ಚಿನ್ನದ ಬೆಲೆ ಮತ್ತೆ 50 ಸಾವಿರ ರೂಪಾಯಿಗೆ ಏರಿಕೆತಾಗುವ ಸಾಧ್ಯತೆ

ನವದೆಹಲಿ: ಬೆಲೆಯಲ್ಲಿ ದಾಖಲೆಯ ಏರಿಕೆ ಬಳಿಕ ಕುಸಿತ ಕಂಡಿದ್ದ ಚಿನ್ನದ ದರ ಈಗ ಮತ್ತೆ ಏರಿಕೆ ಹಾದಿಯಲ್ಲಿದೆ. ಮುಂದಿನ ದಿನಗಳಲ್ಲಿ 10 ಗ್ರಾಮ್ ಬೆಲೆ ಮತ್ತೆ 50 ಸಾವಿರ ರೂ.ಗೆ ತಲುಪಬಹುದು ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಣೆ ನಡೆಸಿದ್ದಾರೆ.

ಅಂತಾರಾಷ್ಟ್ರೀಯ ಚಿನಿವಾರ ಪೇಟೆಯ ಫ್ಯೂಚರ್ಸ್ ಖರೀದಿಯಲ್ಲಿ ಚಿನ್ನದ ಬೆಲೆ ಜನವರಿ 6ಕ್ಕೆ ಪ್ರತಿ ಔನ್ಸ್​ಗೆ 1,959 ಡಾಲರ್ (1,46,788 ರೂಪಾಯಿ) ಇತ್ತು. ಮಾರ್ಚ್ 8ಕ್ಕೆ ಇದು 1,676.01 ಡಾಲರ್​ಗೆ (1,25,584 ರೂಪಾಯಿ) ಇಳಿಯಿತು. ಆದರೆ, ಮಾರ್ಚ್ 31ರ ನಂತರ ಮತ್ತೆ ಏರುಗತಿಯನ್ನು ಪಡೆದ ಹಳದಿ ಲೋಹ 1,677.61 ಡಾಲರ್​ಗೆ (1,25,704 ರೂಪಾಯಿ) ತುಲುಪಿದೆ. ಅಂತಾರಾಷ್ಟ್ರೀಯ ಸ್ಪಾಟ್ ಗೋಲ್ಡ್ ಮಾರುಕಟ್ಟೆಯಲ್ಲೂ ಪ್ರತಿ ಔನ್ಸ್ ದರ 1,900 ಡಾಲರ್ (1,42,367ರೂಪಾಯಿ) ಇದ್ದು, ಶೇ. 7ರಷ್ಟು ವೃದ್ಧಿ ದಾಖಲಿಸಿದೆ. ಭಾರತದಲ್ಲೂ ಚಿನ್ನದ ದರ ಮುನ್ನಡೆಯುತ್ತಿದೆ.

ಕರೊನಾ ಸೋಂಕು ಹೆಚ್ಚಳ ಮತ್ತು ಲಸಿಕೆ ವಿತರಣೆ ಮಂದಗತಿಯಲ್ಲಿ ಸಾಗುತ್ತಿರುವ ಕಾರಣ ಅಮೆರಿಕದ ಡಾಲರ್ ಮೌಲ್ಯ ಜಾಗತಿಕ ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಕುಸಿತ ಕಂಡಿದೆ. ಇದರಿಂದ ಅಮೆರಿಕದ ಖಜಾನೆಯು 10 ವರ್ಷ ಅವಧಿಯ ಸರ್ಕಾರಿ ಬಾಂಡ್​ಗಳ ಮೂಲಕ ಆಕರಿಸುವ ವರಮಾನದಲ್ಲಿ ಇಳಿಕೆ ಆಗಿದೆ. ಅಮೆರಿಕದಲ್ಲಿ ಚಿನ್ನದ ದರ ಮತ್ತು ಸರ್ಕಾರಿ ಬಾಂಡ್​ಗಳು ವಿರುದ್ಧವಾದ ಸಂಬಂಧವನ್ನು ಹೊಂದಿವೆ. ಸರ್ಕಾರಿ ಬಾಂಡ್​ಗಳ ಮೌಲ್ಯ ವೃದ್ಧಿಸಿದಾಗ ಚಿನ್ನದ ದರ ಕುಸಿಯುತ್ತದೆ. ಸರ್ಕಾರಿ ಬಾಂಡ್​ಗಳ ಮೌಲ್ಯ ಇಳಿಕೆಯಾದಂತೆ ಬಂಗಾರದ ಬೆಲೆ ಏರಿಕೆಯಾಗುತ್ತದೆ. ಅಮೆರಿಕದಲ್ಲಿ ಮಾತ್ರವಲ್ಲ ಜಾಗತಿಕ ಮಟ್ಟದಲ್ಲೂ ಜನರು ಹೆಚ್ಚು ಸುರಕ್ಷತೆಯ ಮತ್ತು ಅಧಿಕ ಲಾಭ ತಂದುಕೊಡುವ ಹೂಡಿಕೆಯತ್ತ ದೃಷ್ಟಿ ಹರಿಸಿದ್ದಾರೆ. ಇಂಥ ಮೂಲದಲ್ಲಿ ಬಂಗಾರದ ಮೇಲಿನ ಹೂಡಿಕೆ ಅಗ್ರಗಣ್ಯವಾಗಿದೆ.

ಭಾರತದ ಚಿನಿವಾರ ಪೇಟೆಯಲ್ಲಿ 10 ಗ್ರಾಂ ಬಂಗಾರದ ಬೆಲೆ ಜನವರಿ 6ಕ್ಕೆ 51,875 ರೂಪಾಯಿ ಇತ್ತು. ಮಾರ್ಚ್ 29ಕ್ಕೆ ಇದು 43,320ಕ್ಕೆ ಕುಸಿಯಿತು. ಈಗ ಮತ್ತೆ 47 ಸಾವಿರದ ಗಡಿ ಮೀರಿ ಮುನ್ನಡೆಯುತ್ತಿದ್ದು ಮುಂಬರುವ ತಿಂಗಳುಗಳಲ್ಲಿ 50 ಸಾವಿರ ರೂಪಾಯಿ ಮುಟ್ಟುವ ನಿರೀಕ್ಷೆ ಇದೆ. ಡಾಲರ್ ಎದುರು ರೂಪಾಯಿ ಮೌಲ್ಯ ಶೇ.3.6ರಷ್ಟು ಕುಸಿದಿರುವ ಪರಿಣಾಮ ದೇಶೀಯ ಬಂಗಾರದ ಮಾರುಕಟ್ಟೆಯಲ್ಲಿ ಭವಿಷ್ಯದ ಖರೀದಿ ಶೇ. 4ರಷ್ಟು ಏರಿಕೆ ಕಂಡಿದೆ.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply