ಪೇಜಾವರ ಶ್ರೀ ಭೇಟಿ ಮಾಡಿದ ಆಂಧ್ರ ಪ್ರದೇಶ ಧಾರ್ಮಿಕ ದತ್ತಿ ಮಂತ್ರಿ

ಬೆಂಗಳೂರು: ಆಂಧ್ರಪ್ರದೇಶದ ಧಾರ್ಮಿಕ ದತ್ತಿ ಮಂತ್ರಿ ವೇಲಂಪಳ್ಳಿ ಶ್ರೀನಿವಾಸ ರಾವ್ ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠಕ್ಕೆ ಸೋಮವಾರ ಆಗಮಿಸಿ ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರ ಭೇಟಿ ಮಾಡಿದರು. 

ಇತ್ತೀಚೆಗೆ ಆಂಧ್ರದಲ್ಲಿ ನಡೆಯುತ್ತಿರುವ ಸರಣಿ ಹಿಂದೂ ವಿರೋಧಿ ಕೃತ್ಯಗಳು , ದೇವಾಲಯ ಹಾಗೂ ಹಿಂದೂ ದೇವತೆಗಳ ವಿಗ್ರಹ ಹಾನಿ ಪ್ರಕರಣಗಳ ಹಿನ್ನೆಲೆ ಶ್ರೀಗಳು ಕಳೆದ ವಾರವಷ್ಟೆ ಹಾನಿಗೊಂಡ ಪ್ರದೇಶಗಳಿಗೆ ಭೇಟಿ ನೀಡಿ ಗಂಭೀರ ಕಳವಳ ವ್ಯಕ್ತಪಡಿಸಿದ್ದರು .‌ ಈ ಹಿನ್ನೆಲೆ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಯ ಸೂಚನೆಯ ಮೇರೆಗೆ ಶ್ರೀನಿವಾಸ ರಾವ್ ಶ್ರೀಗಳನ್ನು ಭೇಟಿ ಮಾಡಿದ್ದು, ಈ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಿದರು .

ಈ ವೇಳೆ ಶ್ರೀಗಳು ಈ ಘಟನೆಗಳಿಗೆ ಕಿಡಿಗೇಡಿಗಳೋ ,ರಾಜಕೀಯ ವೈಷಮ್ಯವೋ ಅಥವಾ ಯಾವುದೇ ಕಾರಣವಾದರೂ ಮುಂದೆ ಅದು ಮತೀಯ ಗಲಭೆಗೆ ತಿರುವು ಪಡೆದು ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಗೆ ಕದಡುವ ಸಾಧ್ಯತೆ ಇದೆ. ಈಗ ಕೆಲವೇ ಪ್ರಕರಣಗಳಿಗೆ ಸಂಬಂಧಿಸಿ ಮಾತ್ರ ಅಪರಾಧಿಗಳನ್ನು ಪತ್ತೆಹಚ್ಚಲಾಗಿದ್ದು, ಉಳಿದ ಪ್ರಕರಣಗಳ ಬಗ್ಗೆಯೂ ಗಂಭೀರ ತನಿಖೆ ನಡೆಸಿ ಶಿಕ್ಷೆ ವಿಧಿಸಬೇಕು .ರಾಜ್ಯದಲ್ಲಿ ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆಯಾಗದಂತೆ ಎಚ್ಚರವಹಿಸಬೇಕು . ಈಗ ಆಕ್ರಮಣಕ್ಕೊಳಗಾದ ದೇಗುಲಗಳ ಪುನರ್ನಿರ್ಮಾಣವನ್ಬು ಸರಕಾರವೇ ಮಾಡಬೇಕು.ಯಾವುದೇ ದೇವಾಲಯಗಳಲ್ಲಿ ಹಿಂದೂ ವಿರೋಧಿ ಕೃತ್ಯಗಳಿಗೆ ಆಸ್ಪದ ನೀಡಬಾರದು.ದೇವಾಲಯಗಳಿಗೆ ಸಂಬಂಧಿಸಿದ ಸ್ಥಿರಾಸ್ತಿಗಳ ಸೂಕ್ತ ದಾಖಲೆ ಮಾಡಿಸಿ ಸಂರಕ್ಷಿಸಬೇಕು.ಸಾಧ್ಯವಾದಷ್ಟು ಆಯಾ ದೇಗುಲಗಳ ವ್ಯಾಪ್ತಿಯ ಸ್ಥಳೀಯರಿಗೇ ಅವುಗಳ ನಿರ್ವಹಣೆ ಜವಾಬ್ದಾರಿ ಕೊಡಬೇಕು ಎಂಬ ಸಲಹೆಗಳನ್ನು ನೀಡಿದರು . 

 

ಇದಕ್ಕೆ ಉತ್ತರಿಸಿದ ಸಚಿವರು ಸದ್ಯ ಪರಿಸ್ಥಿತಿ ತಹಬಂದಿಗೆ ತರಲಾಗಿದ್ದು ಎಲ್ಲಾ ಪ್ರಕರಣಗಳ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು . ಹಾನಿಗೊಂಡ ದೇವಾಲಯಗಳನ್ನು ಸರಕಾರವೇ ದುರಸ್ತಿಗೊಳಿಸುತ್ತದೆ ‌ ಮುಂದೆ ರಾಜ್ಯದ ಯಾವುದೇ ದೇವಾಲಯಗಳ ಮೇಲೆ ಇಂಥಹ ಆಕ್ರಮಣ ನಡೆಯಬಾರದು ಒಂದು ವೇಳೆ ನಡೆದರೂ ಆರೋಪಿಗಳ ಶೀಘ್ರ ಪತ್ತೆಗೆ ಅತ್ಯಾಧುನಿಕ ತಾಂತ್ರಿಕ ವ್ಯವಸ್ಥೆಯನ್ನು ( ಜಿಪಿಎಸ್) ಅಳವಡಿಸಲಾಗುವುದು ಎಂದರು. ಭಗ್ನಗೊಂಡ ದೇವಾಲಯಗಳಿಗೆ ದುರಸ್ತಿಯ ನಂತರ ಭೇಟಿ ಕೊಡಬೇಕೆಂದೂ ಶ್ರೀಗಳಲ್ಲಿ ವಿನಂತಿಸಿದರು . 

 

 ಸರಕಾರದ ಅಧಿಕಾರಿಗಳು , ತಿರುಮಲ ತಿರುಪತಿ ದೇವಸ್ಥಾನದ ವಿಶ್ವಸ್ಥ ಹಾಗೂ ಶ್ರೀಗಳ ಆಪ್ತ ಡಿ ಪಿ ಅನಂತ್ ಉಪಸ್ಥಿತರಿದ್ದರು .

 
 
 
 
 
 
 
 
 
 
 

Leave a Reply