ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರ ಸಾವಿಗೆ ಟಿಎಂಸಿ ಕಾರ್ಯಕರ್ತರೇ ಕಾರಣ~ತೇಜಸ್ವಿ ಸೂರ್ಯ

ಕೋಲ್ಕತಾ : ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರ ಸಾವಿಗೆ ಟಿಎಂಸಿ ಕಾರ್ಯಕರ್ತರೇ ಕಾರಣ ಎಂದು ಆರೋಪಿಸಿ, ಸರ್ಕಾರದ ವಿರುದ್ಧ ಇಂದು ‘ನಬನ್ನಾ ಚಲೋ’ ಪ್ರತಿಭಟನೆ ನಡೆಸಿದೆ. ಈ ವೇಳೆ ಒಂದೆಡೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಮೇಲೆ ನಾಡ ಬಾಂಬ್​ ದಾಳಿ ನಡೆದಿದೆ ಎಂದು ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿಸೂರ್ಯ ಹೇಳಿಕೆ ನೀಡಿದ್ದಾರೆ.

ಈ ಕುರಿತಂತೆ ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದು, ಫ್ಯಾಸಿಸಂ ಅನ್ನೋದು ವ್ಯಕ್ತವಾಗುವುದು ಹೀಗೆ ! ನಮ್ಮ ರ‍್ಯಾಲಿಯ ಮೇಲೆ ರೂಫ್​ಟಾಪ್ ಮೇಲಿಂದ ನಾಡ ಬಾಂಬ್ ದಾಳಿ ನಡೆಸಲಾಗಿದೆ. ಶಾಂತಿಯುತವಾಗಿ ನಡೆಯುತ್ತಿದ್ದ ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕಲು ಅಶ್ರುವಾಯು, ಲಾಠಿ ಪ್ರಹಾರವನ್ನೂ, ಜಲ ಪ್ರಹಾರವನ್ನೂ ನಡೆಸಲಾಗಿದೆ. ನಿರಂಕುಶಾಧಿಕಾರಿಯ ಅಂತ್ಯ ಕಾಲ ಸಮೀಪಿಸುತ್ತಿದೆ ಎಂದಿದ್ದು ರ‍್ಯಾಲಿಯ ಫೋಟೋಗಳನ್ನು ಅವರು ಪೋಸ್ಟ್ ಮಾಡಿದ್ದಾರೆ.

ಇಷ್ಟೇ ಅಲ್ಲದೆ, ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯ ಸುಖಾ ಸುಮ್ಮನೆ ಸಿಗುವುದಿಲ್ಲ, ಅದಕ್ಕೆ ಯಾರಾದರೂ ಬೆಲೆ ತೆರ ಬೇಕಾಗುತ್ತದೆ. ಬಂಗಾಳದ ನಾಳಿನ ಯುವಜನರು ಇಂದು ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ತೆತ್ತಿರುವ ಬೆಲೆ ಯನ್ನು ಸ್ಮರಿಸಲಿದ್ದಾರೆ ಎಂದು ತಮ್ಮ ಟ್ವೀಟ್ ನಲ್ಲಿ ಹೇಳಿದ್ದಾರೆ.

ಸಾವಿರಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ಒಳಗೊಂಡಿದ್ದ ಪ್ರತಿಭಟನಾ ಮೆರವಣಿಗೆ ಕೋಲ್ಕತ್ತ ಹಾಗೂ ಹೌರಾಹ್​ದಿಂದ ಮುಖ್ಯಮಂತ್ರಿ ಕಚೇರಿಗೆ ಸಾಗುತ್ತಿತ್ತು. ಅವರನ್ನು ಪೊಲೀಸರು ತಡೆದು ಕೂಡಲೇ ಅಲ್ಲಿನ ಪರಿಸ್ಥಿತಿ ಗಂಭೀರವಾಯಿತು. ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಲಾಠಿ ಚಾರ್ಜ್ ನೊಂದಿಗೆ ಗ್ಯಾಸ್ ಪ್ರಯೋಗವನ್ನೂ ನಡೆಸಿದರು. ಹೌರಾಹ್​ನ ಸೇತುವೆ ಮೇಲೆ ಗುಂಪುಗೂಡಿ ಪ್ರತಿಭಟನಾಕಾರರ ಮೇಲೆ ಪೊಲೀಸರು ನೀರು ಹಾಯಿಸಿದ್ದಾರೆ. ಇದರಿಂದಾಗಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜು ಬ್ಯಾನರ್ಜಿ, ಸಂಸದರಾದ ಜ್ಯೋತಿರ್ಮಯಿ ಮೆಹ್ತೋ ಸೇರಿ ಹಲವರು ಗಾಯ ಗೊಂಡಿದ್ದಾರೆ.

 
 
 
 
 
 
 
 
 
 
 

Leave a Reply