ದೇವಸ್ಥಾನಗಳನ್ನು ಕೆಡವಿ ಕಟ್ಟಿರುವ ಮಸೀದಿಗಳನ್ನು ಒಡೆಯಿರಿ-ಪ್ರಧಾನಿಗೆ ಮುಸ್ಲಿಂ ಮುಖಂಡನ ಪತ್ರ

ಲಖನೌ: ಶಿಯಾ ವಕ್ಫ್​ ಬೋರ್ಡ್​​ನ ಮಾಜಿ ಅಧ್ಯಕ್ಷ ವಾಸಿಂ ರಿಝ್ವಿ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದ ಪತ್ರವೊಂದು ಬರೆದಿದ್ದಾರೆ. ಪೂಜಾ ಸ್ಥಳಗಳ ಕಾಯ್ದೆ- 1991ನ್ನು ರದ್ದುಗೊಳಿಸಿ, ಮೊಘಲ್​ ಕಾಲದಲ್ಲಿ ದೇವಸ್ಥಾನಗಳನ್ನು ಒಡೆದು ನಿರ್ಮಿಸಲಾದ ಎಲ್ಲ ಮಸೀದಿಗಳನ್ನೂ ಈಗ ಒಡೆದು, ಅಲ್ಲಿ ದೇವಾಲಯಗಳನ್ನು ಕಟ್ಟಿ ಎಂದು  ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದು ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
 
1991ರಲ್ಲಿ ಕಾಂಗ್ರೆಸ್​ ಸರ್ಕಾರ ಮುಸ್ಲಿಮರನ್ನು ಓಲೈಸಲು ಈ ಕಾಯ್ದೆಯನ್ನು ತಂದಿದೆ. ಅದನ್ನು ರದ್ದು ಮಾಡಿ. ಮೊಘಲ್​ ಕಾಲದಲ್ಲಿ ಹಲವು ದೇವಾಲಯಗಳನ್ನು ಒಡೆದು ಮಸೀದಿಗಳನ್ನು ಕಟ್ಟಲಾಗಿದೆ. ಈಗ ಆ ಮಸೀದಿಗಳನ್ನು ಧ್ವಂಸ ಮಾಡಿ, ಹಿಂದುಗಳ ದೇವಾಲಯವನ್ನು ಪುನಃ ನಿರ್ಮಾಣ ಮಾಡಿ ಎಂದು ಒತ್ತಾಯಿಸಿದ್ದಾರೆ. ಪತ್ರ ಬರೆದ ನಂತರ ವಿಡಿಯೋ ಮೆಸೇಜ್​ವೊಂದನ್ನು ಬಿಡುಗಡೆ ಮಾಡಿರುವ ರಿಝ್ವಿ, ತಾವು ಪ್ರಧಾನಿಗೆ ಪತ್ರ ಬರೆದಿರುವುದನ್ನು ಒಪ್ಪಿಕೊಂಡಿದ್ದಾರೆ.
1991ರ ಪೂಜಾಸ್ಥಳಗಳ ಕಾಯ್ದೆಯಿಂದ ಹಲವು ಕಾನೂನು ಬಾಹಿರವಾಗಿ ನಿರ್ಮಿಸಲಾದ ಮಸೀದಿಗಳಿಗೆ ರಕ್ಷಣೆ ಸಿಕ್ಕಂತಾಗಿದೆ ಎಂದೂ ಅವರು ಹೇಳಿದ್ದಾರೆ. ಹಿಂದಿಯಲ್ಲಿ ಪತ್ರ ಬರೆದಿರುವ ರಿಝ್ವಿ, ನಾವು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇದ್ದೇವೆ. ಮೊಘಲ್​ ಚರ್ಕವರ್ತಿಗಳು ಹಿಂದುಗಳಿಗೆ ಮಾಡಿದ ಶೋಷಣೆಯನ್ನು ನಾವು ಈಗ ಸರಿಪಡಿಸಲು ಸಾಧ್ಯವಿಲ್ಲ. ಆದರೆ ಅವರ ಧಾರ್ಮಿಕ ಸ್ಥಳಗಳನ್ನು ಹಿಂದಿರುಗಿಸುವ ಮೂಲಕ ಹಿಂದುಗಳಿಗೆ ನ್ಯಾಯ ನೀಡಬಹುದು ಎಂದೂ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಅಯೋಧ್ಯೆ ರಾಮಜನ್ಮಭೂಮಿ, ಮಥುರಾ ಕೃಷ್ಣಜನ್ಮಭೂಮಿ, ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯ ಸೇರಿ ಇನ್ನೂ ಅನೇಕ ದೇಗುಲಗಳನ್ನು ಹೆಸರಿಸಿರುವ ಅವರು, ಇವೆಲ್ಲವೂ ಮೊಘಲರ ದಬ್ಬಾಳಿಕೆಗೆ ಒಳಪಟ್ಟ ಹಿಂದುಗಳ ಧಾರ್ಮಿಕ ಸ್ಥಳಗಳು ಎಂದಿದ್ದಾರೆ.
 
 
 
 
 
 
 
 
 
 
 

Leave a Reply