Janardhan Kodavoor/ Team KaravaliXpress
24.6 C
Udupi
Sunday, September 25, 2022
Sathyanatha Stores Brahmavara

ಆ-07: ರಾಷ್ಟ್ರೀಯ ಕೈಮಗ್ಗ ದಿನಾಚರಣೆ

ದಿನಾಂಕ 07.08.2022 ರಂದು ಪದ್ಮಶಾಲಿ ನೇಕಾರ ಪ್ರತಿಷ್ಠಾನ, ಉಡುಪಿ
ಹಮ್ಮಿ ಕೊಂಡಿರುವ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಅಂಗವಾಗಿ ದಿನಾಂಕ 04.08.2022 ರಂದು ಆಯೋಜಿಸಿದ ಪತ್ರಿಕಾ ಗೋಷ್ಠಿಯಲ್ಲಿ ಪ್ರಕಟಿಸಿದ ಪತ್ರಿಕಾ ಹೇಳಿಕೆ.

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಜಿ ಅವರ ಆಶಯದಂತೆ 2015ರಿಂದ ಆಗಸ್ಟ್ 7 ರಂದು ರಾಷ್ಟ್ರೀಯ ಕೈಮಗ್ಗ ದಿನಾಚರಣೆಯನ್ನು ದೇಶದಾದ್ಯಂತ ಆಚರಿಸಲಾಗುತ್ತಿದೆ.

ರಾಜ್ಯ ಸರಕಾರದ ಆಶ್ರಯದಲ್ಲಿ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯನ್ನು ಆಚರಿಸುವ ಹೊರತಾಗಿ ಜಿಲ್ಲಾ ಕೇಂದ್ರಗಳಲ್ಲಿ ಸರಕಾರದ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯುತ್ತಿಲ್ಲ.

ಪದ್ಮಶಾಲಿ / ಶೆಟ್ಟಿಗಾರ ಸಮಾಜದ ಕುಲಕಸುಬು ಕೈಮಗ್ಗ ನೇಕಾರಿಕೆಯನ್ನು ಪುನರುಜ್ಜೀವನಗೊಳಿಸಲು ಕಂಕಣ ಬದ್ಧವಾಗಿರುವ ಪದ್ಮಶಾಲಿ ನೇಕಾರ ಪ್ರತಿಷ್ಠಾನ ಇದೇ ಬರುವ ರವಿವಾರ, ಆಗಸ್ಟ್ 7, 2022 ರಂದು ಶ್ರೀ ಆದಿಶಕ್ತಿ ವೀರಭದ್ರ ಬ್ರಹ್ಮಲಿಂಗ ದೇವಸ್ಥಾನ ಕಲ್ಯಾಣಪುರ ಇಲ್ಲಿ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯನ್ನು ಉಡುಪಿ ಜಿಲ್ಲಾ ಮಟ್ಟದಲ್ಲಿ ಅದ್ದೂರಿಯಾಗಿ ಆಚರಿಸುತ್ತಿದೆ.

07.08.2022 ರಂದು ಭಾನುವಾರ ಕಲ್ಯಾಣಪುರ ಶ್ರೀ ಆದಿಶಕ್ತಿ ಬ್ರಹ್ಮಲಿಂಗ ವೀರಭದ್ರ ದೇವಸ್ಥಾನದಲ್ಲಿ ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗುವ ಕಾರ್ಯಕ್ರಮ ಸಾಯಂಕಾಲದವರೆಗೆ ನಡೆಯಲಿದೆ. ಕಾರ್ಯಕ್ರಮದ ಸ್ವರೂಪ ಈ ರೀತಿಯಾಗಿದೆ.

ಬೆಳಿಗ್ಗೆ 8.00 ಗಂಟೆಗೆ ಉಪಹಾರದೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ನಂತರ 9.00 ಗಂಟೆಗೆ ಹತ್ತನೇ ತರಗತಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣಕ್ಕಾಗಿ ಅವರ ಮತ್ತು ಅವರ ಪೋಷಕರ ಜೊತೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ.

ಶಿಕ್ಷಣ ತಜ್ಞರಾದ ಶ್ರೀ ನಾಗರಾಜ್ ಕಟೀಲ್, ದಿನೇಶ್ ಶೆಟ್ಟಿಗಾರ್ ಪರ್ಕಳ, ಸದಾಶಿವ ಗೋಳಿಜೋರಾ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಜೆಸಿಐ ಇಂಡಿಯಾ ದ ವಲಯ ತರಬೇತುದಾರ ಶಿವಾನಂದ ಶೆಟ್ಟಿಗಾರ್ ಈ ಸಂವಾದವನ್ನು ನಿರೂಪಿಸಲಿದ್ದಾರೆ.

ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮದ ಪ್ರಮುಖ ಭಾಗ ರಾಷ್ಟ್ರೀಯ ಕೈಮಗ್ಗ ದಿನಾಚರಣೆ.

ಈ ಕಾರ್ಯಕ್ರಮವನ್ನು ಕಲ್ಯಾಣಪುರ ಶ್ರೀ ಆದಿಶಕ್ತಿ ಬ್ರಹ್ಮಲಿಂಗ ವೀರಭದ್ರ ದೇವಸ್ಥಾನದ ಪ್ರಧಾನ ಮೊಕ್ತೇಸರರಾದ ಶ್ರೀ ಜ್ಯೋತಿಪ್ರಸಾದ್ ಶೆಟ್ಟಿಗಾರ್ ಮತ್ತು ದೇವಸ್ಥಾನದ ಮಹಿಳಾ ವೇದಿಕೆ ಅಧ್ಯಕ್ಷರಾದ ಶ್ರೀಮತಿ ಶೋಭಾ ಜ್ಯೋತಿಪ್ರಸಾದ್ ಶೆಟ್ಟಿಗಾರ್ ರವರು ದೀಪಪ್ರಜ್ವಲನೆ ಮಾಡುವುದರ ಮೂಲಕ ಉದ್ಘಾಟಿಸಲಿದ್ದಾರೆ.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀ ಪ್ರಸನ್ನ ಎಚ್, ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಶ್ರೀಮತಿ ವೀಣಾ ಬಿ ಎನ್, ಉಡುಪಿ ನಗರಸಭೆಯ ಅಧ್ಯಕ್ಷರಾದ ಸುಮಿತ್ರಾ ಆರ್ ನಾಯಕ್, ಉಪಾಧ್ಯಕ್ಷರಾದ ಲಕ್ಷ್ಮಿ ಮಂಜು ಕೊಳ, ನಗರಸಭಾ ಸದಸ್ಯರಾದ ಮಂಜುಳಾ ವಿ ನಾಯಕ್, ನಾಮನಿರ್ದೇಶಿತ ಸದಸ್ಯ ಶ್ರೀ ದಿನೇಶ್ ಪೈ, ಕಲ್ಯಾಣಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಕೃಷ್ಣ ದೇವಾಡಿಗ, ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಕಾರ್ಯಾಧ್ಯಕ್ಷರಾದ ಶ್ರೀ ರಘು ಎಸ್ ಶೆಟ್ಟಿಗಾರ್, ಹಾಗು ನೇಕಾರ ಸಮುದಾಯದ ಪ್ರಮುಖರು.

ಶೆಟ್ಟಿಗಾರ ಸಮುದಾಯದ ಕೂಡುಕಟ್ಟಿನ ಹದಿನಾರು ದೇವಸ್ಥಾನಗಳ ಆಡಳಿತ ಮೊಕ್ತೇಸರರು/ಅಧ್ಯಕ್ಷರು ಮುಖ್ಯ ಅತಿಗಳಾಗಿ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಈ ಸಮಾರಂಭದಲ್ಲಿ ಹಿರಿಯ ನೇಕಾರರಿಗೆ ಹಾಗು ಸಾಧಕರಿಗೆ ಸನ್ಮಾನ ಕಾರ್ಯಕ್ರಮ, ವಿದ್ಯಾರ್ಥಿಗಳಿಗೆ ಅಭಿನಂದನೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ನಡೆಯಲಿವೆ.

ವಿಶೇಷವಾಗಿ ಜಿಲ್ಲೆಯಲ್ಲಿ ನೂರು ಕೈಮಗ್ಗ ನೇಕಾರರನ್ನು ನೇಕಾರ ವೃತ್ತಿಗೆ ಕರೆತರುವ ಸಂಕಲ್ಪವಾಗಿ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿದೆ.

ಪದ್ಮಶಾಲಿ ನೇಕಾರ ಪ್ರತಿಷ್ಠಾನ ಹೊರತರುತ್ತಿರುವ ವಿಶಿಷ್ಟ, ವಿನೂತನ ಇ-ವಾರ್ತಾ ಪತ್ರಿಕೆ “ನೇಕಾರ ಬಿಂಬ” ದ ಮೊದಲ ಸಂಚಿಕೆಯು ಈ ಸಮಾರಂಭದಲ್ಲಿ ಲೋಕಾರ್ಪಣೆ ಗೊಳ್ಳಲಿದೆ.

ಮಧ್ಯಾಹ್ನ 12.30 ಗಂಟೆಗೆ ನೇಕಾರ ಪದ್ಮಶಾಲಿ ಬಂಧುಗಳಿಗೆ ಕೈಮಗ್ಗದ ಉಡುಗೆ ತೊಡುಗೆಯಲ್ಲಿ ಸೌಂದರ್ಯ ಸ್ಪರ್ಧೆ ನೇಕಾರ ಸಿರಿ, ನೇಕಾರ ಸಿರಿ ವರ, ನೇಕಾರ ಕುಟುಂಬ ಸಿರಿ ಹೀಗೆ ಮೂರು ವಿಭಾಗಗಳಲ್ಲಿ ಆಯೋಜಿಸಲಾಗಿದೆ. ನಮ್ಮ ಕೈಮಗ್ಗ ಸೀರೆ ನಮ್ಮ ಹೆಮ್ಮೆ ಎಂಬ ಘೋಷಣೆಯೊಂದಿಗೆ ನೆಡೆಯುವ ಈ ಕಾರ್ಯಕ್ರಮವು ಸಮುದಾಯದ ನೂರಾರು ಮಹಿಳೆಯರು ಕೈಮಗ್ಗದ ಸೀರೆಗಳನ್ನು ಧರಿಸಿ, ಶೃಂಗಾರಗೊಂಡು ಮದುವಣಗಿತ್ತಿಯರಂತೆ ಶೋಭಿಸುವ ಕಾರ್ಯಕ್ರಮವಿದು.

ಈ ಮೂಲಕ ಕೈಮಗ್ಗದ ಸೀರೆಯ ಸೌಂದರ್ಯವನ್ನು, ಅದನ್ನು ಧರಿಸಿದಾಗ ಸಿಗುವ ಆಹ್ಲಾದಕರ ಅನುಭವವನ್ನು ನಮ್ಮ ಸಮಾಜಕ್ಕೆ ಮತ್ತು ಹೊರಗಿನ ಜಗತ್ತಿಗೆ ತಿಳಿಸುವ ಪದ್ಮಶಾಲಿ ಸೇವಾ ಪ್ರತಿಷ್ಠಾನದ ಪ್ರಯತ್ನವಿದು.

ನೇಕಾರ ಸಮುದಾಯದ ಕೈಮಗ್ಗದ ಸೀರೆಗಳಿಗೆ ಹೊಸ ಆಯಾಮ ನೀಡುವ, ಬಹುಬೇಡಿಕೆಯ ಸೀರೆಗಳಾಗಿ ಪರಿವರ್ತಿಸುವ, ಜಿಲ್ಲೆಯಲ್ಲಿ 100 ಜನ ಕೈಮಗ್ಗದ ನೇಕಾರರನ್ನು ಪುನರ್ ಸ್ರಷ್ಟಿಸುವ ಮಹತ್ವಾಕಾಂಕ್ಷೆಯನ್ನು ಇಟ್ಟು ಕೊಂಡು ಪದ್ಮಶಾಲಿ ಸೇವಾ ಪ್ರತಿಷ್ಠಾನ, ಉಡುಪಿ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದೆ. ಈ ಕಾರ್ಯಕ್ರಮಕ್ಕೆ ಸರ್ವರ ಸಹಕಾರ ಅಪೇಕ್ಷಿಸುತ್ತಿದೆ.

ಪತ್ರಿಕಾಗೋಷ್ಠಿಯ ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷರಾದ ರತ್ನಾಕರ್ ಇಂದ್ರಾಳಿಯವರು ವಹಿಸಿದ್ದರು.

ನಗರಸಭಾ ಸದಸ್ಯರಾದ ಮಂಜುನಾಥ್ ಮಣಿಪಾಲ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನರೇಂದ್ರ ಶೆಟ್ಟಿಗಾರ್ ಹೆರ್ಗ ಉಪಾಧ್ಯಕ್ಷರಾದ ಸದಾಶಿವ ಗೋಳಿಜೋರಾ, ದತ್ತರಾಜ್ ಶೆಟ್ಟಿಗಾರ್, ಸರೋಜಾ ಶೆಟ್ಟಿಗಾರ್,ಮತ್ತಿತರರು ಉಪಸ್ಥಿತರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!