ಪೂರ್ಣಪ್ರಜ್ಞ ಕಾಲೇಜು: ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷರ ವಾಲಿಬಾಲ್ ಚಾಂಪಿಯನ್‌ಷಿಪ್

ಮುಂದಿನ ಐದು ದಿನಗಳ ಕಾಲ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಪ್ರದರ್ಶನಕ್ಕೆ ಉಡುಪಿ ಸಾಕ್ಷಿಯಾಗಲಿದೆ. ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗ ಮತ್ತು ಉಡುಪಿಯ ಪೂರ್ಣಪ್ರಜ್ಞ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳ  ಜಂಟಿ ಆಶ್ರಯದಲ್ಲಿ 2022-23ನೇ ಸಾಲಿನ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷರ ವಾಲಿಬಾಲ್ ಚಾಂಪಿಯನ್‌ಷಿಪ್ ಪೂರ್ಣಪ್ರಜ್ಞ ಕಾಲೇಜಿನಲ್ಲಿ ನಡೆಯಲಿದೆ.

ಜ.4ರಿಂದ 8ರವರೆಗೆ ಹೊನಲು ಬೆಳಕಿನಲ್ಲಿ ನಡೆಯಲಿರುವ ಈ ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕು ವಲಯಗಳಿಂದ ಅಗ್ರಸ್ಥಾನ ಪಡೆದ ತಲಾ ನಾಲ್ಕು ತಂಡಗಳಂತೆ ಒಟ್ಟು  ಹದಿನಾರು ತಂಡಗಳು ರಾಷ್ಟ್ರೀಯ ವಿವಿ ಚಾಂಪಿಯನ್ ತಂಡದ ಪ್ರಶಸ್ತಿಗಾಗಿ ಸೆಣಸಲಿವೆ ಎಂದು ವಾಲಿಬಾಲ್ ಟೂರ್ನಿಯ ಸಂಘಟನಾ ಸಮಿತಿಯ  ಸಂಯೋಜಕ ಹಾಗೂ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಸುಕುಮಾರ್ ತಿಳಿಸಿದ್ದಾರೆ.

ಹಾಲಿ ರಾಷ್ಟ್ರೀಯ ಚಾಂಪಿಯನ್ ಕೇರಳದ ಕಲ್ಲಿಕೋಟೆ ವಿವಿ ಹಾಗೂ ರನ್ನರ್ ಅಪ್ ಹರಿಯಾಣದ ಕುರುಕ್ಷೇತ್ರ ವಿವಿಗಳು ಈ ಬಾರಿಯೂ ಅಂತರ ವಲಯ ಸ್ಪರ್ಧೆಗೆ ತೇರ್ಗಡೆಗೊಂಡಿವೆ.  ಭಾಗವಹಿಸುವ 16 ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಚಾಂಪಿಯನ್ ಕಲ್ಲಿಕೋಟೆ ವಿವಿ ಡಿ ಗುಂಪಿನಲ್ಲಿದ್ದರೆ, ರನ್ನರ್‌ಅಪ್ ಕುರುಕ್ಷೇತ್ರ ವಿವಿ ಎ ಗುಂಪಿನಲ್ಲಿದೆ. ಆತಿಥೇಯ ಮಂಗಳೂರು ವಿವಿ ಸಿ ಗುಂಪಿನಲ್ಲಿ ಸ್ಥಾನ ಪಡೆದಿದೆ.

ತಂಡಗಳ ವಿವರ:

ಎ ಗುಂಪು: ಕುರುಕ್ಷೇತ್ರ ವಿವಿ, ಜೈಪುರದ ರಾಜಾಸ್ತಾನ ವಿವಿ, ಕೋಲ್ಕತ್ತಾದ ಅದಮಾಸ್ ವಿವಿ, ಚೆನ್ನೈನ ಮದರಾಸು ವಿವಿ.

ಬಿ ಗುಂಪು: ಎಸ್‌ಆರ್‌ಎಂ ವಿವಿ ಚೆನ್ನೈ, ಮಹಾತ್ಮಗಾಂಧಿ ಕಾಶಿ ವಿದ್ಯಾಪೀಠ ವಾರಣಸಿ, ಗುರುನಾನಕ್ ದೇವ್ ವಿವಿ ಅಮೃತಸರ, ಶ್ರೀಕುಶಾಲದಾಸ್ ವಿವಿ ಹನುಮಾನ್‌ಗಡ್.

ಸಿ ಗುಂಪು: ಪುಣೆಯ ಭಾರತಿ ವಿವಿ, ಚಂಡಿಗಢದ ಪಂಜಾಬ್ ವಿವಿ, ಮಂಗಳೂರಿನ ಮಂಗಳೂರು ವಿವಿ, ಭುವನೇಶ್ವರದ ಕೆಐಐಟಿ ಡೀಮ್ಡ್ ವಿವಿ.

ಡಿ ಗುಂಪು: ಉತ್ಕಲ ವಿವಿ ಭುವನೇಶ್ವರ, ಕಲ್ಲಿಕೋಟೆ ವಿವಿ ಕಲ್ಲಿಕೋಟೆ, ಡಾ.ಬಿಎಎಂ ವಿವಿ ಔರಂಗಬಾದ್ ಹಾಗೂ ಹಿಮಾಚಲ ಪ್ರದೇಶ ವಿವಿ.

ಸ್ಪರ್ಧೆಗಳು ಜ.4ರಂದೇ ಪ್ರಾರಂಭಗೊಳ್ಳಲಿದ್ದು, ಮೊದಲ ದಿನ ಬೆಳಗ್ಗೆ 7:30ರಿಂದ ರಾತ್ರಿ 10:30ರವರೆಗೆ ಒಟ್ಟು ಎಂಟು ಲೀಗ್ ಪಂದ್ಯಗಳು ನಡೆಯಲಿವೆ. ನಾಳೆ ಮಂಗಳೂರು ವಿವಿ, ಪಂಜಾಬ್ ವಿವಿಯನ್ನು, ಕಲ್ಲಿಕೋಟೆ ವಿವಿ, ಡಾ.ಬಿಎಎಂ ವಿವಿ ಔರಂಗಬಾದ್ ತಂಡವನ್ನು ಹಾಗೂ ದಿನದ ಮೊದಲ ಪಂದ್ಯದಲ್ಲಿ ಕುರುಕ್ಷೇತ್ರ ವಿವಿ, ಚೆನ್ನೈನ ಮದರಾಸು ವಿವಿಯನ್ನು ಎದುರಿಸಲಿವೆ ಎಂದು ಸುಕುಮಾರ್ ವಿವರಿಸಿದರು.

ಟೂರ್ನಿಯ ಅಧಿಕೃತ ಉದ್ಘಾಟನೆ ಜ.5ರಂದು ಬೆಳಗ್ಗೆ 10:30ಕ್ಕೆ ನಡೆಯಲಿದೆ. ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥರು ಹಾಗೂ ಶ್ರೀಈಶಪ್ರಿಯತೀರ್ಥರ ಆಶೀರ್ವಚನದೊಂದಿಗೆ ಕರ್ನಾಟಕ   ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೊಟ್ ಟೂರ್ನಿಯನ್ನು ಉದ್ಘಾಟಿಸಲಿದ್ದಾರೆ.

ಅಲ್ಲದೇ ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಜಂಟಿ ಕಾವ್ಯದರ್ಶಿ ಡಾ.ಬಲ್ವಿತ್ ಸಿಂಗ್, ಜಿಲ್ಲಾ ಉಸುತಿವಾರಿ ಸಚಿವ ಎಸ್. ಅಂಗಾರ, ಹಿಂದುಳಿದ ವರ್ಗ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಇಂಧನ, ಕನ್ನಡ ಮತುತಿ ಸಂಸ್ಕೃತಿ ಇಲಾಖೆಯ ಸಚಿವ ಸುನಿಲ್ ಕುಮಾರ್ ಹಾಗೂ ಶಾಸಕರ ಸಹಿತ ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಜ.4ರಿಂದ 6ರವರೆಗೆ ಲೀಗ್ ಪಂದ್ಯಗಳು ನಡೆಯಲಿದ್ದು, ಜ.7ರಂದು ಪ್ರತಿ ಗುಂಪಿನ ಎರಡು ಅಗ್ರಸ್ಥಾನಿಗಳು ಕ್ವಾರ್ಟರ್ ಪೈನಲ್‌ನಲ್ಲಿ ಆಡಲಿದೆ. ಜ.8ರಂದು ಸೆಮಿಪೈನಲ್ ಹಾಗೂ ಫೈನಲ್ ಪಂದ್ಯಗಳು ನಡೆಯಲಿವೆ.

ಜ.7ರಂದು ಸಂಜೆ 5:30ಕ್ಕೆ ‘ಪ್ರಜ್ಞಾ ಗೌರವ’ ಎಂಬ ವಿಶೇಷ ಕಾರ್ಯಕ್ರಮ ದಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾಸಾಧಕ ರಿಗೆ ಸನ್ಮಾನವಿದೆ. ಜ.8ರಂದು ಸಂಜೆ 7 ಗಂಟೆಗೆ ಫೈನಲ್ ಪಂದ್ಯದ ಬಳಿಕ  ಸಮಾರೋಪ ಸಮಾರಂಭ, ವಿಜೇತರಿಗೆ ಬಹುಮಾನ ವಿತರಣೆ  ನಡೆಯಲಿದೆ.

 
 
 
 
 
 
 
 
 
 
 

Leave a Reply