ನಿತ್ಯಾನಂದ ವಳಕಾಡುರವರಿಂದ ಹೀಗೊಂದು ಪ್ರತಿಭಟನೆ  

ಉಡುಪಿ : ಪೆಟ್ರೋಲ್​,​ ಡೀಸೆಲ್​,​ ಅಡುಗೆ ಅನಿಲ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಉಡುಪಿಯಲ್ಲಿ ವಿಭಿನ್ನ ರೀತಿಯಲ್ಲಿ ​ಪ್ರತಿಭಟನೆ ನಡೆಸಲಾಯಿತು. 

ಉಡುಪಿ ಜಿಲ್ಲಾ ನಾಗರಿಕ ವೇದಿಕೆಯಿಂದ ಜೋಡುಕಟ್ಟೆಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಉಡುಪಿಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಅಜ್ಜರಕಾಡು ಹುತಾತ್ಮ ವೇದಿಕೆ ಬಳಿ ಪ್ರತಿಭಟನಾ ಮೆರವಣಿಗೆ ಸಮಾಪನಗೊಂಡಿತು. ತಳ್ಳುಗಾಡಿಯಲ್ಲಿ ಮೋಟಾರ್ ಬೈಕ್, ಗ್ಯಾಸ್ ಸಿಲಿಂಡರ್ ​ಇಟ್ಟು ​ಪ್ರತಿಭಟನಾಕಾರರು ವಿಭಿನ್ನವಾಗಿ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದರು.

ಪೆಟ್ರೋಲ್ ಹಾಕಿ ವಾಹನ ಚಲಾಯಿಸಲು ಸಾಧ್ಯವಿಲ್ಲ, ತಳ್ಳುಗಾಡಿಯ ಮೇಲೆ ದ್ವಿಚಕ್ರ ವಾಹನ ಇಟ್ಟು ತಳ್ಳುತ್ತಾ ಹೋಗುವ ಪರಿಸ್ಥಿತಿ ಇದೆ ಎನ್ನುವುದನ್ನು ಮಾರ್ಮಿಕವಾಗಿ ​ಪ್ರತಿಭಟನೆಯ ಮೂಲಕ ​ಹೇಳಿದರು. ಪ್ರತಿಭಟನೆಗೆ ರಾಜ್ಯದ ಅತಿಥಿ ಉಪನ್ಯಾಸಕರು ಕೈಜೋಡಿಸಿದ್ದು ರಾಜ್ಯ ಸರ್ಕಾರದ ವಿರುದ್ಧ ಅಣಕು ಶವಯಾತ್ರೆ ನಡೆಸಿದರು. ಸಂಬಳ ಪಡೆಯದೇ, ಕೆಲಸವಿಲ್ಲದೆ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. ನಮ್ಮ ಹೆಣದ ಯಾತ್ರೆಯನ್ನು ನಾವೇ ಮಾಡುವಂತಹ ಪರಿಸ್ಥಿತಿ ಇದೆ ಎಂಬುದನ್ನು ತೆರೆದಿಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ನಿತ್ಯಾನಂದ ವಳಕಾಡು, ದೇಶದಲ್ಲಿ ಕೊರೋನಾ ಮಹಾಮಾರಿ ಬಂದು ಜನಸಾಮಾನ್ಯರಿಗೆ ಬಹಳ ಕಷ್ಟವಾಗಿದೆ. ​ಇಂತಹ ಸಂದರ್ಭದಲ್ಲಿ ಸರಕಾರ ಡೀಸೆಲ್ ಪೆಟ್ರೋಲ್ ಬೆಲೆ ಏರಿಕೆ ಮಾಡುವುದು, ಅಡುಗೆ ಅನಿಲದ ಬೆಲೆ ಏರಿಸಿರುವುದು ಖಂಡನೀಯ ಕೂಡಲೇ ಬೆಲೆ ತಿಳಿಸಬೇಕು. ಜನಸಾಮಾನ್ಯರಿಗೆ ಬದುಕುವ ಅವಕಾಶ ಕೊಡಬೇಕು ಎಂದು ಒತ್ತಾಯಿಸಿದರು.​​

 
 
 
 
 
 
 
 
 
 
 

Leave a Reply