ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯ ಪೋಷಕರ ಫೋಟೋ ಹಂಚಿಕೊಂಡ ರಾಹುಲ್ ಗಾಂಧಿ : ಠಾಣೆಯಲ್ಲಿ ದಾಖಲಾಯ್ತು ದೂರು

ನವದೆಹಲಿ : ದೆಹಲಿಯಲ್ಲಿ ಅತ್ಯಾಚಾರಕ್ಕೆ ಒಳಗಾದ 9 ವರ್ಷದ ಬಾಲಕಿಯ ಪೋಷಕರ ಫೋಟೋವನ್ನು ಹಂಚಿಕೊಂಡು ಸಂತ್ರಸ್ತೆ ಬಗ್ಗೆ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ ಎಂಬ ಆರೋಪದ ಮೇಲೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ವಿರುದ್ಧ ದೆಹಲಿಯ ವಕೀಲ ವಿನೀತ್​ ಜಿಂದಾಲ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ರಾಹುಲ್​ ಗಾಂಧಿಯ ಈ ವರ್ತನೆ ಅಪರಾಧವಾಗಿದ್ದು, ಪೋಕ್ಸೊ ಕಾಯ್ದೆ ಸೆಕ್ಷನ್​ 23, ಬಾಲ ನ್ಯಾಯ 74, 228ಎ ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಅಪರಾಧವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸಂತ್ರಸ್ತೆಯ ಪಾಲಕರ ಫೋಟೋಗಳನ್ನು ರಾಹುಲ್ ಗಾಂಧಿ ತಮ್ಮ ಟ್ವಿಟರ್ ಅಕೌಂಟ್​​ನಲ್ಲಿ ಬಹಿರಂಗಗೊಳಿಸುತ್ತಿದ್ದಂತೆ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗ (NCPCR) ಟ್ವಿಟರ್​ ಇಂಡಿಯಾಕ್ಕೆ ನೋಟಿಸ್​ ನೀಡಿತ್ತು. ಪೋಕ್ಸೊ ಕಾಯ್ದೆಯ ನಿಯಮ ಉಲ್ಲಂಘನೆ ಮಾಡಿದ ರಾಹುಲ್ ಗಾಂಧಿ ಟ್ವಿಟರ್​ ಅಕೌಂಟ್​​ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೇಳಿತ್ತು. ಅದಾದ ಬೆನ್ನಲ್ಲೇ ಈ ವಕೀಲರೂ ಸಹ ರಾಹುಲ್​ ಗಾಂಧಿ ವಿರುದ್ಧ ದೂರು ನೀಡಿದ್ದಾರೆ

ದೆಹಲಿಯ ನಂಗಲ್​ ಏರಿಯಾದಲ್ಲಿ ಇತ್ತೀಚೆಗೆ ನಡೆದ್ದಿದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದೇಶವನ್ನು ಆತಂಕಕ್ಕೆ ದೂಡಿದೆ. ಚಿತಾಗಾರದ ಕೂಲರ್​ನಿಂದ ತಣ್ಣನೆಯ ನೀರು ತರಲು ಹೋಗಿದ್ದವಳ ಮೇಲೆ ಅಲ್ಲಿನ ಅರ್ಚಕ ಮತ್ತು ಸಹಚರರಿಂದ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಆದರೆ ಪಾಲಕರು ಅಲ್ಲಿಗೆ ಬಂದಾಗ, ಆಕೆ ವಿದ್ಯುತ್​ ಸ್ಪರ್ಶಿಸಿ ಮೃತಪಟ್ಟಿದ್ದಾಳೆ ಎಂದು ನಂಬಿಸಲಾಗಿತ್ತು. ಸದ್ಯ, ಅರ್ಚಕ ರಾಧೆಶ್ಯಾಂ ಸೇರಿ ಒಟ್ಟು ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

 
 
 
 
 
 
 
 
 

Leave a Reply