ದುರ್ಗಾದೇವಿಯ ನಾಲ್ಕನೇ ಅವತಾರ “ಕೂಷ್ಮಾಂಡ”

ಸದಾ ಮಂದಸ್ಮಿತೆಯಾಗಿರುವ ದುರ್ಗಾದೇವಿಯ ನಾಲ್ಕನೇ ಅವತಾರವೇ ಕೂಷ್ಮಾಂಡ. ಈಕೆಯ ಆರಾಧನೆಯಿಂದ ಮನದ ಕ್ಲೇಷ ಕಳೆದು ಜ್ಞಾನದ ಬೆಳಕು ಮೂಡುತ್ತದೆ. ಜ್ಞಾನದ ಹೊನಲು ಸಂತಸಕ್ಕೆ ಕಾರಣವಾಗುತ್ತದೆ. ಸಂಸ್ಕೃತದಲ್ಲಿ ಕೂಷ್ಮಾಂಡವೆಂದರೆ ಬೂದುಗುಂಬಳಕಾಯಿ ಎಂದರ್ಥ. ಇದಕ್ಕೆ ಬ್ರಹ್ಮಾಂಡ ಎಂದೂ ಅರ್ಥವಿದೆ. ಆಯುರ್ವೇದ ಶಾಸ್ತ್ರದ ಪ್ರಕಾರ ಬೂದುಗುಂಬಳಕಾಯಿಯು ಜ್ಞಾನವರ್ಧಕ, ತೇಜೋ ವರ್ಧಕ. ಸಕಲ ತಾಪವನ್ನು ನಿವಾರಣೆ ಮಾಡಿ ದೇಹಕ್ಕೆ ತಂಪೆರೆವ ಶಾಕಾಹಾರ. ಕೂಷ್ಮಾಂಡ ಪದದಲ್ಲಿ ಕು ಎಂದರೆ ಚಿಕ್ಕದು, ಉಷ್ಮ ಎಂದರೆ ಶಕ್ತಿ ಮತ್ತು ಅಂಡ ಎಂದರೆ ಭ್ರೂಣ ಎಂದರ್ಥ. ಸರಳವಾಗಿ ಹೇಳುವುದಾದರೆ ಇಡೀ ಬ್ರಹ್ಮಾಂಡವೆನ್ನುವ ಚೈತನ್ಯಶಕ್ತಿಯನ್ನೇ ತನ್ನ ಒಡಲಿನಲ್ಲಿ ಇಟ್ಟುಕೊಂಡವಳು ಎಂದರ್ಥ. ತಾಯಿ ಕೂಷ್ಮಾಂಡಳು ತನ್ನ ನಗುವಿನಿಂದ ಅಂಧಕಾರವನ್ನು ತೊಡೆದುಹಾಕುವ ಶಕ್ತಿ ದೇವತೆಯಾಗಿದ್ದು, ಆಕೆಗೆ ಎಂಟು ಕೈಗಳಿವೆ. ಹಾಗಾಗಿ ಅವಳನ್ನು ಅಷ್ಟಭುಜ ದೇವಿ ಎಂದೂ ಕರೆಯುತ್ತಾರೆ.

ಪೃಥ್ವಿಗೆ ಅಧಿಪತಿಯಾಗಿರುವ ತಾಯಿ ಕೂಷ್ಮಾಂಡಳು ಸೂರ್ಯನ ಕೇಂದ್ರ ಸ್ಥಾನದಲ್ಲಿ ವಾಸಿಸುತ್ತಾಳೆ ಎಂದು ನಂಬಿಕೆ. ಸೂರ್ಯನಿಗಿಂತ ತಾಯಿ ಕೂಷ್ಮಾಂಡಳು ಹೆಚ್ಚು ಪ್ರಕಾಶಮಾನವಾಗಿದ್ದು, ಈಕೆಯ ವರದಿಂದಲೇ ಸೂರ್ಯನು ಕಾಯಿಲೆಗಳನ್ನು ವಾಸಿಮಾಡುವ ಗುಣವನ್ನು ಹೊಂದಿದ್ದಾನೆ. ತಾಯಿ ಕೂಷ್ಮಾಂಡಳು ಸಿಂಹದ ಮೇಲೆ ಕುಳಿತಿದ್ದು, ಎಂಟು ಕೈಗಳನ್ನು ಹೊಂದಿದ್ದಾಳೆ. ಕಮಂಡಲ, ಧನಸ್ಸು, ಜಪಮಾಲೆ, ಕಮಲ, ಗದೆ, ಅಮೃತ ಕಳಶ, ಚಕ್ರ ಹಾಗೂ ಬಾಣವನ್ನು ಹಿಡಿದಿದ್ದಾಳೆ. ದುರ್ಗಾಸಪ್ತಶತಿಯ ಪ್ರಕಾರ ಕೂಷ್ಮಾಂಡ ದೇವಿಯೇ ಜಗದ ಸೃಷ್ಟಿಗೆ ಕಾರಣೀಭೂತಳಾಗಿದ್ದಾಳೆ. ಸೌರವ್ಯೂಹದ ಗ್ರಹಳ ಚಲನೆಯನ್ನು ನಿಯಂತ್ರಿಸುತ್ತಾಳೆ. ಆಕೆ ಇರುವಲ್ಲಿ ಬೆಳಕು ಹಾಗೂ ಜ್ಞಾನವಿದೆ. ಕೂಷ್ಮಾಂಡ ದೇವಿಯು ತನ್ನ ಏಳೂ ಕೈಗಳಲ್ಲಿ ಕಮಂಡಲ, ಧನಸ್ಸು, ಬಾಣ, ತಾವರೆ ಹೂವು, ಚಕ್ರ, ಗದೆ ಹಾಗೂ ಜಪಮಾಲೆಯನ್ನು ಹಿಡಿದಿದ್ದಾಳೆ. ಇನ್ನೊಂದು ಹಸ್ತವು ಅಭಯ ಮುದ್ರೆಯಲ್ಲಿದ್ದು ಸದಾ ತನ್ನ ಭಕ್ತರನ್ನು ಆಶೀರ್ವದಿಸುತ್ತಾಳೆ. ವ್ಯಾಘ್ರವಾಹಿನಿಯಾಗಿರುವ ಈಕೆ ಧರ್ಮದ ಪ್ರತೀಕವಾಗಿದ್ದಾಳೆ. 

ಸೃಷ್ಟಿಯ ಅಸ್ತಿತ್ವವೇ ಇಲ್ಲದಿರುವಾಗ ಎಲ್ಲೆಡೆ ಅಂಧಕಾರವೇ ಪಸರಿಸಿತ್ತು. ಆಗ ಇದೇ ದೇವಿಯು ತನ್ನ ‘ಈಶತ್‌’ ಹಾಸ್ಯದಿಂದ ಬ್ರಹ್ಮಾಂಡವನ್ನು ಸೃಷ್ಟಿಸುತ್ತಾಳೆ. ಆದ್ದರಿಂದ ಇವಳೇ ಸೃಷ್ಟಿಯ ಆದಿ- ಸ್ವರೂಪ ಶಕ್ತಿಯಾಗಿದ್ದಾಳೆ. ಈಕೆಯು ಸೂರ್ಯನ ಸ್ಥಾನದಲ್ಲಿ ನಿಲ್ಲುವ ಕಾರಣದಿಂದಾಗಿ ಭೂಮಿಯ ಮೇಲಿರುವ ಅಂಧಕಾರವನ್ನೆಲ್ಲಾ ನಿವಾರಣೆ ಮಾಡುತ್ತಾಳೆ. ಕೂಷ್ಮಾಂಡ ದೇವಿಯು ಸೂರ್ಯನಿಗೆ ಅಧಿಪತಿಯಾಗಿರುವ ಕಾರಣ ಕೂಷ್ಮಾಂಡ ದೇವಿಯನ್ನು ಪೂಜಿಸುವುದರಿಂದ ಜಾತಕದಲ್ಲಿ ಸೂರ್ಯನಿಂದಾಗುವ ಕೆಡುಕನ್ನು ನಿವಾರಿಸಬಹುದು. ಜೊತೆಗೆ ಎಲ್ಲಾ ರೀತಿಯ ಸಂಕಷ್ಟಗಳೂ ನಿವಾರಣೆಯಾಗುವವು. 

 
 
 
 
 
 
 
 
 
 
 

Leave a Reply