ಅರಿವಿಲ್ಲದೆ ವಿಶ್ವದ ದುಬಾರಿ ಮಾವು ಬೆಳೆದ ದಂಪತಿ : ರಕ್ಷಣೆಗೆ ಭದ್ರತಾ ಪಡೆ

ಜಬಲ್​​ಪುರ್​: ಉತ್ತರ ಪ್ರದೇಶದ ದಂಪತಿಯೊಂದು ವಿಶ್ವದಲ್ಲೇ ಅಪರೂಪದ ತಳಿಯ ಮಾವು ಬೆಳೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.ಕೃಷಿಕ ಸಂಕಲ್ಪ್​​ ಪರಿಹಾರ್​​ ಮತ್ತವರ ಪತ್ನಿ ರಾಣಿ ವಿಶ್ವದಲ್ಲೇ ದುಬಾರಿ ಬೆಲೆಯ ಮಾವನ್ನು ಬೆಳೆದಿದ್ದಾರೆ. 

ಕೆಲವು ವರ್ಷಗಳ ಹಿಂದೆ ತಮ್ಮ ತೋಟದಲ್ಲಿ ಮಾವಿನ ಬೀಜಗಳನ್ನು ಹೂತಿದ್ದರಂತೆ. ಮಾವಿನ ಗಿಡ ದೊಡ್ಡದಾಗಿ ಫಲ ನೀಡಲು ಆರಂಭವಾದಾಗ ಯಾವ ತಳಿಯ ಮಾವು ಇದು ಎಂದು ವಿಚಾರಿಸಿದ್ದಾರೆ. ಆಗ ಅವರಿಗೆ ತಾವು ಬೆಳೆದಿರುವ ಮಾವು ಮಿಯಝಾಕಿ (Miyazaki) ಜಾತಿಗೆ ಸೇರಿದ ವಿಶ್ವದಲ್ಲೇ ಅತ್ಯಂತ ಅಪರೂಪದ ಮಾವಿನ ತಳಿ ಎಂದು ಅರಿವಿಗೆ ಬಂದಿದೆ.

ಜಪಾನ್​ ದೇಶಕ್ಕೆ ಸೇರಿದ ಮಾವಿನ ತಳಿ ಇದಾಗಿದೆ. ಕಳೆದ ವರ್ಷ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 1 ಕೆಜಿ ಮಾವು ಬರೋಬ್ಬರಿ 2.70 ಲಕ್ಷಕ್ಕೆ ಮಾರಾಟವಾಗಿದೆ.

ಈ ವರ್ಷವೂ ಸಂಕಲ್ಪ್​​ ಪರಿಹಾರ್ ಅವರ ತೋಟದಲ್ಲಿ ಫಸಲು ಬಂದಿದ್ದು, ಎಲ್ಲಿಲ್ಲದ ಬೇಡಿಕೆ ಇದೆ. ತಾವು ಬೆಳೆಯುತ್ತಿರುವ ಮಾವಿನ ಸಸಿ ಮಿಯಝಾಕಿ ಜಾತಿಗೆ ಸೇರಿದೆ ಎಂದು ಗೊತ್ತಾಗುವ ಮೊದಲೇ ಕೃಷಿಕ ದಂಪತಿ ಮಾವಿನ ಗಿಡಕ್ಕೆ ದಾಮಿನಿ ಎಂದು ಹೆಸರಿಟ್ಟಿದ್ದರು.ಈಗಲೂ ಅವರಿಗೆ ಮಿಯಝಾಕಿ ಮಾವಿನ ಮರ ಅವರ ಮುದ್ದಿನ ದಾಮಿನಿಯೇ ಆಗಿದೆ.

ಈ ಅಪರೂಪದ ಮಾವಿನ ಬೀಜಗಳು ಇವರಿಗೆ ಸಿಕ್ಕಿದ ಕಥೆಯೂ ರೋಚಕವಾಗಿದೆ. ಕೆಲ ವರ್ಷಗಳ ಹಿಂದೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ವ್ಯಕ್ತಿಯೊಬ್ಬರು ಮಾವಿನ ಬೀಜಗಳನ್ನು ಕೊಟ್ಟು, ಇವನ್ನು ಮಕ್ಕಳಂತೆ ಸಾಕಿ ಎಂದಿದ್ದರಂತೆ. ರೈತ ಸಂಕಲ್ಪ್​ ಬೀಜಗಳನ್ನು ತಂದು ತಮ್ಮ ತೋಟದಲ್ಲಿ ನೆಟ್ಟಿದ್ದರು. ಈಗ ಅವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಈ ಮಾವಿನ ಮರಗಳು ತಂದುಕೊಟ್ಟಿವೆ.

ಈ ದುಬಾರಿ ಮಾವಿಗೆ ಕಳ್ಳರ ಕಣ್ಣು

ಸಂಕಲ್ಪ್​​ ರ ತೋಟದಲ್ಲಿರುವ ಮಾವು ವಿಶ್ವದಲ್ಲೇ ದುಬಾರಿ ಎಂದು ಸ್ಥಳೀಯರಿಗೆ ತಿಳಿದ ನಂತರ ಸಮಸ್ಯೆ ಎದುರಾಗಿದೆಯಂತೆ. ಕಳೆದ ವರ್ಷ ಕಳ್ಳರು ಇವರ ತೋಟಕ್ಕೆ ನುಗ್ಗಿ ಮಾವಿನ ಹಣ್ಣುಗಳನ್ನು ಕದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಈ ವರ್ಷ ರೈತ ದಂಪತಿ ಮಾವಿನ ಮರಗಳ ರಕ್ಷಣೆಗೆ ಭದ್ರತಾ ಪಡೆಯನ್ನು ನೇಮಿಸಿಕೊಂಡಿದ್ದಾರೆ.ಜೊತೆಗೆ 6 ಶ್ವಾನಗಳ ತಂಡವನ್ನೂ ತೋಟಕ್ಕೆ ಕಾವುಲಾಗಿ ಇಟ್ಟಿದ್ದಾರೆ.ಕೇವಲ 7 ಮಾವಿನ ಹಣ್ಣುಗಳನ್ನು ಕಾಯಲು ಭದ್ರತಾ ಪಡೆ, ಶ್ವಾನ ದಳವನ್ನು ನೇಮಿಸಿಕೊಂಡಿದ್ದಾರೆ.

ಮಾವಿನ ಹಣ್ಣಿಗೆ ಭಾರಿ ಬೇಡಿಕೆ

ಈ ವರ್ಷದ ಮಾವನ್ನು ಖರೀದಿಸಲು ದೇಶಾದ್ಯಂತ ಅನೇಕರು ಮುಂದಾಗಿದ್ದಾರೆ.ಬ್ಯುಸಿನೆಸ್​ ಮ್ಯಾನ್​ ಒಬ್ಬರು ಒಂದು ಮಾವಿನ ಹಣ್ಣಿಗೆ 21 ಸಾವಿರ ರೂಪಾಯಿ ನೀಡಲು ಮುಂದಾಗಿದ್ದಾರೆ. ಇನ್ನು ಮುಂಬೈ ಮೂಲಕ ಆಭರಣ ಅಂಗಡಿಯ ಮಾಲೀಕರೊಬ್ಬರು ಎಷ್ಟಾದರೂ ಹಣ ಕೇಳಿ ಕೊಡುತ್ತೇನೆ ಎಂದು ಸೂಪರ್​ ಆಫರ್​ ಕೊಟ್ಟಿದ್ದಾರೆ.ಆದರೆ ಈ ಬಾರಿ ಯಾರಿಗೂ ಹಣ್ಣನ್ನು ಮಾರಬಾರದು ಎಂದು ಸಂಕಲ್ಪ್​​ ಪರಿವಾರ್​ ದಂಪತಿ ನಿರ್ಧರಿಸಿದ್ದಾರಂತೆ. ಭಾರತದಲ್ಲೇ ಅಪರೂಪದಲ್ಲಿ ಅಪರೂಪವಾಗಿರುವ ಹಣ್ಣನ್ನು ಹಣಕ್ಕಾಗಿ ಮಾರದೇ ಇರಲು ನಿರ್ಧರಿಸಿದ್ದಾರೆ.

 
 
 
 
 
 
 
 
 
 
 

Leave a Reply