ಅಫ್ಘಾನ್ : ಕಾಬುಲ್ ಏರ್ಪೋರ್ಟ್ನಲ್ಲಿ ಆತ್ಮಾಹುತಿ ಬಾಂಬ್ ದಾಳಿಗೆ 60ಕ್ಕೂ ಹೆಚ್ಚು ಬಲಿ

ಕಾಬುಲ್: ಶಾಂತಿ ನೆಲೆಸಿದ್ದ ಆಫ್ಘಾನ್ ನಾಡು ತಾಲಿಬಾನಿಗಳು ವಶಪಡಿಸಿಕೊಂಡ ಬಳಿಕ ಸಾವಿನ ಮನೆಯಾಗಿದೆ. ಈ ನಡುವೆ ತಾಲಿಬಾನ್ ಕಪಿಮುಷ್ಠಿಯಿಂದ ತಪ್ಪಿಸಿಕೊಳ್ಳಲು ದೇಶ ತೊರೆಯಲು ಕಾಬುಲ್ ವಿಮಾನ ನಿಲ್ದಾಣದಲ್ಲಿ ಜನ ಕಿಕ್ಕಿರಿದು ಸೇರಿದ್ದು, ಇದನ್ನೇ ಅಸ್ತ್ರವಾಗಿ ಮಾಡಿಕೊಂಡ ಐಸಿಸ್ ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದಾರೆ.

ಆ. 26 ರ ರಾತ್ರಿ ನಡೆದ ಭೀಕರ ಸ್ಫೋಟದಲ್ಲಿ 13 ಅಮೆರಿಕ ಯೋಧರು ಹಾಗೂ 60 ನಾಗರಿಕರು ದಾರುಣವಾಗಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ 150 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ ಎಂದು ಕಾಬುಲ್ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆಫ್ಘಾನ್ ಪತ್ರಕರ್ತರು ಸೆರೆಹಿಡಿದಿರುವ ವಿಡಿಯೋದಲ್ಲಿ ಡಜನ್ಗಟ್ಟಲೆ ಮೃತದೇಹಗಳು ಕಾಬುಲ್ ಏರ್ಪೋರ್ಟ್ ಅಂಚಿನಲ್ಲಿರುವ ಕಾಲುವೆಯ ಸುತ್ತಮುತ್ತ ಬಿದ್ದಿವೆ. ಅವಳಿ ಸ್ಫೋಟದ ಬೆನ್ನಲ್ಲೇ ಮೂರನೇ ಸ್ಫೋಟವು ಕೂಡ ಏರ್ಪೋರ್ಟ್ನಲ್ಲಿ ಐಸಿಸ್ ಉಗ್ರರು ನಡೆಸಿದ್ದಾರೆ.

ದಾಳಿಯ ಹೊಣೆಯನ್ನು ಐಸಿಸ್ ಹೊತ್ತುಕೊಂಡಿದೆ. ಅಮರಿಕ ಸೇನೆಯ ಜತೆಗಿದ್ದ ಅನುವಾದಕರು ಮತ್ತು ಸಹಯೋಗಿಗಳೇ ನಮ್ಮ ಆತ್ಮಾಹುತಿ ಬಾಂಬ್ ದಾಳಿಕೋರರ ಗುರಿಯಾಗಿದ್ದರು ಎಂದು ಹೇಳಿಕೊಂಡಿದೆ. ಅಮೆರಿಕ ಕೂಡ ದಾಳಿ ಕುರಿತು ಐಸಿಸ್ ಮೇಲೆ ದೂಷಿಸಿದೆ.ಸ್ಫೋಟದಲ್ಲಿ ಅಮೆರಿಕದ 13 ಯೋಧರು ಬಲಿಯಾಗಿದ್ದಾರೆ. 2011 ಆಗಸ್ಟ್ನಲ್ಲಿ 30 ಯೋಧರಿದ್ದ ಅಮೆರಿಕ ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಿದ ಬಳಿಕ ಒಂದೇ ಘಟನೆಯಲ್ಲಿ ಅತಿ ಹೆಚ್ಚು ಅಮೆರಿಕ ಯೋಧರು ಮೃತಪಟ್ಟ ಘಟನೆ ಇದಾಗಿದೆ ಎಂದು ಅಮೆರಿಕ ಅಧಿಕಾರಿಗಳು ಹೇಳಿದ್ದಾರೆ. ಅಮೆರಿಕ ಸೇನಾ ಪಡೆಗಳು ಆಫ್ಘಾನ್ ಪ್ರಜೆಗಳನ್ನು ಸ್ಥಳಾಂತರ ಮಾಡುವ ಕಾರ್ಯದ ನಡುವೆಯೇ ಈ ಅಮಾನುಷ ದಾಳಿ ನಡೆದಿದೆ.

ಕಾಬುಲ್ ಏರ್ಪೋರ್ಟ್ ಜನ ತುಂಬಿದ್ದ ಗೇಟ್ ಬಳಿ ತಮ್ಮ ಸಂಘಟನೆಯ ಆತ್ಮಾಹುತಿ ಬಾಂಬ್ ದಾಳಿಕೋರ ಇರುವ ಚಿತ್ರವನ್ನು ಸಹ ಐಸಿಸ್ ಬಿಡುಗಡೆ ಮಾಡಿದೆ. ಈ ಘಟನೆಯಿಂದಾಗಿ ದೇಶ ತೊರೆಯಲು ಹವಣಿಸುತ್ತಿದ್ದ ಆಫ್ಘಾನ್ ಜನರ ಸ್ಥಳಾಂತರ ಕಾರ್ಯವನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ.

ಕಾಬೂಲ್ ವಿಮಾನ ನಿಲ್ದಾಣದ ಬಳಿಯಿದ್ದ ‘ಬರಾನ್ ಕ್ಯಾಂಪ್’ ನಲ್ಲಿ ಅಮೆರಿಕದ ಸೇನೆಯೊಂದಿಗೆ ಭಾಷಾಂತರಕಾರರು ಮತ್ತು ಸಹಯೋಗಿಗಳಿದ್ದ ದೊಡ್ಡ ಕೂಟವನ್ನು ತಲುಪುವಲ್ಲಿ ಮೊದಲಿಗೆ ಯಶಸ್ವಿಯಾದ ಐಸಿಸ್ ಆತ್ಮಾಹುತಿ ಬಾಂಬರ್, ನಂತರ ತನ್ನ ಸ್ಫೋಟಕ ಬೆಲ್ಟ್ ಅನ್ನು ಸ್ಫೋಟಿಸಿದ್ದಾನೆ. ಇದರ ಪರಿಣಾಮ ಸುಮಾರು 72 ಜನರು ಮೃತಪಟ್ಟು 143 ಕ್ಕೂ ಹೆಚ್ಚು ಜನರನ್ನು ಗಾಯಗೊಂಡಿದ್ದಾರೆ. ಇದರಲ್ಲಿ ತಾಲಿಬಾನ್ ಉಗ್ರರು ಕೂಡ ಸೇರಿಕೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ.

 
 
 
 
 
 
 
 
 
 
 

Leave a Reply