿಗಾಗಿ ತಯಾರಿಸಿ) ಎಂಬ ಘೋಷಣೆ ಮಾಡಿರುವುದು ಸಮಂಜಸವಾಗಿಯೇ ಇದೆ.

 
 
 
 
 
 
 
 
 
 
 

Leave a Reply