ಕೃಷಿ ಕಾಯ್ದೆ ಹಿಂತೆಗೆತ ಪ್ರಧಾನಿ ಮೋದಿ ಜಾಣ ನಡೆ : ಜಿಲ್ಲಾ ಬಿಜೆಪಿ

ದೇಶದ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಜಾರಿಗೆ ತಂದಿರುವ ರೈತಪರ ಕೇಂದ್ರ ಕೃಷಿ ಕಾಯ್ದೆಯನ್ನು ದೇಶದ ಬಾಹ್ಯ ಮತ್ತು ಆಂತರಿಕ ಭದ್ರತೆಯ ಹಿತಾಸಕ್ತಿಯಿಂದ ಹಿಂಪಡೆದಿರುವ ಪ್ರಧಾನಿ ನರೇಂದ್ರ ಮೋದಿ ಜಾಣ ನಡೆ ಪ್ರಶಂಸನೀಯ ಎಂದು ಜಿಲ್ಲಾ ಬಿಜೆಪಿ ಹೇಳಿದೆ.

ಕಾಂಗ್ರೆಸ್ ಬೆಂಬಲದಿಂದ ರಾಕೇಶ್ ಟಿಕಾಯತ್ ನಂತಹ ನಕಲಿ ರೈತ ನಾಯಕರು ಐಶಾರಾಮಿ ವ್ಯವಸ್ಥೆಗಳೊಂದಿಗೆ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನೈಜ ರೈತರ ಹಿತವನ್ನು ಕಡೆಗಣಿಸಿ ಮಧ್ಯವರ್ತಿಗಳ ಹಿತಾಸಕ್ತಿಗಾಗಿ ಕೇಂದ್ರ ಕೃಷಿ ಕಾಯ್ದೆಯನ್ನು ವಿರೋಧಿಸಿ ವರ್ಷಕ್ಕೂ ಮಿಕ್ಕಿ ಅವಧಿಯಲ್ಲಿ ನಡೆಸಿದ ಆಂದೋಲನ ಯಾವ ರೀತಿಯಲ್ಲಿ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ ಎಂಬುದು ದೇಶದ ಜನತೆಯ ಮುಂದೆ ಜಗಜ್ಜಾಹೀರಾಗಿದೆ. 

ಕೊನೆಗೂ ಆಂದೋಲನ ಜೀವಿಗಳ ಮುಖ್ಯಸ್ಥ ರಾಕೇಶ್ ಟಿಕಾಯತ್ ನೇತೃತ್ವದಲ್ಲಿ ನೈಜ ರೈತರ ಮುಖವಾಡ ಧರಿಸಿರುವ ನಕಲಿ ರೈತರು ನಡೆಸಿರುವ ಕೇಂದ್ರ ಕೃಷಿ ಕಾಯ್ದೆ ವಿರೋಧಿ ಆಂದೋಲನ ಹಳ್ಳ ಹಿಡಿದು ಅಂತ್ಯಗೊಳ್ಳುವ ಕಾಲ ಸನ್ನಿಹಿತವಾಗಿದೆ.

ನೋಟ್ ಬ್ಯಾನ್, 370ನೇ ವಿಧಿ ರದ್ಧತಿ, ತ್ರಿವಳಿ ತಲಾಖ್ ರದ್ಧತಿಯ ಜೊತೆಗೆ ಸಿಎಎ ಕಾಯ್ದೆ ಜಾರಿಗೆ ಬದ್ಧವಿರುವ, ಶತ್ರು ರಾಷ್ಟ್ರ ಚೀನಾ ಮತ್ತು ಪಾಕಿಸ್ಥಾನದ ಹೆಡೆಮುರಿ ಕಟ್ಟಲು ಎಲ್ಲ ಅಗತ್ಯ ವ್ಯವಸ್ಥೆಗಳೊಂದಿಗೆ ಸನ್ನದ್ಧವಾಗಿರುವ, ಅಯೋಧ್ಯೆಯಲ್ಲಿ ಬಹು ನಿರೀಕ್ಷಿತ ಶ್ರೀರಾಮ ಮಂದಿರ ನಿರ್ಮಾಣದ ಸಹಿತ ಮುಸ್ಲಿಂ ರಾಷ್ಟ್ರದಲ್ಲೂ ಮಂದಿರ ನಿರ್ಮಾಣಕ್ಕೆ ಕಾರಣರಾದ ವಿಶ್ವ ವಂದ್ಯ ನಾಯಕ ಪ್ರಧಾನಿ ನರೇಂದ್ರ ಮೋದಿ ದೂರದರ್ಶಿತ್ವದ ಚಿಂತನೆಯ ನಿರ್ಧಾರದಲ್ಲಿ ದೇಶದ ಹಿತವಿದೆ. 

ಮುಂದಿನ ದಿನಗಳಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ನೈಜ ರೈತರ ಹಿತ ಕಾಯುವ ಪರಿಷ್ಕ್ರತ ಕೃಷಿ ಕಾಯ್ದೆ ಜಾರಿಗೆ ಬರುವ ಸಂಪೂರ್ಣ ವಿಶ್ವಾಸವಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ ತಿಳಿಸಿದ್ದಾರೆ.

ದೇಶದ ಸ್ವಾತಂತ್ರ್ಯಾ ನಂತರ ಬ್ರಹ್ಮಾಂಡ ಭ್ರಷ್ಟಾಚಾರದೊಂದಿಗೆ ಒಂದೇ ಕುಟುಂಬದ ಹಿತ ಕಾಯುವ ಜೊತೆಗೆ ನಕಲಿ ಜಾತ್ಯಾತೀತತೆ ಪ್ರದರ್ಶಿಸಿ ಸುಧೀರ್ಘ ಅವಧಿಗೆ ದುರಾಡಳಿತ ನಡೆಸಿ ದೇಶವಾಸಿಗಳಿಂದ ತಿರಸ್ಕ್ರತಗೊಂಡಿರುವ ಕಾಂಗ್ರೆಸ್ ಇಂದು ಯಾವ ರೀತಿಯಲ್ಲಿ ಮೂಲೆಗುಂಪಾಗಿದೆ ಎಂಬ ಬಗ್ಗೆ ಕಾಂಗ್ರೆಸ್ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. 

ಸಾಮಾಜಿಕ ಜಾಲತಾಣದ ಮೂಲಕ ನಿರಂತರ ಅಪಪ್ರಚಾರದಿಂದ ವಿಶ್ವ ನಾಯಕ ಪ್ರಧಾನಿ ಮೋದಿ ಸಹಿತ ಕೇಂದ್ರ ಮತ್ತು ರಾಜ್ಯದ ಅಭಿವೃದ್ಧಿ ಪರ ಆಡಳಿತ ಪಕ್ಷ ಬಿಜೆಪಿಯ ಸಾಧನೆಗಳನ್ನು ಮರೆಮಾಚಲು ಹೆಣಗಾಡುತ್ತಿರುವ ಕಾಂಗ್ರೆಸ್‍ನ ದುರುದ್ಧೇಶಪೂರಿತ ಪ್ರಯತ್ನ ಎಂದಿಗೂ ಸಫಲವಾಗದು.

ದೇಶವಾಸಿಗಳು ಪ್ರಬುದ್ಧರಾಗಿದ್ದು, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಅದೆಷ್ಟು ಅಮಾಯಕ ರಾಷ್ಟ್ರ ಭಕ್ತರು ದೇಶಕ್ಕಾಗಿ ಹುತಾತ್ಮರಾಗಿದ್ದಾರೆ, ಹಿಂಬಾಗಿಲಿನಿಂದ ಸ್ವತಂತ್ರ ಭಾರತದ ಚುಕ್ಕಾಣಿಯನ್ನು ಹಿಡಿದು ದೇಶದ ಭದ್ರತೆಯ ವಿಚಾರದಲ್ಲಿ ನೆಹರೂ ಯಾವ ರೀತಿಯಲ್ಲಿ ಅಸಡ್ಡೆ ತೋರಿದ್ದಾರೆ, ಸಂವಿಧಾನ ಶಿಲ್ಪಿ 

ಡಾ| ಬಿ.ಆರ್. ಅಂಬೇಡ್ಕರ್ ರವರಿಗೆ ಕಾಂಗ್ರೆಸ್ ಯಾವ ರೀತಿಯಲ್ಲಿ ಮೋಸಗೈದಿದೆ, ಕಾಂಗ್ರೆಸ್‍ನ ಪರಮೋಚ್ಛ ನಾಯಕರು ಯಾವ ರೀತಿಯಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿ ಬೇಲ್ ಮೇಲೆ ಹೊರಗಡೆ ಇದ್ದಾರೆ ಎಂಬೆಲ್ಲಾ ವಿಚಾರಗಳ ಬಗ್ಗೆ ಸಂಪೂರ್ಣ ಅರಿವಿದೆ. ಇಂದಿನ ಅಭಿವೃದ್ಧಿ ಪರ ಆಡಳಿತದ ಮೋದಿ ಯುಗದಲ್ಲಿ ಕಾಂಗ್ರೆಸ್ ನಾಯಕರ ಬೊಗಳೆ ಮಾತಿಗೆ ಎಳ್ಳಷ್ಟೂ ಮನ್ನಣೆ ಸಿಗಲಾರದು ಎಂದು ಅವರು ತಿಳಿಸಿದ್ದಾರೆ.

ದೇಶದೆಲ್ಲೆಡೆ ಬಿಜೆಪಿ ನೇತೃತ್ವದ ಜನಪರ ಆಡಳಿತದಿಂದ ಕಂಗೆಟ್ಟು ಸರಕಾರದ ವಿರುದ್ಧ ಟೀಕಿಸಲು ಯಾವುದೇ ಪ್ರಮುಖ ವಿಚಾರಗಳಿಲ್ಲದೇ ಕಾಂಗ್ರೆಸ್ ದಿಕ್ಕು ದೆಸೆ ಇಲ್ಲದಂತೆ ವರ್ತಿಸುತ್ತಿರುವುದು ಹಾಸ್ಯಾಸ್ಪದ. ಪ್ರಧಾನಿ ನರೇಂದ್ರ ಮೋದಿ ತನ್ನ ದಿಟ್ಟತನದ ಕಾರ್ಯ ವೈಖರಿಯಿಂದ ವಿರೋಧಿಗಳಿಗೆ ಸಿಂಹಸ್ವಪ್ನವೆನಿಸಿದ್ದಾರೆ. ದೇಶದ ಸಂವಿಧಾನದ ಮೇಲೆ ನಂಬಿಕೆ ಇಲ್ಲದ ಒವೈಸಿಯಂತಹ ಅದೆಷ್ಟೋ ಮಂದಿಯ ದೇಶ ವಿರೋಧಿ ಹೇಳಿಕೆಗಳಿಗೆ ಸೊಪ್ಪು ಹಾಕದ ಪ್ರಧಾನಿ ಮೋದಿ ಸಿಎಎ ಸಹಿತ ಯೋಜಿತ ಎಲ್ಲ ಯೋಜನೆಗಳನ್ನು ಜಾರಿಗೊಳಿಸುವುದು ಶತಸಿದ್ಧ ಎಂದು ಗುರುಪ್ರಸಾದ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply