ಉಡುಪಿ : ಪೌರಕಾರ್ಮಿಕರ ದಿನಾಚರಣೆ

ಉಡುಪಿ : ಉಡುಪಿಯಲ್ಲಿ ಪೌರ ಕಾರ್ಮಿಕರಿಗೆ ನೀಡಲಾಗುತ್ತಿರುವ ವಿವಿಧ ಭತ್ಯೆಗಳನ್ನು ಹೆಚ್ಚಳ ಮಾಡುವಂತೆ ಸರಕಾರಕ್ಕೆ ಮನವಿಯನ್ನು ಸಲ್ಲಿಸಲಾಗಿದೆ ಎಂದು ಉಡುಪಿ ನಗರಸಭೆಯ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್ ಹೇಳಿದರು.

 ನಗರದ ಅಜ್ಜರಕಾಡಿನ ಶ್ರೀ ಆರೂರು ಲಕ್ಷ್ಮೀನಾರಾಯಣ ಪುರಭವನದಲ್ಲಿ ಆಯೋಜಿಸಲಾದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಉಡುಪಿ ನಗರದಲ್ಲಿ ಒಟ್ಟು 293 ಪೌರಕಾರ್ಮಿಕರಿದ್ದು, ಇವರು ಪ್ರತಿನಿತ್ಯ ನಗರದ ಸ್ವಚ್ಛತೆಗೆ ಆದ್ಯತೆಯನ್ನು ನೀಡುತ್ತಿದ್ದಾರೆ. ಅವರ ಭತ್ಯೆಗಳನ್ನು ಹೆಚ್ಚಿಸುವುದು ಅಷ್ಟೇ ಅಲ್ಲದೇ ಬೆಳಗ್ಗಿನ ಉಪಹಾರದ ಭತ್ಯೆಯನ್ನೂ ಸಹ ಹೆಚ್ಚಿಸುವಂತೆ ಮನವಿಯನ್ನು ಸಲ್ಲಿಸಲಾಗಿದೆ ಎಂದರು.

ಕಾರ್ಮಿಕರು ಕೆಲಸದ ವೇಳೆಯಲ್ಲಿ ಅಜಾಗರೂಕತೆ ಮತ್ತು ನಿರ್ಲಕ್ಷವಹಿಸದೆ ಕಾರ್ಯನಿರ್ವಹಿಸಬೇಕು, ಕಾರ್ಮಿಕರು ಕರ್ತವ್ಯಕ್ಕೆ ಹೆಚ್ಚು ಗೈರು ಹಾಜರಾಗದೆ ಉಡುಪಿ ನಗರ ಸಭೆ ದೇಶದಲ್ಲಿಯೇ ಉತ್ತಮ ನಗರ ಸಭೆಯಾಗಿ ಗುರುತಿಸಿಕೊಳ್ಳುವಂತೆ ಕರ್ತವ್ಯ ನಿರ್ವಹಿಸಬೇಕು ಎಂದರು.

ಕಾಯಕವೇ ಕೈಲಾಸ ಎಂಬಂತೆ ದುಡಿಯುತ್ತಾ ಮನೆ, ನಗರ, ರಾಷ್ಟ್ರವನ್ನು ಸ್ವಚ್ಛವಾಗಿಸುವುದಲ್ಲದೆ ಜಿಲ್ಲೆಗೆ ಮತ್ತು ರಾಜ್ಯಕ್ಕೆ ಸ್ವಚ್ಛತೆಯ ಹೆಸರನ್ನು ತಂದುಕೊಡುವ ಪೌರಕಾರ್ಮಿಕರ ಬದುಕನ್ನು ಹಸನಾಗಿಸುವುದು ನಮ್ಮ ಹೊಣೆಯಾಗಿದೆ ಎಂದು ಉಡುಪಿ ನಗರಾಭಿವೃದ್ಧಿ ಕೋಶಯೋಶದ ಯೋಜನಾ ನಿರ್ದೇಶಕಿ ಪ್ರತಿಭಾ ಹೇಳಿದರು.

 ಪೌರಕಾರ್ಮಿಕರ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಅವರ ಬದುಕನ್ನು ಹಸನಾಗಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಪೌರಕಾರ್ಮಿಕರ ಮಕ್ಕಳು ಶೈಕ್ಷಣಿಕವಾಗಿ ಹಿಂದುಳಿಯದೇ ಸಮಾಜದಲ್ಲಿ ಉತ್ತಮ ಶಿಕ್ಷಣವನ್ನು ಪಡೆಯುವಂತಾಗಬೇಕು.

 ಆ ನಿಟ್ಟಿನಲ್ಲಿ ಸರಕಾರ ಉಚಿತ ಶೈಕ್ಷಣಿಕ ಸೌಲಭ್ಯಗಳು, ಶಿಷ್ಯವೇತನವನ್ನು ನೀಡುತ್ತಿದ್ದು, ಖಾಸಗಿ ಶಾಲಾ- ಕಾಲೇಜುಗಳಲ್ಲಿ ಪೌರಕಾರ್ಮಿಕರ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುವಂತೆ ಸರಕಾರವು ಯೋಜನೆಗಳನ್ನು ಜಾರಿಗೆ ತಂದಿದೆ ಅದರ ಸದುಪಯೋಗ ಪಡೆದುಕೊಳ್ಳುವುದರ ಜೊತೆಗೆ ಉನ್ನತ ಹುದ್ದೆಗಳನ್ನು ಪಡೆದುಕೊಳ್ಳುವಂತಾಗಬೇಕು ಎಂದು ಹೇಳಿದರು. ಜಿಲ್ಲೆಯಲ್ಲಿರುವ ನಿರ್ವಸತಿ ಪೌರಕಾರ್ಮಿಕರಿಗೆ ವಸತಿ ಕಲ್ಪಿಸಲು ಸರಕಾರವು ಗೃಹ ಭಾಗ್ಯ, ಪ್ರಧಾನ ಮಂತ್ರಿ ಆವಾಸ ಯೋಜನೆಗಳಂತಹ

ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದ ಅವರು, ಈ ಬಗ್ಗೆ ಅನಕ್ಷರಸ್ಥ ಪೌರಕಾರ್ಮಿಕರಿಗೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಮಾರ್ಗದರ್ಶನ ನೀಡುವುದರ ಜೊತೆಗೆ ಯೋಜನೆಗಳ ಫಲಾನುಭವಿಗಳನ್ನಾಗಿಸಬೇಕು ಎಂದರು.

ಪೌರಕಾರ್ಮಿಕರು ಕೋವಿಡ್ ಸಾಂಕ್ರಾಮಿಕದAತಹ ಮಹಾಮಾರಿ ಸಂದಿಗ್ಧತೆಯಲ್ಲಿಯೂ ಸ್ವಚ್ಛತೆಗೆ ಆಧ್ಯತೆ ನೀಡಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಅವರಿಗೆ ಪ್ರತೀ ವರ್ಷವೂ ನೀಡುತ್ತಿರುವ ವಿಶೇಷ ಭತ್ಯೆಯನ್ನು 3,500 ರಿಂದ 7,000 ರೂಗಳಿಗೆ ಹೆಚ್ಚಿಸಲಾಗಿದೆ ಎಂದರು.

ನಗರ ಸಭೆಯ ಪೌರಾಯುಕ್ತ ಡಾ.ಉದಯ್ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಾಗರತ್ನ, ಆರೋಗ್ಯ ರಕ್ಷಣೆ ಕುರಿತಂತೆ ಪೌರಕಾರ್ಮಿಕರು ವಹಿಸಬೇಕಾದ ಮುಂಜಾಗೃತಾ ಕ್ರಮಗಳ ಬಗ್ಗೆ ಉಪನ್ಯಾಸ ನೀಡಿದರು.

ಸಭಾ ಕಾರ್ಯಕ್ರಮಕ್ಕೂ ಮೊದಲು, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ವತಿಯಿಂದ ಪೌರ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಹಾಗೂ ನಿವೃತ್ತಿ ಹೊಂದಲಿರುವ ಹಿರಿಯ ಕಾರ್ಮಿಕರನ್ನು ಸನ್ಮಾನಿಸಲಾಯಿತು.

ನಗರ ಸಭೆ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಸಾಲ್ಯಾನ್, ನಗರ ಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಅಂಚನ್, ನಗರಸಭಾ ಸದಸ್ಯ ಹಾಗೂ ಉಡುಪಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಶ್ರೀಕೃಷ್ಣರಾವ್ ಕೊಡಂಚ, ಪೌರಸೇವಾ ನೌಕರರ ಸೇವಾ ಸಂಘದ ಅಧ್ಯಕ್ಷ ಮನೋಹರ್, ಮ್ಯಾಜಿಷಿಯನ್ ಗಣೇಶ್ ಕುದ್ರೋಳಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 

Leave a Reply