Janardhan Kodavoor/ Team KaravaliXpress
30.6 C
Udupi
Sunday, October 2, 2022
Sathyanatha Stores Brahmavara

ಸ್ವಾತಂತ್ರ್ಯ ಹೋರಾಟಗಾರ ತ್ರಾಸಿ ಪರಮೇಶ್ವರ ಹೆಬ್ಬಾರರು

ವೈವಿಧ್ಯತೆಯಲ್ಲಿ ಏಕತೆಯನ್ನು ಮೆರೆದ ದೇಶ ಭಾರತ. ಇಲ್ಲಿ ಬೇರೆ ಬೇರೆ ಪಂಗಡದವರಿಗೆ ಅವರದ್ದೇ ಆದಂತಹ ಹಬ್ಬ ಆಚರಣೆಗಳಿವೆ. ಇದರಿಂದಾಗಿ ಭಾರತ ವೈವಿಧ್ಯತೆಯ ತವರೂರಾಗಿದೆ.ಪ್ರತಿಯೊಬ್ಬರು ಅವರದ್ದೇ ಆದ ಧರ್ಮಾಚರಣೆಗಳನ್ನು ವಿಜ್ರಂಭಣೆಯಿಂದ ಅಚರಿಸುತ್ತಾರೆ. ಆದರೆ ಎಲ್ಲರೂ ಒಂದಾಗಿ ಆಚರಿಸುವ
ದಿನವೆಂದರೆ ಅಗಸ್ಟ್ 15.ಸ್ವಾತಂತ್ರ್ಯ ದಿನಾಚರಣೆ.

ಸ್ವತಂತ್ರ್ಯೋತ್ಸವ ಅಂದರೆ ನಮಗೆಲ್ಲ ಅದೇನೋ ಸಡಗರ ಸಂಭ್ರಮ. ಸಿಹಿ ತಿಂಡಿಯನ್ನು ಹಂಚಿ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಬಲಿದಾನ ಗೈದ ಮಹನೀಯರನ್ನು ಸ್ಮರಿಸುತ್ತೇವೆ.ಪರಕೀಯರಿಂದ ದೇಶದ ಮೇಲಾದ ದಾಳಿಯನ್ನು ನೆನಪು ಮಾಡಿಕೊಂಡು,ಅಂದಿನ ಅತಂತ್ರ ಭಯಾನಕ ದಿನಗಳ ಅನುಭವಗಳನ್ನು ಇಂದಿನ ಜನಾಂಗಕ್ಕೆ ಅರಿವು ಮೂಡಿಸುತ್ತೇವೆ. ಸ್ವಾತಂತ್ರ್ಯ ಪೂರ್ವದ ದಿನಗಳು ಮತ್ತೆ ಮರುಕಳಿಸಬಾರದು ಎಂದರೆ ನಾವು ನಮ್ಮ ಕರ್ತವ್ಯಗಳನ್ನು ಜವಾಬ್ದಾರಿಗಳನ್ನು ಮರೆಯಬಾರದು ಎನ್ನುವುದು ಅಷ್ಟೇ ಮುಖ್ಯ.ಸ್ವಾತಂತ್ರ್ಯ ಮಹೋತ್ಸವದ ಹಿನ್ನೆಲೆಯಲ್ಲಿ ಕರಾವಳಿ ಭಾಗದ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ ಹೊರಾಟಾರರನ್ನು ನಾವು ನೆನಪಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ ವಾಗಿದೆ.

ಇಂದು ನಾವು 75 ನೇ ಸ್ವಾತಂತ್ರ್ಯೋತ್ಸವದ ಹೊಸ್ತಿಲಲ್ಲಿದ್ದೇವೆ. ಹೊಟ್ಟೆಗೆ ಹಿಟ್ಟಿಲ್ಲವಾದರೂ ಆ ದಿನಗಳಲ್ಲಿ
ಕರಾವಳಿ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೇನೂ ಬರ ಇರಲಿಲ್ಲ. ಮಹಾತ್ಮ ಗಾಂಧೀಜಿಯವರು ,ಪಂಡಿತ್ ಜವಾಹರಲಾಲ್ ನೆಹರೂಜಿಯವರು ಮಂಗಳೂರಿಗೆ ಬೇಟಿನೀಡಿ ಕರಾವಳಿಯಲ್ಲಿ ಸ್ವತಂತ್ಯದ ಕಿಚ್ಚನ್ನು ಹಚ್ಚಿದ್ದರು. ವಾಹನ ಸಂಚಾರಕ್ಕೆ ಸರಿಯಾಗಿ ಮಾರ್ಗವಿಲ್ಲದ ಆ ದಿನಗಳಲ್ಲಿ ಜಲಮಾರ್ಗದ ಮೂಲಕ ಕರಾವಳಿ ಭಾಗಕ್ಕೆ ಬಂದು ಸ್ವಾತಂತ್ರ್ಯದ ಕಹಳೆಯನ್ನೂದಿ ಹೋರಾಟಕ್ಕೆ ಪ್ರೇರಣೆ ನೀಡಿದ್ದರು. ಸ್ವಾತಂತ್ರ್ಯ ಯೋಧರನ್ನು ನೆನಪಿಸಿಕೊಳ್ಳಲು ಅನೇಕ ಹೆಜ್ಜೆ ಗುರುತುಗಳು ಇಂದು ಕರಾವಳಿ ಭಾಗದಲ್ಲಿ ನಮಗೆ ಗೋಚರಿಸುತ್ತವೆ. 1930 ಮತ್ತು 1934 ರಲ್ಲಿ ಎರಡುಬಾರಿ ಮಹಾತ್ಮ ಗಾಂಧೀಜಿ ಯವರು ಮಂಗಳೂರು,ಉಡುಪಿಗೆ ಬಂದಿದ್ದರು.
ಈ ಸಂದರ್ಭದಲ್ಲಿ ಕರಾವಳಿಯ ಸ್ವಾತಂತ್ರ್ಯ
ಯೋಧರನ್ನು ನೆನಪಿಸಿಕೊಳ್ಳಬೇಕು.
ಗಂಗೊಳ್ಳಿಯ ನಗರ ವೇಣುಗೋಪಾಲ ನಾಯಕರು, ಖಂಬದಕೋಣೆ ಆರ್.ಕೆ. ಸಂಜೀವರಾಯರು, ಚೌಕಿ ಸುಬ್ಬಯ್ಯ ಖಾರ್ವಿ, ಉಪ್ಪುಂದ ಗೋವಿಂದ ಖಾರ್ವಿ, ಉಪ್ಪುಂದ ಸೂರ್ಯನಾರಾಯಣ ಹೊಳ್ಳರು, ಬಾಡಾ ಮಂಜುನಾಥ ಜೋಷಿ,ಸುಬ್ಬಣ್ಣ ಗುಪ್ತ ತಲ್ಲೂರು,ಬವಳಾಡಿ ಸೂರಪ್ಪಯ್ಯ ಹೆಬ್ಬಾರ್, ಉಪ್ಪುಂದ ಸುಬ್ಬಣ್ಣ ಶೆಟ್ಟಿ, ಹಲ್ಸನಾಡು ಸೂರಪ್ಪಯ್ಯ,ತ್ರಾಸಿ ಪರಮೇಶ್ವರ ಹೆಬ್ಬಾರರು ಅಲ್ಲದೇ ಇನ್ನೂ ಅನೇಕ ಪ್ರಮುಖರಿದ್ದಾರೆ.

ನಾನು ಇಲ್ಲಿ ಸ್ವಾತಂತ್ರ್ಯ ಹೋರಾಟಗಾರ ದಿವಂಗತ ತ್ರಾಸಿ ಪರಮೇಶ್ವರ ಹೆಬ್ಬಾರರನ್ನು
ನೆನಪಿಸಿಕೊಳ್ಳುತ್ತೇನೆ.ಇವರು 1925 ನೇ ಇಸವಿ, ಜುಲೈ ಒಂದರಂದು ಕುಂದಾಪುರ ತಾಲೋಕಿನ ನಿಸರ್ಗ ರಮಣೀಯವಾದ ಮರವಂತೆ ಕುರುವಿನಲ್ಲಿರುವ ಅವರ ಸೋದರ ಮಾವ ಸೀತಾರಾಮ ಹೆಬ್ಬಾರರ ಮನೆಯಲ್ಲಿ ಜನಿಸಿದರು. ತಂದೆ ತ್ರಾಸಿ ಆರಂಗಳ ದಿ.ಶೇಷಗಿರಿ ಹೆಬ್ಬಾರರು
ತಾಯಿ ದಿ.ಸೀತಮ್ಮ.ಐದು ಮಕ್ಕಳ ಪೈಕಿ ಇವರು ಕಿರಿಯರು. 1936 ರಲ್ಲಿ ಒಂದು ಮುಂಜಾನೆ ,ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ದಿನಗಳು, ಜವಾಹರಲಾಲ್ ನೆಹರು ಅವರು ಮಂಗಳೂರಿನಿಂದ ಕಾರವಾರದ ಕಡೆಗೆ ದಂಡಿ ಯಾತ್ರೆಯನ್ನು ಕೈಗೊಂಡು ಸಾಗುತ್ತಿದ್ದಾಗ ಅವರಿಗೆ ಸಮೀಪದಿಂದ ನೋಡಿ ಪ್ರೇರಣೆಗೊಂಡು, ಹಾರ ಹಾಕಿ ಕಾಣಿಕೆ ನೀಡಿದವರು ಖಂಬದಕೋಣೆ
ದಿವಂಗತ ಆರ್.ಕೆ. ಸಂಜೀವರಾಯರು ಒಬ್ಬರಾದರೆ,ಮರವಂತೆಯ ಕಡಲ ತಡಿಯಲ್ಲಿ ಜವಾಹರಲಾಲರು ರುದ್ರ ರಮಣೀಯ ಪ್ರಕೃತಿ ಸೌಂದರ್ಯದ ಸವಿಯನ್ನು ಅನುಭವಿಸುತ್ತಾ ನಿಂತಾಗ ತ್ರಾಸಿಯ ವಿದ್ಯಾರ್ಥಿ ಕುರುವಿನ
ಪರಮೇಶ್ವರ ಹೆಬ್ಬಾರರು ಅತೀ ಸಮೀಪದಿಂದ ಪಂಡಿತ್ ನೆಹರು ಅವರ ದರ್ಶನ ಪಡೆದ
ಭಾಗ್ಯವಂತರಲ್ಲಿ ಒಬ್ಬರಾಗಿದ್ದರು. ಈ ದರ್ಶನ ಭಾಗ್ಯವೇ ಮುಂದೆ ಹೆಬ್ಬಾರರಿಗೆ
ಸ್ವಾತಂತ್ರ್ಯ ಸಂಗ್ರಾಮಕ್ಕೆ ದೀಕ್ಷೆಯಾಗಿತ್ತು.

ಕಡು ಬಡತನದಲ್ಲಿ ಬೆಳೆದ ತ್ರಾಸಿ ಪರಮೇಶ್ವರ ಹೆಬ್ಬಾರರು
ಹೊಟ್ಟೆಪಾಡಿಗಾಗಿ ವೃತ್ತಿಯನ್ನು
ಅರಸುತ್ತ ದೂರದ ಹಿರೇಕೆರೂರನ್ನು ಸೇರಿದರು.
ಅಲ್ಲಿಯೂ ಸ್ವಾತಂತ್ರ್ಯ ಚಳುವಳಿಯ ಕಾವು ಹರಡಿತ್ತು.
ಅಲ್ಲಿಯ ಮುಖಂಡರಾದ ಆರ್.ಎಸ್. ಹುಕ್ಕೇರಿಕರ್,
ಗವಿಸಿದ್ದಪ್ಪ ಬೆಳವಡಿ, ಹೂಲಿ ವೆಂಕಟ ರೆಡ್ಡಿ,ಬೆಳಗಾವಿಯ ಶ್ರೀರಂಗ ಕಾಮತ್ ಮತ್ತು ಹೆಬ್ಬಾರರ ಭಾವ ರಾಮಕೃಷ್ಣ ಭಟ್ ಇವರೆಲ್ಲರ ಒಡನಾಟ ಅವರಿಗೆ ಸ್ವಾತಂತ್ಯ ಚಳುವಳಿಯಲ್ಲಿ ಧುಮ್ಮಿಕ್ಕಲು ಪ್ರೇರಣೆ ನೀಡಿತು.
ಪ್ರಭಾತ್ ಫೆರಿ ಗಳಲ್ಲಿ ಭಾಗವಹಿಸುವುದು ಮಾತ್ರವಲ್ಲ,ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಸಭೆ ಸಮಾರಂಭಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಚಳುವಳಿಗಾರರ ಸಖ್ಯ ಬೆಳೆಸಿ,ಅವರಿಗೆ ಪ್ರೋತ್ಸಾಹಿಸಿ,ಸ್ವತಃ ಹೊಟೇಲಿನಲ್ಲಿ ಬಾಣಸಿಗರಾದ
ತ್ರಾಸಿ ಪರಮೇಶ್ವರ ಹೆಬ್ಬಾರರು ಹೊಟೇಲ್ ನಿಂದ ಗುಟ್ಟಾಗಿ ಭೂಗತರಾಗಿದ್ದ ಚಳುವಳಿಗಾರರಿಗೆ ಕಾಫಿ ತಿಂಡಿ,ಊಟ ಸರಬರಾಜು ಮಾಡುತ್ತಿದ್ದರು.ಚಲೆಜಾವ್ ಚಳುವಳಿಯ ಸಂದರ್ಭದಲ್ಲಿ ಬ್ರಿಟಿಷರ ಕೆಂಗಣ್ಣಿಗೆ ಬಲಿಯಾಗಿ ಬಂಧನಕ್ಕೊಳಗಾದರು.ಆರು ತಿಂಗಳು ಬೆಳಗಾವಿಯ ಹಿಂಡಲಗಿ ಕಾರಾಗ್ರಹದಲ್ಲಿ ಕಠಿಣ ಶಿಕ್ಷೆಯೊಂದಿಗೆ ಜೈಲುವಾಸ ಅನುಭವಿಸಿದ ನಿಜಾರ್ಥದ ಸ್ವಾತಂತ್ರ್ಯ ಸೇನಾನಿ ನಮ್ಮ ತ್ರಾಸಿ ಪರಮೇಶ್ವರ ಹೆಬ್ಬಾರರು.

ಆ ದಿನಗಳಲ್ಲಿ ಹೊಟ್ಟಪಾಡಿಗಾಗಿ ದೂರದ ಊರುಗಳಲ್ಲಿ ಹೊಟೇಲ್ ವೃತ್ತಿ ಮಾಡುವವರು
ಗೌರವಾನ್ವಿತರಾಗಿದ್ದು ತಮ್ಮ ಪಾಲಿನ ಕೆಲಸ ಮಾಡಿಕೊಂಡು ಬಿಡುವಿನ ವೇಳೆಯಲ್ಲಿ ಮನರಂಜನೆಗಾಗಿ ಸಿನೇಮಾ, ನಾಟಕ ಅಯಾ ಪರಿಸರದ ಜಾನಪದ ಕಲೆಗಳಾದ ಯಕ್ಷಗಾನ ಬಯಲಾಟ ,
ಗೊಂಬೆಯಾಟ,ದೊಡ್ಡಾಟ
ಇತ್ಯಾದಿ ವೀಕ್ಷಣೆ
ಮಾಡುವುದರ ಜತೆಗೆ,ನಿಯತ
ಕಾಲಿಕ ಪತ್ರಿಕೆಗಳು, ಕಥೆ ಕಾದಂಬರಿಗಳು ಓದಿ ಪರಸ್ಪರ
ವಿಮರ್ಶೆಗಳನ್ನು
ಮಾಡಿಕೊಳ್ಳುತ್ತಿದ್ದರು‌, ಕೆಲವೊಮ್ಮೆ ಸೃಜನಶೀಲ ಹೊಟೇಲ್ ಮಾಲಕರಾದರೆ ನೌಕರರಿಗೆ ಪುಸ್ತಕಗಳನ್ನು ಪೂರೈಕೆ ಮಾಡಿ ಪ್ರೋತ್ಸಾಹಿಸುತ್ತಾರೆ.
ಈ ಸಂದರ್ಭದಲ್ಲಿ ಹೋಟೆಲ್ ಮಾಲಕರಾದ ದಿ.ಪುಂಡರೀಕ ಹಾಲಂಬಿಯವರು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕನ್ನಡದ ಸೇವೆ ಸಲ್ಲಿಸಿದ ಉದಾಹರಣೆ ಇದೆ.
ಹೊಟೇಲ್ ನೌಕರರೆಂದರೆ
ಗೌರವಾನ್ವಿತರು, ಪೆಡ್ಡೆ ಹುಡುಗರ ಗುಂಪಲ್ಲ ಎನ್ನುವುದಕ್ಕೆ ಈ ವಿಚಾರಗಳನ್ನು ಉಲ್ಲೇಖಿಸಿದ್ದೇನೆ ವಿನಹಃ ನನ್ನ
ಸ್ಕೂಲ್ ಮೇಟ್ ಪುಂಡರೀಕ
ಹಾಲಂಬಿಯವರು ಸ್ವಾತಂತ್ರ್ಯ ಯೋಧರ ಸಮಕಾಲೀನವರಲ್ಲ.
ಸ್ವಾತಂತ್ರ್ಯ ಚಳುವಳಿಯ ಆ ದಿನಗಳಲ್ಲಿ ದೇಶಪ್ರೇಮ ಕೆರಳಿಸುವ ವಿಚಾರಗಳು ಎಲ್ಲೆಡೆಯಲ್ಲೂ ಅನುರಣಿಸುತ್ತಿತ್ತು.
ಬಾಲ್ಯದಿಂದಲೇ ಸ್ವಾತಂತ್ರ್ಯ ಪ್ರೇಮ ಮೈಗೂಡಿಸಿಕೊಂಡ ಹೆಬ್ಬಾರರಿಗೆ ದೂರದ ಊರಿನಲ್ಲಿ ಕೆಲಸ ಮಾಡುವಾಗ
ದೇಶಪ್ರೇಮಿಗಳ ಸಖ್ಯವಾಗಿ ತಾನೂ ದೇಶಸೇವೆಯಲ್ಲಿ ತನ್ನಿಂದಾದ ಕೈಂಕರ್ಯ ಮಾಡಬೇಕೆಂಬ ಉತ್ಕಟ ಮನಸ್ಸಿನಿಂದ ಬೂದಿ ಮುಚ್ಚಿದ
ಕೆಂಡದಂತೆ ತೆರೆಯಮರೆಯಲ್ಲಿ
ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುವ ವೀರರಿಗೆ ಯಾರಿಗೂ ತಿಳಿಯದಂತೆ ಗುಪ್ತವಾಗಿ (ಆಂಗ್ಲರ ದೃಷ್ಟಿಯಲ್ಲಿ ದ್ರೋಹದ ಕೆಲಸ)
ಅಡುಗೆಯನ್ನು ತಯಾರಿಸಿ ತಲುಪಿಸಿದ ವಿಚಾರ ಬ್ರಿಟಿಷ್ ಪಡೆಯು ಪತ್ತೆಮಾಡಿ ಹೆಬ್ಬಾರನ್ನು ಸೆರೆ ಹಿಡಿದು ಛೆಡಿಯೇಟು ನೀಡಿ ಸೆರೆಮನೆಗೆ ಕಳಿಸಿದ ಚಿತ್ರಣ ನೆನೆದರೆ ಕರುಳು ಚುರಗುಟ್ಟಿ
ಕಣ್ಣುಹನಿಗೂಡುತ್ತದೆ,
ಹೀಗಿರುವಾಗ ಅವರ ಮನೆಯವರಿಗೆ ಹೇಗಾಗಿರಬಹುದು.
ನಂತರದಲ್ಲಿ ಹಲವಾರು ಸಂಘ ಸಂಸ್ಥೆಗಳು ಇವರ ಶೌರ್ಯ ಸಾಹಸಗಳನ್ನು ಕೊಂಡಾಡಿ ಗೌರವಿಸಿದ್ದಾರೆ. ಕುಂದಾಪುರದ
ಪ್ರತಿಷ್ಠಿತ ಭಂಡಾರ್ಕರ್ ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವ ದಿನದಂದು
ಇವರಿಗೆ ಗೌರವಿಸಿ ಸನ್ಮಾನಿಸಿದೆ.
ಸರಕಾರವು 1988 ರಲ್ಲಿ ಅಗೋಸ್ತ್ 15 ರಂದು ತಾಮ್ರ ಪತ್ರ ಪ್ರಶಸ್ತಿ ನೀಡಿ ಗೌರವಿಸಿತು.
ತನ್ನ ಪುತ್ರ ಗಣೇಶ್ ಹೆಬ್ಬಾರರಿಗೆ ದೇಶಸೇವೆಯ ದೀಕ್ಷೆ ನೀಡಿ ರಕ್ಷಣಾ ಪಡೆಯಲ್ಲಿ
ಸೇರ್ಪಡೆಗೊಳ್ಳಲು ಪ್ರೇರಣೆ ನೀಡಿದ್ದು, ಪರಮೇಶ್ವರ ಹೆಬ್ಬಾರರ ಅಪ್ಪಟ ದೇಶಪ್ರೇಮಕ್ಕೆ ಒಂದು ಅಪೂರ್ವ ನಿದರ್ಶನವಾಗಿದೆ.
ಶ್ರೀಯುತರು ದಿನಂಕ 03.03.2010 ರಂದು ನಿಧನರಾದರು.
ದಿವಂಗತ ತ್ರಾಸಿ ಆರಂಗಳ ದಿ.ಪರಮೇಶ್ವರ ಹೆಬ್ಬಾರರ ಈ ಸ್ವತಂತ್ರ್ಯ ಚಳುವಳಿಯ ಸಾಹಸ ಗಾಥೆ ಈ ನೆಲದ ಸಹಸ್ರ ಸಹಸ್ರ ಯುವ ಶಕ್ತಿಗೆ
ಸ್ಪೂರ್ತಿಯಾಗಲೆಂದು ಹಾರೈಸುತ್ತ ಅವರನ್ನು ಅಕ್ಷರ ನಮನಗಳೊಂದಿಗೆ ಸ್ಮರಿಸುತ್ತೇನೆ.
—————————————
ಲೇಖನ :-ಕೆ.ಪುಂಡಲೀಕ ನಾಯಕ್,
ನಾಯ್ಕನಕಟ್ಟೆ- ಕೆರ್ಗಾಲು,
ಬೈಂದೂರು ತಾ. ಉಡುಪಿ ಜಿಲ್ಲೆ

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!