ಶಾಲಾ ಬಸ್ ಕಂದಕಕ್ಕೆ ಉರುಳಿ 16 ಮಂದಿ ದುರ್ಮರಣ

ಚಲಿಸುತ್ತಿದ್ದ ಶಾಲಾ ಬಸ್ ವೊಂದು ಕಣಿವೆಗೆ ಉರುಳಿ ಮಕ್ಕಳು ಸೇರಿದಂತೆ 16 ಮಂದಿ ಸಾವನ್ನಪ್ಪಿರುವ ಘಟನೆ ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ನಡೆದಿದೆ.

ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಕುಲು ಡೆಪ್ಯೂಟಿ ಕಮಿಷನರ್​​ ಅಶುತೋಷ್​ ಗರ್ಗ್​ ಈ ವಿಚಾರವಾಗಿ ಅಧಿಕೃತ ಮಾಹಿತಿಯನ್ನು ನೀಡಿದ್ದಾರೆ.

ಸಾಯಿಂಜ್​ಗೆ ತೆರಳುತ್ತಿದ್ದ ಬಸ್​​ ಬೆಳಗ್ಗೆ 8:30ರ ಸುಮಾರಿಗೆ ಜಂಗ್ಲಾ ಗ್ರಾಮದ ಬಳಿಯಲ್ಲಿ ಕಂದಕಕ್ಕೆ ಉರುಳಿದೆ ಎಂದು ಮಾಹಿತಿ ನೀಡಿದ್ದು, ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಘಟನೆ ನಡೆದಿದೆ. ನಿಯೋಲಿ-ಶಂಶೇರ್ ಕಣಿವೆ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಬಸ್ ಕಣಿವೆಗೆ ಉರುಳಿದ್ದು, ಮೃತಪಟ್ಟವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳಿದ್ದರು ಎಂದು ತಿಳಿದು ಬಂದಿದೆ.

ಅಪಘಾತದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸ್​ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಸ್ಥಳಕ್ಕೆ ಧಾವಿಸಿದ್ದು, ಅಪಘಾತದಲ್ಲಿ ಗಾಯಗೊಂಡವರನ್ನು ಕೂಡಲೇ ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಾಯಗೊಂಡವರಲ್ಲಿ ಬಹುತೇಕರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆಯೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇನ್ನೂ ಹಿಮಾಚಲ ಪ್ರದೇಶ ಸಿಎಂ ಜೈರಾಮ್ ಠಾಕೂರ್ ಕುಲ್ಲುವಿನ ಸೈಂಜ್​ ಕಣಿವೆಯಲ್ಲಿ ಖಾಸಗಿ ಬಸ್​ ಅಪಘಾತಕ್ಕೆ ಒಳಗಾದ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಗಾಯಾಳುಗಳನ್ನು ರಕ್ಷಿಸುವ ಹಾಗೂ ಆಸ್ಪತ್ರೆಗೆ ಸಾಗಿಸುವ ಕಾರ್ಯಗಳನ್ನು ಮಾಡಲು ರಕ್ಷಣಾ ತಂಡ ಸ್ಥಳದಲ್ಲಿದೆ. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ ಅಂತಾ ​ಟ್ವೀಟ್ ಮಾಡಿದ್ದಾರೆ.

10 ದಿನಗಳ ಹಿಂದೆಯಷ್ಟೇ ಹಿಮಾಚಲ ಪ್ರದೇಶ ಶಿಮ್ಲಾ ಜಿಲ್ಲೆಯಲ್ಲಿ ಪಿಕಪ್​ ವಾಹನ ಕಂದಕಕ್ಕೆ ಉರುಳಿದ ಪರಿಣಾಮ 28 ಮಂದಿ ಗಾಯಗೊಂಡಿದ್ದರು. 9 ಮಂದಿ ಸ್ಥಿತಿ ಗಂಭೀರವಾಗಿದ್ದು ಇವರನ್ನು ಇಂದಿರಾ ಗಾಂಧಿ ಮೆಡಿಕಲ್​ ಕಾಲೇಜು ಹಾಗೂ ಆಸ್ಪತ್ರೆಗೆ ಶಿಫ್ಟ್​ ಮಾಡಲಾಗಿದೆ. ಥಿಯೋಗ್ ಬಳಿಯ ಬುಗಾರೊ ನುಲ್ಲಾ ಎಂಬಲ್ಲಿ ಪಿಕಪ್ ವಾಹನವು ಕಮರಿಗೆ ಬಿದ್ದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply