ಶ್ರೀ ವಿಶ್ವೇಶತೀರ್ಥಶ್ರೀಪಾದರು ಯುಗದ ಋಷಿ : ಯೋಗಗುರು ಬಾಬಾ ರಾಮ್ ದೇವ್

ಭಾರತದ ಧೀಮಂತ ಅಧ್ಯಾತ್ಮಿಕ ಪರಂಪರೆ ಮತ್ತು ಆರ್ಷ ಸಂಸ್ಕೃತಿಯ ಎಲ್ಲ ಶ್ರೇಷ್ಠ ಗುಣ ವಿಶೇಷಗಳ ಅಪೂರ್ವ ಸಂಗಮ ವಾಗಿದ್ದ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಕೇವಲ ಓರ್ವ ಸಾಮಾನ್ಯ ಸಂತರಾಗಿರದೇ ಯುಗದ ಋಷಿಗಳಾಗಿದ್ದಾರೆ ಎಂದು ಅಂತಾರಾಷ್ಟ್ರೀಯ ಖ್ಯಾತಿಯ ಯೋಗ ಗುರು ಬಾಬಾ ರಾಮ್ ದೇವ್ ಬಣ್ಣಿಸಿದ್ದಾರೆ.
ಶ್ರೀ ವಿಶ್ವೇಶತೀರ್ಥ ಸೇವಾ ಸಂಘದ ಸಂಯೋಜನೆಯಲ್ಲಿ ನಾಡಿನ ಅನೇಕ ಗಣ್ಯರಿಂದ ಶ್ರೀಗಳವರ ಒಡನಾಟ ಗಳನ್ನು ಸ್ಮರಿಸಿಕೊಳ್ಳುವ ಪ್ರಯುಕ್ತ ನಡೆಯುತ್ತಿರುವ ಶ್ರೀ ವಿಶ್ವೇಶ ವಿಶ್ವದರ್ಶನ ಎಂಬ ಆನ್ ಲೈನ್ ಉಪನ್ಯಾಸ ಸರಣಿಯಲ್ಲಿ ರಾಮ್ ದೇವ್ ಜೀ ಯವರು ಶನಿವಾರ ಭಾಗವಹಿಸಿ ಸುಮಾರು ಮುಕ್ಕಾಲು ಘಂಟೆ ಉಪನ್ಯಾಸ ನೀಡಿ ಶ್ರೀಗಳ ಬಗ್ಗೆ ಅಭಿಮಾನದ ಮಾತುಗಳನ್ನಾಡಿದರು .

ಸುಮಾರು 18 ವರ್ಷಗಳಿಂದ ಹರಿದ್ವಾರದಲ್ಲಿ ಪತಂಜಲಿ ಯೋಗಪೀಠವನ್ನು ಪ್ರಾರಂಭಿಸಿದಂದಿನಿಂದಲೂ ನಿರಂತರವಾಗಿ ತನ್ನ ಮೇಲೆ ವಾತ್ಸಲ್ಯಪೂರ್ಣ ಮಾರ್ಗದರ್ಶನವನ್ನು ಧಾರೆಯೆರೆದಿದ್ದಾರೆ. ಭ್ರಷ್ಟಾಚಾರ ಹಾಗೂ ಕಪ್ಪು ಹಣದ ವಿರುದ್ಧ ರಾಷ್ಟ್ರವ್ಯಾಪಿ ಹಮ್ಮಿಕೊಂಡ ಆಂದೋಲನದಲ್ಲಿಯೂ ಭಾಗವಹಿಸಿ ಧೈರ್ಯ ಉತ್ಸಾಹಗಳನ್ನು ಮನಸಾರೆ ತುಂಬಿದ್ದನ್ನು ಮರೆಯಲಾರೆ. ಇವತ್ತು ಯಾವುದೇ ಸಂತರನ್ನು ಯಾವ ಜಾತಿ ಎಂದು ತಿಳಿದು ಮಣೆ ಹಾಕುವ ಪರಿಸ್ಥಿತಿ ಇದೆ. ಆದರೆ ಶ್ರೀಗಳು ಯಾವತ್ತೂ ತನ್ನ ಜಾತಿ ಯಾವುದೆಂದು ಕೇಳಿಯೇ ಇಲ್ಲ.

ಆದರೆ ಅವರು ತನಗೆ ಕೊಟ್ಟ ಪ್ರೀತಿ ಮಮತೆಗೆ ಪರ್ಯಾಯವೇ ಇಲ್ಲ ಎಂದ ರಾಮ್ ದೇವ್ ಅಧ್ಭುತವಾದ ವಿದ್ವತ್ತು, ವಿನಯ, ವೀರತ್ವ ಪರಿಶುದ್ಧ ಚಾರಿತ್ರ್ಯ, ಸಜ್ಜನಿಕೆ, ಸ್ವಧರ್ಮನಿಷ್ಠೆ, ಪರಧರ್ಮ ಸಹಿಷ್ಣುತೆ, ಮಗುವಿನಂಥ ಮುಗ್ಧತೆ, ಸ್ವಾಧ್ಯಾಯ, ತಪಸ್ಸು ಮೊದಲಾದ ಶ್ರೇಷ್ಠ ಗುಣಗಳನ್ನು ಹೊಂದಿದ್ಧ ಶ್ರೀಗಳು ವರ್ತಮಾನ ಭಾರತದ ಎಲ್ಲ ಸಾಧು ಸಂತರಿಗೆ ಉತ್ತಮ ಆದರ್ಶವಾಗಿದ್ದಾರೆ ಎಂದರು . ನಾವೆಲ್ಲರೂ ಅವರ ಅಧ್ಯಾತ್ಮಿಕ ಶಿಷ್ಯತ್ವ ಪಡೆದ ಭಾಗ್ಯಶಾಲಿಗಳು. ಅವರ ಚಿಂತನೆ, ಜೀವನ ದೃಷ್ಟಿ , ಧ್ಯೇಯದೆಡೆಗಿನ ನಿರ್ಭೀತ ನಡೆಗಳಲ್ಲೆಲ್ಲ ಅವರಲ್ಲಿ ಓರ್ವ ದಾರ್ಶನಿಕರನ್ನು ಕಂಡಿದ್ದೇನೆ . ನನ್ನ ಎಲ್ಲ ಕರ್ತವ್ಯಗಳ ಹೊತ್ತಲ್ಲಿ ನರಂತರವಾಗಿ ಅವರನ್ನು ಸ್ಮರಿಸುತ್ತಿದ್ದೇನೆ.

ಉಡುಪಿ ಕೃಷ್ಣ ಮಠ, ಮತ್ತು ಅಷ್ಟ ಮಠಗಳಿಗೆ ಜಾಗತಿಕ ಮಾನ್ಯತೆಯನ್ನು ತಮ್ಮ ಕರ್ತವ್ಯ ಸಾಧನೆ ಸೇವಾ ಕಾರ್ಯಗಳಿಂದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ತಂದಿದ್ದಾರೆ. ಅವರ ಶಿಷ್ಯ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರೂ ಗುರುಗಳಂತೆಯೇ ಎಲ್ಲ ಶ್ರೇಷ್ಠ ಗುಣಗಳನ್ನು ಹೊಂದಿದ್ದಾರೆ. ಇತ್ತೀಚೆಗೆ ಹರಿದ್ವಾರದ ಪತಂಜಲಿ ಯೋಗ ಪೀಠಕ್ಕೆ ಶ್ರೀಗಳು ಭೇಟಿ ನೀಡಿದಾಗಲೂ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರೇ ಭೇಟಿ ನೀಡಿದಷ್ಟು ಸಂತಸ ವಾಗಿದೆ.

ಪೇಜಾವರ ಮಠ ಮತ್ತು ಪತಂಜಲಿ ಯೋಗಪೀಠದೊಂದಿಗಿನ ಈ ಬಾಂಧವ್ಯ ಇದೇರೀತಿ ಮುಂದುವರೆಯಬೇಕು ಎಂದು ಆಶಿಸಿದ ರಾಮ್ ದೇವ್ ಬಾಬಾ ಶ್ರೀ ವಿಶ್ವೇಶತೀರ್ಥ ಶ್ರೀಗಳ ದಿವ್ಯ ಆದರ್ಶಗಳನ್ನು ಚಿಂತನೆಗಳ ಸಾಕಾರಕ್ಕೆ ಶ್ರೇಷ್ಢ ಭಾರತ ನಿರ್ಮಾಣಕ್ಕೆ ನಾವೆಲ್ಲ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.  ಸಾನ್ನಿಧ್ಯ ವಹಿಸಿದ್ದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ರಾಮ್ ದೇವ್ ಅವರು ಗುರುಗಳ ಬಗ್ಗೆ ಅಭಿಮಾನದ ಮಾತುಗಳನ್ನಾಡಿರುವುದಕ್ಕೆ ಮತ್ತು ಹರಿದ್ವಾರದ ಇತ್ತೀಚಿನ ತಮ್ಮ ಭೇಟಿಯ ವೇಳೆ ತಮಗೆ ನೀಡಿದ ಆದರಾತಿಥ್ಯಗಳಿಗೆ ಅತೀವ ಸಂತಸ ವ್ಯಕ್ತಪಡಿಸಿದರು.

ವಿದ್ವಾಂಸರಾದ ಬದರೀನಾಥ ಆಚಾರ್ಯ ವೇಂಕಟೇಶ ಆಚಾರ್ಯರು ಕಾರ್ಯಕ್ರಮ‌ ಸಂಯೋಜಿಸಿ ನಿರೂಪಿಸಿ ದರು. ಸುಧೀಂದ್ರ ಆಚಾರ್ಯ ವಂದನಾರ್ಪಣೆಗೈದರು. ಪತಂಜಲಿ ಯೋಗ ಪೀಠದ ಕರ್ನಾಟಕ ರಾಜ್ಯ ಪ್ರಭಾರಿ ಭವರ್ ಲಾಲ್ ಜೀ ಆರ್ಯ, ಶ್ರೀಗಳ ಆಪ್ತಕಾರ್ಯದರ್ಶಿ ಕೃಷ್ಣ ಭಟ್ ವಿಷ್ಣುಮೂರ್ತಿ ಆಚಾರ್ಯ ಸಹಕರಿ ಸಿದರು. ದೇಶಾದ್ಯಂತ ಪೇಜಾವರ ಶ್ರೀಗಳ ಸುಮಾರು 30 ಸಾವಿರಕ್ಕೂ ಅಧಿಕ ಭಕ್ತರು ಅಭಿಮಾನಿಗಳು ಆನ್ ಲೈನ್ ಮೂಲಕ ಈ ಕಾರ್ಯಕ್ರಮ ವೀಕ್ಷಿಸಿದರು .

 
 
 
 
 
 
 
 
 
 
 

Leave a Reply